ದೆಹಲಿ: ವಿವಾ ವಿಶ್ವ ತಾಂತ್ರಿಕ ಸಮಾವೇಶದಲ್ಲಿ (VivaTech Summit 2021) ಪ್ರಧಾನಿ ನರೇಂದ್ರ ಮೋದಿ ಬುಧವಾರ ಮಾತನಾಡಿದರು. ಕೊರೊನಾ ಮಹಾಪಿಡುಗು ಜಗತ್ತನ್ನು ಆವರಿಸಿರುವ ಈ ಸಂದರ್ಭದಲ್ಲಿ ನಾನು ಆವಿಷ್ಕಾರದ ಬಗ್ಗೆ ಮಾತನಾಡುತ್ತಿದ್ದೇನೆ. ನನ್ನ ಹೇಳುವ ಆವಿಷ್ಕಾರ ಕೊರೊನಾ ಪಿಡುಗು ಕಾಣಿಸಿಕೊಳ್ಳುವ ಮೊದಲಿನ ದಿನಗಳಿಗೆ ಸಂಬಂಧಿಸಿದ್ದಾಗಿರುತ್ತದೆ ಎಂದು ಮೋದಿ ತಿಳಿಸಿದರು.
ಜನರನ್ನು ಪರಸ್ಪರ ಬೆಸೆಯಲು, ಸಾಂತ್ವನ ಹೇಳಲು ಮತ್ತು ಸಹಾಯಕ್ಕೆ ಧಾವಿಸಲು ಡಿಜಿಟಲ್ ತಂತ್ರಜ್ಞಾನವು ನಮಗೆ ನೆರವಾಯಿತು. ಡಿಜಿಟಲ್ ಮಾಧ್ಯಮದ ಮೂಲಕ ನಾವು ನಮ್ಮ ಪ್ರೀತಿಪಾತ್ರರೊಂದಿಗೆ ಮಾತನಾಡುತ್ತಿದ್ದೇವೆ, ಸಹಾಯ ಮಾಡುತ್ತಿದ್ದೇವೆ ಎಂದು ಹೇಳಿದರು.
ರೂಢಿಯಲ್ಲಿರುವ ತಂತ್ರಗಳು ವಿಫಲವಾದಾಗ ಆವಿಷ್ಕಾರಗಳು ನೆರವಿಗೆ ಬರುತ್ತವೆ. ಕೊವಿಡ್-19 ವ್ಯಾಪಿಸಿಕೊಂಡ ನಂತರ ಜಗತ್ತಿನ ಹಲವೆಡೆ ಇಂಥ ವಿದ್ಯಮಾನ ಗಮನಿಸುತ್ತಿದ್ದೇವೆ. ನಮ್ಮ ತಲೆಮಾರನ್ನು ವ್ಯಾಪಕವಾಗಿ ಕಲಕಿದ ಸಂದರ್ಭ ಇದು ಎಂದು ಮೋದಿ ನುಡಿದರು.
ಭಾರತವು ಆವಿಷ್ಕಾರ ಮತ್ತು ಹೂಡಿಕೆದಾರರಿಗೆ ಮಹತ್ವ ನೀಡುತ್ತದೆ. ಪ್ರತಿಭೆ, ಮಾರುಕಟ್ಟೆ, ಬಂಡವಾಳ ಮತ್ತು ಉದ್ಯಮ ಸ್ನೇಹಿ ಪರಿಸರ, ಮುಕ್ತ ಸಂಸ್ಕೃತಿಯನ್ನು ಗಮನಿಸಿ ಭಾರತದಲ್ಲಿ ಹೂಡಿಕೆ ಮಾಡಲು ಬರಬೇಕು ಎಂದು ವಿಶ್ವವನ್ನು ನಾನು ವಿನಂತಿಸುತ್ತೇನೆ ಎಂದು ಮೋದಿ ತಿಳಿಸಿದರು.
ಕೊರೊನಾ ಸೋಂಕಿನ 2ನೇ ಅಲೆಯು ವ್ಯಾಪಕವಾಗಿ ಹರಡಿಕೊಂಡಿರುವ ಈ ಹೊತ್ತಿನಲ್ಲಿ ನಮ್ಮ ಆವಿಷ್ಕಾರಗಳು ಈ ಬಿಕ್ಕಟ್ಟಿನ ಪರಿಣಾಮಗಳನ್ನು ಮಿತಗೊಳಿಸಲು ಹೇಗೆ ಸಹಕರಿಸಿದವು ಎಂಬುದರ ಬಗ್ಗೆ ನಾವೆಲ್ಲರೂ ಗಮನಹರಿಸಬೇಕಿದೆ. ನಮ್ಮ ನವೋದ್ಯಮಗಳು ಈ ನಿಟ್ಟಿನಲ್ಲಿ ಅಮೂಲ್ಯ ಕೊಡುಗೆ ನೀಡಿವೆ ಎಂದು ನುಡಿದರು.
