Ranchi ಪ್ರವಾದಿ ಬಗ್ಗೆ ಹೇಳಿಕೆ ವಿವಾದ: ರಾಂಚಿಯಲ್ಲಿ ಭುಗಿಲೆದ್ದ ಹಿಂಸಾಚಾರ; ವಾಹನಗಳಿಗೆ ಬೆಂಕಿ,ಕಲ್ಲು ತೂರಾಟ

| Updated By: ರಶ್ಮಿ ಕಲ್ಲಕಟ್ಟ

Updated on: Jun 10, 2022 | 6:42 PM

ನೂಪುರ್ ಶರ್ಮಾ ಅವರನ್ನು ಬಂಧಿಸುವಂತೆ ಒತ್ತಾಯಿಸಿ ನೂರಾರು ಜನರು ರಾಂಚಿ ಮುಖ್ಯ ರಸ್ತೆಯಲ್ಲಿರುವ ಹನುಮಾನ್ ದೇವಸ್ಥಾನ ಬಳಿ ಸೇರಿದ್ದು, ಅವರನ್ನು ಚದುರಿಸುವ ವೇಳೆ ಪೊಲೀಸರಿಗೆ ಗಾಯಗಳಾಗಿವೆ. ಜನರ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು...

Ranchi ಪ್ರವಾದಿ ಬಗ್ಗೆ ಹೇಳಿಕೆ ವಿವಾದ: ರಾಂಚಿಯಲ್ಲಿ ಭುಗಿಲೆದ್ದ ಹಿಂಸಾಚಾರ; ವಾಹನಗಳಿಗೆ ಬೆಂಕಿ,ಕಲ್ಲು ತೂರಾಟ
Follow us on

ರಾಂಚಿ: ಬಿಜೆಪಿಯಿಂದ (BJP) ಅಮಾನತುಗೊಂಡಿರುವ ವಕ್ತಾರೆ ನೂಪುರ್ ಶರ್ಮಾ (Nupur Sharma) ಪ್ರವಾದಿ ಮೊಹಮ್ಮದ್  (Prophet Muhammad )ಬಗ್ಗೆ ಹೇಳಿದ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಜಾರ್ಖಂಡ್​​ನ ರಾಂಚಿಯಲ್ಲಿ (Ranchi) ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾಕಾರು ವಾಹನಗಳಿಗೆ ಹಾನಿಯೆಸಗಿದ್ದು,ಹಲವಾರು ಕಡೆ ಕಲ್ಲು ತೂರಾಟ ನಡೆದಿದೆ. ಈ ಹಿಂಸಾಚಾರದಲ್ಲಿ ಹಲವು ಪೊಲೀಸರಿಗೆ ಗಾಯಗಳಾಗಿವೆ. ನೂಪುರ್ ಶರ್ಮಾ ಅವರನ್ನು ಬಂಧಿಸುವಂತೆ ಒತ್ತಾಯಿಸಿ ನೂರಾರು ಜನರು ರಾಂಚಿ ಮುಖ್ಯ ರಸ್ತೆಯಲ್ಲಿರುವ ಹನುಮಾನ್ ದೇವಸ್ಥಾನ ಬಳಿ ಸೇರಿದ್ದು, ಅವರನ್ನು ಚದುರಿಸುವ ವೇಳೆ ಪೊಲೀಸರಿಗೆ ಗಾಯಗಳಾಗಿವೆ. ಜನರ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಗುಂಪು ಘೋಷಣೆ ಕೂಗಿ ಕಲ್ಲು ತೂರಾಟ ಮಾಡಿದೆ. ಕೆಲವು ಪೊಲೀಸರಿಗೆ ಗಾಯಗಳಾಗಿವೆ. ನಾವು ಪರಿಸ್ಥಿತಿ ನಿಭಾಯಿಸುತ್ತಿದ್ದು, ಹೆಚ್ಚಿನ ಪಡೆಗಳನ್ನು ನಿಯೋಜಿಸಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.  ಪರಿಸ್ಥಿತಿ ಉದ್ವಿಗ್ನವಾಗಿದ್ದರೂ ಹತೋಟಿಯಲ್ಲಿದೆ. ನಮ್ಮ ಕಡೆಯಿಂದ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಬಿಗಿ ಭದ್ರತೆಯನ್ನು ನೀಡಲಾಗಿದೆ. ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಜನರ ಗುಂಪು ಚದುರಿ ಹೋಗುವಂತೆ ನಾವು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ ಎಂದು ರಾಂಚಿ ಡಿಐಜಿ ಆಶಿಶ್ ಗುಪ್ತಾ ಹೇಳಿದ್ದಾರೆ.

ಪೊಲೀಸರ ಪ್ರಕಾರ ಬೆಳಗ್ಗಿನಿಂದಲೇ ಪ್ರತಿಭಟನೆ ನಡೆಯುತ್ತಿದ್ದು, ಶುಕ್ರವಾರದ ಪ್ರಾರ್ಥನೆ ನಂತರ ಹೆಚ್ಚಾಗಿದೆ. ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ಪ್ರತಿಭಟನೆ ಮಾಡಲು ಹಲವಾರು ಅಂಗಡಿ, ಸಂಸ್ಥೆಗಳು ಮುಚ್ಚಿವೆ.
“ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಅವರ ಹೇಳಿಕೆ ವಿರೋಧಿಸಿ ಬೆಳಿಗ್ಗೆಯಿಂದ ಮಾರುಕಟ್ಟೆಯಲ್ಲಿ 1,100 ಕ್ಕೂ ಹೆಚ್ಚು ಅಂಗಡಿಗಳನ್ನು ಮುಚ್ಚಲಾಗಿದೆ. ಶರ್ಮಾ ಮತ್ತು ಜಿಂದಾಲ್ ಅವರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸುತ್ತೇವೆ” ಎಂದು ನ್ಯೂ ಡೈಲಿ ಮಾರ್ಕೆಟ್ ಟ್ರೇಡರ್ಸ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಹಾಜಿ ಎಂಡಿ ಹಾಸಿಮ್ ಪಿಟಿಐಗೆ ತಿಳಿಸಿದ್ದಾರೆ.

ನಾವು ಶಾಂತಿಯುತ ಮೆರವಣಿಗೆಯನ್ನು ಬಯಸಿದ್ದೆವು. ಆದರೆ ಪೊಲೀಸರು ಅನುಮತಿ ನೀಡಲಿಲ್ಲ . ಹೀಗಾಗಿ ನಾವು ಇಲ್ಲಿನ ಅಂಗಡಿಗಳ ಮುಂದೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದಿದ್ದಾರೆ ಹಾಶಿಂ.
ಏತನ್ಮಧ್ಯೆ, ದೆಹಲಿ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ ಇಂದು ಬೃಹತ್ ಪ್ರತಿಭಟನೆಗಳು ನಡೆದಿವೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 5:49 pm, Fri, 10 June 22