ಪುಣೆ ಪೋರ್ಷೆ ಕಾರು ಅಪಘಾತ: ಆರೋಪಿ ವೇದಾಂತ್ ಅಗರ್ವಾಲ್ ತಂದೆಗೆ ಸೇರಿದ ರೆಸಾರ್ಟ್ ನೆಲಸಮ
ಪುಣೆಯಲ್ಲಿ ನಡೆದ ಪೋರ್ಷೆ ಕಾರು ಅಪಘಾತದ ಆರೋಪಿ ವೇದಾಂತ್ ಅಗರ್ವಾಲ್ ತಂದೆ ವಿಶಾಲ್ ಅಗರ್ವಾಲ್ಗೆ ಸೇರಿದ ರೆಸಾರ್ಟ್ನ್ನು ನೆಲಸಮ ಮಾಡಲಾಗಿದೆ.
ಪುಣೆಯ ಪೋರ್ಷೆ ಕಾರು ಅಪಘಾತ(Porsche Car Accident)ದ ಆರೋಪಿಯಾಗಿರುವ ವೇದಾಂತ್ ಅಗರ್ವಾಲ್ ಅವರ ತಂದೆ ವಿಶಾಲ್ ಅಗರ್ವಾಲ್ಗೆ ಸೇರಿರುವ ರೆಸಾರ್ಟ್ಅನ್ನು ಜಿಲ್ಲಾಡಳಿತವು ನೆಲಸಮ ಮಾಡಿದೆ. ಮಹಾರಾಷ್ಟ್ರದ ಸತಾರಾದಲ್ಲಿನ ಜಿಲ್ಲಾಡಳಿತವು ಪುಣೆ ಪೋರ್ಷೆ ಅಪಘಾತದಲ್ಲಿ ಭಾಗಿಯಾಗಿರುವ ವೇದಾಂತ್ ತಂದೆ ರಿಯಲ್ ಎಸ್ಟೇಟ್ ಡೆವಲಪರ್ ವಿಶಾಲ್ ಅಗರ್ವಾಲ್ ಒಡೆತನದ ಮಹಾಬಲೇಶ್ವರದಲ್ಲಿರುವ ರೆಸಾರ್ಟ್‌ನ ಅಕ್ರಮ ಭಾಗಗಳನ್ನು ನೆಲಸಮಗೊಳಿಸಿದೆ.
ಮಹಾಬಲೇಶ್ವರದ ಮಲ್ಕಾಮ್ ಪೇಠ್ ಪ್ರದೇಶದಲ್ಲಿನ ಮಹಾಬಲೇಶ್ವರ ಪಾರ್ಸಿ ಜಿಮ್ಖಾನಾ (ಎಂಪಿಜಿ) ಕ್ಲಬ್‌ನಲ್ಲಿ ಅನಧಿಕೃತ ನಿರ್ಮಾಣವನ್ನು ಜಿಲ್ಲಾಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸತಾರಾ ಕಲೆಕ್ಟರ್ ಜಿತೇಂದ್ರ ದುಡಿ ಅವರಿಗೆ ರೆಸಾರ್ಟ್ ಅಕ್ರಮವಾಗಿರುವುದು ಕಂಡುಬಂದರೆ ಅದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದರು.
ರಾಜ್ಯ ಸರ್ಕಾರ 10 ಎಕರೆ ಜಮೀನನ್ನು ಪಾರ್ಸಿ ಟ್ರಸ್ಟ್ ಪರವಾಗಿ 30 ವರ್ಷಗಳ ಕಾಲ ಜಿಮ್ಖಾನಾಗೆ ಗುತ್ತಿಗೆ ನೀಡಿತ್ತು. ಆದರೆ, 2016ರಲ್ಲಿ 17ರ ಹರೆಯದ ಆರೋಪಿಯ ಅಜ್ಜ ಎಸ್‌ಕೆ ಅಗರ್ವಾಲ್ ಟ್ರಸ್ಟ್‌ನ ಸಮಿತಿ ಸದಸ್ಯರಾಗಿದ್ದರು. ಆರೋಪಿಯ ಅಜ್ಜಿ ಉಷಾ ಅಗರ್ವಾಲ್ ಅವರ ಹೆಸರನ್ನೂ ಸಮಿತಿಗೆ ಸೇರಿಸಲಾಗಿದೆ.
