ನವದೆಹಲಿ, ಆಗಸ್ಟ್ 12: ಬ್ರಿಟಿಷ್ ವಸಾಹತುಶಾಹಿ ಕಾಲದ ಅಪರಾಧ ನ್ಯಾಯ ವ್ಯವಸ್ಥೆಯನ್ನು ಅಥವಾ ಕ್ರಿಮಿನಲ್ ಜಸ್ಟೀಸ್ ಸಿಸ್ಟಂ (Criminal Justice System) ಅನ್ನು ಭಾರತೀಯಗೊಳಿಸುವ ಪ್ರಕ್ರಿಯೆಯ ಪ್ರಮುಖ ಹಂತವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಮೂರು ಮಸೂದೆಗಳನ್ನು ಶುಕ್ರವಾರ ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಭಾರತೀಯ ದಂಡ ಸಂಹಿತೆ, ಅಪರಾಧ ಪ್ರಕ್ರಿಯಾ ಸಂಹಿತೆ ಮತ್ತು ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ಗೆ ಪರ್ಯಾಯವಾಗಿ ಭಾರತೀಯ ನ್ಯಾಯ ಸಂಹಿತಾ, ನಾಗರೀಕ ಸುರಕ್ಷಾ ಸಂಹಿತಾ ಹಾಗೂ ಭಾರತೀಯ ಸಾಕ್ಷ್ಯ ಎಂಬುದಾಗಿ ಪರಿಷ್ಕೃತ ಮಸೂದೆ ಮಂಡನೆ ಮಾಡಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜಕೀಯ ಹೇಳಿಕೆಗಳು, ಪ್ರತಿ ಹೇಳಿಕೆಗಳು ಕೂಡ ವರದಿಯಾಗಿವೆ. ಆದರೆ, ವಸಾಹತುಶಾಹಿ ಕಾಲದ ಅಪರಾಧ ನ್ಯಾಯ ಸಂಹಿತೆಯ ಭಾರತೀಕರಣಗೊಳಿಸುವ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ತರಾತುರಿಯಲ್ಲಿ ಮಾಡಿಲ್ಲ. 2019 ರಲ್ಲೇ ಸಂಬಂಧಪಟ್ಟ ಪ್ರಕ್ರಿಯೆಗಳನ್ನು ಆರಂಭಿಸಿತ್ತು.
ಕ್ರಿಮಿನಲ್ ಜಸ್ಟೀಸ್ ಸಿಸ್ಟಂ ಅನ್ನು ಭಾರತೀಯಗೊಳಿಸುವ ಪ್ರಕ್ರಿಯೆಯ ಮೊದಲ ಹಂತವಾಗಿ 2019ರ ಸೆಪ್ಟೆಂಬರ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರ್ಯಪ್ರವೃತ್ತರಾಗಿದ್ದರು. ಎಲ್ಲ ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು, ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ಆಡಳಿತಗಾರರಿಗೆ ಅಮಿತ್ ಶಾ ಪತ್ರ ಬರೆದಿದ್ದರು.
2020 ರ ಜನವರಿಯಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿಗಳು, ಎಲ್ಲಾ ಹೈಕೋರ್ಟ್‌ಗಳು, ಬಾರ್ ಕೌನ್ಸಿಲ್‌ಗಳು ಮತ್ತು ಕಾನೂನು ವಿಶ್ವವಿದ್ಯಾಲಯಗಳ ಮುಖ್ಯ ನ್ಯಾಯಮೂರ್ತಿಗಳಿಂದ ಸಲಹೆಗಳನ್ನು ಕೇಳಲಾಗಿತ್ತು. ಒಂದು ವರ್ಷದ ನಂತರ, 2021 ರ ಡಿಸೆಂಬರ್ನಲ್ಲಿ, ಸಂಸದರಿಂದಲೂ ಸಲಹೆಗಳನ್ನು ಕೇಳಲಾಗಿತ್ತು.
ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಆ್ಯಂಡ್ ಡೆವಲಪ್ಮೆಂಟ್ (BPRD) ಎಲ್ಲಾ ಐಪಿಎಲ್ ಅಧಿಕಾರಿಗಳ ಸಲಹೆಗಳನ್ನು ಕೋರಿತು ಮತ್ತು ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು.
18 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳು, ಸುಪ್ರೀಂ ಕೋರ್ಟ್, 16 ಹೈಕೋರ್ಟ್‌ಗಳು, ಐದು ನ್ಯಾಯಾಂಗ ಅಕಾಡೆಮಿಗಳು, 22 ಕಾನೂನು ವಿಶ್ವವಿದ್ಯಾಲಯಗಳು ಮತ್ತು 142 ಸಂಸದರು ಸಲಹೆಗಳನ್ನು ನೀಡಿದ್ದರು.
ಇದನ್ನೂ ಓದಿ: ಗುಂಪು ಹತ್ಯೆಗೆ ಮರಣದಂಡನೆ: ಲೋಕಸಭೆಯಲ್ಲಿ ಅಪರಾಧ ಕಾನೂನು ತಿದ್ದುಪಡಿ ಮಸೂದೆ ಮಂಡಿಸಿದ ಅಮಿತ್ ಶಾ
ಒಟ್ಟಾರೆಯಾಗಿ, ಕ್ರಿಮಿನಲ್ ಜಸ್ಟೀಸ್ ಸಿಸ್ಟಂ ಅನ್ನು ಭಾರತೀಯಗೊಳಿಸುವ ಪ್ರಕ್ರಿಯೆಯ ಭಾಗವಾಗಿ ಅಮಿತ್ ಶಾ ಅವರು 58 ಔಪಚಾರಿಕ ಮತ್ತು 100 ಅನೌಪಚಾರಿಕ ಪರಿಶೀಲನಾ ಸಭೆಗಳನ್ನು ನಡೆಸಿದ್ದರು ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಕಾಂಗ್ರೆಸ್ ಆಡಳಿತದ ಕೆಲವು ರಾಜ್ಯಗಳು, ಕೇರಳ ಮತ್ತು ಪಶ್ಚಿಮ ಬಂಗಾಳ ಈ ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