
Presidential Election Results 2022 Live | ದೇಶದ ನೂತನ ರಾಷ್ಟ್ರಪತಿ ಯಾರಾಗುತ್ತಾರೆ ಎಂಬ ಕುತೂಹಲದಿಂದ ಜನರು ಚುನಾವಣಾ ಫಲಿತಾಂಶವನ್ನು(Presidential Election) ಎದುರು ನೋಡುತ್ತಿದ್ದು, ಇಂದು (ಗುರುವಾರ) 11 ಗಂಟೆಗೆ ಮತ ಎಣಿಕೆ ಆರಂಭವಾಗಿದೆ. ದೇಶದ 15ನೇ ರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಜುಲೈ 18 ಸೋಮವಾರದಂದು ಮತದಾನ ನಡೆದಿದ್ದು, ಸಂಸದರು ಮತ್ತು ಶಾಸಕರು ಮತದಾನ ಮಾಡಿದ್ದರು. ಆಡಳಿತಾರೂಢ ಎನ್ಡಿಎಯ ದ್ರೌಪದಿ ಮುರ್ಮು(Droupadi Murmu) ಮತ್ತು ಪ್ರತಿಪಕ್ಷದ ಯಶವಂತ ಸಿನ್ಹಾ(Yashwant Sinha) ಚುನಾವಣಾ ಕಣದಲ್ಲಿದ್ದಾರೆ. ಬುಡಕಟ್ಟು ಜನಾಂಗದ ನಾಯಕಿ ಹಾಗೂ ಜಾರ್ಖಂಡ್ನ ಮಾಜಿ ರಾಜ್ಯಪಾಲರಾಗಿದ್ದವರು ದ್ರೌಪದಿ ಮುರ್ಮು.
ಇಂಗ್ಲಿಷ್ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ
64ರ ಹರೆಯದ ಮುರ್ಮು ಆಯ್ಕೆಯಾದರೆ ರಾಷ್ಟ್ರಪತಿ ಹುದ್ದೆ ಅಲಂಕರಿಸುವ ಎರಡನೇ ಮಹಿಳೆ ಮತ್ತು ಬುಡಕಟ್ಟು ಜನಾಂಗದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ. ಮಾಜಿ ಬಿಜೆಪಿ ನಾಯಕರಾಗಿರುವ ಸಿನ್ಹಾ, 1984ರಲ್ಲಿ ಐಎಎಸ್ನಿಂದ ರಾಜೀನಾಮೆ ನೀಡಿ ಜನತಾ ದಳ ಸೇರಿದ್ದರು. 1988ರಲ್ಲಿ ಅವರು ಸಂಸದರಾಗಿದ್ದ, ಅವರು ಮಾಜಿ ಪ್ರಧಾನಿ ಚಂದ್ರಶೇಖರ್ ಮತ್ತು ವಾಜಪೇಯಿ ಸಚಿವ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದರು. ಕೋವಿಂದ್ ಅವರ ಅಧಿಕಾರವಧಿ ಜುಲೈ 24ರಂದು ಮುಗಿಯಲಿದ್ದು ನೂತನ ರಾಷ್ಟ್ರಪತಿ ಜುಲೈ 25ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ: Presidential Election Results 2022 ಯಾರಾಗುತ್ತಾರೆ ಮುಂದಿನ ರಾಷ್ಟ್ರಪತಿ? ಚುನಾವಣಾ ಫಲಿತಾಂಶ ಇಂದು
ಎಲ್ಲಾ ರಾಜ್ಯಗಳ ಮತಪೆಟ್ಟಿಗೆಗಳು ಸಂಸತ್ ಭವನವನ್ನು ತಲುಪಿದ್ದು, ಚುನಾವಣಾಧಿಕಾರಿಗಳು ಸಂಸತ್ತಿನ ಸ್ಟ್ರಾಂಗ್ರೂಮ್ ಕೊಠಡಿ ಸಂಖ್ಯೆ 63 ರಲ್ಲಿ ಎಣಿಕೆಗೆ ಸಿದ್ಧರಾಗಿದ್ದಾರೆ. ಚುನಾವಣೆಯ ಮುಖ್ಯ ಚುನಾವಣಾಧಿಕಾರಿಯಾಗಿರುವ ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಪಿ ಸಿ ಮೂಡಿ ಅವರು ಗುರುವಾರ ಮತ ಎಣಿಕೆಯನ್ನು ನೋಡಿಕೊಳ್ಳಲಿದ್ದು, ಸಂಜೆ ವೇಳೆಗೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.