2020 ರ ವೇಳೆಗೆ ಎಲ್ಲಾ ಪಾರ್ಸಿ ಹೆಸರುಗಳನ್ನು ಸಮಿತಿ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಅದೇ ರೀತಿ ವಿಶಾಲ್ ಅಗರ್ವಾಲ್, ಶ್ರೇಯ್ ಅಗರ್ವಾಲ್ ಮತ್ತು ಅಭಿಷೇಕ್ ಗುಪ್ತಾ ಅವರನ್ನು 2020 ರಲ್ಲಿ ಟ್ರಸ್ಟ್‌ನ ಸಮಿತಿ ಸದಸ್ಯರನ್ನಾಗಿ ಹೆಸರಿಸಲಾಯಿತು. ಈ 10 ಎಕರೆ ಭೂಮಿಯನ್ನು ರಾಜ್ಯ ಸರ್ಕಾರವು ಪಾರ್ಸಿ ಟ್ರಸ್ಟ್‌ಗೆ ವಸತಿ ಬಳಕೆಗಾಗಿ ನೀಡಿತು. ಮೊದಲು, ಇದು ಪಾರ್ಸಿ ಸಮುದಾಯದ ಜಿಮ್ಖಾನಾ ಆಗಿತ್ತು, ಆದರೆ ವಿಶಾಲ್ ಅಗರ್ವಾಲ್ ಜಿಮ್ಖಾನಾವನ್ನು ರೆಸಾರ್ಟ್ ಆಗಿ ಪರಿವರ್ತಿಸಿದರು ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲು ಪ್ರಾರಂಭಿಸಿದರು.
ಮತ್ತಷ್ಟು ಓದಿ:Pune Porsche Crash: ಪೋರ್ಷೆ ಅಪಘಾತ ಪ್ರಕರಣ; ಅಪ್ರಾಪ್ತನ ಬದಲು ತಾಯಿಯ ರಕ್ತದ ಮಾದರಿ ಬದಲಿಸಿದ್ದು ಸಾಬೀತು
ಮೇ 19ರಂದು ಪುಣೆಯ ಕಲ್ಯಾಣನಗರದಲ್ಲಿ ಪಾನಮತ್ತನಾಗಿದ್ದ 17 ವರ್ಷದ ವೇದಾಂತ್ ಅಗರ್ವಾಲ್ ಐಷಾರಾಮಿ ಪೋರ್ಷೆ ಕಾರನ್ನು ಬೈಕ್ಗೆ ಗುದ್ದಿದ ಪರಿಣಾಮ ಇಬ್ಬರು ಟೆಕ್ಕಿಗಳು ಸಾವನ್ನಪ್ಪಿದ್ದರು. ಬಳಿಕ ವೇದಾಂತ್ನನ್ನು ಪೊಲೀಸರು ಬಂಧಿಸಿದ್ದರು, ಇದೀಗ ವೇದಾಂತ್ ತಂದೆ ವಿಶಾಲ್ ಅಗರ್ವಾಲ್ರನ್ನು ಕೂಡ ಬಂಧಿಸಲಾಗಿದೆ.
ಕಾರಿನ ಚಾಲಕನನ್ನು ಬೆದರಿಸಿ ತಾನೇ ಕಾರು ಚಲಾಯಿಸುತ್ತಿದ್ದೆ ಎಂದು ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದಕ್ಕಾಗಿ ವೇದಾಂತ್ ಅಜ್ಜನನ್ನು ಬಂಧಿಸಲಾಗಿದೆ. ಹಾಗೆಯೇ ವೇದಾಂತ್ ರಕ್ತದ ಮಾದರಿಯನ್ನು ಬದಲಾಯಿಸುವಲ್ಲಿ ಕೈವಾಡವಿದ್ದ ವೇದಾಂತ್ ತಾಯಿಯನ್ನು ಕೂಡ ಬಂಧಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