ಕೊಲೆಯಲ್ಲಿ ಅಂತ್ಯವಾಯಿತಾ ಸೊಸೆ-ಮಾವ ಅಕ್ರಮ ಸಂಬಂಧ? ಮಾಜಿ ಸಚಿವೆ ಮತ್ತು ಮಾಜಿ ಡಿಜಿಪಿ ವಿರುದ್ಧ ಪ್ರಕರಣ ದಾಖಲು
Punjab Ex-Minister's Son Murder: ಪಂಜಾಬ್ನ ಮಾಜಿ ಸಚಿವೆ ರಜಿಯಾ ಸುಲ್ತಾನ ಹಾಗೂ ಮಾಜಿ ಡಿಜಿಪಿ ಮೊಹಮ್ಮದ್ ಮುಸ್ತಾಫ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. 33 ವರ್ಷದ ವಕೀಲ ಅಖಿಲ್ ಅಖ್ತರ್ ಅವರನ್ನು ಕುಟುಂಬ ಸದಸ್ಯರೇ ಕೊಲೆ ಮಾಡಿದ್ದಾರೆ ಎಂದು ದೂರೊಂದು ದಾಖಲಾಗಿದೆ. ತನ್ನ ಹೆಂಡತಿ ಮತ್ತು ತನ್ನ ಅಪ್ಪ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಅಖ್ತರ್ ವಿಡಿಯೋ ರೆಕಾರ್ಡಿಂಗ್ವೊಂದರಲ್ಲಿ ಹೇಳಿದ್ದರೆನ್ನಲಾಗಿದೆ.

ನವದೆಹಲಿ, ಅಕ್ಟೋಬರ್ 21: ಪಂಜಾಬ್ನ ರಾಜಕೀಯ ಮತ್ತು ಪೊಲೀಸ್ ಕ್ಷೇತ್ರಗಳು ಬೆಚ್ಚಿಬೀಳಿಸುವಂತಹ ಘಟನೆಯೊಂದು ನಡೆದಿದೆ. ತಮ್ಮ ಸ್ವಂತ ಮಗನನ್ನು ಕೊಂದ ಆರೋಪದ ಮೇಲೆ ಮಾಜಿ ಸಚಿವೆ, ಮಾಜಿ ಪಂಜಾಬ್ ಕಾಂಗ್ರೆಸ್ ನಾಯಕಿ ರಜಿಯಾ ಸುಲ್ತಾನಾ (Razia Sultana) ಮತ್ತು ಪಂಜಾಬ್ನ ಮಾಜಿ ಪೊಲೀಸ್ ಮಹಾನಿರ್ದೇಶಕ ಮೊಹಮ್ಮದ್ ಮುಸ್ತಾಫ (Mohammad Mustafa) ಅವರ ವಿರುದ್ಧ ಹರ್ಯಾಣದ ಪಂಚಕುಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 33 ವರ್ಷದ ಯುವಕ ಅಖಿಲ್ ಅಖ್ತರ್ (Akhil Akhtar) ಅವರ ಕೊಲೆಯಾದ ಪ್ರಕರಣ ಸಂಬಂಧ ಈ ಬೆಳವಣಿಗೆ ಆಗಿದೆ.
ಪಂಜಾಬ್ ಕೋರ್ಟ್ನಲ್ಲಿ ವಕೀಲರಾಗಿದ್ದ ಅಖಿಲ್ ಅಖ್ತರ್ ಕಳೆದ ಗುರುವಾರ (ಅ. 16) ತನ್ನ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿರುತ್ತಾನೆ. ಕುಟುಂಬದವರು ಆತನನ್ನು ಸಮೀಪದ ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ಪ್ರಾಣಪಕ್ಷಿ ಹಾರಿಹೋಗಿರುತ್ತದೆ. ಡ್ರಗ್ ಓವರ್ಡೋಸ್ನಿಂದ ಆತ ಸಾವನ್ನಪ್ಪಿರಬಹುದು ಎಂದು ಕುಟುಂಬದವರು ಹೇಳುತ್ತಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲೂ ಅನುಮಾನ ಬರುವಂಥದ್ದೂ ಇರುವುದಿಲ್ಲ.
