ಸಶಸ್ತ್ರಪಡೆಗಳಿಗೆ ಭಾರತದಲ್ಲೇ ತಯಾರಾದ ಹೆಲಿಕಾಪ್ಟರ್, ಡ್ರೋಣ್ಗಳ ಹಸ್ತಾಂತರ: ಝಾನ್ಸಿಯಲ್ಲಿ ರಾಷ್ಟ್ರ ರಕ್ಷಾ ಸಮರ್ಪಣ ಪರ್ವ
ಭಾರತೀಯ ಸಶಸ್ತ್ರಪಡೆಗಳಲ್ಲಿ ದೇಶೀನಿರ್ಮಿತ ಯುದ್ಧೋಪಕರಣಗಳ ಬಳಕೆಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ
ದೆಹಲಿ: ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನಡೆಸುತ್ತಿರುವ ಆಜಾದಿ ಕಾ ಅಮೃತ್ ಮಹೋತ್ಸವ್ ಅಭಿಯಾನದ ಅಂಗವಾಗಿ ಉತ್ತರ ಪ್ರದೇಶದ ಝಾನ್ಸಿಯಲ್ಲಿ ಬುಧವಾರ (ನ.17) ಮೂರು ದಿನಗಳ ರಾಷ್ಟ್ರ ರಕ್ಷಾ ಸಮರ್ಪಣ ಪರ್ವ ಕಾರ್ಯಕ್ರಮ ಆರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ಶುಕ್ರವಾರ ಪಾಲ್ಗೊಳ್ಳಲಿರುವ ಪ್ರಧಾನಿ ನರೇಂದ್ರಮೋದಿ ಭಾರತದಲ್ಲೇ ತಯಾರಾಗಿರುವ ಯುದ್ಧ ಹೆಲಿಕಾಪ್ಟರ್, ಡ್ರೋಣ್ ಮತ್ತು ಅತ್ಯಾಧುನಿಕ ಎಲೆಕ್ಟ್ರಾನಿಕ್ ಯುದ್ಧೋಪಕರಣಗಳನ್ನು ಸಶಸ್ತ್ರಪಡೆಗಳಿಗೆ ಹಸ್ತಾಂತರಿಸಲಿದ್ದಾರೆ.
ಸರ್ಕಾರದ ಹೇಳಿಕೆಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಅಭಿವೃದ್ಧಿಪಡಿಸಿರುವ ಯುದ್ಧ ಹೆಲಿಕಾಪ್ಟರ್ಗಳನ್ನು ವಾಯುಪಡೆ ಮುಖ್ಯಸ್ಥರಿಗೆ ಹಸ್ತಾಂತರಿಸಲಿದ್ದಾರೆ. ಭಾರತದ ನವೋದ್ಯಮ ಅಭಿವೃದ್ಧಿಪಡಿಸಿರುವ ಡ್ರೋಣ್ ಮತ್ತು ಮಾನವ ರಹಿತ ವೈಮಾನಿಕ ಉಪಕರಣಗಳನ್ನು ಸೇನಾ ಮುಖ್ಯಸ್ಥರಿಗೆ ಹಸ್ತಾಂತರಿಸಲಿದ್ದಾರೆ. ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಎಲೆಕ್ಟ್ರಾನಿಕ್ ಯುದ್ಧೋಪಕರಣಗಳನ್ನು ನೌಕಾಪಡೆ ಮುಖ್ಯಸ್ಥರಿಗೆ ಹಸ್ತಾಂತರಿಸಲಿದ್ದಾರೆ.
