ಕಾನೂನು ತೊಡಕಿನಿಂದ ಮೂಲಸೌಕರ್ಯ ಯೋಜನೆಗಳ ವಿಳಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಬೇಸರ

ದೇಶದಲ್ಲಿ ಬೇರೆ ಬೇರೆ ಕೋರ್ಟ್ ಗಳು ಹಾಗೂ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಆದೇಶದ ಕಾರಣದಿಂದ ಕಾಲಮಿತಿಯಲ್ಲಿ ಮುಗಿಯದೆ ವಿಳಂಬವಾಗಿರುವ ಮೂಲಸೌಕರ್ಯ ಯೋಜನೆಗಳ ಪಟ್ಟಿ ಮಾಡಲು ಪ್ರಧಾನಿ ಮೋದಿ ಸೂಚಿಸಿದ್ದಾರೆ.

  • Updated On - 9:30 pm, Thu, 2 September 21 Edited By: Ghanashyam D M | ಡಿ.ಎಂ.ಘನಶ್ಯಾಮ Follow us -
ಕಾನೂನು ತೊಡಕಿನಿಂದ ಮೂಲಸೌಕರ್ಯ ಯೋಜನೆಗಳ ವಿಳಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಬೇಸರ
ನರೇಂದ್ರ ಮೋದಿ (ಸಂಗ್ರಹ ಚಿತ್ರ)

ನವದೆಹಲಿ: ನಮ್ಮ ದೇಶದಲ್ಲಿ ಯಾವುದಾದರೂ ಮೂಲಸೌಕರ್ಯ ಯೋಜನೆ ಕಾಮಗಾರಿ ಆರಂಭವಾದರೆ, ವಿಳಂಬದ ಕಾರಣದಿಂದ ಮುಗಿಯುವ ವೇಳೆಗೆ ಆ ಕಾಮಗಾರಿ ವೆಚ್ಚ ದುಪ್ಪಟ್ಟಾಗಿರುತ್ತದೆ. ರೈಲ್ವೆ ಕಾಮಗಾರಿ, ಮೆಟ್ರೋ ಕಾಮಗಾರಿಗಳೆಲ್ಲ ಭಾರೀ ವಿಳಂಬಕ್ಕೆ ಹೆಸರಾಗಿವೆ. ನಿಗದಿತ ಕಾಲಮಿತಿಯಲ್ಲಿ ಸಾಕಷ್ಟು ಯೋಜನೆಗಳ ಕಾಮಗಾರಿಗಳು ಮುಗಿಯುವುದೇ ಇಲ್ಲ. ಈಗ ಬೇರೆ ಬೇರೆ ಕೋರ್ಟ್ ಆದೇಶ ಹಾಗೂ ಎನ್‌ಜಿಟಿ ಆದೇಶದ ಕಾರಣದಿಂದ ಯಾವ ಯಾವ ಮೂಲಸೌಕರ್ಯ ಯೋಜನೆಗಳ ಕಾಮಗಾರಿ ವಿಳಂಬವಾಗಿದೆ, ಅದರಿಂದ ದೇಶದ ಬೊಕ್ಕಸಕ್ಕೆ ಎಷ್ಟು ನಷ್ಟವಾಗುತ್ತಿದೆ ಎಂಬ ಪಟ್ಟಿ ತಯಾರಿಸಲು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.