ಇದನ್ನೂ ಓದಿ: ಮಗನ ಸಾವಿಗೆ ಸೇಡು ತೀರಿಸಿಕೊಳ್ಳಲು ಅಣ್ಣನ ಮಗನನ್ನೇ ಕೊಂದ ಚಿಕ್ಕಪ್ಪ
ಸ್ನೇಹಿತರೊಬ್ಬರಿಂದ ದೂರು; ಕಥೆಗೆ ಟ್ವಿಸ್ಟ್…
ಅಖಿಲ್ ಕುಟುಂಬದ ಸ್ನೇಹಿತರೆನ್ನಲಾದ ಶಂಸುದ್ದೀನ್ ಚೌಧರಿ ಎನ್ನುವ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ದೂರು ಕೊಡುತ್ತಾರೆ. ಅಖಿಲ್ ಅಖ್ತರ್ ರೆಕಾರ್ಡ್ ಮಾಡಿದ ವಿಡಿಯೋ ಹಾಗೂ ಆತನ ಸೋಷಿಯಲ್ ಮೀಡಿಯಾ ಪೋಸ್ಟ್ಗಳನ್ನು ಸಾಕ್ಷ್ಯವಾಗಿ ಪೊಲೀಸರಿಗೆ ನೀಡುತ್ತಾರೆ. ಅಖಿಲ್ ಪ್ರಾಣಭಯದಲ್ಲಿ ಇದ್ದ. ಆತ ಮಾನಸಿಕ ಒತ್ತಡದಲ್ಲಿ ಇದ್ದ. ಆತನ ಸಾವು ಡ್ರಗ್ಸ್ ಓವರ್ಡೋಸ್ನಿಂದ ಅಲ್ಲ, ಆತನ ಕೊಲೆಯಾಗಿರಬಹುದು ಎಂದು ಶಂಕಿಸಿ ದೂರು ಕೊಡಲಾಗಿರುತ್ತದೆ.
ಅಪ್ಪನ ಜೊತೆ ಹೆಂಡತಿ ರಾಸಲೀಲೆ, ಅಖಿಲ್ ಕೊಲೆಗೆ ಕಾರಣ?
ಶಂಸುದ್ದೀನ್ ದಾಖಲಿಸಿರುವ ಎಫ್ಐಆರ್ ಪ್ರಕಾರ, 33 ವರ್ಷದ ಅಖಿಲ್ ಅಖ್ತರ್ ಅವರ ಕೊಲೆಗೆ ಇಡೀ ಕುಟುಂಬವೇ ಸಂಚು ರೂಪಿಸಿದೆ. ಅಖಿಲ್ ಪತ್ನಿ ಜೊತೆ ಆತನ ಅಪ್ಪ ಮಾಜಿ ಡಿಜಿಪಿ ಮೊಹಮ್ಮದ್ ಮುಸ್ತಾಫ್ ಅವರಿಗೆ ಅಫೇರ್ ನಡೆಯುತ್ತಿರುತ್ತದೆ. ಇದು ಗೊತ್ತಾದ ಬಳಿಕ ಇಡೀ ಕುಟುಂಬವೇ ಅಖಿಲ್ ಅವರನ್ನು ಕೊಲ್ಲಲು ಪಿತೂರಿ ರೂಪಿಸುತ್ತದೆ. ತನ್ನ ಮೇಲೆ ಸುಳ್ಳು ಕೇಸ್ ದಾಖಲಿಸಲಾಗುತ್ತದೆ, ತನ್ನ ಜೀವ ಅಪಾಯದಲ್ಲಿದೆ ಎಂದು ಅಖಿಲ್ ಹೇಳಿಕೊಂಡಿದ್ದಕ್ಕೆ ವಿಡಿಯೋ ದಾಖಲೆ ಕೂಡ ಇದೆ.
ಇದನ್ನೂ ಓದಿ: ಪತ್ನಿ ಮೇಲೆ ಸಂಶಯ: ಲೇಡಿ ಕಂಡಕ್ಟರ್ಗೆ ಮೂರು ಬಾರಿ ಇರಿದು ಕೊಲೆ ಮಾಡಿದ ಪೊಲೀಸಪ್ಪ
‘ನನ್ನ ತಂದೆಯ ಜೊತೆ ತನ್ನ ಹೆಂಡತಿ ಸಂಬಂಧ ಹೊಂದಿರುವುದನ್ನು ಕಂಡುಹಿಡಿದೆ. ನಾವು ಮಾನಸಿಕವಾಗಿ ಘಾಸಿಗೊಂಡಿದ್ದೇನೆ. ಏನು ಮಾಡಬೇಕೆಂದು ತಿಳಿಯುತ್ತಿಲ್ಲ’ ಎಂದು ಆಗಸ್ಟ್ನಲ್ಲಿ ರೆಕಾರ್ಡ್ ಮಾಡಿದ ವಿಡಿಯೋದಲ್ಲಿ ಅಖಿಲ್ ಅಖ್ತರ್ ಹೇಳಿರುವುದು ಕಂಡು ಬರುತ್ತದೆ.
ಅಖಿಲ್ ತಂದೆ ಮೊಹಮ್ಮದ್ ಮುಸ್ತಾಫ, ತಾಯಿ ರಜಿಯಾ ಸುಲ್ತಾನಾ ಸೇರಿದಂತೆ ನಾಲ್ವರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೃತ ಅಖಿಲ್ ಅಖ್ತರ್ನ ಮೊಬೈಲ್ ಹಾಗೂ ಸೋಷಿಯಲ್ ಮೀಡಿಯಾ ವಿಡಿಯೋಗಳನ್ನು ಪರಿಶೀಲಿಸಲಾಗುತ್ತದೆ. ಎಲ್ಲಾ ಕೋನಗಳಲ್ಲೂ ತನಿಖೆ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ಧಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




