ಜಾಗತಿಕ ಬಿಕ್ಕಟ್ಟಿನ ಮಧ್ಯೆ ಭಾರತದ ಆರ್ಥಿಕತೆಗೆ ಉತ್ತೇಜನ ನೀಡಲು ಪ್ರಧಾನಿ ಮೋದಿ ಕ್ರಮ: ಆರ್ಥಿಕ ಸಲಹಾ ಮಂಡಳಿ ಜೊತೆ ಮಹತ್ವದ ಸಭೆ

ಜಾಗತಿಕ ಆರ್ಥಿಕ ಅಸ್ಥಿರತೆ ಮತ್ತು ಮಧ್ಯಪ್ರಾಚ್ಯ ಯುದ್ಧದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆರ್ಥಿಕ ಸಲಹಾ ಮಂಡಳಿ (EAC) ಜೊತೆ ಶನಿವಾರ ತುರ್ತು ಸಭೆ ನಡೆಸಿದರು. ಭಾರತದ ಆರ್ಥಿಕತೆಯನ್ನು ಬಲಪಡಿಸಲು, ಉದ್ಯಮ ಸ್ನೇಹಿ ಸುಧಾರಣೆಗಳನ್ನು ತರಲು ಹಾಗೂ ಜನಜೀವನ ಸುಗಮಗೊಳಿಸುವ ಸಂಬಂಧ ಸಭೆಯಲ್ಲಿ ಮಹತ್ವದ ಕಾರ್ಯತಂತ್ರ ರೂಪಿಸಲಾಗಿದೆ.

ಜಾಗತಿಕ ಬಿಕ್ಕಟ್ಟಿನ ಮಧ್ಯೆ ಭಾರತದ ಆರ್ಥಿಕತೆಗೆ ಉತ್ತೇಜನ ನೀಡಲು ಪ್ರಧಾನಿ ಮೋದಿ ಕ್ರಮ: ಆರ್ಥಿಕ ಸಲಹಾ ಮಂಡಳಿ ಜೊತೆ ಮಹತ್ವದ ಸಭೆ
ಪ್ರಧಾನಮಂತ್ರಿ ನರೇಂದ್ರ ಮೋದಿ
Image Credit source: PMO India

Updated on: Jun 06, 2026 | 2:17 PM

ನವದೆಹಲಿ, ಜೂನ್ 6: ಜಾಗತಿಕ ಮಟ್ಟದ ತಲ್ಲಣಗಳು ಮತ್ತು ಪ್ರಾದೇಶಿಕ ರಾಜಕೀಯ ಸವಾಲುಗಳ ಮಧ್ಯೆಯೂ ಭಾರತದ ಆರ್ಥಿಕ ಪ್ರಗತಿಯ ವೇಗವನ್ನು ಕಾಯ್ದುಕೊಳ್ಳಲು ಕೇಂದ್ರ ಸರ್ಕಾರ ಭರ್ಜರಿ ಮಾಸ್ಟರ್ ಪ್ಲಾನ್ ರೂಪಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಶನಿವಾರ ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿಯ (EAC) ಸದಸ್ಯರೊಂದಿಗೆ ದೆಹಲಿಯಲ್ಲಿ ಶನಿವಾರ ಉನ್ನತ ಮಟ್ಟದ ಸಭೆ ನಡೆಸಿದರು. ಅಸ್ಥಿರ ಜಾಗತಿಕ ವಾತಾವರಣದಲ್ಲಿ ಭಾರತದ ಆರ್ಥಿಕತೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ದೇಶದ ಆರ್ಥಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವ ಕಾರ್ಯತಂತ್ರಗಳ ಕುರಿತು ಈ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ.

ಮುಖ್ಯಾಂಶಗಳು

  • ಆರ್ಥಿಕ ಪ್ರಗತಿ ಹೆಚ್ಚಿಸಲು ಪ್ರಧಾನಿ ಮೋದಿ ಸಭೆ.
  • ಸುಗಮ ಜೀವನ ಮತ್ತು ಉದ್ಯಮ ಸುಧಾರಣೆಗೆ ಚರ್ಚೆ.
  • ಮಧ್ಯಪ್ರಾಚ್ಯ ಸಂಘರ್ಷದ ಪ್ರಭಾವದ ಪರಾಮರ್ಶೆ.

