ಇಂದಿನಿಂದ ದೇಶದಲ್ಲಿ ಕೊವಿಡ್ 19 ಲಸಿಕೆ ಬೂಸ್ಟರ್ ಡೋಸ್ ನೀಡಿಕೆ ಅಭಿಯಾನ; ಮತ್ತೆ ನೋಂದಣಿ ಬೇಕಾ? ಯಾವ ಲಸಿಕೆ? ಇಲ್ಲಿದೆ ಮಾಹಿತಿ

ಈ ಹೊಸಹಂತದ ಲಸಿಕೆ ಅಭಿಯಾನದ ಬಗ್ಗೆ ಕೆಲವೊಂದು ಪ್ರಶ್ನೆಗಳು ಏಳುತ್ತವೆ. ಯಾವ ಲಸಿಕೆ ನೀಡಲಾಗುತ್ತದೆ? ಇದೀಗ ಮೂರನೇ ಡೋಸ್​ ಲಸಿಕೆ ಪಡೆಯುವವರು ಮತ್ತೊಮ್ಮೆ ನೋಂದಣಿ ಮಾಡಿಸಿಕೊಳ್ಳಬೇಕಾ? ಎಂಬಿತ್ಯಾದಿ ಪ್ರಶ್ನೆಗಳು ಎದ್ದಿವೆ.

ಇಂದಿನಿಂದ ದೇಶದಲ್ಲಿ ಕೊವಿಡ್ 19 ಲಸಿಕೆ ಬೂಸ್ಟರ್ ಡೋಸ್ ನೀಡಿಕೆ ಅಭಿಯಾನ; ಮತ್ತೆ ನೋಂದಣಿ ಬೇಕಾ? ಯಾವ ಲಸಿಕೆ? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Lakshmi Hegde

Updated on:Jan 10, 2022 | 8:21 AM

ದೇಶದಲ್ಲಿ ಮತ್ತೊಮ್ಮೆ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ದಿನವೊಂದಕ್ಕೆ ಲಕ್ಷಕ್ಕೂ ಅಧಿಕ ಸೋಂಕಿನ ಕೇಸ್​ಗಳು ಪತ್ತೆಯಾಗುತ್ತಿವೆ. ಈ ಮಧ್ಯೆ ಭಾರತದಲ್ಲಿ ಇಂದಿನಿಂದ ಹೊಸ ಹಂತದ ಕೊರೊನಾ ಲಸಿಕೆ ಅಭಿಯಾನ ಶುರುವಾಗಲಿದೆ. ಆರೋಗ್ಯ ಕಾರ್ಯಕರ್ತರು ಸೇರಿ, ಕೊರೊನಾ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರು ಮತ್ತು 60 ವರ್ಷ ಮೇಲ್ಪಟ್ಟು ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಮೂರನೇ ಡೋಸ್ (ಬೂಸ್ಟರ್ ಡೋಸ್​) ಹಾಕುವ ಕಾರ್ಯ ಇಂದಿನಿಂದ ಶುರುವಾಗಲಿದೆ. ರಾಷ್ಟ್ರರಾಜಧಾನಿ ದೆಹಲಿ ಸೇರಿ ಎಲ್ಲ ಕಡೆಗಳಲ್ಲೂ ಈ ಹಂತದ ಲಸಿಕೆ ಅಭಿಯಾನಕ್ಕೆ, ಲಸಿಕಾ ಕೇಂದ್ರಗಳಲ್ಲಿ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಇಷ್ಟೆಲ್ಲದರ ಮಧ್ಯೆ ಈ ಹೊಸಹಂತದ ಲಸಿಕೆ ಅಭಿಯಾನದ ಬಗ್ಗೆ ಕೆಲವೊಂದು ಪ್ರಶ್ನೆಗಳು ಏಳುತ್ತವೆ. ಯಾವ ಲಸಿಕೆ ನೀಡಲಾಗುತ್ತದೆ? ಇದೀಗ ಮೂರನೇ ಡೋಸ್​ ಲಸಿಕೆ ಪಡೆಯುವವರು ಮತ್ತೊಮ್ಮೆ ನೋಂದಣಿ ಮಾಡಿಸಿಕೊಳ್ಳಬೇಕಾ? ಎರಡನೇ ಡೋಸ್​ ತೆಗೆದುಕೊಂಡು ಎಷ್ಟು ಕಾಲದ ನಂತರ ಈ ಮೂರನೇ ಡೋಸ್​ ತೆಗೆದುಕೊಳ್ಳಬಹುದು? ಎಂಬಿತ್ಯಾದಿ ಪ್ರಶ್ನೆಗಳಿವೆ. 