ದೇಶದ 15ನೇ ರಾಷ್ಟ್ರಪತಿ ಹುದ್ದೆಗಾಗಿ ನಡೆದ ಚುನಾವಣೆೆಯಲ್ಲಿ ದ್ರೌಪದಿ ಮುರ್ಮು ಗೆಲುವು ಸಾಧಿಸಿದ್ದಾರೆ. ಮೂರು ಸುತ್ತಿನ ಮತ ಎಣಿಕೆಯಲ್ಲೂ ದ್ರೌಪದಿ ಮುರ್ಮು ಮುನ್ನಡೆ ಸಾಧಿಸಿದ್ದರು.
ಬಾಗಲಕೋಟೆ ಬಿಜೆಪಿ ವತಿಯಿಂದ ನಗರದ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಗಿದೆ. ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ, ಬಿಜೆಪಿ ಪ್ರಮುಖರು ಈ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದಾರೆ.
ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ ಬಹುತೇಕ ಖಚಿತವಾಗುತ್ತಿದ್ದಂತೆ ಯಾದಗಿರಿ ಜಿಲ್ಲಾ ಬಿಜೆಪಿಯಿಂದ ಸಂಭ್ರಮಾಚರಣೆ ಶುರುವಾಗಿದೆ. ಯಾದಗಿರಿ ನಗರದ ಸುಭಾಷ್ ವೃತ್ತದಲ್ಲಿ ಕಾರ್ಯಕರ್ತರು. ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದು ಬಿಜೆಪಿ ಜಿಲ್ಲಾಧ್ಯಕ್ಷ ಶರಣಭೂಪಾಲರೆಡ್ಡಿ ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆದಿದೆ. ಮಹಿಳಾ ರಾಷ್ಟ್ರಪತಿಗೆ ಜೈ ಎಂದು ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ವಿರೋಧ ಪಕ್ಷದವರಿಂದ ಅಡ್ಡ ಮತದಾನ ನಡೆದಿದೆ. ಬಿಜೆಪಿ ಲೆಕ್ಕಾಚಾರದ ಪ್ರಕಾರ ದ್ರೌಪದಿಗೆ 523 ಮತ ಬರಬೇಕಿತ್ತು. ಆದರೆ ದ್ರೌಪದಿ ಮುರ್ಮುಗೆ 540 ಸಂಸದರ ಮತಗಳು ಸಿಕ್ಕಿವೆ. ಹೀಗಾಗಿ ವಿಪಕ್ಷದ 17 ಸಂಸದರಿಂದ ಕ್ರಾಸ್ ವೋಟಿಂಗ್ ಆಗಿರುವುದು ಖಚಿತ ಎಂದು ಮೂಲಗಳು ವರದಿ ಮಾಡಿವೆ
ಎರಡನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಿದ್ದು ಒಟ್ಟು 1,138 ಮತಗಳಲ್ಲಿ ದ್ರೌಪದಿ ಮುರ್ಮ 809 ಮತಗಳನ್ನು ಪಡೆದಿದ್ದಾರೆ. ಅದೇ ವೇಳೆ ಯಶವಂತ ಸಿನ್ಹಾ ಅವರು 329 ಮತಗಳನ್ನು ಗಳಿಸಿದ್ದಾರೆ. ಎರಡೂ ಸುತ್ತಿನ ಮತ ಎಣಿಕೆ ನಂತರ ದ್ರೌಪದಿ ಮುರ್ಮು ಅವರು 1886 ಮತಗಳಲ್ಲಿ 1,349 ಮತಗಳನ್ನು ಪಡೆದಿದ್ದು ಸಿನ್ಹಾ ಅವರು 537 ಮತಗಳನ್ನು ಪಡೆದಿದ್ದಾರೆ.
