ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (National Education Policy-NEP)ಗೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಇದರ ಬಗ್ಗೆ ಇಂದು ಸಂಜೆ 4.30ರ ಹೊತ್ತಿಗೆ ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಹಾಗೇ, ಶೈಕ್ಷಣಿಕ ಕ್ಷೇತ್ರದಲ್ಲಿ ಹಲವು ಉಪಕ್ರಮಗಳನ್ನು ಇಂದು ಉದ್ಘಾಟಿಸಲಿದ್ದಾರೆ. ಪ್ರಸ್ತುತ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡ ಇರಲಿದ್ದು, ಅವರೂ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವರು.
ಈ ಬಗ್ಗೆ ಟ್ವೀಟ್ ಮಾಡಿರುವ ಧರ್ಮೇಂದ್ರ ಪ್ರಧಾನ್, ಕಲಿಕೆಯ ನೆಲನೋಟವನ್ನು ಬದಲಿಸಲು ಮಾರ್ಗದರ್ಶಿ ತತ್ವಶಾಸ್ತ್ರವಾಗಿರುವ ಈ ಎನ್ಇಪಿ-2020, ಶಿಕ್ಷಣವನ್ನು ಸಮಗ್ರಗೊಳಿಸುತ್ತದೆ. ಹಾಗೇ ಆತ್ಮನಿರ್ಭರ ಭಾರತಕ್ಕೆ ಬಲವಾದ ಅಡಿಪಾಯವಾಗಿದೆ. ಎನ್ಇಪಿ ಅಡಿಯಲ್ಲಿ ನಡೆದ ಸುಧಾರಣೆಗಳಿಗೆ ಜು.29ಕ್ಕೆ ಒಂದು ವರ್ಷ ಪೂರ್ಣಗೊಳ್ಳುವ ಹಿನ್ನೆಲೆಯಲ್ಲಿ, ಅಂದು ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ಹಾಗೇ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ಉನ್ನತ ಶಿಕ್ಷಣಕ್ಕೆ ಪ್ರವೇಶ ಮತ್ತು ನಿರ್ಗಮನಕ್ಕೆ ವಿವಿಧ ಆಯ್ಕೆಗಳನ್ನು ಒದಗಿಸುವ ಶೈಕ್ಷಣಿಕ ಬ್ಯಾಂಕ್ ಆಫ್ ಕ್ರೆಡಿಟ್ನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಹಾಗೇ, ಪ್ರಾದೇಶಿಕ ಭಾಷೆಗಳಲ್ಲಿ ಪ್ರಥಮ ವರ್ಷದ ಎಂಜಿನಿಯರಿಂಗ್ ಕಾರ್ಯಕ್ರಮಗಳು ಮತ್ತು ಉನ್ನತ ಶಿಕ್ಷಣದ ಅಂತರರಾಷ್ಟ್ರೀಕರಣದ ಮಾರ್ಗಸೂಚಿಗಳನ್ನೂ ಇಂದು ಬಿಡುಗಡೆಗೊಳಿಸಲಿದ್ದಾರೆ ಎನ್ನಲಾಗಿದೆ.
1986ರ ನಂತರ ಬರೋಬ್ಬರಿ 34 ವರ್ಷಗಳ ನಂತರ ಹೊಸ ಶೈಕ್ಷಣಿಕ ನೀತಿಗೆ 2020ರಲ್ಲಿ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಇದರಡಿಯಲ್ಲಿ ಒಟ್ಟು ಆಂತರಿಕ ಉತ್ಪನ್ನದ ಶೇ.6ರಷ್ಟನ್ನು ಶಿಕ್ಷಣಕ್ಕೆ ವ್ಯಯ ಮಾಡಬೇಕು ಎಂಬ ಅಂಶವೂ ಉಲ್ಲೇಖವಾಗಿದೆ. ಹಾಗೇ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆ ಅಳೆಯಲು ಅವರು ಗಳಿಸಿದ ಕ್ರೆಡಿಟ್ ಮಾನದಂಡವಾಗಿದೆ. ಅದನ್ನು ಜಾರಿಗೆ ತಂದು ಒಂದು ವರ್ಷ ಕಳೆದಿದೆ.
ಇದನ್ನೂ ಓದಿ: KS Eshwarappa PC: ರಾಜಕೀಯ ಲಾಭಕ್ಕಾಗಿ ಕಾಯುತ್ತಿದ್ದವರಿಗೆ ನಿರಾಸೆ; ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ
Published On - 12:32 pm, Thu, 29 July 21