Hindi Imposition: ಹಿಂದಿ ಹೇರಿಕೆ ವಿರೋಧಿಸಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ತಮಿಳುನಾಡಿನ ವೃದ್ಧ

| Updated By: Ganapathi Sharma

Updated on: Nov 26, 2022 | 4:30 PM

ರಾಜ್ಯದಲ್ಲಿ ಹಿಂದಿ ಹೇರಿಕೆಯನ್ನು ನಿಲ್ಲಿಸದಿದ್ದರೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಡಿಎಂಕೆ ಯುವ ಘಟಕದ ಕಾರ್ಯದರ್ಶಿ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಕೇಂದ್ರ ಸರ್ಕಾರಕ್ಕೆ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು.

Hindi Imposition: ಹಿಂದಿ ಹೇರಿಕೆ ವಿರೋಧಿಸಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ತಮಿಳುನಾಡಿನ ವೃದ್ಧ
ಪ್ರಾತಿನಿಧಿಕ ಚಿತ್ರ
Follow us on

ಸೇಲಂ: ಕೇಂದ್ರ ಸರ್ಕಾರದ ‘ಹಿಂದಿ ಹೇರಿಕೆ (Hindi Imposition)’ ಧೋರಣೆ ವಿರೋಧಿಸಿ ತಮಿಳುನಾಡಿನ 85 ವರ್ಷ ವಯಸ್ಸಿನ ವೃದ್ಧ ಕೃಷಿಕ ತಂಗವೇಲ್ ಎಂಬವರು ಶನಿವಾರ ಬೆಳಿಗ್ಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. ಸೇಲಂನ ಮೆಟ್ಟೂರು ಬಳಿಯ ತಲೈಯೂರು (Thalaiyur) ಎಂಬಲ್ಲಿ ಡಿಎಂಕೆ (DMK) ಕಚೇರಿ ಎದುರು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು 11 ಗಂಟೆ ವೇಳೆಗೆ ಡಿಎಂಕೆ ಕಚೇರಿ ಬಳಿ ಅವರು ಮೈಗೆ ಪೆಟ್ರೋಲ್ ಸುರಿದುಕೊಂಡು ಬೆಂಕಿಹಚ್ಚಿಕೊಂಡಿದ್ದಾರೆ. ಗಂಭೀರ ಸುಟ್ಟ ಗಾಯಗಳೊಂದಿಗೆ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ತಂಗವೇಲ್ ಅವರು ಡಿಎಂಕೆಯ ಸಕ್ರಿಯ ಸದ್ಯರೂ ಆಗಿದ್ದರು. ಶಿಕ್ಷಣ ಮಾಧ್ಯಮವಾಗಿ ಹಿಂದಿಯನ್ನು ಅನುಷ್ಠಾನಗೊಳಿಸುವ ಕೇಂದ್ರ ಸರ್ಕಾರದ ಕ್ರಮದಿಂದ ಆಘಾತಗೊಂಡಿದ್ದರು ಎನ್ನಲಾಗಿದೆ.

‘ಮೋದಿ ಸರ್ಕಾರವೇ, ನಮಗೆ ಹಿಂದಿ ಬೇಡ’

ಆತ್ಮಹತ್ಯೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಬರೆದ ಬ್ಯಾನರ್ ಒಂದನ್ನು ತಂಗವೇಲ್ ಹಿಡಿದುಕೊಂಡಿದ್ದರು. ‘ಮೋದಿ ಸರ್ಕಾವೇ, ಕೇಂದ್ರ ಸರ್ಕಾರವೇ ನಮಗೆ ಹಿಂದಿ ಬೇಡ. ನಮ್ಮ ಮಾತೃಭಾಷೆ ತಮಿಳು. ಹಿಂದಿ ವಿದೂಷಕರ ಭಾಷೆ. ಹಿಂದಿ ಹೇರಿಕೆಯಿಂದ ನಮ್ಮ ವಿದ್ಯಾರ್ಥಿಗಳ ಜೀವನಕ್ಕೆ ತೊಂದರೆಯಾಗಲಿದೆ. ಹಿಂದಿಯನ್ನು ತೊಲಗಿಸಿ, ಹಿಂದಿಯನ್ನು ತೊಲಗಿಸಿ, ಹಿಂದಿಯನ್ನು ತೊಲಗಿಸಿ’ ಎಂಬ ಸಂದೇಶ ಬ್ಯಾನರ್​​ನಲ್ಲಿತ್ತು ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.