ರಾಷ್ಟ್ರಪತಿ ಚುನಾವಣೆಯ ಮತಎಣಿಕೆ ಪ್ರಕ್ರಿಯೆ ಕೊನೆಯ ಹಂತದಲ್ಲಿದ್ದು ರಾತ್ರಿ 8ಗಂಟೆಯ ಹೊತ್ತಿಗೆ ಫಲಿತಾಂಶ ಪ್ರಕಟವಾಗಲಿದೆ ಎಂದು ರಾಜ್ಯಸಭಾ ಸೆಕ್ರಟರಿಯೇಟ್ ಹೇಳಿದೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಸಂಸದರ ಮತ ಎಣಿಕೆ ಮಾಡಿದಾಗ ದ್ರೌಪದಿ ಮುರ್ಮು ಶೇ 72.19 ಮತಗಳೊಂದಿಗೆ ಮುನ್ನಡೆ ಸಾಧಿಸಿದ್ದಾರೆ.
ದ್ರೌಪದಿ ಮುರ್ಮು ಅವರು ತಮ್ಮನ್ನು ಅಗಲಿದ ಪತಿ ಮತ್ತು ಇಬ್ಬರು ಪುತ್ರರ ನೆನಪಿಗಾಗಿ ಪಹಾದ್ಪುರ್ ಎಂಬಲ್ಲಿ ಸ್ಥಾಪಿಸಿದ ಎಸ್ಎಲ್ಎಸ್ ( ಶ್ಯಾಮ್, ಲಕ್ಷ್ಮಣ್ ಮತ್ತು ಸಿಪುನ್) ಸ್ಮಾರಕ ವಸತಿ ಶಾಲೆಯಲ್ಲಿ ಸಂಭ್ರಮಾಚರಣೆ ಆರಂಭವಾಗಿದೆ.
ರಾಷ್ಟ್ರಪತಿ ಚುನಾವಣೆಯ ಮೊದಲ ಸುತ್ತಿನ ಮತ ಎಣಿಕೆ ಫಲಿತಾಂಶ ಪ್ರಕಟವಾಗಿದ್ದು ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮ ಮುನ್ನಡೆ ಸಾಧಿಸಿದ್ದಾರೆ. ಮುರ್ಮ ಅವರಿಗೆ 540 ಮತಗಳು ಲಭಿಸಿದ್ದು ಒಟ್ಟು ಮತದ ಮೌಲ್ಯ 3,78,000 ಆಗಿದೆ. ಅದೇ ವೇಳೆ ಯಶವಂತ ಸಿನ್ಹಾ ಅವರಿಗೆ 1,45,600 ಮೌಲ್ಯದ 208 ಮತಗಳು ಲಭಿಸಿದೆ. 15 ಮತಗಳು ಅಸಿಂಧುವಾಗಿವೆ. ಇಂದು ಸಂಸತ್ ನಲ್ಲಿನ ಮತಗಳ ಎಣಿಕೆ. ಮುಂದಿನ ಘೋಷಣೆಗಾಗಿ ನಿರೀಕ್ಷಿಸಿ ಎಂದು ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಪಿ.ಸಿ ಮೂಡಿ ಹೇಳಿದ್ದಾರೆ.
ರಿಟರ್ನಿಂಗ್ ಆಫೀಸರ್ ಪಿಸಿ ಮೂಡಿ ಅವರು ಮೊದಲ ಸುತ್ತಿನ ಮತ ಎಣಿಕೆಯ ಫಲಿತಾಂಶವನ್ನು ಪ್ರಕಟಿಸಲಿದ್ದಾರೆ. ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಸಂಸತ್ ಭವನದಲ್ಲಿ ಮತದಾನ ಮಾಡಿದ ಸಂಸದರ ಮತವನ್ನು ಎಣಿಸಲಾಗುತ್ತದೆ.
ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಪ್ರಕಟವಾಗುವುದಕ್ಕಿಂತ ಮುನ್ನವೇ ದ್ರೌಪದಿ ಮುರ್ಮು ಅವರ ಗ್ರಾಮ, ಒಡಿಶಾದ ರಾಯಿರಂಗಪುರ್ ಗ್ರಾಮದಲ್ಲಿ ಸಂಭ್ರಮಾಚರಣೆ ಶುರುವಾಗಿದೆ
ನಾನು ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಪೌರತ್ವ ತಿದ್ದುಪಡಿ ಕಾಯ್ದೆ (CAA) ಜಾರಿಗೆ ತರುವುದಿಲ್ಲ ಎಂದು ಭರವಸೆ ನೀಡುತ್ತೇನೆ ಎಂದು ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಿದ ವಿಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಹೇಳಿದ್ದಾರೆ.
