ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಮಹಾ ಕ್ರಾಂತಿ: 13,092 ಶಾಲೆಗಳು ‘ಪಿಎಂ ಶ್ರೀ’ ಆಗಿ ಮೇಲ್ದರ್ಜೆಗೆ, 27,360 ಕೋಟಿ ರೂ. ಯೋಜನೆ

ಎನ್​ಇಪಿ 2020 ಅಡಿಯಲ್ಲಿ, ಪ್ರಧಾನ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ (PM SHRI) ಯೋಜನೆಯು ಭಾರತದ ಶಿಕ್ಷಣದಲ್ಲಿ ಕ್ರಾಂತಿ ತರುತ್ತಿದೆ. 27,360 ಕೋಟಿ ರೂ. ವೆಚ್ಚದಲ್ಲಿ 13,092 ಶಾಲೆಗಳನ್ನು ಹೈಟೆಕ್ ಮತ್ತು ಮಾದರಿ ಸಂಸ್ಥೆಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಇದು ಪರಿಸರಸ್ನೇಹಿ ತಂತ್ರಜ್ಞಾನ, ಕೌಶಲ್ಯ ಅಭಿವೃದ್ಧಿ ಹಾಗೂ ಸ್ಮಾರ್ಟ್ ಕಲಿಕಾ ವಾತಾವರಣವನ್ನು ಸೃಷ್ಟಿಸಿ, 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತದೆ.

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಮಹಾ ಕ್ರಾಂತಿ: 13,092 ಶಾಲೆಗಳು ‘ಪಿಎಂ ಶ್ರೀ’ ಆಗಿ ಮೇಲ್ದರ್ಜೆಗೆ, 27,360 ಕೋಟಿ ರೂ. ಯೋಜನೆ
ಶಾಲೆ
Image Credit source: world bank

Updated on: Sep 15, 2026 | 12:28 PM

ನವದೆಹಲಿ, ಸೆಪ್ಟೆಂಬರ್ 15: ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಜಾಗತಿಕ ಗುಣಮಟ್ಟಕ್ಕೆ ಏರಿಸುವ ಉದ್ದೇಶದಿಂದ ಜಾರಿಗೆ ತರಲಾದ ಕೇಂದ್ರ ಪ್ರಾಯೋಜಿತ ‘ಪ್ರಧಾನ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ’ (PM SHRI) ಯೋಜನೆಯು ಮಹತ್ವದ ಮೈಲಿಗಲ್ಲು ತಲುಪಿದೆ. ಜುಲೈ 2026 ರ ವೇಳೆಗೆ ದೇಶದ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 13,092 ಶಾಲೆಗಳನ್ನು ‘ಪಿಎಂ ಶ್ರೀ’ ಶಾಲೆಗಳನ್ನಾಗಿ ಆಯ್ಕೆ ಮಾಡಲಾಗಿದ್ದು, ನಿಗದಿತ ಗುರಿಯ ಶೇಕಡಾ 90 ರಷ್ಟು ಪ್ರಗತಿ ಸಾಧಿಸಲಾಗಿದೆ.

ಸೆಪ್ಟೆಂಬರ್ 7, 2022 ರಂದು ಚಾಲನೆಗೊಂಡ ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ಕೇಂದ್ರ ಸರ್ಕಾರವು 27,360 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ದೇಶಾದ್ಯಂತ ಇರುವ 14,500 ಕ್ಕೂ ಹೆಚ್ಚು ಶಾಲೆಗಳನ್ನು ಮಾದರಿ ಸಂಸ್ಥೆಗಳಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿದೆ. ಈ ಯೋಜನೆ 725 ಜಿಲ್ಲೆಗಳು ಹಾಗೂ ಸಾವಿರಾರು ಬ್ಲಾಕ್‌ಗಳಲ್ಲಿ ವ್ಯಾಪಿಸಿದ್ದು, 20 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನೇರ ಶೈಕ್ಷಣಿಕ ಪ್ರಯೋಜನ ಸಿಗಲಿದೆ.

