Kisan Drone: 100 ಕಿಸಾನ್ ಡ್ರೋನ್ಗಳಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ; ಆಧುನಿಕ ಕೃಷಿ ಪದ್ಧತಿಯಲ್ಲೊಂದು ಹೊಸ ಅಧ್ಯಾಯ
ಈ ಬಾರಿಯ ಗಣರಾಜ್ಯೋತ್ಸವ ಬೀಟಿಂಗ್ ರಿಟ್ರೀಟ್ ಆಚರಣೆಯಲ್ಲಿ 100 ಡ್ರೋನ್ಗಳು ಪ್ರದರ್ಶನ ನೀಡಿದ್ದವು. ಹಾಗೇ, ಮುಂದಿನ ಎರಡು ವರ್ಷಗಳಲ್ಲಿ ಗರುಡಾ ಏರೋಸ್ಪೇಸ್ ಸುಮಾರು 1 ಲಕ್ಷ ಡ್ರೋನ್ಗಳ ತಯಾರಿಕೆಯ ಗುರಿ ಹೊಂದಿದೆ ಎಂಬ ಮಾಹಿತಿಯನ್ನು ನನಗೆ ನೀಡಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ನಿನ್ನೆ (ಫೆ.18) ಭಾರತದ ವಿವಿಧ ನಗರಗಳು, ಪಟ್ಟಣಗಳಲ್ಲಿ 100 ಕಿಸಾನ್ ಡ್ರೋನ್ಗಳಿಗೆ (Kisan Drones) ವಿಡಿಯೋ ಕಾನ್ಫರೆನ್ಸ್ ಮೂಲಕ ಹಸಿರು ನಿಶಾನೆ ತೋರಿದರು. ಕೃಷಿ ಭೂಮಿಗಳಿಗೆ ಕೀಟನಾಶಕ ಸಿಂಪಡಿಸುವ ಡ್ರೋನ್ಗಳು ಇವಾಗಿದ್ದು, ಇದರಿಂದ ರೈತರಿಗೆ ತುಂಬ ಅನುಕೂಲವಾಗಲಿವೆ. ಹಾಗೇ, ಆಧುನಿಕ ಕೃಷಿ ಪದ್ಧತಿಯ ನಿರ್ಮಾಣದಲ್ಲಿ ಇದೊಂದು ಹೊಸ ಅಧ್ಯಾಯವಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು.
100 ಕಿಸಾನ್ ಡ್ರೋನ್ಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಮೊದಲು ಡ್ರೋನ್ ಎಂದರೆ ಕೇವಲ ಸೇನೆಗೆ ಸಂಬಂಧಪಟ್ಟಿದ್ದು, ವೈರಿಗಳೊಂದಿಗೆ ಹೋರಾಡಲು ಬಳಸುವಂಥದ್ದು ಎಂದು ಭಾವಿಸಲಾಗುತ್ತಿತ್ತು. ಆದರೆ ಪ್ರಸ್ತುತ 21ನೇ ಶತಮಾನದಲ್ಲಿ ಆಧುನಿಕ ಕೃಷಿ ಪದ್ಧತಿಯೆಡೆಗಿನ ಒಂದು ಹೆಜ್ಜೆಯಾಗಿ ಪರಿಗಣಿಸಲ್ಪಟ್ಟಿದೆ. ಇದೊಂದು ಹೊಸ ಅಧ್ಯಾಯ. ಈ ಕಿಸಾನ್ ಡ್ರೋನ್ಗಳಿಂದಾಗಿ ಡ್ರೋನ್ ವಲಯದ ಅಭಿವೃದ್ಧಿಯಲ್ಲಿ ಮೈಲಿಗಲ್ಲು ಸೃಷ್ಟಿಯಾಗುವ ಜತೆ, ಅನಂತ ಅವಕಾಶಗಳು ಸೃಷ್ಟಿಯಾಗುತ್ತವೆ ಎಂಬ ಬಗ್ಗೆ ನನಗೆ ಖಾತ್ರಿಯಿದೆ ಎಂದು ಹೇಳಿದರು.