ಬುಡಕಟ್ಟು ಜನಾಂಗದ ಮಹಿಳೆ ದೇಶದ ರಾಷ್ಟ್ರಪತಿ ಆಗಲಿದ್ದಾರೆ ಎಂಬುದರ ಬಗ್ಗೆ ಬುಡಕಟ್ಟು ಜನಾಂಗ ಮಾತ್ರವಲ್ಲ ಇಡೀ ದೇಶವೇ ಹೆಮ್ಮೆ ಪಡಲಿದೆ. ಮುರ್ಮು ಅವರನ್ನು ಅಭಿನಂದಿಸುವುದಕ್ಕಾಗಿ ಬುಡಕಟ್ಟು ಜನಾಂಗದ ನಾಯಕರು ದೆಹಲಿಗೆ ಬರಲಿದ್ದಾರೆ ಎಂಬುದು ನನಗೆ ತಿಳಿದು ಬಂದಿದೆ: ಕೇಂದ್ರ ಸಚಿವ ಕಿರಣ್ ರಿಜಿಜು
ಎನ್ಡಿಎಯ ದ್ರೌಪದಿ ಮುರ್ಮು ಅವರಿಗೆ ಒಡಿಶಾದ ಆಡಳಿತ ಪಕ್ಷ ಬಿಜು ಜನತಾ ದಳ (ಬಿಜೆಡಿ) ಬೆಂಬಲವಿದೆ. ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ (YSRCP), ಬಹುಜನ ಸಮಾಜ ಪಕ್ಷ (BSP), ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK), ತೆಲುಗು ದೇಶಂ ಪಕ್ಷ (TDP), ಜನತಾ ದಳ (ಜಾತ್ಯತೀತ), ಶಿರೋಮಣಿ ಅಕಾಲಿದಳ, ಶಿವಸೇನೆಯ ಎರಡೂ ಸತ್ಯಗಳು ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸಹ ಅವಳನ್ನು ಬೆಂಬಲಿಸುತ್ತದೆ. ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಅವರನ್ನು ಕಾಂಗ್ರೆಸ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ), ಆಮ್ ಆದ್ಮಿ ಪಕ್ಷ, ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಬೆಂಬಲಿಸಿದೆ.
ಬೆಳಗ್ಗೆ 11 ಗಂಟೆಗೆ ಮತ ಎಣಿಕೆ ಕಾರ್ಯ ಶುರುವಾಗಲಿದೆ
ದ್ರೌಪದಿ ಮುರ್ಮು ಭಾರತದ ಮುಂದಿನ ರಾಷ್ಟ್ರಪತಿಯಾಗುತ್ತಾರೆ ಎಂದು ನಾವು ಆಶಿಸುತ್ತಿರುವುದರಿಂದ ಇಲ್ಲಿ ಸಂತೋಷದ ವಾತಾವರಣವಿದೆ. ಇದು ಬುಡಕಟ್ಟು ಸಮುದಾಯ, ಒಡಿಶಾ ಮತ್ತು ದೇಶಕ್ಕೆ ಹೆಮ್ಮೆಯ ವಿಷಯ ಎಂದು ಎನ್ಡಿಎ ಅಧ್ಯಕ್ಷೀಯ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಸಹೋದರ ತಾರಿನಿಸೇನ್ ತುಡು ಹೇಳಿದ್ದಾರೆ.
