AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಕ್ಷದೊಳಗೆ ಎಸ್​ಐಆರ್ ನಡೆಸಿದಾಗ ಮಾತ್ರ ಕಾಂಗ್ರೆಸ್​ ಉಳಿಯುತ್ತೆ: ಪ್ರಲ್ಹಾದ್ ಜೋಶಿ

ಕಾಂಗ್ರೆಸ್ ಪಕ್ಷದಲ್ಲೇ ಎಸ್​ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಅಗತ್ಯತೆ ಹೆಚ್ಚಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಸಂಸತ್ ಚಳಿಗಾಲದ ಅಧಿವೇಶನದ ಈ ಸಂದರ್ಭದಲ್ಲಿ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ಚುನಾವಣಾ ಆಯೋಗಕ್ಕಿಂತ ಕಾಂಗ್ರೆಸ್ ಪಕ್ಷದಲ್ಲೇ ಎಸ್​ಐಆರ್​ನ ತುಂಬಾ ಅವಶ್ಯಕತೆ ಇದೆ ಎಂದು ಹೇಳಿದರು.

ಪಕ್ಷದೊಳಗೆ ಎಸ್​ಐಆರ್ ನಡೆಸಿದಾಗ ಮಾತ್ರ ಕಾಂಗ್ರೆಸ್​ ಉಳಿಯುತ್ತೆ: ಪ್ರಲ್ಹಾದ್ ಜೋಶಿ
ಪ್ರಲ್ಹಾದ್ ಜೋಶಿImage Credit source: Millenium Post
ನಯನಾ ರಾಜೀವ್
|

Updated on:Dec 11, 2025 | 10:14 AM

Share

ನವದೆಹಲಿ, ಡಿಸೆಂಬರ್ 11: ಸಂಸತ್ತಿನಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಚುನಾವಣಾ ಸುಧಾರಣೆಗಳ ಕುರಿತು ಚರ್ಚೆ ನಡೆಯುತ್ತಿದೆ. ವಿರೋಧ ಪಕ್ಷಗಳು ಎಸ್‌ಐಆರ್ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿವೆ. ದೇಶದ ಪ್ರಧಾನಿ ಮತ್ತು ಮುಖ್ಯಮಂತ್ರಿಗಳನ್ನು ನುಸುಳುಕೋರರು ಆಯ್ಕೆ ಮಾಡುವುದಿಲ್ಲ, ಆದ್ದರಿಂದ ಎಸ್‌ಐಆರ್ ಅಗತ್ಯ ಎಂದು ಆಡಳಿತ ಪಕ್ಷ ವಾದಿಸುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ(Pralhad Joshi) ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲೇ ವಿಶೇಷ ತೀವ್ರ ಪರಿಷ್ಕರಣೆಯ ಅಗತ್ಯವಿದೆ ಎಂದಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ರಾಜೀವ್ ಗಾಂಧಿ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಹೀಗೆ ಬರೀ ನಕಲಿ ಗಾಂಧಿಗಳದ್ದೇ ಅಧಿಕಾರ ಮುಂಚೂಣಿಯಲ್ಲಿದೆ. ಹಾಗಾಗಿ ಕಾಂಗ್ರೆಸ್ ಪಕ್ಷದೊಳಗೇ ಮೊದಲು ಎಸ್​ಐಆರ್ ನಡೆಯಬೇಕಿದೆ ಎಂದು ಜೋಶಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದೊಳಗೆ ವಿಶೇಷ ತೀವ್ರ ಪರಿಷ್ಕರಣೆಯ ಅವಶ್ಯಕತೆಯಿದೆ. ಇದು ಸಂಭವಿಸಿದರೆ ಮಾತ್ರ ಕಾಂಗ್ರೆಸ್ ಪಕ್ಷ ಉಳಿಯುತ್ತದೆ, ಇಲ್ಲದಿದ್ದರೆ, ಅದು ನಾಶವಾಗುತ್ತದೆ ಎಂದು ಅವರು ಹೇಳಿದರು. ಲೋಕಸಭೆಯಲ್ಲಿ ಈ ವಿಷಯದ ಬಗ್ಗೆ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ಟೀಕಿಸಿದ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಹೇಳಿಕೆ ಬಂದಿದೆ.