In a special drive aimed at helping farmers, PM Narendra Modi yesterday flagged off 100 Kisan drones in different cities and towns of India to spray pesticides in farms across India. pic.twitter.com/5kFBgVGvF0
— ANI (@ANI) February 19, 2022
ಮುಂದುವರಿದು ಮಾತನಾಡಿದ ಪ್ರಧಾನಿ ಮೋದಿ, ಈ ಬಾರಿಯ ಗಣರಾಜ್ಯೋತ್ಸವ ಬೀಟಿಂಗ್ ರಿಟ್ರೀಟ್ ಆಚರಣೆಯಲ್ಲಿ 100 ಡ್ರೋನ್ಗಳು ಪ್ರದರ್ಶನ ನೀಡಿದ್ದವು. ಹಾಗೇ, ಮುಂದಿನ ಎರಡು ವರ್ಷಗಳಲ್ಲಿ ಗರುಡಾ ಏರೋಸ್ಪೇಸ್ ಸುಮಾರು 1 ಲಕ್ಷ ಡ್ರೋನ್ಗಳ ತಯಾರಿಕೆಯ ಗುರಿ ಹೊಂದಿದೆ ಎಂಬ ಮಾಹಿತಿಯನ್ನು ನನಗೆ ನೀಡಲಾಗಿದೆ. ಇದು ಯುವಜನರಿಗೆ ಉದ್ಯೋಗಾವಕಾಶ ನೀಡುತ್ತದೆ. ಅಷ್ಟೇ ಅಲ್ಲ, ಸಂಶೋಧನಾಸಕ್ತರಿಗೂ ಹೊಸ ಅವಕಾಶ ತೆರೆದುಕೊಳ್ಳಲಿದೆ ಎಂದು ಹೇಳಿದರು.
ದೇಶದಲ್ಲಿ ಸ್ವಾಮಿತ್ವ ಯೋಜನೆಯಡಿ, ಡ್ರೋನ್ ಮೂಲಕ ಭೂ ದಾಖಲೀಕರಣ ಮಾಡಲಾಗುತ್ತಿದೆ. ಈ ಬಾರಿ ಕೊರೊನಾ ಲಸಿಕೆ ಅಭಿಯಾನ ಶುರುವಾದಾಗ ಅದೆಷ್ಟೋ ದುರ್ಗಮ ಪ್ರದೇಶಗಳಿಗೆ ಡ್ರೋನ್ ಮೂಲಕವೇ ಔಷಧಗಳು, ಲಸಿಕೆಗಳನ್ನು ಸಾಗಿಸಲಾಗಿದೆ. ಈ ಮಧ್ಯೆ ಕೃಷಿಯಲ್ಲೂ ಡ್ರೋನ್ ಬಳಕೆ ಪ್ರಾರಂಭವಾಗಿದ್ದು ತುಂಬ ಸಂತೋಷದ ಸಂಗತಿ. ಬೆಳೆಗಳಿಗೆ ಕೀಟನಾಶಕ ಸಿಂಪಡಿಸಲು, ಕೀಟನಾಶಕ ಸಾಗಿಸಲು ಡ್ರೋನ್ ಬಳಸುತ್ತಿರುವುದು ಖಂಡಿತ ಹೊಸ ವಿಧಾನ ಎಂದೂ ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಸಕ್ತ ಬಾರಿಯ 2022-23ನೇ ಬಜೆಟ್ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೃಷಿ ವಲಯದ ಆಧುನಿಕತೆಗೆ ಒತ್ತುಕೊಡುವುದಾಗಿ ಹೇಳಿದ್ದರು. ಕೃಷಿ ವಲಯದ ಆಧುನಿಕರಣಕ್ಕಾಗಿ ಕೇಂದ್ರ ಸರ್ಕಾರ ಕಿಸಾನ್ ಡ್ರೋನ್ಗಳಿಗೆ ಉತ್ತೇಜನ ನೀಡಲಿದೆ, ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿ, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ರೈತರಿಗೆ ಡಿಜಿಟಲ್ ಮತ್ತು ಹೈಟೆಕ್ ಸೇವೆಗಳನ್ನು ನೀಡಲಾಗುವುದು ಎಂದೂ ಹೇಳಿದ್ದರು. ಅಷ್ಟೇ ಅಲ್ಲ, ಬೆಳೆ ಮೌಲ್ಯಮಾಪನ, ಭೂ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು, ಬೆಳೆಗಳಿಗೆ ಕೀಟನಾಶಕಗಳು, ಪೋಷಕಾಂಶಗಳ ಸಿಂಪಡಣೆ ಮಾಡಲು ಕಿಸಾನ್ ಡ್ರೋನ್ಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುವುದು ಎಂದೂ ಹೇಳಿದ್ದರು.
ಇದನ್ನೂ ಓದಿ: ಕೋಲ್ ಇಂಡಿಯಾ ಲಿಮಿಟೆಡ್ನಲ್ಲಿ ಉದ್ಯೋಗ ಅವಕಾಶ : ಇಲ್ಲಿದೆ ಮಾಹಿತಿ
Published On - 11:34 am, Sat, 19 February 22