ಭಾರತದ 15ನೇ ರಾಷ್ಟ್ರಪತಿಯನ್ನು ಆಯ್ಕೆ ಮಾಡುವ ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆ ಇಂದು ದೆಹಲಿಯ ಸಂಸತ್ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದೆ. ಜುಲೈ 18 ರಂದು ಸಂಸತ್ ಭವನದಲ್ಲಿ ಮತ್ತು ಎಲ್ಲಾ ರಾಜ್ಯಗಳ ಅಸೆಂಬ್ಲಿಗಳಲ್ಲಿ 4,796 ಸಂಸದರು ಮತ್ತು ಶಾಸಕರಲ್ಲಿ 99%ರಷ್ಟು ಮತದಾನ ನಡೆದಿತ್ತು. ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅವಧಿ ಜುಲೈ 24 ರಂದು ಕೊನೆಗೊಳ್ಳಲಿದೆ ಮತ್ತು ಅವರ ಉತ್ತರಾಧಿಕಾರಿ ಜುಲೈ 25 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಸುಮಾರು 4,800 ಚುನಾಯಿತ ಸಂಸದರು ಮತ್ತು ಶಾಸಕರು ಮತದಾನ ಮಾಡಿದ್ದಾರೆ. ಜುಲೈ 18ರಂದು ಬೆಳಗ್ಗೆ 10 ಗಂಟೆಯಿಂದ 5 ಗಂಟೆಯವರೆಗೆ ಸಂಸತ್ ಭವನ ಮತ್ತು ರಾಜ್ಯ ವಿಧಾನಸಭೆಗಳಲ್ಲಿನ 30 ಕೇಂದ್ರಗಳಲ್ಲಿ ಮತದಾನ ನಡೆದಿದೆ. ಈ ದಿನ ಶೇ 99.18 ಮತದಾನವಾಗಿದೆ. 11 ರಾಜ್ಯಗಳಲ್ಲಿ ಶೇ 100ರಷ್ಟು ಮತದಾನವಾಗಿದೆ.
ದೇಶದ 15ನೇ ರಾಷ್ಟ್ರಪತಿ ಆಯ್ಕೆಗಾಗಿ ಜುಲೈ 18ರಂದು ಚುನಾವಣೆ (Presidential Election 2022) ನಡೆದಿದ್ದು, ಸಂಸದರು ಮತ್ತು ಶಾಸಕರು ಮತದಾನ ಮಾಡಿದ್ದರು. ಇಂದು ಸಂಜೆ ವೇಳೆಗೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.
ಎಲ್ಲಾ ರಾಜ್ಯಗಳ ಮತಪೆಟ್ಟಿಗೆಗಳು ಸಂಸತ್ ಭವನವನ್ನು ತಲುಪಿದ್ದು, ಸಂಸತ್ತಿನ ಸ್ಟ್ರಾಂಗ್ರೂಮ್ ಕೊಠಡಿಯಲ್ಲಿ ಇರಿಸಲಾಗಿದೆ. ಮುಖ್ಯ ಚುನಾವಣಾಧಿಕಾರಿಯಾಗಿರುವ ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಪಿ.ಸಿ ಮೂಡಿ ಅವರು ಗುರುವಾರ ಮತ ಎಣಿಕೆಯನ್ನು ನೋಡಿಕೊಳ್ಳಲಿದ್ದಾರೆ.
ರಾಷ್ಟ್ರಪತಿ ಚುನಾವಣೆಗೆ ಸೋಮವಾರ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಸಂಸತ್ ಭವನ ಸೇರಿದಂತೆ 31 ಸ್ಥಳಗಳು ಮತ್ತು ರಾಜ್ಯ ವಿಧಾನಸಭೆಗಳ ವ್ಯಾಪ್ತಿಯ 30 ಕೇಂದ್ರಗಳಲ್ಲಿ ಮತದಾನ ನಡೆದಿತ್ತು.
ಬಹು ನಿರೀಕ್ಷಿತ ರಾಷ್ಟ್ರಪತಿ ಚುನಾವಣಾ ಫಲಿತಾಂಶಕ್ಕೆ ಇಡೀ ದೇಶದ ಜನ ಎದುರು ನೋಡುತ್ತಿದೆ. ಇಂದು ಬೆಳಗ್ಗೆ 11 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಮಧ್ಯಾಹ್ನ ನಂತರ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ. ದೇಶದ 15ನೇ ರಾಷ್ಟ್ರಪತಿ ಆಯ್ಕೆಗಾಗಿ ಜುಲೈ 18ರಂದು ಚುನಾವಣೆ (Presidential Election 2022) ನಡೆದಿದ್ದು, ಸಂಸದರು ಮತ್ತು ಶಾಸಕರು ಮತದಾನ ಮಾಡಿದ್ದರು.
Published On - 7:09 am, Thu, 21 July 22