ಹರಿಯಾಣದಲ್ಲೂ ಮುಡಾ ಹಗರಣದ ಸದ್ದು; ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಮೋದಿ ವಾಗ್ದಾಳಿ

ಹರಿಯಾಣದಲ್ಲಿ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ ಈ ವೇಳೆ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರ ಮುಡಾ ಹಗರಣದ ಕುರಿತು ಪ್ರಸ್ತಾಪಿಸಿರುವ ಮೋದಿ ಇಂತಹ ಕಾಂಗ್ರೆಸ್ ಪಕ್ಷಕ್ಕೆ ನೀವು ಅವಕಾಶ ನೀಡುತ್ತೀರಾ? ಎಂದು ಹರಿಯಾಣದ ಜನರನ್ನು ಪ್ರಶ್ನಿಸಿದ್ದಾರೆ.

ಹರಿಯಾಣದಲ್ಲೂ ಮುಡಾ ಹಗರಣದ ಸದ್ದು; ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯ ವಿರುದ್ಧ ಮೋದಿ ವಾಗ್ದಾಳಿ
ಮೋದಿ
Follow us
|

Updated on:Sep 25, 2024 | 3:01 PM

ಸೋನಿಪತ್: ಹರಿಯಾಣ ಚುನಾವಣಾ ಪ್ರಚಾರದಲ್ಲಿಯೂ ಮುಡಾ ಹಗರಣ ಸದ್ದು ಮಾಡಿದೆ. ಸೋನಿಪತ್​ನಲ್ಲಿ ಇಂದು ನಡೆದ ಚುನಾವಣಾ ಪ್ರಚಾರದಲ್ಲಿ ಸಿಎಂ ಸಿದ್ದರಾಮಯ್ಯನವರ ಮುಡಾ ಹಗರಣದ ಬಗ್ಗೆ ಪ್ರಸ್ತಾಪ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಆಗಿಲ್ಲ. ಅಲ್ಲಿ ಯಾವ ಪರಿಸ್ಥಿತಿ ಉಂಟಾಗಿದೆ ಎಂದು ನೀವೇ ನೋಡಿ ಎಂದು ಟೀಕಿಸಿದ್ದಾರೆ.

ಕರ್ನಾಟಕದ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಜಮೀನು ಹಗರಣದ ಆರೋಪ ಕೇಳಿಬಂದಿದೆ. ಅದರ ತನಿಖೆ‌ ಶುರುವಾಗುತ್ತಿದ್ದಂತೆಯೇ ಹೈಕೋರ್ಟ್​ಗೆ ಹೋಗಿದ್ದಾರೆ. ಹೈಕೋರ್ಟ್ ಕೂಡ ಅವರಿಗೆ ಛಾಟಿ ಬೀಸಿದೆ. ನಿನ್ನೆ ಹೈಕೋರ್ಟ್ ಸಿಎಂ ಸಿದ್ದರಾಮಯ್ಯನವರ ವಿರುದ್ಧ ತನಿಖೆಗೆ ಆದೇಶ ಮಾಡಿದೆ. ಸಿದ್ದರಾಮಯ್ಯ ವಿರುದ್ದ ತನಿಖೆ ಆಗಲೇಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಎರಡು ವರ್ಷವೂ ಆಗಿಲ್ಲ. ಈ ರೀತಿ ಭ್ರಷ್ಟಾಚಾರ ಮಾಡಿದ ಪಕ್ಷಕ್ಕೆ ಹರಿಯಾಣದಲ್ಲಿ ಅವಕಾಶ ಕೊಡುತ್ತೀರಾ? ಎಂದು ಹರಿಯಾಣದ ಸೋನಿಪತ್ ನಲ್ಲಿ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಏಷ್ಯಾದ 3ನೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ; ಮೋದಿ ನಾಯಕತ್ವಕ್ಕೆ ಹರ್ದೀಪ್ ಪುರಿ ಶ್ಲಾಘನೆ

