ಇಂದಿರಾ ಗಾಂಧಿ ಹೆಸರಿಗೆ ಕೊಕ್: ಕೇಂದ್ರದ 3 ಪ್ರಮುಖ ಪಿಂಚಣಿ ಯೋಜನೆಗಳಿಗೆ ‘ಪ್ರಧಾನ ಮಂತ್ರಿ’ ಹೆಸರು, ಸಂಪುಟ ಮಹತ್ವದ ನಿರ್ಧಾರ

ಕೇಂದ್ರ ಸರ್ಕಾರವು ಇಂದಿರಾ ಗಾಂಧಿ ಹೆಸರಿನಲ್ಲಿದ್ದ ಪ್ರಮುಖ ಪಿಂಚಣಿ ಯೋಜನೆಗಳಿಗೆ 'ಪ್ರಧಾನ ಮಂತ್ರಿ' ಎಂದು ಮರುನಾಮಕರಣ ಮಾಡಿದೆ. ಸಂಪುಟ ನಿರ್ಧಾರದಿಂದ PM-OAP, PM-WP, PM-DP ಹೊಸ ಹೆಸರು ಪಡೆದಿವೆ. 53,428 ಕೋಟಿ ರೂ. ಅನುದಾನದೊಂದಿಗೆ 3.2 ಕೋಟಿ ವೃದ್ಧರು, ವಿಧವೆಯರು, ದಿವ್ಯಾಂಗರಿಗೆ ನೆರವು ಮುಂದುವರೆಯಲಿದೆ. ದಿವ್ಯಾಂಗರ ಪಿಂಚಣಿ ನಿಯಮಗಳಲ್ಲಿ ಮಹತ್ವದ ಸುಧಾರಣೆ ತರಲಾಗಿದೆ, ಅರ್ಹತಾ ಮಾನದಂಡ 40%ಕ್ಕೆ ಇಳಿಸಲಾಗಿದೆ.

ಇಂದಿರಾ ಗಾಂಧಿ ಹೆಸರಿಗೆ ಕೊಕ್: ಕೇಂದ್ರದ 3 ಪ್ರಮುಖ ಪಿಂಚಣಿ ಯೋಜನೆಗಳಿಗೆ ಪ್ರಧಾನ ಮಂತ್ರಿ ಹೆಸರು, ಸಂಪುಟ ಮಹತ್ವದ ನಿರ್ಧಾರ
ಇಂದಿರಾ ಗಾಂಧಿ
Image Credit source: Magnific

Updated on: Oct 15, 2026 | 10:21 AM

ನವದೆಹಲಿ, ಅಕ್ಟೋಬರ್ 15: ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶದ ಬಡ, ಅಸಹಾಯಕ ನಾಗರಿಕರ ಸಾಮಾಜಿಕ ಭದ್ರತೆಗಾಗಿ ಜಾರಿಯಲ್ಲಿರುವ ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮದ (NSAP) ಅಡಿಯಲ್ಲಿನ ಪ್ರಮುಖ ಪಿಂಚಣಿ ಯೋಜನೆಗಳಿಗೆ ಮರುನಾಮಕರಣ ಮಾಡಿದೆ. ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಹೆಸರಿನಲ್ಲಿದ್ದ ಮೂರು ಪ್ರಮುಖ ಪಿಂಚಣಿ ಯೋಜನೆಗಳಿಂದ ಇಂದಿರಾ ಗಾಂಧಿ ಹೆಸರನ್ನು ಕೈಬಿಟ್ಟು, ಅವುಗಳಿಗೆ “ಪ್ರಧಾನ ಮಂತ್ರಿ” ಎಂದು ಹೊಸದಾಗಿ ನಾಮಕರಣ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಈ ಯೋಜನೆಗಳನ್ನು 2026-27ರಿಂದ 2030-31ರವರೆಗೆ ಮುಂದಿನ ಐದು ವರ್ಷಗಳ ಕಾಲ ಮುಂದುವರಿಸಲು ಬರೋಬ್ಬರಿ 53,428 ಕೋಟಿ ರೂ. ಅನುದಾನಕ್ಕೆ ಅನುಮೋದನೆ ನೀಡಲಾಗಿದೆ.

ಯಾವ ಯೋಜನೆಗೆ ಏನು ಹೊಸ ಹೆಸರು?

ಹಳೆಯ ಹೆಸರುಹೊಸ ಹೆಸರುರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ (NSAP)ಪ್ರಧಾನಮಂತ್ರಿ ಸಾಮಾಜಿಕ ಸಹಾಯತಾ ಯೋಜನೆ (PM-SSY),ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ (IGNOAPS), ಪ್ರಧಾನಮಂತ್ರಿ ವೃದ್ಧಾಪ್ಯ ಪಿಂಚಣಿ ಯೋಜನೆ (PM-OAP), ಇಂದಿರಾ ಗಾಂಧಿ ರಾಷ್ಟ್ರೀಯ ವಿಧವಾ ಪಿಂಚಣಿ ಯೋಜನೆ (IGNWPS), ಪ್ರಧಾನಮಂತ್ರಿ ವಿಧವಾ ಪಿಂಚಣಿ ಯೋಜನೆ (PM-WP),ಇಂದಿರಾ ಗಾಂಧಿ ರಾಷ್ಟ್ರೀಯ ಅಂಗವೈಕಲ್ಯ ಪಿಂಚಣಿ ಯೋಜನೆ (IGNDPS),ಪ್ರಧಾನಮಂತ್ರಿ ದಿವ್ಯಾಂಗಜನ ಪಿಂಚಣಿ ಯೋಜನೆ (PM-DP),ರಾಷ್ಟ್ರೀಯ ಕುಟುಂಬ ಪ್ರಯೋಜನ ಯೋಜನೆ (NFBS),ಪ್ರಧಾನಮಂತ್ರಿ ಕುಟುಂಬ ಪ್ರಯೋಜನ ಯೋಜನೆ.

