ಎಸ್‌ಐಆರ್ ಒತ್ತಡದಿಂದ ರಿಲ್ಯಾಕ್ಸ್ ಆಗಲು ಕೇರಳದ ಚುನಾವಣಾ ಸಿಬ್ಬಂದಿಯಿಂದ ಜುಂಬಾ ಡ್ಯಾನ್ಸ್
ಕೇರಳದ ಕಣ್ಣೂರಿನ ಬಿಎಲ್‌ಒ ಅನೀಶ್ ಜಾರ್ಜ್ ಅವರು ಎಸ್‌ಐಆರ್ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ ಆತ್ಮಹತ್ಯೆಯಿಂದ ಸಾವನ್ನಪ್ಪಿದ ಮೊದಲಿಗರು. ಅದಾದ ನಂತರ ಚುನಾವಣಾ ಸಿಬ್ಬಂದಿ ಹಾಗೂ ಅಧಿಕಾರಿಗಳ ಸಾವಿನ ಸುದ್ದಿ ಒಂದರ ಹಿಂದೊಂದರಂತೆ ಕೇಳಿ ಬರುತ್ತಲೇ ಇದೆ. ಇದರ ನಡುವೆ ಕೇರಳದಲ್ಲಿ ಚುನಾವಣಾ ಸಿಬ್ಬಂದಿ ಹಾಗೂ ಬೂತ್ ಮಟ್ಟದ ಅಧಿಕಾರಿಗಳು ವಿರಾಮದ ವೇಳೆ ಜುಂಬಾ ಡ್ಯಾನ್ಸ್ ಮಾಡುತ್ತಾ ರಿಲ್ಯಾಕ್ಸ್ ಮೂಡ್ನಲ್ಲಿರುವ ವಿಡಿಯೋವನ್ನು ಚುನಾವಣಾ ಆಯೋಗ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಚರ್ಚೆಗೂ ಕಾರಣವಾಗಿದೆ.

ತಿರುವನಂತಪುರಂ, ಡಿಸೆಂಬರ್ 1: ಚುನಾವಣಾ ಆಯೋಗವು (Election Commission) ಕೇರಳದ ಚುನಾವಣಾ ಸಿಬ್ಬಂದಿ ಹಾಗೂ ಬೂತ್ ಮಟ್ಟದ ಅಧಿಕಾರಿಗಳು ಎಸ್‌ಐಆರ್ (ಮತದಾರರ ಪಟ್ಟಿಯ ಪರಿಷ್ಕರಣೆ) ಮತ್ತು ಚುನಾವಣಾ ಆಯೋಗ ಒದಗಿಸಿದ ಅಪ್ಲಿಕೇಶನ್‌ನಲ್ಲಿ ಡೇಟಾವನ್ನು ಅಪ್‌ಲೋಡ್ ಮಾಡುವ ಕೆಲಸದಿಂದ ವಿರಾಮ ಪಡೆಯಲು ಜುಂಬಾ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಇಬ್ಬರು ಬಿಎಲ್‌ಒ (ಬೂತ್ ಮಟ್ಟದ ಅಧಿಕಾರಿಗಳು) ಆತ್ಮಹತ್ಯೆ ಮಾಡಿಕೊಂಡಿರುವುದರ ನಡುವೆ ಕೇರಳದಲ್ಲಿ ಬಿಎಲ್‌ಒ ಜುಂಬಾ ಡ್ಯಾನ್ಸ್ ಮಾಡುತ್ತಿರುವುದು ಪರ-ವಿರೋಧ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ನೆಟ್ಟಿಗರು ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಟೀಕೆ-ಟಿಪ್ಪಣಿಗಳನ್ನು ಮಾಡುತ್ತಿದ್ದಾರೆ.
