ಯುವಕರನ್ನು ಕ್ರೀಡೆಗೆ ಪ್ರೋತ್ಸಾಹಿಸುವ 2ನೇ ಹಂತದ ಸಂಸದ್ ಖೇಲ್ ಮಹಾಕುಂಭಕ್ಕಿಂದು ಬಸ್ತಿಯಲ್ಲಿ ಪ್ರಧಾನಿ ಮೋದಿ ಚಾಲನೆ
Saansad Khel Mahakumbh: ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಸಂಸದ್ ಖೇಲ್ ಮಹಾಕುಂಭದ ಎರಡನೇ ಹಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಲಿದ್ದಾರೆ.
ದೆಹಲಿ: ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ಆಯೋಜಿಸಲಾಗಿರುವ ದೇಶದ ಅತೀ ದೊಡ್ಡ ಸಂಸದ್ ಖೇಲ್ ಮಹಾಕುಂಭದ(Saansad Khel Mahakumbh) ಎರಡನೇ ಹಂತಕ್ಕೆ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಬುಧವಾರ ಚಾಲನೆ ನೀಡಲಿದ್ದಾರೆ. ‘ಖೇಲ್ ಮಹಾಕುಂಭ’ ಒಂದು ವಿನೂತನ ಕ್ರೀಡಾಹಬ್ಬವಾಗಿದ್ದು, ಇದು ಬಸ್ತಿ ಮತ್ತು ನೆರೆಯ ಪ್ರದೇಶಗಳ ಯುವಕರಿಗೆ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸುವ ವೇದಿಕೆಯಾಗಿದೆ. ಮತ್ತು ಕ್ರೀಡೆಯನ್ನು ವೃತ್ತಿಯಾಗಿ ತೆಗೆದುಕೊಳ್ಳಲು ಯುವಕರನ್ನು ಪ್ರೇರೇಪಿಸುತ್ತದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯವು ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ಬಸ್ತಿ ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿರುವ ‘ಸಂಸದ್ ಖೇಲ್ ಮಹಾಕುಂಭ 2022-23’ ರ ಎರಡನೇ ಹಂತವನ್ನು ಪ್ರಧಾನಿ ಮೋದಿ ಅವರು ಜನವರಿ 18ರಂದು ಮಧ್ಯಾಹ್ನ 1 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ಬಸ್ತಿ ಜಿಲ್ಲೆಯಲ್ಲಿ ‘ಸಂಸದ್ ಖೇಲ್ ಮಹಾಕುಂಭ’ವನ್ನು 2021 ರಿಂದ ಬಸ್ತಿಯ ಲೋಕಸಭಾ ಸಂಸದ ಹರೀಶ್ ದ್ವಿವೇದಿ ಅವರು ಆಯೋಜಿಸುತ್ತಾ ಬಂದಿದ್ದಾರೆ.
‘ಸಂಸದ್ ಖೇಲ್ ಮಹಾಕುಂಭ 2022-23’ ಅನ್ನು ಎರಡು ಹಂತಗಳಲ್ಲಿ ಆಯೋಜಿಸಲಾಗುತ್ತಿದೆ. ಮೊದಲ ಹಂತವನ್ನು ಕಳೆದ ವರ್ಷ ಅಂದರೆ 2022ರ ಡಿಸೆಂಬರ್ 10 ರಿಂದ 16 ರವರೆಗೆ ಆಯೋಜಿಸಲಾಗಿತ್ತು. ಮತ್ತು ಎರಡನೇ ಹಂತವು 2023ರ ಜನವರಿ 18 ರಿಂದ 28 ರವರೆಗೆ ಆಯೋಜಿಸಲಾಗಿದೆ.
ಖೇಲ್ ಮಹಾಕುಂಭವು ಯುವಜನತೆಗೆ ಕುಸ್ತಿ, ಕಬಡ್ಡಿ, ಖೋ ಖೋ, ಬಾಸ್ಕೆಟ್‌ಬಾಲ್, ಫುಟ್‌ಬಾಲ್, ಹಾಕಿ, ವಾಲಿಬಾಲ್, ಹ್ಯಾಂಡ್‌ಬಾಲ್, ಚೆಸ್, ಕೇರಂ, ಬ್ಯಾಡ್ಮಿಂಟನ್, ಟೇಬಲ್ ಟೆನ್ನಿಸ್ ಮುಂತಾದ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಲ್ಲಿ ವೈವಿಧ್ಯಮಯ ಸ್ಪರ್ಧೆಗಳಲ್ಲಿ ಭಾಗಿಯಾಗಲು ಸಹಾಯಕವಾಗಿದೆ. ಇವುಗಳಲ್ಲದೆ ಪ್ರಬಂಧ ಬರವಣಿಗೆ, ಚಿತ್ರಕಲೆ, ರಂಗೋಲಿ ಹಾಕುವುದು ಇತ್ಯಾದಿ ಸ್ಪರ್ಧೆಗಳನ್ನೂ ಈ ಖೇಲ್ ಮಹಾಕುಂಭದಲ್ಲಿ ಆಯೋಜಿಸಲಾಗುತ್ತದೆ. ಇದು ದೇಶದ ಯುವಕರಲ್ಲಿ ಶಿಸ್ತು, ತಂಡದಲ್ಲಿ ಕೆಲಸ ಮಾಡುವುದು, ಆರೋಗ್ಯಕರ ಸ್ಪರ್ಧೆ, ಆತ್ಮ ವಿಶ್ವಾಸ ಮತ್ತು ರಾಷ್ಟ್ರೀಯತೆಯ ಮನೋಭಾವವನ್ನು ಬೆಳೆಸಲು ಸಹಾಯಕವಾಗಿದೆ ಎಂದು ಸರ್ಕಾರದಿಂದ ಹೊರಡಿಸಲಾದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದೇಶದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:08 am, Wed, 18 January 23