CDS Anil Chauhan: ಭಾರತದ ನೂತನ ಸಿಡಿಎಸ್ ಅನಿಲ್ ಚೌಹಾಣ್ ದೇಶದ ಗಡಿಯ ಇಂಚಿಂಚೂ ಮಾಹಿತಿ ಗೊತ್ತಿರುವ ಅಪರೂಪದ ಸಮರತಂತ್ರ ನಿಪುಣ

ಗಡಿ ಸಂಬಂಧಿತ ವಿಷಯಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡುವಷ್ಟು ಪ್ರಾವೀಣ್ಯತೆ ಪಡೆದಿರುವ ಇವರು ಗಾಲ್ಫ್ ಆಟಗಾರರೂ ಹೌದು.

CDS Anil Chauhan: ಭಾರತದ ನೂತನ ಸಿಡಿಎಸ್ ಅನಿಲ್ ಚೌಹಾಣ್ ದೇಶದ ಗಡಿಯ ಇಂಚಿಂಚೂ ಮಾಹಿತಿ ಗೊತ್ತಿರುವ ಅಪರೂಪದ ಸಮರತಂತ್ರ ನಿಪುಣ
ಸಿಡಿಎಸ್ ಹುದ್ದೆಗೆ ನೇಮಕವಾಗಿರುವ ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Sep 29, 2022 | 11:11 AM

ಭಾರತದ ಮೂರೂ ಸಶಸ್ತ್ರಪಡೆಗಳ ಸಿಬ್ಬಂದಿ ಮುಖ್ಯಸ್ಥರಾಗಿ (Chief of Defence Staff – CDS) ಲೆಫ್ಟಿನೆಂಟ್ ಜನರಲ್ ಅನಿಲ್ ಚೌಹಾಣ್ (ನಿವೃತ್ತ) ಅವರನ್ನು ನೇಮಿಸಲು ಕೇಂದ್ರ ಸರ್ಕಾರವು ಮುಂದಾಗಿದೆ. ಗಡಿ ಸಂಬಂಧಿತ ವಿಷಯಗಳ ಬಗ್ಗೆ ಅಧಿಕಾರಯುತವಾಗಿ ಮಾತನಾಡುವಷ್ಟು ಪ್ರಾವೀಣ್ಯತೆ ಪಡೆದಿರುವ ಇವರು ಗಾಲ್ಫ್ ಆಟಗಾರರೂ ಹೌದು. ಅಷ್ಟೇ ಅಲ್ಲದೆ, ಇವರ ಬಳಿ ವಿಶ್ವದ ಹಲವು ದೇಶಗಳ ಸಶಸ್ತ್ರ ಪಡೆಗಳು ಬಳಸುವ ಮಾಸ್ಕ್​ಗಳ ಸಂಗ್ರಹವೂ ಇದೆ. ಚೌಹಾಣ್ ಉತ್ತಮ ಲೇಖಕರೂ ಹೌದು. ಅವರ ಮೊದಲ ಪುಸ್ತಕ ‘ಆಫ್ಟರ್​ಮಾತ್​ ಅಫ್ ಎ ನ್ಯೂಕ್ಲಿಯರ್ ಅಟ್ಯಾಕ್’ (Aftermath of a Nuclear Attack) 2010ರಲ್ಲಿ ಪ್ರಕಟವಾಗಿತ್ತು. ಅವರು ಈಗಷ್ಟೇ ಮತ್ತೊಂದು ‘ಮಿಲಿಟರಿ ಜಿಯೋಗ್ರಫಿ ಆಫ್ ಇಂಡಿಯಾಸ್ ನಾರ್ದರ್ನ್ ಬಾರ್ಡರ್ಸ್’ (Military Geography of India’s Northern Borders) ಪೂರ್ಣಗೊಳಿಸಿದ್ದಾರೆ.