ರಾಜ್ಯದಲ್ಲಿ ಹಿಂದಿ ಹೇರಿಕೆಯನ್ನು ನಿಲ್ಲಿಸದಿದ್ದರೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಡಿಎಂಕೆ ಯುವ ಘಟಕದ ಕಾರ್ಯದರ್ಶಿ, ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಕೇಂದ್ರ ಸರ್ಕಾರಕ್ಕೆ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು. ಕೇಂದ್ರ ಸರ್ಕಾರದ ಕ್ರಮವನ್ನು ನೋಡಿಕೊಂಡು ಮೂಕಪ್ರೇಕ್ಷನಾಗಿರಲು ಸಾಧ್ಯವಿಲ್ಲ ಎಂದಿದ್ದ ಡಿಎಂಕೆ ತಮಿಳುನಾಡಿನಲ್ಲಿ ಸಾಮೂಹಿಕ ಪ್ರತಿಭಟನೆಗಳನ್ನೂ ನಡೆಸಿತ್ತು. ಐಐಟಿಯಂಥ ಉನ್ನತ ಮಟ್ಟದ ತಾಂತ್ರಿಕ ಮತ್ತು ತಾಂತ್ರಿಕೇತರ ಶಿಕ್ಷಣ ಸಂಸ್ಥೆಗಳಲ್ಲಿ ಹಿಂದಿಯನ್ನು ಕಲಿಕಾ ಮಾಧ್ಯಮವನ್ನಾಗಿ ಅಳವಡಿಸುವ ಬಗ್ಗೆ ಸಂಸದೀಯ ಸಮಿತಿ ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಇದರ ಬೆನ್ನಲ್ಲೇ ಪ್ರತಿಭಟನೆಗಳು ತೀವ್ರಗೊಂಡಿದ್ದವು.

ಹಿಂದಿ ಭಾಷೆಯನ್ನು ಹೇರಲು ಬಯಸುವವರು ಅದನ್ನು ಪ್ರಾಬಲ್ಯದ ಸಂಕೇತವೆಂದು ಪರಿಗಣಿಸುತ್ತಾರೆ. ಒಂದೇ ಧರ್ಮ ಇರಬೇಕು ಎಂದುಕೊಂಡಂತೆ, ಒಂದೇ ಭಾಷೆ ಇರಬೇಕು ಎಂದು ಭಾವಿಸುತ್ತಾರೆ. ನಾವು ತಮಿಳು ಭಾಷೆಯ ಬಗ್ಗೆ ಮಾತನಾಡುತ್ತೇವೆ ಎಂದ ಮಾತ್ರಕ್ಕೆ ನಾವು ಸಂಕುಚಿತ ಮನಸ್ಸಿನವರು ಎಂದು ಅರ್ಥವಲ್ಲ. ಹಿಂದಿ ಮಾತ್ರವಲ್ಲ, ನಾವು ಯಾವುದೇ ಭಾಷೆಯ ವಿರೋಧಿಯಲ್ಲ. ನಾವು ಹಿಂದಿ ಹೇರಿಕೆಯ ವಿರೋಧಿಗಳೇ ವಿನಃ ಹಿಂದಿ ಭಾಷೆಯ ವಿರೋಧಿಗಳಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇತ್ತೀಚೆಗೆ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