Viral Video: ಕೊಲ್ಕತ್ತಾದಲ್ಲಿ ಡೋಲು ಬಾರಿಸಿ ದುರ್ಗಾ ಪೂಜೆಗೆ ಚಾಲನೆ ನೀಡಿದ ಸಿಎಂ ಮಮತಾ ಬ್ಯಾನರ್ಜಿ; ವಿಡಿಯೋ ವೈರಲ್
ಸಿಎಂ ಮಮತಾ ಬ್ಯಾನರ್ಜಿ ಡೋಲು ಬಾರಿಸಿ ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡಿದ್ದು, ಅವರ ಉತ್ಸಾಹ ಕಂಡು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.
ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನವರಾತ್ರಿ ಹಬ್ಬವನ್ನು (Navaratri Festival) ಬಹಳ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಕೊಲ್ಕತ್ತಾದ ದುರ್ಗಾ ಪೂಜೆ (Durga Puja) ದೇಶಾದ್ಯಂತ ಪ್ರಸಿದ್ಧಿ ಪಡೆದಿದೆ. ಈಗಾಗಲೇ ನವರಾತ್ರಿ ಉತ್ಸವ ಶುರುವಾಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಕೊಲ್ಕತ್ತಾದಲ್ಲಿ ದುರ್ಗಾ ಪೂಜೆ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ಸಂಭ್ರಮದಿಂದ ಡೋಲು ಬಾರಿಸಿ (ಪಶ್ಚಿಮ ಬಂಗಾಳದಲ್ಲಿ ಧಾಕ್ ಎನ್ನುತ್ತಾರೆ) ಉತ್ಸವದಲ್ಲಿ ಪಾಲ್ಗೊಂಡಿರುವ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಸಿಎಂ ಮಮತಾ ಬ್ಯಾನರ್ಜಿ ಡೋಲು ಬಾರಿಸಿ, ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡಿದ್ದು, ಅವರ ಉತ್ಸಾಹ ಕಂಡು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಭವಾನಿಪೋರ್‌ನಲ್ಲಿ ಟಿಎಂಸಿ ಕೌನ್ಸಿಲರ್ ಆಶಿಮ್ ಬೋಸ್ ಆಯೋಜಿಸಿದ್ದ ದುರ್ಗಾ ಪೂಜೆಯನ್ನು ಉದ್ಘಾಟಿಸುವ ವೇಳೆ ಟಿಎಂಸಿ ಮುಖ್ಯಸ್ಥೆ ಹಾಗೂ ಸಿಎಂ ಮಮತಾ ಬ್ಯಾನರ್ಜಿ ಬುಧವಾರ ದಾಂಡಿಯಾದಲ್ಲೂ ಪಾಲ್ಗೊಂಡಿದ್ದಾರೆ. ಮಮತಾ ಬ್ಯಾನರ್ಜಿ ಅವರು ಅಲಿಪೋರ್‌ನಲ್ಲಿ ಸುರುಚಿ ಸಂಘದ ಪೂಜಾ ಪಂಡಲ್‌ನ ಉದ್ಘಾಟನೆಯಲ್ಲಿ ಸಾಂಪ್ರದಾಯಿಕವಾದ ಡೋಲಿನಂತಹ ವಾದ್ಯವಾದ ಧಾಕ್ ಅನ್ನು ಸಹ ನುಡಿಸಿದ್ದಾರೆ.
ಇದನ್ನೂ ಓದಿ: Mamata Banerjee: ನಾನು ಅವರ ಸೇವಕನಂತೆ ನನಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ, ಮಮತಾ ಬ್ಯಾನರ್ಜಿ ಆರೋಪ
ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ರಿಬ್ಬನ್ ಕತ್ತರಿಸುವುದನ್ನು ಮತ್ತು ತಮ್ಮ ಭುಜದ ಮೇಲೆ ಧಾಕ್ ಅನ್ನು ತೂಗುಹಾಕಿಕೊಂಡು ಅದನ್ನು ನುಡಿಸುವುದನ್ನು ನೋಡಬಹುದು. ಮಮತಾ ಬ್ಯಾನರ್ಜಿ ನೆಲದ ಮೇಲೆ ಇಟ್ಟುಕೊಂಡು ಧಾಕ್ ನುಡಿಸುತ್ತಿದ್ದಂತೆ, ಇತರೆ ಸಚಿವರು ಕೂಡ ಅವರಿಗೆ ಜೊತೆಯಾದರು.
#WATCH | West Bengal CM Mamata Banerjee played a dhak during the inauguration of Suruchi Sangha Puja Pandal in Kolkata earlier today. State Minister and Kolkata Mayor Firhad Hakim also joined her in playing the instrument. #DurgaPuja pic.twitter.com/W5ciwCR3Fd
— ANI (@ANI) September 28, 2022
ಧಾಕ್ ಅನ್ನು ಭುಜಕ್ಕೆ ತೂಗು ಹಾಕಿಕೊಂಡು, ಮಮತಾ ಬ್ಯಾನರ್ಜಿ ರಿಬ್ಬನ್ ಕಟ್ ಮಾಡಿ ಪೂಜಾ ಮಂಟಪವನ್ನು ಉದ್ಘಾಟಿಸಿದರು. ಆ ಭಾರವಾದ ವಾದ್ಯವನ್ನು ನುಡಿಸುತ್ತಾ ಮುಂದಕ್ಕೆ ನಡೆದರು. ನಂತರ ಅವರು ಧಾಕ್ ಅನ್ನು ನೆಲದ ಮೇಲೆ ಇರಿಸಿ ಅದನ್ನು ಬಾರಿಸುವುದನ್ನು ಮುಂದುವರೆಸಿದರು. ನವರಾತ್ರಿಯ ಆರನೇ ದಿನದಿಂದ ಪ್ರಾರಂಭವಾಗುವ ದುರ್ಗಾಪೂಜೆಯ ಹಬ್ಬವನ್ನು ದುರ್ಗೋತ್ಸವ ಎಂದೂ ಕರೆಯುತ್ತಾರೆ. ಇದು ಹಿಂದೂ ದೇವತೆ ದುರ್ಗಾ ಮಾತೆಯನ್ನು ಗೌರವಿಸುವ ಮತ್ತು ಮಹಿಷಾಸುರನ ಮೇಲೆ ಆಕೆಯ ವಿಜಯವನ್ನು ಸ್ಮರಿಸುವ ವಾರ್ಷಿಕ ಆಚರಣೆಯಾಗಿದೆ.