61 ವರ್ಷದ ಮನೋಜ್ ಪಾಂಡೆ ಅವರು ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಮತ್ತು ಅಡ್ಮಿರಲ್ ಆರ್ ಹರಿಕುಮಾರ್ ಅವರಿಗಿಂತ ವಯಸ್ಸಿನಲ್ಲಿ ದೊಡ್ಡವರು. ಹಿಂದಿನ ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರಂತೆ ಇವರೂ 11ನೇ ಗೂರ್ಖಾ ರೈಫಲ್ಸ್​ ರೆಜಿಮೆಂಟ್​ಗೆ ಸೇರಿದವರು. ಸಿಡಿಎಸ್ ಸೇವೆಯನ್ನು ಸರ್ಕಾರವು 65 ವರ್ಷಗಳವರೆಗೆ ವಿಸ್ತರಿಸಲು ಅವಕಾಶವಿದೆ. ಕಳೆದ ಜೂನ್ ತಿಂಗಳಲ್ಲಿ ಘೋಷಿಸಿದ ಹೊಸ ನಿಯಮಗಳು ಈ ಅಂಶವನ್ನು ದೃಢಪಡಿಸಿವೆ. ಮುಂದಿನ ದಿನಗಳಲ್ಲಿ ಚೌಹಾಣ್ ಅವರು ಮಿಲಿಟರಿ ಪುನರ್ ಸಂಘಟನೆಗಾಗಿ ಮೂರೂ ಸಶಸ್ತ್ರ ಪಡೆಗಳ ಆರು ಮುಖ್ಯಸ್ಥರೊಂದಿಗೆ ಕೆಲಸ ಮಾಡಲಿದ್ದಾರೆ.

‘ಅನುಭವಿ ಮಿಲಿಟರಿ ಅಧಿಕಾರಿಯಾಗಿರುವ ಅನಿಲ್ ಅತ್ಯುತ್ತಮ ಕಾರ್ಯಕ್ಷಮತೆಗೆ ಹೆಸರುವಾಸಿಯಾದವರು. ಬಹುನಿರೀಕ್ಷೆಯೊಂದಿಗೆ ಇವರಿಗೆ ಸಿಡಿಎಸ್ ಸ್ಥಾನ ನೀಡಲಾಗುತ್ತಿದೆ. ಅವರಿಗೆ ಈ ನಿರೀಕ್ಷೆಗಳನ್ನು ಈಡೇರಿಸುವ ಸಾಮರ್ಥ್ಯವಿದೆ. ಅವರು ಪ್ರಬುದ್ಧರು, ಬುದ್ಧಿವಂತರು ಮತ್ತು ಏಕಾಗ್ರ ಚಿತ್ತರಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದವರಾಗಿದ್ದಾರೆ’ ಎಂದು ಮಿಲಿಟರಿ ಬೆಳವಣಿಗೆಗಳ ವಿಶ್ಲೇಷಕ ಲೆಫ್ಟಿನೆಂಟ್ ಜನರಲ್ ಶೋಕಿನ್ ಚೌಹಾಣ್ (ನಿವೃತ್ತ) ಹೇಳಿದರು. ಅನಿಲ್ ಚೌಹಾಣ್ ಅವರನ್ನು ಇವರು ಸುಮಾರು 45 ವರ್ಷಗಳಿಂದ ಬಲ್ಲವರಾಗಿದ್ದಾರೆ.

ಸಮಕಾಲೀನ ಹಿರಿಯ ಮಿಲಿಟರಿ ಅಧಿಕಾರಿಗಳ ಪೈಕಿ ಅನಿಲ್ ಚೌಹಾಣ್ ಭಾರತದ ಗಡಿ ಸಮಸ್ಯೆಗಳು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತ ಮೂಡಿಸಿ ಕಾರ್ಯನಿರ್ವಹಿಸುವ ಶಕ್ತಿ ಅವರಿಗಿದೆ. ಬಿಪಿನ್ ರಾವತ್ ಅವರ ಉತ್ತರಾಧಿಕಾರಿಯಾಗಿ ಸರ್ಕಾರವು ಸರಿಯಾದ ವ್ಯಕ್ತಿಯನ್ನೇ ಆಯ್ಕೆ ಮಾಡಿದೆ. ಚೌಹಾಣ್ ಅವರು ಯೌವನದ ದಿನಗಳಲ್ಲಿ ಉತ್ತಮ ಬ್ಯಾಸ್ಕೆಟ್​ಬಾಲ್ ಆಟಗಾರರಾಗಿದ್ದರು. ಇಂದಿಗೂ ಅವರು ಸಮಯ ಸಿಕ್ಕಾಗ ಗಾಲ್ಫ್ ಆಡುತ್ತಾರೆ. ಜಗತ್ತಿನ ವಿವಿಧ ದೇಶಗಳ ಸಂಸ್ಕೃತಿ ಬಿಂಬಿಸುವ ಮುಖವಾಡಗಳನ್ನು ಸಂಗ್ರಹಿಸಿದ್ದಾರೆ.