ಕೇಂದ್ರೀಯ ಶಾಲೆಗಳಿಗೂ ವಿಸ್ತರಣೆ: ಆಯ್ಕೆಯಾಗಿರುವ ಶಾಲೆಗಳಲ್ಲಿ ರಾಜ್ಯ ಸರ್ಕಾರಿ ಶಾಲೆಗಳಷ್ಟೇ ಅಲ್ಲದೆ ಕೇಂದ್ರೀಯ ವಿದ್ಯಾಲಯಗಳು (KVS), ಜವಾಹರ್ ನವೋದಯ ವಿದ್ಯಾಲಯಗಳು (NVS) ಮತ್ತು ಎನ್‌ಸಿಇಆರ್‌ಟಿ (NCERT) ಅಡಿಯಲ್ಲಿ ಬರುವ ಶಾಲೆಗಳೂ ಸೇರಿವೆ.

ಮತ್ತಷ್ಟು ಓದಿ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಗೆ ಮರುನಾಮಕರಣ! ಹೊಸ ಹೆಸರು ಏನು ಗೊತ್ತಾ?

ಮುಖ್ಯ ಉದ್ದೇಶ: ಕೇವಲ ಪಠ್ಯಪುಸ್ತಕದ ಕಲಿಕೆಯಷ್ಟೇ ಅಲ್ಲದೆ, ಪ್ರಾಯೋಗಿಕ ಜ್ಞಾನ , ಸ್ಮಾರ್ಟ್ ತಂತ್ರಜ್ಞಾನ ಆಧಾರಿತ ತರಗತಿಗಳು ಮತ್ತು ಸುರಕ್ಷಿತ ಕಲಿಕಾ ವಾತಾವರಣ ನಿರ್ಮಿಸುವುದು ಇದರ ಮೂಲ ಮಂತ್ರ.

ಗ್ರೀನ್ ಆ್ಯಂಡ್ ಸ್ಮಾರ್ಟ್ ಸ್ಕೂಲ್ಸ್: ಪಿಎಂ ಶ್ರೀ ಶಾಲೆಗಳನ್ನು ಪರಿಸರಸ್ನೇಹಿ ಕ್ಯಾಂಪಸ್‌ಗಳಾಗಿ ರೂಪಿಸಲಾಗುತ್ತಿದ್ದು, ಸೌರಶಕ್ತಿ ವ್ಯವಸ್ಥೆ, ಎಲ್‌ಇಡಿ ಲೈಟ್‌ಗಳು, ಪೌಷ್ಟಿಕ ತೋಟಗಳು , ತ್ಯಾಜ್ಯ ನಿರ್ವಹಣೆ ಮತ್ತು ಜಲ ಮರುಬಳಕೆಯ ಸೌಲಭ್ಯಗಳನ್ನು ಅಳವಡಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಕೋಡಿಂಗ್, ರೋಬೋಟಿಕ್ಸ್, ಕೃತಕ ಬುದ್ಧಿಮತ್ತೆ ಮತ್ತು ವೃತ್ತಿಪರ ಕೌಶಲ್ಯಗಳನ್ನು ಬಾಲ್ಯದಿಂದಲೇ ಕಲಿಸಲು ಅತ್ಯಾಧುನಿಕ ಕಂಪ್ಯೂಟರ್ ಲ್ಯಾಬ್‌ಗಳು ಮತ್ತು ಅಟಲ್ ಟಿಂಕರಿಂಗ್ ಲ್ಯಾಬ್‌ಗಳನ್ನು ಒದಗಿಸಲಾಗುತ್ತಿದೆ.

ಮಾದರಿ ಸಂಸ್ಥೆಗಳ ಪಾತ್ರ: ಈ ಶಾಲೆಗಳು ಕೇವಲ ಸ್ವತಂತ್ರವಾಗಿ ಕಾರ್ಯನಿರ್ವಹಿಸದೆ, ಸುತ್ತಮುತ್ತಲಿನ ಇತರ ಸಾಮಾನ್ಯ ಶಾಲೆಗಳಿಗೆ ಮಾರ್ಗದರ್ಶನ ನೀಡುವ ‘ಕ್ಲಸ್ಟರ್ ಕೇಂದ್ರ’ಗಳಾಗಿ ಕಾರ್ಯನಿರ್ವಹಿಸುತ್ತವೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us