
ಪುಣೆ: ಲಂಡನ್‌ನಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ಭಾವಿಸಿದ್ದ ಪೋಷಕರಿಗೆ ಮಗಳ ಸಾವಿನ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿದೆ. 34 ವರ್ಷದ ಮುಗ್ಧಾ ಅವಿನಾಶ್ ದೇಶಮುಖ್ ಎಂಬ ಯುವತಿ ಪುಣೆಯ ಫ್ಲ್ಯಾಟ್‌ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ವಿಶೇಷವೆಂದರೆ, ಆಕೆ ಲಂಡನ್‌ನಿಂದ ಭಾರತಕ್ಕೆ ಮರಳಿರುವ ವಿಚಾರವನ್ನೇ ತನ್ನ ಪೋಷಕರಿಂದ ಮುಚ್ಚಿಟ್ಟಿದ್ದಳು. ಆಕೆ ಭಾರತದಲ್ಲಿರುವ ಸುಳಿವನ್ನು ಪತ್ತೆಹಚ್ಚಲು ಆನ್‌ಲೈನ್ ಫುಡ್ ಆರ್ಡರ್ ಮತ್ತು ಬ್ಯಾಂಕ್ ವಹಿವಾಟುಗಳು ಪ್ರಮುಖ ಪಾತ್ರ ವಹಿಸಿವೆ.
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ (ಔರಂಗಾಬಾದ್) ಮೂಲದ ಮುಗ್ಧಾ ಅವಿನಾಶ್ ದೇಶಮುಖ್ 2025ರ ಜುಲೈನಲ್ಲಿ ಉನ್ನತ ವ್ಯಾಸಂಗಕ್ಕಾಗಿ ಲಂಡನ್‌ಗೆ ತೆರಳಿದ್ದಳು. ಆದರೆ, ಅಲ್ಲಿಗೆ ಹೋದ ಕೆಲವೇ ವಾರಗಳಲ್ಲಿ ಅಂದರೆ ಆಗಸ್ಟ್ ತಿಂಗಳಲ್ಲೇ ಯಾರಿಗೂ ತಿಳಿಸದೆ ಭಾರತಕ್ಕೆ ಮರಳಿದ್ದಳು. ಬಳಿಕ ಪುಣೆಯ ಗಹುಂಜೆ ಪ್ರದೇಶದಲ್ಲಿರುವ ‘ಲೋಧಾ ಬೆಲ್ಮೊಂಡೋ’ ಹೌಸಿಂಗ್ ಸೊಸೈಟಿಯಲ್ಲಿ ಬಾಡಿಗೆಗೆ ಫ್ಲ್ಯಾಟ್ ಪಡೆದು ಏಕಾಂಗಿಯಾಗಿ ವಾಸಿಸುತ್ತಿದ್ದಳು. ಇನ್ನೊಂದೆಡೆ, ತಾನು ಲಂಡನ್‌ನಲ್ಲೇ ಇರುವುದಾಗಿ ಫೋನ್ ಕರೆಗಳು ಮತ್ತು ವಾಟ್ಸಾಪ್ ಸಂದೇಶಗಳ ಮೂಲಕ ಪೋಷಕರನ್ನು ನಂಬಿಸಿದ್ದಳು. ಹೀಗಾಗಿ ಮಗಳು ವಿದೇಶದಲ್ಲಿಯೇ ಇದ್ದಾಳೆ ಎಂದು ಭಾವಿಸಿದ್ದರು.
ಅಕ್ಟೋಬರ್ 24ರಿಂದ ಮುಗ್ಧಾಳ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಮಗಳೊಂದಿಗೆ ಸಂಪರ್ಕ ಸಾಧ್ಯವಾಗದ ಕಾರಣ ಆತಂಕಗೊಂಡ ಪೋಷಕರು, ಲಂಡನ್‌ನಲ್ಲಿದ್ದ ಆಕೆಯ ಸ್ನೇಹಿತೆಯನ್ನು ಸಂಪರ್ಕಿಸಿದ್ದಾರೆ. ಈ ವೇಳೆ ಸ್ನೇಹಿತೆ ಲಂಡನ್ ಪೊಲೀಸರನ್ನು ಸಂಪರ್ಕಿಸಿದಾಗ, ಮುಗ್ಧಾ ಆಗಸ್ಟ್ ತಿಂಗಳಲ್ಲೇ ಬ್ರಿಟನ್ ತೊರೆದು ಭಾರತಕ್ಕೆ ಮರಳಿರುವ ವಿಚಾರ ಬೆಳಕಿಗೆ ಬಂದಿದೆ. ಇದರಿಂದ ಮತ್ತಷ್ಟು ಆತಂಕಗೊಂಡ ತಂದೆ ಅವಿನಾಶ್ ದೇಶಮುಖ್ ಮಗಳ ಬ್ಯಾಂಕ್ ಖಾತೆಯ ವಹಿವಾಟುಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅಕ್ಟೋಬರ್ 8 ರಿಂದ 25ರ ಅವಧಿಯಲ್ಲಿ ಭಾರತದಲ್ಲಿನ Swiggy, Zomato ಸೇರಿದಂತೆ ವಿವಿಧ ಆನ್‌ಲೈನ್ ಸೇವೆಗಳಿಗೆ ಹಣ ಪಾವತಿಯಾಗಿರುವುದು ಪತ್ತೆಯಾಗಿದೆ. ಈ ವಹಿವಾಟುಗಳು ಮಗಳು ಭಾರತದಲ್ಲೇ ಇರುವ ಸಾಧ್ಯತೆಯನ್ನು ಬಲಪಡಿಸಿವೆ. ತಕ್ಷಣವೇ ಪೋಷಕರು ಛತ್ರಪತಿ ಸಂಭಾಜಿನಗರ ಅಪರಾಧ ವಿಭಾಗದ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಗರ್ಭಿಣಿ ಪತ್ನಿಯ ಕೊಲೆಗೂ ಮುನ್ನ ಗೂಗಲ್‌ನಲ್ಲಿ ಆತ್ಮಹತ್ಯೆಯ ಶಿಕ್ಷೆ ಬಗ್ಗೆ ಹುಡುಕಿದ್ದ ಪತಿ!