ಮೇ 18, 1961ರಂದು ಜನಿಸಿದ ಅನಿಲ್ ಚೌಹಾಣ್ ಅವರು 1981ರಲ್ಲಿ ಗೂರ್ಖಾ ರೈಫಲ್ಸ್​ ರೆಜಿಮೆಂಟ್​ನಲ್ಲಿ ಅಧಿಕಾರಿಯಾಗಿ ಸೇವೆ ಆರಂಭಿಸಿದರು. ಅವರಿಗೆ ಸಮೃದ್ಧ ಕಾರ್ಯಾಚರಣೆಯ ಅನುಭವವಿದೆ. ಸೆಪ್ಟೆಂಬರ್ 2019ರಿಂದ ಅವರು ಸೇನೆಯ ಪೂರ್ವ ವಿಭಾಗದ ಕಮಾಂಡರ್ ಆಗಿದ್ದರು. ಮೇ 2021ರಲ್ಲಿ ನಿವೃತ್ತರಾಗುವವರೆಗೂ ಇದೇ ಹುದ್ದೆಯಲ್ಲಿದ್ದರು. ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರಾಗಿಯೂ (Director General of Military Operations – DGMO) ಅವರು ಸಹ ಸೇವೆ ಸಲ್ಲಿಸಿದ್ದಾರೆ. ತಮ್ಮ 40 ವರ್ಷಗಳ ಮಿಲಿಟರಿ ಸೇವೆಯ ಸಮಯದಲ್ಲಿ ಈಶಾನ್ಯ ಭಾರತ ಮತ್ತು ಕಾಶ್ಮೀರದಲ್ಲಿಯೂ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದರು. ಅಂಗೋಲಾದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲಕರಾಗಿಯೂ ಕೆಲಸ ಮಾಡಿದ್ದರು.

ಸೇನಾ ಕಾರ್ಯಾಚರಣೆ ಬಗ್ಗೆ ತಲಸ್ಪರ್ಶಿ ಜ್ಞಾನವಿರುವ ಅನಿಲ್ ಚೌಹಾಣ್ ಅವರಿಗೆ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗಳಲ್ಲಿಯೂ ಪರಿಣತಿ ಇದೆ. ಭವಿಷ್ಯದ ಯುದ್ಧಗಳು ಮತ್ತು ಕಾರ್ಯಾಚರಣೆಗಳಿಗೆ ಮಿಲಿಟರಿಯ ಸಂಪನ್ಮೂಲಗಳ ಮರು ನಿಯೋಜನೆ ಹಾಗೂ ಸೇನಾಶಕ್ತಿಯ ಪುನರ್​ ಸಂಘಟನೆಗಾಗಿ ನಡೆಯುತ್ತಿರುವ ಪ್ರಯತ್ನಗಳನ್ನು ಮುಂದಿನ ದಿನಗಳಲ್ಲಿ ಅನಿಲ್ ಚೌಹಾಣ್ ಅವರೇ ಮುನ್ನಡೆಸಲಿದ್ದಾರೆ. ಸಿಡಿಎಸ್ ಬಿಪಿನ್ ರಾವತ್ ನಿಧನದ ನಂತರ ಈ ಯೋಜನೆಗೆ ಹಿನ್ನಡೆಯಾಗಿತ್ತು. ಇದೀಗ ಚೌಹಾಣ್ ಅವರು ಮೂರೂ ಸಶಸ್ತ್ರಪಡೆಗಳ ನಡುವೆ ಸಹಮತ ಮೂಡಿಸುವ ಮೂಲಕ ಸಶಸ್ತ್ರಪಡೆಗಳ ಸುಧಾರಣೆ ಪ್ರಕ್ರಿಯೆಗೆ ಹೊಸ ವೇಗ ನೀಡುತ್ತಾರೆ ಎಂದು ನಿರೀಕ್ಷಿಸಲಾಗಿದೆ.

Published On - 11:07 am, Thu, 29 September 22