ಮೂರನೇ ಡೋಸ್​ಗೇ ಯಾವ ಲಸಿಕೆ? ಬೂಸ್ಟರ್​ ಡೋಸ್​​ಗೆ ಲಸಿಕೆ ಬದಲಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಅಂದರೆ ಮೂರನೇ ಡೋಸ್​ ಪಡೆಯುವ ವ್ಯಕ್ತಿ ಈ ಹಿಂದೆ ಎರಡು ಡೋಸ್​ಗಳನ್ನು ಯಾವ ಲಸಿಕೆ ಪಡೆದಿದ್ದಾರೋ ಅದೇ ಲಸಿಕೆಯನ್ನೇ ಮೂರನೇ ಡೋಸ್​ ಆಗಿ ನೀಡಲಾಗುತ್ತದೆ. ಅಂದರೆ ಹಿಂದಿನ ಎರಡು ಡೋಸ್​ ಕೊವಿಶೀಲ್ಡ್​ ಪಡೆದಿದ್ದರೆ ಮೂರನೇ ಡೋಸ್​ ಕೂಡ ಕೊವಿಶೀಲ್ಡ್ ಇರುತ್ತದೆ, ಹಿಂದೆ ಎರಡು ಡೋಸ್​ ಕೊವ್ಯಾಕ್ಸಿನ್​ ಪಡೆದಿದ್ದರೆ ಮೂರನೇ ಡೋಸ್ ಕೂಡ ಕೊವ್ಯಾಕ್ಸಿನ್​ ಇರುತ್ತದೆ.

ಮತ್ತೆ ನೋಂದಣಿ ಅಗತ್ಯವಿಲ್ಲ ಈಗಾಗಲೇ ಎರಡು ಡೋಸ್ ಪಡೆದಿರುವ, ಆಯ್ದ ವರ್ಗಗಳ ಜನರಿಗೆ ಮಾತ್ರ ಕೊರೊನಾ ಲಸಿಕೆ ಮೂರನೇ ಡೋಸ್ ನೀಡಲಾಗುತ್ತಿದ್ದು, ಈ ಮೂರನೇ ಡೋಸ್ ಪಡೆಯುವವರು ಮತ್ತೊಮ್ಮೆ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಅವರು ಕೊವಿನ್ ಆ್ಯಪ್​ ಮೂಲಕ ಅಪಾಯಿಂಟ್​ಮೆಂಟ್​ ತೆಗೆದುಕೊಳ್ಳಬಹುದು. ಯಾಕೆಂದರೆ ಮೂರನೇ ಡೋಸ್​ ಪಡೆಯುವವರಿಗಾಗಿಯೇ ಕೊವಿನ್​ ಆ್ಯಪ್​​ನಲ್ಲಿ ಹೀಗಿದ್ದೊಂದು ಫೀಚರ್​​ನ್ನು ಅಳವಡಿಸಲಾಗಿದೆ. ಹಾಗಂತ ಈ ಅಪಾಯಿಂಟ್​ಮೆಂಟ್​ ಕಡ್ಡಾಯವಲ್ಲ. ನೀವು ನೇರವಾಗಿಯೂ ಲಸಿಕಾ ಕೇಂದ್ರಗಳಿಗೆ ಹೋಗಿ ಲಸಿಕೆ ಪಡೆಯಬಹುದು. ಅಲ್ಲಿಯೂ ಕೂಡ ನೀವು ಮರು ನೋಂದಣಿ ಮಾಡಿಕೊಳ್ಳುವ ಅಗತ್ಯ ಇರುವುದಿಲ್ಲ. ಇನ್ನು ಹೀಗೆ ಮೂರನೇ ಡೋಸ್ ಲಸಿಕೆ ಪಡೆಯುವವರು ಎರಡನೇ ಡೋಸ್​ ಪಡೆದು 9 ತಿಂಗಳು ಆಗಿರಬೇಕು.