ಬ್ಯಾಂಕ್ ವಹಿವಾಟುಗಳು ಹಾಗೂ ತಾಂತ್ರಿಕ ಮಾಹಿತಿಯ ಆಧಾರದ ಮೇಲೆ ಪೊಲೀಸರು ಯುವತಿಯ ಸ್ಥಳವನ್ನು ಪತ್ತೆಹಚ್ಚಿದ್ದಾರೆ. ಆಕೆ ಇಷ್ಟು ದಿನ ಪುಣೆಯ ಲೋಧಾ ಬೆಲ್ಮೊಂಡೋ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವುದು ತಿಳಿದುಬಂದಿದೆ. ಕೂಡಲೇ ಛತ್ರಪತಿ ಸಂಭಾಜಿನಗರ ಪೊಲೀಸರು ಪುಣೆಯ ಪಿಂಪ್ರಿ-ಚಿಂಚವಾಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಶಿರಗಾಂವ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ದೇವೇಂದ್ರ ಚೌಹಾಣ್ ನೇತೃತ್ವದ ಪೊಲೀಸ್ ತಂಡ ಫ್ಲ್ಯಾಟ್‌ಗೆ ತೆರಳಿದೆ. ಒಳಗಿನಿಂದ ಬಾಗಿಲು ಲಾಕ್ ಆಗಿದ್ದ ಹಿನ್ನೆಲೆಯಲ್ಲಿ ಬಾಗಿಲು ಒಡೆದು ಒಳಗೆ ಹೋಗಿ ಪರಿಶೀಲಿಸಿದಾಗ ಯುವತಿಯ ಮೃತದೇಹ ಪತ್ತೆಯಾಗಿದೆ. ಮೃತದೇಹದ ಮೇಲೆ ಯಾವುದೇ ಬಾಹ್ಯ ಗಾಯದ ಗುರುತುಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯ ಯುವತಿಯ ಸಾವಿನ ನಿಖರ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿಯಿಂದಲೂ ಸಾವಿನ ಕಾರಣ ಸ್ಪಷ್ಟವಾಗದ ಹಿನ್ನೆಲೆಯಲ್ಲಿ, ಆಕೆಯ ದೇಹದ ಆಂತರಿಕ ಅಂಗಾಂಶಗಳ ಮಾದರಿಗಳನ್ನು (Viscera) ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಲಂಡನ್‌ನಿಂದ ಭಾರತಕ್ಕೆ ಮರಳಿದ ವಿಚಾರವನ್ನು ಮುಗ್ಧಾ ತಮ್ಮ ಕುಟುಂಬದಿಂದ ಏಕೆ ಮುಚ್ಚಿಟ್ಟಿದ್ದರು? ಪುಣೆಯಲ್ಲಿ ಯಾರಿಗೂ ತಿಳಿಯದಂತೆ ಏಕಾಂಗಿಯಾಗಿ ವಾಸಿಸುತ್ತಿದ್ದ ಉದ್ದೇಶವೇನು? ಆಕೆಯ ಸಾವಿಗೆ ಕಾರಣವೇನು? ಎಂಬ ಹಲವು ಪ್ರಶ್ನೆಗಳು ಇದೀಗ ಎದುರಾಗಿವೆ. ಈ ಎಲ್ಲ ಆಯಾಮಗಳಲ್ಲೂ ಪೊಲೀಸರು ತನಿಖೆ ಮುಂದುವರಿಸಿದ್ದು, ವಿಧಿವಿಜ್ಞಾನ ಪರೀಕ್ಷೆಯ ವರದಿ ಬಂದ ಬಳಿಕ ಸಾವಿನ ಹಿಂದಿನ ನೈಜ ಕಾರಣ ತಿಳಿದುಬರುವ ನಿರೀಕ್ಷೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:55 pm, Sat, 31 October 26