ನಮ್ಮ ದೇಶದಲ್ಲಿ ಯಾವುದೂ ಕೂಡ ಕಾಲಮಿತಿಯಲ್ಲಿ ಮುಗಿಯುವುದೇ ಇಲ್ಲ. ಸಮಯಕ್ಕೆ ಸರಿಯಾಗಿಯೂ ಯಾವುದೇ ಯೋಜನೆ, ಕಾರ್ಯಕ್ರಮ ಆರಂಭವೂ ಆಗುವುದಿಲ್ಲ. ಈಗ ಇಂಥ ವಿಳಂಬದ ಯೋಜನೆಗಳ ಮೇಲೆ ಪ್ರಧಾನಿ ಮೋದಿ ಕಣ್ಣು ಬಿದ್ದಿದೆ. ದೇಶದಲ್ಲಿ ಬೇರೆ ಬೇರೆ ಕೋರ್ಟ್ ಗಳು ಹಾಗೂ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಆದೇಶದ ಕಾರಣದಿಂದ ಕಾಲಮಿತಿಯಲ್ಲಿ ಮುಗಿಯದೆ ವಿಳಂಬವಾಗಿರುವ ಮೂಲಸೌಕರ್ಯ ಯೋಜನೆಗಳ ಪಟ್ಟಿ ಮಾಡಲು ಪ್ರಧಾನಿ ಮೋದಿ ಸೂಚಿಸಿದ್ದಾರೆ. ಕೇಂದ್ರದ ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾಗೆ ಈ ಸೂಚನೆ ನೀಡಿದ್ದಾರೆ. ಮೂಲಸೌಕರ್ಯ ಯೋಜನೆಗಳು ಕಾಲಮಿತಿಯಲ್ಲಿ ಮುಗಿಯದೆ ಇರುವುದರಿಂದ ದೇಶದ ಬೊಕ್ಕಸಕ್ಕೆ ಎಷ್ಟು ನಷ್ಟವಾಗುತ್ತಿದೆ ಎಂಬ ಪಟ್ಟಿಯನ್ನು ತಯಾರಿಸಲು ಕೂಡ ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ.

ಕ್ಯಾಬಿನೆಟ್ ಕಾರ್ಯದರ್ಶಿಗೆ ನಾಲ್ಕು ಇಲಾಖೆಗಳ ಸಮನ್ವಯದ ಮೇಲ್ವಿಚಾರಣೆ ನಡೆಸುವಂತೆ ಸೂಚಿಸಿದ್ದಾರೆ. ಆದರೆ, ಮುಂದೇನು ಮಾಡಲಾಗುತ್ತದೆ ಎಂಬುದು ಸ್ಪಷ್ಟವಾಗಿಲ್ಲ. ಕಾನೂನು ಇಲಾಖೆಯ ಜೊತೆಗೆ ಸಮನ್ವಯ ಸಾಧಿಸಿ, ಕೋರ್ಟ್, ಎನ್‌.ಜಿ.ಟಿ.ಯಲ್ಲಿ ಬಾಕಿ ಇರುವ ಮೂಲಸೌಕರ್ಯ ಯೋಜನೆಗಳ ಕೇಸ್ ಗಳನ್ನ ಬಗೆಹರಿಸಿಕೊಂಡರೆ ತ್ವರಿತಗತಿಯಲ್ಲಿ ಯೋಜನೆಗಳ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗುತ್ತದೆ.

ಅರಣ್ಯ, ಪರಿಸರ, ಹವಾಮಾನ ಬದಲಾವಣೆ, ರೈಲ್ವೆ, ರಸ್ತೆ ಸಾರಿಗೆ, ಹೆದ್ದಾರಿ ಇಲಾಖೆಗಳು ಕಾನೂನು ಇಲಾಖೆ ಜೊತೆಗೆ ಸಮಾಲೋಚನೆ ನಡೆಸಿ, ಬೇರೆ ಬೇರೆ ಕೋರ್ಟ್, ಎನ್‌ಜಿಟಿ ಆದೇಶದಿಂದ ಭೂ ಸ್ವಾಧೀನ, ಅರಣ್ಯ ಕ್ಲಿಯರೆನ್ಸ್ ಅಡ್ಡಿಯಿಂದ ವಿಳಂಬವಾಗಿರುವ ಯೋಜನೆಗಳ ಪಟ್ಟಿ ತಯಾರಿಸಬೇಕು. ಕ್ಯಾಬಿನೆಟ್ ಕಾರ್ಯದರ್ಶಿ ಇದರ ಮೇಲ್ವಿಚಾರಣೆ ನಡೆಸಬೇಕು. ಕೋರ್ಟ್ ಆದೇಶ, ಎನ್‌ಜಿಟಿ ಆದೇಶದಿಂದ ವಿಳಂಬವಾದ ಮೂಲಸೌಕರ್ಯ ಯೋಜನೆಗಳ ಪಟ್ಟಿಯನ್ನು ಕ್ಯಾಬಿನೆಟ್ ಕಾರ್ಯದರ್ಶಿ ತಯಾರಿಸಬೇಕು.

