ಯುಎಸ್ ಪ್ರವಾಸ ಸಿದ್ಧತೆಯಲ್ಲಿದ್ದಾರಂತೆ ಪ್ರಧಾನಿ ಮೋದಿ; ತಿಂಗಳಾಂತ್ಯದಲ್ಲಿ ಡೇಟ್ ಫಿಕ್ಸ್?
PM Narendra Modi: ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಹೊಂದಿಲ್ಲ. ಅದರ ತಿಂಗಳ ಅಧ್ಯಕ್ಷೀಯ ಅವಧಿ ಇತ್ತೀಚೆಗಷ್ಟೇ ಮುಕ್ತಾಯವಾಗಿದೆ.

ದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಈ ತಿಂಗಳ ಕೊನೆಯಲ್ಲಿ (ಸೆಪ್ಟೆಂಬರ್ ಕೊನೆ) ಯುಎಸ್ಗೆ ಭೇಟಿ (US Visit) ನೀಡಲಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ. ಭೇಟಿಗೆ ಸಂಬಂಧಿತ ಎಲ್ಲ ರೀತಿಯ ಸಿದ್ಧತೆಗಳೂ ನಡೆಯುತ್ತಿವೆ ಎಂದೂ ಹೇಳಲಾಗಿದೆ. ಆದರೆ ಇದಿನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ನರೇಂದ್ರ ಮೋದಿಯವರ ಅಮೆರಿಕ ಭೇಟಿಯ ವೇಳಾಪಟ್ಟಿಯನ್ನೂ ಸಿದ್ಧಗೊಂಡಿಲ್ಲ. ಆದರೂ ಸೆಪ್ಟೆಂಬರ್ 23-24ಕ್ಕೆ ಅವರು ಯುಎಸ್ ಪ್ರವಾಸ ಹಮ್ಮಿಕೊಂಡಿದ್ದಾರೆ ಎಂದೂ ಹೇಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಕೊನೆಯದಾಗಿ ಯುಎಸ್ಗೆ ಭೇಟಿ ನೀಡಿದ್ದು 2019ರಲ್ಲಿ. ಅಂದು ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದರು. ಅಷ್ಟೇ ಅಲ್ಲ, ಹ್ಯೂಸ್ಟನ್ನಲ್ಲಿ ನಡೆದ ಹೌಡಿ ಮೋದಿ ದೊಡ್ಡಮಟ್ಟದ ಸಮಾರಂಭದಲ್ಲಿ ಭಾಷಣ ಮಾಡಿದ್ದರು. ಅಮೆರಿಕದಲ್ಲಿರು ಭಾರತೀಯರ ಯೋಗಕ್ಷೇಮ ವಿಚಾರಿಸಿದ್ದರು. ಇದೀಗ ಸೆಪ್ಟೆಂಬರ್ನಲ್ಲಿ ಯುಎಸ್ಗೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷ ಜೋ ಬೈಡೆನ್ರನ್ನು ಭೇಟಿಯಾಗಿ, ಮಾತುಕತೆ ನಡೆಸಲಿದ್ದಾರೆ. ಮೊದಲು ವಾಷಿಂಗ್ಟನ್ಗೆ ಹೋಗಿ, ಅಲ್ಲಿಂದ ನ್ಯೂಯಾರ್ಕ್ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ವಾರ್ಷಿಕ ಉನ್ನತಮಟ್ಟದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಬಲ್ಲ ಮೂಲಗಳಿಂದ ಗೊತ್ತಾಗಿದ್ದಾಗಿ ಕೆಲವು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯತ್ವ ಹೊಂದಿಲ್ಲ. ಅದರ ತಿಂಗಳ ಅಧ್ಯಕ್ಷೀಯ ಅವಧಿ ಇತ್ತೀಚೆಗಷ್ಟೇ ಮುಕ್ತಾಯವಾಗಿದೆ. ಇನ್ನು ಈ ಬಾರಿಯ ಯುಎನ್ ಸಾಮಾನ್ಯ ಸಭೆಯಲ್ಲಿ ಬಹುಮುಖ್ಯವಾಗಿ ಅಫ್ಘಾನಿಸ್ತಾನದ ವಿಚಾರ ಚರ್ಚೆಯಾಗಲಿದೆ ಎಂದು ಹೇಳಲಾಗಿದೆ. ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆ ಮರಳಿದ್ದು, ಅಲ್ಲಿ ತಾಲಿಬಾನಿಗಳ ಆಕ್ರಮಣ, ಆಡಳಿತ.. ಇತ್ಯಾದಿ ವಿಚಾರಗಳು ಚರ್ಚೆಯಾಗಲಿವೆ. ಇದರಲ್ಲಿ ಭಾರತ ಕೂಡ ಭಾಗವಹಿಸಲಿದ್ದು, ಪ್ರಧಾನಿ ಉಪಸ್ಥಿತಿ ಇರಲಿದೆ ಎನ್ನಲಾಗಿದೆ. ಇನ್ನೊಂದು ಮೂಲಗಳ ಪ್ರಕಾರ ಈ ಭಾರಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದೆ ಎಂದೂ ಹೇಳಲಾಗಿದೆ.
ಮೋದಿ-ಬೈಡೆನ್ ಭೌತಿಕ ಭೇಟಿಯಾಗಿಲ್ಲ ಅಮೆರಿಕ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸದಾ ಮೋದಿ ತನ್ನ ಗೆಳೆಯ ಎನ್ನುತ್ತಿದ್ದರು. ಇವರಿಬ್ಬರೂ ಹಲವು ಭಾರಿ ಭೇಟಿಯಾಗಿ, ಮಾತುಕತೆ ನಡೆಸಿದ್ದರು. ಆದರೆ ಅಲ್ಲೀಗ ಸರ್ಕಾರ ಬದಲಾಗಿದೆ. ಜೋ ಬೈಡನ್ ಅಧ್ಯಕ್ಷರಾಗಿದ್ದಾರೆ. ಅಮೆರಿಕ ಆಡಳಿತ ಬದಲಾವಣೆಯಾದ ಮೇಲೆ ಇನ್ನೂ ಪ್ರಧಾನಿ ಮೋದಿ ಮತ್ತು ಜೋ ಬೈಡನ್ ಭೌತಿಕವಾಗಿ ಅಂದರೆ ಮುಖಾಮುಖಿ ಭೇಟಿಯಾಗಿಲ್ಲ. ಕೊರೊನಾ ಕಾರಣದಿಂದ ಇದು ಸಾಧ್ಯವಾಗಿಲ್ಲ. ಒಮ್ಮೆ ಸೆ.23-24ರಂದು ಮೋದಿ ಅಮೆರಿಕ ಪ್ರವಾಸ ಕೈಗೊಂಡರೆ, ಅದು ಅವರ ಮತ್ತು ಜೋ ಬೈಡೆನ್ ಅವರ ಮೊದಲ ಭೇಟಿಯಾಗಲಿದೆ.
ಇದನ್ನೂ ಓದಿ: ಲೈಂಗಿಕ ಕಾರ್ಯಕರ್ತೆಯರನ್ನು ಹುಡುಕುತ್ತಿರುವ ತಾಲಿಬಾನ್ ಉಗ್ರರು; ಜೀವ ತೆಗೆಯಲು ಸಿದ್ಧತೆ
(PM Narendra Modi may visit US at the end of September month)