ಮುಡಾ ಹಗರಣದಲ್ಲಿ ಸಿದ್ದರಾಮಯ್ಯಗೆ ಕರ್ನಾಟಕ ಹೈಕೋರ್ಟ್ ಹಿನ್ನಡೆಯಾಗಿದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಂತಹ ಪಕ್ಷಕ್ಕೆ (ಕಾಂಗ್ರೆಸ್) ಅಧಿಕಾರ ನೀಡಲು ಹರಿಯಾಣ ರಾಜ್ಯ ಸಿದ್ಧವಿದೆಯೇ ಎಂದು ಹರಿಯಾಣದ ಜನರನ್ನು ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್​​ ನಕಲಿ ಯೋಜನೆಗಳನ್ನು ಘೋಷಿಸಿದೆ. ರೈತರು, ಜನರಿಗೆ ನೀಡಿದ್ದ ಭರವಸೆಗಳನ್ನು ಕಾಂಗ್ರೆಸ್​​ ಈಡೇರಿಸಿಲ್ಲ. ಕರ್ನಾಟಕದ ಜನರಿಗೆ ನೀಡಿದ್ದ ಭರವಸೆ ಈಡೇರಿಸುವಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕರ್ನಾಟಕ ರಾಜ್ಯ ಸರ್ಕಾರ ದಲಿತರ ಹಣ ಲೂಟಿ ಮಾಡಿದೆ ಎಂದು ಮೋದಿ ಟೀಕೆ ಮಾಡಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿಯ ಯಶಸ್ವಿ ಅಮೆರಿಕ ಪ್ರವಾಸಕ್ಕೆ ಎನ್​ಡಿಎ ನಾಯಕರ ಶ್ಲಾಘನೆ

ಕಾಂಗ್ರೆಸ್ ಸರ್ಕಾರ ಎಲ್ಲೆಲ್ಲಿ ಅಧಿಕಾರಕ್ಕೆ ಬಂದರೂ, ಅವರು ಬಹಳಷ್ಟು ಭ್ರಷ್ಟಾಚಾರವನ್ನು ಮಾಡಿದ್ದಾರೆ. ಭಾರತದ ಸರ್ಕಾರಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರಕ್ಕೆ ಜನ್ಮ ನೀಡಿದ ಮತ್ತು ಪೋಷಿಸಿದ ಪಕ್ಷ ಕಾಂಗ್ರೆಸ್. ಭಾರತದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರದ ತಾಯಿ. ಹೈಕಮಾಂಡ್ ಭ್ರಷ್ಟರಾಗಿದ್ದಾಗ ಎಲ್ಲರೂ ಭ್ರಷ್ಟಾಚಾರ ಮತ್ತು ಲೂಟಿ ಮಾಡಲು ಪರವಾನಗಿ ಪಡೆಯುತ್ತಾರೆ ಎಂದು ಸೋನಿಪತ್‌ನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಪ್ರಧಾನಿ ಮೋದಿ ಹೇಳಿದರು.

ಹರಿಯಾಣವನ್ನು 10 ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರ ಲೂಟಿ ಮಾಡಿತ್ತು. ರೈತರ ಜಮೀನುಗಳನ್ನು ಲೂಟಿ ಮಾಡಲಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸ್ಥಿತಿ ಹೇಗಿದೆ ನೋಡಿ. ದಲಿತರ ಹಣದಲ್ಲಿಯೂ ಕಾಂಗ್ರೆಸ್ ಹಗರಣ ಮಾಡಿದೆ. ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್‌ಗಿಂತ ಅಪ್ರಾಮಾಣಿಕ ಪಕ್ಷವಿಲ್ಲ ಎಂದು ಮೋದಿ ಲೇವಡಿ ಮಾಡಿದ್ದಾರೆ.

ಹರಿಯಾಣದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ದುರ್ಬಲವಾಗುತ್ತಿದೆ. ಹರಿಯಾಣದಲ್ಲಿ ಬಿಜೆಪಿಗೆ ಬೆಂಬಲ ಹೆಚ್ಚುತ್ತಿದೆ. ಇಡೀ ಹರಿಯಾಣವೇ ‘ಫಿರ್ ಏಕ್ ಬಾರ್ ಬಿಜೆಪಿ ಸರ್ಕಾರ್’ ಎಂದು ಹೇಳುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:58 pm, Wed, 25 September 24