ಇಷ್ಟು ಮಾತ್ರವಲ್ಲದೇ, ಸರ್ಕಾರದ ವಿವಿಧ ಇಲಾಖೆಗಳು, ಅಧಿಕಾರಿಗಳ ವಿಳಂಬ ಧೋರಣೆಯಿಂದ ವಿಳಂಬವಾಗಿರುವ ಮೂಲಸೌಕರ್ಯ ಯೋಜನೆಗಳನ್ನು ಗುರುತಿಸಿ ಒಂದು ವಾರದೊಳಗೆ ಪಟ್ಟಿಯನ್ನು ತಯಾರಿಸುವಂತೆ ಕ್ಯಾಬಿನೆಟ್ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ. ಇತ್ತೀಚೆಗೆ ಮೂಲಸೌಕರ್ಯ ಯೋಜನೆಗಳ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿದ್ದ ಪ್ರಧಾನಿ ಮೋದಿ ಈ ಸೂಚನೆಯನ್ನು ಕ್ಯಾಬಿನೆಟ್ ಕಾರ್ಯದರ್ಶಿಗೆ ನೀಡಿದ್ದಾರೆ. ಆದರೆ, ಸರ್ಕಾರದ ಪತ್ರಿಕಾ ಹೇಳಿಕೆಯಲ್ಲಿ ಪ್ರಧಾನಿ ಮೋದಿ, ಎಂಟು ಮೂಲಸೌಕರ್ಯ ಯೋಜನೆಗಳನ್ನ ಕಾಲಮಿತಿಯಲ್ಲಿ ಪೂರ್ಣಗೊಳಿಸುವ ಬಗ್ಗೆ ಒತ್ತು ನೀಡಿ ಹೇಳಿದರು ಎಂದು ಮಾತ್ರ ಉಲ್ಲೇಖಿಸಲಾಗಿದೆ. ಆದರೆ, ಸಭೆಯ ಮಿನಿಟ್ ನಲ್ಲಿ ಬೇರೆ ಬೇರೆ ಸೂಚನೆಗಳನ್ನ ಪ್ರಧಾನಿ ಮೋದಿ ನೀಡಿರುವುದು ಉಲ್ಲೇಖವಾಗಿದೆ.

