ಇನ್ಮುಂದೆ ಕೊರೊನಾ ಲಸಿಕೆ ಸರ್ಟಿಫಿಕೇಟ್ ಮೇಲೆ ಪ್ರಧಾನಿ ಮೋದಿ ಫೋಟೋ ಇರುವುದಿಲ್ಲ; ಆದರೆ ಈ ನಿಯಮ 5 ರಾಜ್ಯಗಳಿಗೆ ಮಾತ್ರ ಅನ್ವಯ
Assembly Elections 2022: ಒಟ್ಟು 5 ರಾಜ್ಯಗಳಲ್ಲಿ 690 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಉತ್ತರಪ್ರದೇಶ ಒಂದೇ ರಾಜ್ಯದಲ್ಲಿ 403 ಕ್ಷೇತ್ರಗಳು ಇವೆ. ಉತ್ತರಪ್ರದೇಶದಲ್ಲಿ ಏಳು ಹಂತದಲ್ಲಿ ಮತದಾನ ನಡೆಯಲಿದ್ದು, ಫೆಬ್ರವರಿ 10ರಂದು ಮೊದಲ ಮತ್ತು ಮಾರ್ಚ್ 3ರಂದು ಕೊನೇ ಹಂತದ ಮತದಾನ ಇರಲಿದೆ.
ಫೆಬ್ರವರಿಯಿಂದ ಚುನಾವಣೆ ನಡೆಯಲಿರುವ 5 ರಾಜ್ಯಗಳಾದ ಗೋವಾ, ಮಣಿಪುರ, ಉತ್ತರಾಖಂಡ್, ಉತ್ತರಪ್ರದೇಶ, ಪಂಜಾಬ್ಗಳಲ್ಲಿ ನೀತಿ ಸಂಹಿತೆ ಮೊನ್ನೆಯಿಂದಲೇ ಜಾರಿಯಾಗಿದೆ. ಹೀಗಾಗಿ ಆ ರಾಜ್ಯಗಳಲ್ಲಿ ಇನ್ನು ಮುಂದೆ ಕೊರೊನಾ ಲಸಿಕೆ ಪಡೆದವರಿಗೆ ನೀಡಲಾಗುವ ಸರ್ಟಿಫಿಕೇಟ್ ಮೇಲೆ ಪ್ರಧಾನಿ ಮೋದಿ ಫೋಟೋ ಇರುವುದಿಲ್ಲ. ಇದೀಗ ಪ್ರಧಾನಿ ಮೋದಿ ಚಿತ್ರವನ್ನು ಲಸಿಕೆ ಪ್ರಮಾಣ ಪತ್ರದ ಮೇಲೆ ಹಾಕದಿರಲು ಕೊವಿಡ್ 19 ಲಸಿಕೆ ನೋಂದಣಿಗಾಗಿ ಕೇಂದ್ರ ಸರ್ಕಾರ ಹೊರತಂಡ ಕೊವಿನ್ ಪೋರ್ಟಲ್ನಲ್ಲಿ ಫಿಲ್ಟರ್ವೊಂದನ್ನು ಕೇಂದ್ರ ಆರೋಗ್ಯ ಸಚಿವಾಲಯ ಅಳವಡಿಸಿದೆ.
ಗೋವಾ, ಉತ್ತರಪ್ರದೇಶ, ಉತ್ತರಾಖಂಡ್, ಪಂಜಾಬ್ ಮತ್ತು ಮಣಿಪುರ ರಾಜ್ಯಗಳಲ್ಲಿ ಫೆ.10ರಿಂದ ಮಾರ್ಚ್ 7ರವರೆಗೆ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 10ರಂದು ಮತಎಣಿಕೆ ನಡೆಯಲಿದೆ. ಕೆಲವು ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದಾರೆ, ಇನ್ನು ಕೆಲವು ರಾಜ್ಯಗಳಲ್ಲಿ ವಿವಿಧ ಹಂತಗಳಲ್ಲಿ ಮತದಾನ ನಡೆಯಲಿದೆ. ಚುನಾವಣಾ ಆಯೋಗ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ವೇಳಾಪಟ್ಟಿಯನ್ನು ಘೋಷಿಸುತ್ತಿದ್ದಂತೆ ಆ ಐದೂ ರಾಜ್ಯಗಳಲ್ಲಿ ನೀತಿ ಸಂಹಿತೆ ಜಾರಿಯಾಗಿದೆ. ನೀತಿ ಸಂಹಿತೆಯ ಅನ್ವಯ ಆಡಳಿತ ಪಕ್ಷಗಳ ಸರ್ಕಾರಗಳು ಹೊಸ ಯೋಜನೆಗಳನ್ನು ಘೋಷಿಸುವಂತಿಲ್ಲ.