ಮತ್ತಷ್ಟು ಓದಿ: ಇಂಡಿಗೋ ಈ ಸ್ಥಿತಿಗೆ ಬರಲು ಕಾರಣ ಯಾರು? ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಿಷ್ಟು

ಲೋಕಸಭೆಯಲ್ಲಿ ಚುನಾವಣಾ ಸುಧಾರಣೆಗಳ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಗೃಹ ಸಚಿವರು, ರಾಹುಲ್ ಗಾಂಧಿಯವರ ಇತ್ತೀಚಿನ ಮೂರು ಪತ್ರಿಕಾಗೋಷ್ಠಿಗಳನ್ನು ಉಲ್ಲೇಖಿಸಿ, ಚುನಾವಣಾ ಆಯೋಗದ ವಿರುದ್ಧ ಅವರು ಮಾಡಿರುವ ಆರೋಪಗಳನ್ನು ಸುಳ್ಳು ಎಂದು ತಳ್ಳಿಹಾಕಿದರು.

ರಾಹುಲ್ ಗಾಂಧಿಯವರ ಹೇಳಿಕೆ ಮತ್ತು ಅಮಿತ್ ಶಾರ ವ್ಯಂಗ್ಯ ಹರಿಯಾಣದ ಒಂದೇ ಮನೆಯಲ್ಲಿ ಜಾಸ್ತಿಸಂಖ್ಯೆಯಲ್ಲಿ ವೋಟರ್ಸ್‌ ಇದ್ದಾರೆ ಅನ್ನೋ ರಾಹುಲ್ ಆರೋಪಕ್ಕೆ ಅಮಿತ್ ಶಾ ತಿರುಗೇಟು ಕೊಟ್ಟರು. ಈ ವೇಳೆ, ಆಕ್ಷೇಪಿಸಿದ ರಾಹುಲ್ ಗಾಂಧಿ, ನಾನು ನಡೆಸಿರುವ 3 ಸುದ್ದಿಗೋಷ್ಠಿಗಳ ಡೇಟಾ ಬಗ್ಗೆ ಓಪನ್ ಡಿಬೇಟ್ ಮಾಡೋಣ ಅಂತ ಸವಾಲ ಹಾಕಿದ್ದಾರೆ. ಇದಕ್ಕೆ ನಿಮ್ಮ ಇಷ್ಟದಂತೆ ಸಂಸತ್ತು ನಡೆಯಲ್ಲ ಅಂತ ಅಮಿತ್‌ ಶಾ ಕೌಂಟರ್ ಕೊಟ್ಟಿದ್ದಾರೆ.

ಬಿಜೆಪಿ ಮತ್ತು ಎನ್‌ಡಿಎ ಚರ್ಚೆಯಿಂದ ಎಂದಿಗೂ ಹಿಂದೆ ಸರಿಯುವುದಿಲ್ಲ. ಎಲ್ಲಾ ವಿಷಯಗಳ ಬಗ್ಗೆ ಚರ್ಚಿಸಲು ನಾವು ಸಿದ್ಧರಿದ್ದೇವೆ. ನ್ಯಾಯಯುತ ಚುನಾವಣೆಗಳನ್ನ ನಡೆಸುವ ಜವಾಬ್ದಾರಿಯನ್ನು ಚುನಾವಣಾ ಆಯೋಗ ಹೊಂದಿದೆ. ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಮತ್ತು ತಿದ್ದುಪಡಿ ಮಾಡುವ ಜವಾಬ್ದಾರಿಯನ್ನು ಚುನಾವಣಾ ಆಯೋಗವೂ ಹೊಂದಿದೆ ಎಂದು ಅಮಿತ್‌ ಶಾ ಹೇಳಿದರು.