ಭಾರತೀಯ ಸಶಸ್ತ್ರಪಡೆಗಳಲ್ಲಿ ದೇಶೀನಿರ್ಮಿತ ಯುದ್ಧೋಪಕರಣಗಳ ಬಳಕೆಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ. ಸಶಸ್ತ್ರಪಡೆಗಳ ಮುಖ್ಯಸ್ಥರಿಗೆ ಪ್ರಧಾನಿ ನರೇಂದ್ರ ಮೋದಿ ಹಸ್ತಾಂತರಿಸುತ್ತಿರುವ ಯುದ್ಧೋಪಕರಣಗಳೂ ಸಹ ದೇಶೀನಿರ್ಮಿತವಾಗಿರುವುದು ವಿಶೇಷ. ಆತ್ಮನಿರ್ಭರ್ ಭಾರತ್ ಆಶಯಕ್ಕೆ ಈ ಕ್ರಮಗಳಿಂದ ಹೆಚ್ಚಿನ ಪ್ರೋತ್ಸಾಹ ಸಿಗುತ್ತದೆ ಎಂದು ಪ್ರಧಾನಿ ಕಚೇರಿ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ ತಿಳಿಸಿದೆ. ಇದೇ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು, ₹ 400 ಅಂದಾಜುವೆಚ್ಚದ ಉತ್ತರ ಪ್ರದೇಶ ರಕ್ಷಣಾ ಉದ್ಯಮಗಳ ಕಾರಿಡಾರ್ಗೂ ಚಾಲನೆ ನೀಡಲಿದ್ದಾರೆ. ಇಲ್ಲಿ ಟ್ಯಾಂಕ್ ನಿರೋಧಕ ನಿರ್ದೇಶಿತ ಕ್ಷಿಪಣಿಗಳಿಗೆ ಪ್ರೊಪಲ್ಷನ್ ತಯಾರಿಸಲು ಉದ್ದೇಶಿಸಲಾಗಿದೆ.
ಇದೇ ವೇಳೆ ನ್ಯಾಷನಲ್ ಕೆಡೆಟ್ ಕಾರ್ಪ್ಸ್ನ (ಎನ್ಸಿಸಿ) ಹಳೆ ವಿದ್ಯಾರ್ಥಿಗಳ ಸಂಘಕ್ಕೂ ಮೋದಿ ಚಾಲನೆ ನೀಡಲಿದ್ದಾರೆ. ಎನ್ಸಿಸಿಯ ಹಳೆಯ ವಿದ್ಯಾರ್ಥಿಯಾಗಿ ಈ ಸಂಘದ ಮೊದಲ ಸದಸ್ಯರಾಗಿ ತಮ್ಮ ಹೆಸರನ್ನೇ ಮೋದಿ ನೋಂದಾಯಿಸಲಿದ್ದಾರೆ. ಎನ್ಸಿಸಿಯ ಮೂರೂ ವಿಭಾಗಗಳ ಕೆಡೆಟ್ಗಳಿಗೆ ಸಿಮ್ಯುಲೇಶನ್ ತಂತ್ರಜ್ಞಾನದ ಮೂಲಕ ತರಬೇತಿ ನೀಡುವ ಸೌಲಭ್ಯವನ್ನೂ ಮೋದಿ ಇದೇ ವೇಳೆ ಉದ್ಘಾಟಿಸಿದ್ದಾರೆ. ರಾಷ್ಟ್ರೀಯ ಯುದ್ಧ ಸ್ಮಾರಕದ ಎಲೆಕ್ಟ್ರಾನಿಕ್ ಕಿಯಾಸ್ಕ್ಗಳನ್ನೂ ಮೋದಿ ಉದ್ಘಾಟಿಸಲಿದ್ದಾರೆ. ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲು ಈ ಕಿಯಾಸ್ಕ್ಗಳು ಅವಕಾಶ ಕಲ್ಪಿಸಿಕೊಡುತ್ತವೆ.
ಇದನ್ನೂ ಓದಿ: ಚುನಾವಣೆ ಹೊಸಿಲಲ್ಲಿರುವ ಉತ್ತರ ಪ್ರದೇಶದಲ್ಲಿ ಸಾಲುಸಾಲು ಯೋಜನೆಗಳನ್ನು ಲೋಕಾರ್ಪಣೆ ಮಾಡಲು ಬಿರುಸಿನ ಸಿದ್ಧತೆ ಇದನ್ನೂ ಓದಿ: ವಾರಣಾಸಿಗೆ ಕರ್ನಾಟಕ ರೇಷ್ಮೆ ಮಾರುಕಟ್ಟೆ ವ್ಯಾಪ್ತಿ ವಿಸ್ತರಣೆ; ಉತ್ತರ ಪ್ರದೇಶ ಸರ್ಕಾರದ ಜತೆ ಕರ್ನಾಟಕ ಸರ್ಕಾರ ಮಾತುಕತೆ