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಆಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿಗಳಲ್ಲಿ ವಿಧಾನಸಭೆ ಚುನಾವಣೆ ನಡೆದಿತ್ತು. ಆಗ ಕೂಡ ನೀತಿ ಸಂಹಿತೆ ಜಾರಿಯಾಗಿರುವಷ್ಟು ದಿನ ಅಲ್ಲಿ ಕೊವಿಡ್ 19 ಲಸಿಕೆ ಪ್ರಮಾಣಪತ್ರಗಳ ಮೇಲೆ ಪ್ರಧಾನಿ ಮೋದಿಯವರ ಫೋಟೋ ತೆಗೆಯಲಾಗಿತ್ತು. ಆಗ ಹಲವು ಪ್ರತಿಪಕ್ಷಗಳ ರಾಜಕೀಯ ಮುಖಂಡರು ಪ್ರಧಾನಿ ಮೋದಿ ಫೋಟೋ ಇರುವ ಬಗ್ಗೆ ಆಕ್ಷೇಪವನ್ನೂ ಎತ್ತಿದ್ದರು. ಪ್ರಧಾನಿ ಮೋದಿ ಲಸಿಕೆ ಹೆಸರಲ್ಲಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದೀಗ ಮತ್ತೆ ಅದೇ ವಿವಾದ ಏಳುವದನ್ನು ತಪ್ಪಿಸಲು ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ.
ಒಟ್ಟು 5 ರಾಜ್ಯಗಳಲ್ಲಿ 690 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಉತ್ತರಪ್ರದೇಶ ಒಂದೇ ರಾಜ್ಯದಲ್ಲಿ 403 ಕ್ಷೇತ್ರಗಳು ಇವೆ. ಉತ್ತರಪ್ರದೇಶದಲ್ಲಿ ಏಳು ಹಂತದಲ್ಲಿ ಮತದಾನ ನಡೆಯಲಿದ್ದು, ಫೆಬ್ರವರಿ 10ರಂದು ಮೊದಲ ಮತ್ತು ಮಾರ್ಚ್ 3ರಂದು ಕೊನೇ ಹಂತದ ಮತದಾನ ಇರಲಿದೆ. ಪಂಜಾಬ್, ಉತ್ತರಾಖಂಡ್, ಗೋವಾದಲ್ಲಿ ಫೆಬ್ರವರಿ 14ರಂದು ಚುನಾವಣೆ ನಡೆಯಲಿದ್ದರೆ, ಮಣಿಪುರದಲ್ಲಿ ಫೆಬ್ರವರಿ 27ರಂದು ಮೊದಲ ಹಂತ ಮತ್ತು ಮಾರ್ಚ್ 3ರಂದು ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಇನ್ನೊಂದೆಡೆ ಕೊವಿಡ್ 19 ಸೋಂಕಿನ ಸಂಖ್ಯೆಯೂ ಏರಿಕೆಯಾಗುತ್ತಿದ್ದು, ಲಸಿಕೆ ನೀಡಿಕೆ ವೇಗವನ್ನು ಹೆಚ್ಚಿಸುವಂತೆ ಆರೋಗ್ಯ ಇಲಾಖೆಗೆ ಚುನಾವಣಾ ಆಯೋಗ ಹೇಳಿದೆ. ಅದರೊಂದಿಗೆ ಚುನಾವಣೆ ಸಂಬಂಧ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನೂ ಘೋಷಿಸಿದೆ.
ಇದನ್ನೂ ಓದಿ: Chandrashekhar Patil: ನಾಡಿನ ಹಿರಿಯ ಸಾಹಿತಿ ಚಂಪಾ ಎಂದೇ ಪರಿಚಿತರಾಗಿದ್ದ ಚಂದ್ರಶೇಖರ ಪಾಟೀಲ್ ವಿಧಿವಶ
Published On - 9:14 am, Mon, 10 January 22