325ನೇ ವಿಧಿಯು ಯಾವುದೇ ಅರ್ಹ ಮತದಾರರನ್ನ ಪಟ್ಟಿಯಿಂದ ಹೊರಗಿಡುವುದನ್ನ ನಿಷೇಧಿಸುತ್ತದೆ. ಮತದಾರರ ಮಾನದಂಡಗಳು 326ನೇ ವಿಧಿಯಲ್ಲಿವೆ. ಮೊದಲ ಅವಶ್ಯಕತೆಯೆಂದರೆ ಮತದಾರನು ಭಾರತೀಯ ಪ್ರಜೆಯಾಗಿರಬೇಕು. 2ನೇಯದು ಅವರು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ಚುನಾವಣಾ ಆಯೋಗವು ಈ ಎಲ್ಲಾ ಅರ್ಹತಾ ಮಾನದಂಡಗಳನ್ನ ಪರಿಶೀಲಿಸುವ ಮತ್ತು ಶಾಸನ ಶಿಫಾರಸು ಮಾಡುವ ಅಧಿಕಾರ ನೀಡಲಾಗಿದೆ.

1952ರಲ್ಲಿ ಮೊದಲ ಬಾರಿಗೆ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ನಡೆಯಿತು

ಮೊದಲ ಎಸ್​ಐಆರ್ 1952 ರಲ್ಲಿ ನಡೆಯಿತು. ಆ ಸಮಯದಲ್ಲಿ, ಜವಾಹರಲಾಲ್ ನೆಹರು ಕಾಂಗ್ರೆಸ್ ಪಕ್ಷದ ಪ್ರಧಾನಿಯಾಗಿದ್ದರು. ಅಂದಿನಿಂದ ಹಲವಾರು ಬಾರಿ ಎಸ್​ಐಆರ್​ಗಳನ್ನು ನಡೆಸಲಾಗಿದೆ. 2004 ರ ನಂತರ, ಈಗ 2025 ರಲ್ಲಿ ಎಸ್ಐ​ಆರ್ ನಡೆಸಲಾಗುತ್ತಿದೆ ಮತ್ತು ಪ್ರಸ್ತುತ ಎನ್​ಡಿಎ ಸರ್ಕಾರವಿದೆ. 2004 ರವರೆಗೆ, ಯಾವುದೇ ಪಕ್ಷವು ಎಸ್​ಐಆರ್ ಪ್ರಕ್ರಿಯೆಯನ್ನು ವಿರೋಧಿಸಲಿಲ್ಲ ಏಕೆಂದರೆ ಅದು ಚುನಾವಣೆಯ ಪಾವಿತ್ರ್ಯವನ್ನು ಉಳಿಸಿಕೊಳ್ಳುವ ಉದ್ದೇಶವನ್ನು ಹೊಂದಿತ್ತು ಎಂದು ಅಮಿತ್ ಶಾ ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳಿಗೆ ಆಧಾರವಾಗಿರುವ ಮತದಾರರ ಪಟ್ಟಿಯು ದೋಷಪೂರಿತವಾಗಿದ್ದರೆ, ಚುನಾವಣೆ ಹೇಗೆ ನ್ಯಾಯಯುತವಾಗಿರುತ್ತದೆ ಎಂದು ಅವರು ಹೇಳಿದರು. ಮತದಾರರ ಪಟ್ಟಿಯ ನಿಯತಕಾಲಿಕವಾಗಿ ಸಂಪೂರ್ಣ ಪರಿಷ್ಕರಣೆ ಅತ್ಯಗತ್ಯ. ಆದ್ದರಿಂದ, ಚುನಾವಣಾ ಆಯೋಗವು 2025 ರಲ್ಲಿ ಎಸ್​ಐಆರ್ ನಡೆಸಲು ನಿರ್ಧರಿಸಿತು. ಒಬ್ಬ ಮತದಾರರು ಒಂದಕ್ಕಿಂತ ಹೆಚ್ಚು ಮತದಾರರ ಚೀಟಿಯನ್ನು ಹೊಂದಿರಬಾರದು. ಮೃತ ವ್ಯಕ್ತಿಗಳ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಬಾರದು. ಈಗ ಮತದಾರರ ಪಟ್ಟಿಯ ಶುದ್ಧೀಕರಣ ನಡೆದಿದೆ ಎಂದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:09 am, Thu, 11 December 25