ಈ ವೇದಿಕೆಯ ಫ್ರಾನ್ಸ್ನ ತಾಂತ್ರಿಕ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಭಾರತ ಮತ್ತು ಫ್ರಾನ್ಸ್ ದೇಶಗಳು ಹಲವು ವಿಷಯಗಳ ಬಗ್ಗೆ ನಿಕಟವಾಗಿ ಕೆಲಸ ಮಾಡುತ್ತಿವೆ. ಇವುಗಳಲ್ಲಿ ತಂತ್ರಜ್ಞಾನ ಮತ್ತು ಡಿಜಿಟಲ್ ಕ್ಷೇತ್ರಗಳು ಪರಸ್ಪರ ಸಹಕಾರವನ್ನು ಮುನ್ನಡೆಸುವ ಪ್ರಬಲ ಕ್ಷೇತ್ರಗಳಾಗಿ ಹೊರಹೊಮ್ಮುತ್ತಿವೆ. ಇದು ಈ ಕ್ಷಣದ ತುರ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಕಳೆದ ವರ್ಷ ಹಲವು ವಲಯಗಳಲ್ಲಿ ತೊಂದರೆ ಅನುಭವಿಸಿದೆವು. ಈಗಲೂ ಅಂಥದ್ದೇ ಪರಿಸ್ಥಿತಿ ಮುಂದುವರಿದಿದೆ. ತೊಂದರೆಗಳಿವೆ ಎಂಬ ಕಾರಣಕ್ಕೆ ನಾವು ಭರವಸೆ ಕಳೆದುಕೊಳ್ಳಬೇಕಿಲ್ಲ. ಆಗಿರುವ ತೊಂದರೆಯನ್ನು ಸರಿಪಡಿಸುವುದು ಮತ್ತು ಹೊಸ ಸವಾಲುಗಳಿಗೆ ಸನ್ನದ್ಧರಾಗುವುದು ಅತ್ಯಂತ ಮುಖ್ಯ ಎಂದು ಮೋದಿ ನುಡಿದರು. ಗಣಿ, ಬಾಹ್ಯಾಕಾಶ, ಬ್ಯಾಂಕಿಂಗ್, ಅಟಾಮಿಕ್ ಎನರ್ಜಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಾವು ದೊಡ್ಡಮಟ್ಟದ ಸುಧಾರಣೆಗಳನ್ನು ಮಾಡಿದ್ದೇವೆ. ಪಿಡುಗಿನ ನಡುವೆಯೂ ಭಾರತವು ಒಂದು ದೇಶವಾಗಿ ಹೊಸ ಸವಾಲುಗಳನ್ನು ಎದುರಿಸಿ, ಉತ್ತರ ಕಂಡುಕೊಂಡಿತು ಎಂದು ಮೋದಿ ವಿವರಿಸಿದರು.
(PM Narendra Modi Speaks in VivaTech Summit Lauds Innovation and Startups)
ಇದನ್ನೂ ಓದಿ: ಸಂಪುಟ ವಿಸ್ತರಣೆ ಗುಮಾನಿ ನಡುವೆ ವಾರದಲ್ಲಿ 5ನೇ ಬಾರಿ ಪ್ರಧಾನಿ ನರೇಂದ್ರ ಮೋದಿ ಸಭೆ; ಪ್ರಮುಖ ಸಚಿವರೊಂದಿಗೆ ಮಾತುಕತೆ
ಇದನ್ನೂ ಓದಿ: ಲಸಿಕೆ ಕೊರತೆ, ನಿಷ್ಕ್ರಿಯತೆ ಮುಚ್ಚಿ ಹಾಕಲು ಮೋದಿ ಸರ್ಕಾರ ಸುಳ್ಳು ಹೇಳುತ್ತಿದೆ; ರಾಹುಲ್ ಗಾಂಧಿ ಟ್ವೀಟ್
Published On - 4:38 pm, Wed, 16 June 21