60ವರ್ಷ ಮೇಲ್ಪಟ್ಟವರಿಗೆ ಸರ್ಟಿಫಿಕೇಟ್​ ಬೇಕಾ? 60 ವರ್ಷ ಮೇಲ್ಪಟ್ಟು, ಇತರ ರೋಗಗಳಿಂದ ಬಳಲುತ್ತಿರುವವರು ಯಾವುದೇ ವೈದ್ಯರಿಂದ ಆರೋಗ್ಯಕ್ಕೆ ಸಂಬಂಧಪಟ್ಟ ಸರ್ಟಿಫಿಕೇಟ್​​ನ್ನು ಕೊಡಬೇಕಾಗಿಲ್ಲ. ಆದರೆ ಲಸಿಕೆ ಪಡೆಯುವುದಕ್ಕೂ ಮೊದಲು ತಾವು ಚಿಕಿತ್ಸೆ ಪಡೆಯುತ್ತಿರುವ ವೈದ್ಯರೊಂದಿಗೆ ಒಮ್ಮೆ ಸಮಾಲೋಚನೆ ನಡೆಸಬೇಕು ಎಂದು ಆರೋಗ್ಯ ಇಲಾಖೆ ಈಗಾಗಲೇ ಹೇಳಿಕೆ ನೀಡಿದೆ.

ಆರೋಗ್ಯ ಕಾರ್ಯಕರ್ತರ ಕುಟುಂಬಕ್ಕೆ ಇಲ್ಲ ಲಸಿಕೆ ಈ ಹಂತದಲ್ಲಿ ಸದ್ಯ ಆರೋಗ್ಯ ಕಾರ್ಯಕರ್ತರು, ಕೊವಿಡ್​ 19 ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿ ಇರುವವರಿಗೆ ಮಾತ್ರ ಮೂರನೇ ಡೋಸ್​ ನೀಡುವುದಾಗಿ ಕೊವಿಡ್ 19 ಲಸಿಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಹೀಗಾಗಿ ಆರೋಗ್ಯ ಕಾರ್ಯಕರ್ತರು ಮತ್ತಿತರ ವರ್ಗದವರ ಕುಟುಂಬದವರಿಗೆ ಮೂರನೇ ಡೋಸ್​ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಯಾವೆಲ್ಲ ದಾಖಲೆಗಳು ಬೇಕು? ಮೂರನೇ ಡೋಸ್​ ಲಸಿಕೆ ಪಡೆದ ಬಳಿಕವೂ ನಿಮಗೆ ಒಂದು ಸರ್ಟಿಫಿಕೇಟ್​ ಸಿಗುತ್ತದೆ. ನೋಂದಣಿಯ ಅಗತ್ಯವೇನೂ ಇರುವುದಿಲ್ಲ. ಹಾಗಿದ್ದಾಗ್ಯೂ ನೀವು ಮೂರನೇ ಡೋಸ್​ ತೆಗೆದುಕೊಳ್ಳಲು ಕೇಂದ್ರಕ್ಕೆ ಹೋಗುವಾಗ ನಿಮ್ಮ ವೋಟರ್ ಐಡಿ, ಆಧಾರ್​ ಕಾರ್ಡ್​, ಪಾನ್​ ಕಾರ್ಡ್​, ಡ್ರೈವಿಂಗ್​ ಲೈಸೆನ್ಸ್​ ಇನ್ನೇನಾದರೂ ತೆಗೆದುಕೊಂಡು ಹೋಗಬೇಕು. ಅದರ ಆಧಾರದ ಮೇಲೆ ಮೂರನೇ ಡೋಸ್ ನೀಡಲಾಗುತ್ತದೆ.

ಇದನ್ನೂ ಓದಿ: ‘ಈ ನಟರಿಗೆ ಅಹಂಕಾರ ಜಾಸ್ತಿ’; ವಿಡಿಯೋ ಮೂಲಕ ಎಳೆ ಎಳೆಯಾಗಿ ವಿವರಿಸಿದ ಕಮಾಲ್​ ಆರ್.​ ಖಾನ್​

Published On - 8:11 am, Mon, 10 January 22