ಉದ್ಯಮಸ್ನೇಹಿ ಮತ್ತು ನಾಗರಿಕರ ಸುಲಭ ಜೀವನಕ್ಕೆ ಕ್ರಮ

ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆಯೂ ಭಾರತದ ಆರ್ಥಿಕ ಪ್ರಗತಿಯ ವೇಗವನ್ನು ಹೇಗೆ ಸ್ಥಿರವಾಗಿ ಇರುವಂತೆ ನೋಡಿಕೊಳ್ಳಬೇಕು ಎಂಬ ಬಗ್ಗೆ ಹತ್ತಾರು ವಿನೂತನ ಐಡಿಯಾಗಳು ಹಾಗೂ ನೀತಿ ಕ್ರಮಗಳ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಾಯಿತು. ದೇಶದ ಮ್ಯಾಕ್ರೋ-ಎಕನಾಮಿಕ್ (ಸ್ಥೂಲ ಆರ್ಥಿಕ) ಸ್ಥಿರತೆಯನ್ನು ಕಾಪಾಡುವ ಜೊತೆಗೆ ವಿವಿಧ ವಲಯಗಳಲ್ಲಿ ಹೂಡಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಸುಧಾರಣೆಗಳತ್ತ ಗಮನ ಹರಿಸಲಾಯಿತು. ಮುಖ್ಯವಾಗಿ ದೇಶದ ನಾಗರಿಕರ ಸುಗಮ ಜೀವನ ನಿರ್ವಹಣೆ (Ease of Living) ಮತ್ತು ಉದ್ಯಮ ರಂಗದಲ್ಲಿ ವ್ಯವಹಾರ ಸುಲಭಗೊಳಿಸುವಿಕೆ (Ease of Doing Business) ಪ್ರಕ್ರಿಯೆಗಳನ್ನು ಇನ್ನಷ್ಟು ಸರಳಗೊಳಿಸುವ ನಿಟ್ಟಿನಲ್ಲಿ ವಿವಿಧ ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲಾಯಿತು.

ಭಾರತದ ಆರ್ಥಿಕತೆ ಮೇಲೆ ಮಧ್ಯಪ್ರಾಚ್ಯ ಸಂಘರ್ಷದ ಪ್ರಭಾವ

Npm And The Eac Discussed Various Ideas

ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿ ಜತೆ ಮೋದಿ ಸಭೆ

ಪ್ರಸ್ತುತ ಜಾಗತಿಕವಾಗಿ ತಲ್ಲಣ ಸೃಷ್ಟಿಸಿರುವ ಮಧ್ಯಪ್ರಾಚ್ಯ (Middle East) ಸಂಘರ್ಷದ ಕುರಿತು ಸಭೆಯಲ್ಲಿ ತೀವ್ರ ಆತಂಕ ವ್ಯಕ್ತವಾಯಿತು. ಈ ಸಂಘರ್ಷದಿಂದ ಭಾರತ ಮತ್ತು ಜಾಗತಿಕ ಆರ್ಥಿಕತೆಯ ಮೇಲಾಗಬಹುದಾದ ಸಂಭಾವ್ಯ ಪರಿಣಾಮಗಳ ಕುರಿತು ಆರ್ಥಿಕ ಸಲಹಾ ಮಂಡಳಿಯ ಸದಸ್ಯರು ನಿಖರ ವಿಶ್ಲೇಷಣಾ ವರದಿಯನ್ನು ಪ್ರಧಾನಿ ಜತೆ ಹಂಚಿಕೊಂಡರು. ಪ್ರಮುಖವಾಗಿ ಈ ಯುದ್ಧದಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆ (ತೈಲ ಬೆಲೆ), ಅಂತರರಾಷ್ಟ್ರೀಯ ವ್ಯಾಪಾರ ಮತ್ತು ಒಟ್ಟಾರೆ ಆರ್ಥಿಕ ಸ್ಥಿರತೆಯ ಮೇಲಾಗುವ ಪರಿಣಾಮಗಳನ್ನು ಎದುರಿಸಲು ಭಾರತವು ಮುನ್ನೆಚ್ಚರಿಕೆಯಾಗಿ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು.

ಇದನ್ನೂ ಓದಿ: ಇಂಧನ ಬಿಕ್ಕಟ್ಟಿನ ಮಧ್ಯೆ ಭಾರತಕ್ಕೆ ಗುಡ್ ನ್ಯೂಸ್: ಅಂಡಮಾನ್ ಸಮುದ್ರದಲ್ಲಿ ಬೃಹತ್ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆ

ಜಾಗತಿಕ ಸನ್ನಿವೇಶದಲ್ಲಿ ಎಷ್ಟೇ ಏರಿಳಿತಗಳಿದ್ದರೂ ಪ್ರಮುಖ ಯೋಜನೆಗಳು ಮತ್ತು ದೀರ್ಘಕಾಲೀನ ಆರ್ಥಿಕ ಸುಧಾರಣೆಗಳ ಮೂಲಕ ಭಾರತದ ಸದೃಢ ಪ್ರಗತಿಯನ್ನು ಮುಂದುವರಿಸುವ ಬಗ್ಗೆ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us