ದಿವ್ಯಾಂಗರ ಪಿಂಚಣಿ ನಿಯಮಗಳಲ್ಲಿ ಮಹತ್ವದ ಸುಧಾರಣೆ

ಕೇವಲ ಹೆಸರು ಬದಲಾವಣೆ ಮಾತ್ರವಲ್ಲದೆ, ದಿವ್ಯಾಂಗರಿಗೆ ನೀಡಲಾಗುವ ಪಿಂಚಣಿ ನಿಯಮಗಳಲ್ಲಿ ಸರ್ಕಾರ ಹಲವು ಪ್ರಮುಖ ಸಡಿಲಿಕೆ ಮತ್ತು ಸುಧಾರಣೆಗಳನ್ನು ತಂದಿದೆ. ಈ ಹಿಂದೆ ಕನಿಷ್ಠ ಶೇ. 80ರಷ್ಟು ತೀವ್ರ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ಕೇಂದ್ರ ಸರ್ಕಾರದ ಈ ಪಿಂಚಣಿ ಲಭ್ಯವಿತ್ತು. ಈಗ ಆ ಮಾನದಂಡವನ್ನು ಶೇ. 40ಕ್ಕೆ ಇಳಿಸಲಾಗಿದೆ.

ಇದರಿಂದ ದೇಶದ ಲಕ್ಷಾಂತರ ಹೆಚ್ಚುವರಿ ವಿಕಲಚೇತನರು ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ. ಹಿಂದೆ ಕನಿಷ್ಠ 18 ವರ್ಷ ತುಂಬಿದ ಬಳಿಕವೇ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಈಗ ಜನನದ ಸಮಯದಿಂದಲೇ (0-79 ವರ್ಷದವರೆಗೆ) ಮಾಸಿಕ 375 ಹಾಗೂ 80 ವರ್ಷ ಮೇಲ್ಪಟ್ಟ ಹಿರಿಯ ದಿವ್ಯಾಂಗರಿಗೆ 625 ರೂ.ವರೆಗೆ ಕೇಂದ್ರದ ಮಾಸಿಕ ನೆರವು ಸಿಗಲಿದೆ.

ಮತ್ತಷ್ಟು ಓದಿ:
ಸಾಂವಿಧಾನಿಕ ಸಂಸ್ಥೆಗಳನ್ನು ‘ಕಳ್ಳರು, ರಾಜಿ ಮಾಡಿಕೊಂಡವರು’ ಎನ್ನುವುದು ಸರಿಯಲ್ಲ: ಆಧಾರರಹಿತ ತೇಜೋವಧೆ ವಿರುದ್ಧ ಹಾರ್ವರ್ಡ್ ಭಾರತೀಯರ ಧ್ವನಿ

ಯೋಜನೆ ವಿಸ್ತರಣೆ ಮತ್ತು ಬಜೆಟ್ ವಿವರ

ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿರುವಂತೆ, ಈ ಯೋಜನೆಯಿಂದ ದೇಶದ ಸುಮಾರು 3.2 ಕೋಟಿ (32 ಮಿಲಿಯನ್) ವೃದ್ಧರು, ವಿಧವೆಯರು ಮತ್ತು ದಿವ್ಯಾಂಗರಿಗೆ ನೇರ ಆರ್ಥಿಕ ಭದ್ರತೆ ಮುಂದುವರೆಯಲಿದೆ. ಕೇಂದ್ರ ಸರ್ಕಾರವು ನೀಡುವ ಮೂಲ ಪಿಂಚಣಿ ಮೊತ್ತದ ಜೊತೆಗೆ ರಾಜ್ಯ ಸರ್ಕಾರಗಳು ತಮ್ಮ ಪಾಲಿನ ಹೆಚ್ಚುವರಿ ಮೊತ್ತವನ್ನು ಸೇರಿಸಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ (DBT) ಮೂಲಕ ಜಮೆ ಮಾಡುತ್ತವೆ.

1995 ರಲ್ಲಿ ಪಿ.ವಿ. ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ‘ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮ’ (NSAP) ಆರಂಭವಾಗಿತ್ತು. ನಂತರ 2007-2009 ರ ಅವಧಿಯಲ್ಲಿ ಯುಪಿಎ  ಸರ್ಕಾರವು ಈ ಯೋಜನೆಗಳಿಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಸರನ್ನು ಸೇರ್ಪಡೆ ಮಾಡಿತ್ತು. ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರವು ರಾಜಕೀಯ ನಾಯಕರ ವೈಯಕ್ತಿಕ ಹೆಸರುಗಳ ಬದಲು ಸಾಂವಿಧಾನಿಕ ಹುದ್ದೆಯಾದ ‘ಪ್ರಧಾನ ಮಂತ್ರಿ’  ಹೆಸರಿನಡಿ ಎಲ್ಲಾ ರಾಷ್ಟ್ರೀಯ ಕಲ್ಯಾಣ ಯೋಜನೆಗಳನ್ನು ತರುವ ನೀತಿಯನ್ನು ಮುಂದುವರೆಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us