ಪ್ರಧಾನಿ ಮೋದಿಗೆ ವೆಸ್ಟರ್ನ್ ಡೆಡಿಕೇಟೆಡ್ ಪ್ರೈಟ್ ಕಾರಿಡಾರ್ ಕಾಮಗಾರಿ ವಿಳಂಬವಾಗಿರುವುದು ಬೇಸರಕ್ಕೆ ಕಾರಣವಾಗಿದೆ. ಈ ಯೋಜನೆಯ ಕಾಮಗಾರಿ ಪೂರ್ಣಗೊಳಿಸಲು ಮಹಾರಾಷ್ಟ್ರ ರಾಜ್ಯ ಸರ್ಕಾರ ಹಾಗೂ ಗುಜರಾತ್ ಸರ್ಕಾರಕ್ಕೆ ಟಾರ್ಗೆಟ್ ನಿಗದಿಪಡಿಸಲಾಗಿದೆ. ದೆಹಲಿಯ ಆರ್ಬನ್ ಎಕ್ಸಟೆನ್ಷನ್ ರೋಡ್ ಕಾಮಗಾರಿಯನ್ನು ಸೆಪ್ಟೆಂಬರ್ 15ರೊಳಗೆ ಆರಂಭಿಸುವಂತೆ ರಸ್ತೆ ಸಾರಿಗೆ, ಹೆದ್ದಾರಿ ಇಲಾಖೆಗೆ ಪ್ರಧಾನಿ ಮೋದಿ ಸೂಚಿಸಿದ್ದಾರೆ. ಸಾರಿಗೆ ಇಲಾಖೆಯು ಮಿಷನ್ ಮೋಡ್ ನಲ್ಲಿ ಕಾಮಗಾರಿ ಆರಂಭಿಸಿ, 2023ರ ಆಗಸ್ಟ್ 15ರೊಳಗೆ ಯೋಜನೆ ಪೂರ್ಣಗೊಳಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿಗೆ ಇತ್ತೀಚೆಗೆ ಮೂಲ ಸೌಕರ್ಯ ಯೋಜನೆಗಳು ವಿಳಂಬವಾಗುತ್ತಿರುವುದು, ಇದರಿಂದ ಯೋಜನಾ ವೆಚ್ಚ ಏರಿಕೆಯಾಗುತ್ತಿರುವುದು ಚಿಂತೆಗೆ ಕಾರಣವಾಗಿದೆ. ಕಳೆದ ಫೆಬ್ರವರಿಯಲ್ಲಿ ಸಭೆ ನಡೆಸಿದ್ದ ಪ್ರಧಾನಿ ಮೋದಿ ಮೂಲಸೌಕರ್ಯ ಯೋಜನೆಗಳು ಹಂತ ಹಂತವಾಗಿ ಮುಗಿದು ಜನರ ಬಳಕೆಗೆ ಲಭ್ಯವಾಗುವಂತೆ ವಿಧಾನವನ್ನು ಸಿದ್ದಪಡಿಸಬೇಕು. ಯೋಜನೆ ಸಂಪೂರ್ಣ ಮುಗಿಯುವವರೆಗೂ ಜನರು ಕಾಯುವಂತಾಗಬಾರದು ಎಂದಿದ್ದರು.

ಸುದೀರ್ಘ ಕಾಲದಿಂದ ವಿಳಂಬವಾಗಿರುವ ಯೋಜನೆಗಳ ವರದಿಯನ್ನು ಪ್ರಧಾನಮಂತ್ರಿಗಳ ಕಚೇರಿಗೆ ಸಲ್ಲಿಸುವಂತೆ ಈ ಹಿಂದೆಯೂ ಸೂಚಿಸಿದ್ದರು. ಇಂಥ ಯೋಜನೆಗಳನ್ನು ರಾಜ್ಯ ಸರ್ಕಾರಗಳು ತ್ವರಿತಗತಿಯಲ್ಲಿ ಜಾರಿಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದರು.

(ವಿಶೇಷ ವರದಿ: ಚಂದ್ರಮೋಹನ್)

ಇದನ್ನೂ ಓದಿ: ಲಸಿಕಾ ಅಭಿಯಾನ ಸಾಗುತ್ತಿರುವ ವೇಗವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರಶಂಸಿದ್ದಾರೆ

ಹಿರಿಯ ಪತ್ರಕರ್ತ, ಬಿಜೆಪಿ ಮಾಜಿ ರಾಜ್ಯಸಭಾ ಎಂಪಿ ಚಂದನ್​ ಮಿತ್ರಾ ನಿಧನ; ಸಂತಾಪ ಸೂಚಿಸಿದ ಪ್ರಧಾನಿ ಮೋದಿ

(Prime Minister Narendra Modi Worried about Delayed Infrastructure Projects Due to Judicial Overreach)

Published On - 5:54 pm, Thu, 2 September 21

Click on your DTH Provider to Add TV9 Kannada