ಸಣ್ಣ ವಿರಾಮ, ಬಲಿಷ್ಠ ತಂಡ ಎಂದು ಈ ವಿಡಿಯೋಗೆ ಕ್ಯಾಪ್ಷನ್ ಹಾಕಿ ಪೋಸ್ಟ್ ಮಾಡಿರುವ ಚುನಾವಣಾ ಆಯೋಗ ಬಿಎಲ್‌ಒಗಳು ಸೇರಿದಂತೆ ಚುನಾವಣಾ ಅಧಿಕಾರಿಗಳು ಕೇರಳದಲ್ಲಿ ನಡೆಯುತ್ತಿರುವ ಎಸ್‌ಐಆರ್ ಅಡಿಯಲ್ಲಿ ತಮ್ಮ ಕೆಲಸದ ನಡುವೆ ವಿರಾಮ ಸಮಯವನ್ನು ಆನಂದಿಸುತ್ತಿದ್ದಾರೆ ಎಂದು ತನ್ನ ಅಧಿಕೃತ ಎಕ್ಸ್ (ಹಿಂದಿನ ಟ್ವಿಟರ್) ಹ್ಯಾಂಡಲ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ತಿಳಿಸಿದೆ. ಕೇರಳದ ಎಡಚೇರಿ ಗ್ರಾಮದಲ್ಲಿ ಬಿಎಲ್‌ಒಗಳು, ಸ್ವಯಂಸೇವಕರು ಮತ್ತು ಕಂದಾಯ ಸಿಬ್ಬಂದಿ ತಮ್ಮ ಕಾರ್ಯನಿರತ ವೇಳಾಪಟ್ಟಿಯ ನಡುವೆ ವಿರಾಮವನ್ನು ಆನಂದಿಸುತ್ತಿರುವ ವಿಡಿಯೋ ಇದಾಗಿದೆ.
ಇದನ್ನೂ ಓದಿ: ಎಸ್‌ಐಆರ್ ನಡೆಸಲು ಇಸಿಗೆ ಅಧಿಕಾರವಿದೆ, ಅಗತ್ಯವಿದ್ದರೆ ನಾವು ನ್ಯೂನತೆಗಳನ್ನು ಸರಿಪಡಿಸುತ್ತೇವೆ: ಸುಪ್ರೀಂ
ಈ ನಡುವೆ, ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ 46 ವರ್ಷದ ಬಿಎಲ್‌ಒ ಸರ್ವೇಶ್ ಸಿಂಗ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ರಾಜಸ್ಥಾನದಲ್ಲಿ ಇನ್ನೊಬ್ಬರು ವೈದ್ಯಕೀಯ ತೊಂದರೆಗಳಿಂದ ಸಾವನ್ನಪ್ಪಿದ್ದಾರೆ ಎಂದು ಕುಟುಂಬಗಳು ಹೇಳಿವೆ. ಎಸ್‌ಐಆರ್ ಪ್ರಕ್ರಿಯೆ ಪ್ರಾರಂಭವಾದಾಗಿನಿಂದ ಈ ರೀತಿಯ ಸಾವಿನ ಸಂಖ್ಯೆ ಹೆಚ್ಚಾಗಿದೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ರಾಜಸ್ಥಾನ, ಕೇರಳ ಮತ್ತು ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಲ್ಲಿ ಎಸ್ಐಆರ್ಗೆ ಒಂದು ವಾರದ ವಿಸ್ತರಣೆಯನ್ನು ಚುನಾವಣಾ ಆಯೋಗ ಭಾನುವಾರ ಘೋಷಿಸಿತ್ತು.
ಇದನ್ನೂ ಓದಿ: ನನ್ನ ನಾಲ್ಕು ಹೆಣ್ಣುಮಕ್ಕಳನ್ನು ನೋಡಿಕೊಳ್ಳಿ, ಬಿಎಲ್‌ಒ ಸಾಯುವ ಮುನ್ನ ಮಾಡಿರುವ ವಿಡಿಯೋ ವೈರಲ್
ಎಸ್‌ಐಆರ್ ಪ್ರಕ್ರಿಯೆ ಡಿಸೆಂಬರ್ 11ರೊಳಗೆ ಪೂರ್ಣಗೊಳ್ಳಲಿದೆ ಮತ್ತು ಕರಡು ಪಟ್ಟಿಯನ್ನು ಡಿಸೆಂಬರ್ 16ರಂದು ಪ್ರಕಟಿಸಲಾಗುವುದು.
Quick Break, Stronger Team ✨
Election officials including BLOs enjoying break time in between their work under the ongoing #SIR in #Kerala @Ceokerala pic.twitter.com/PpdGlBT8nW
— Election Commission of India (@ECISVEEP) November 30, 2025
ಒಟ್ಟು 9 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR)ಯಲ್ಲಿ ಮತದಾರರು ಎಣಿಕೆ ನಮೂನೆಗಳನ್ನು ಸಲ್ಲಿಸಲು ಚುನಾವಣಾ ಆಯೋಗವು ಡಿಸೆಂಬರ್ 4ಕ್ಕೆ ಇದ್ದ ಗಡುವನ್ನು ಡಿಸೆಂಬರ್ 11ರವರೆಗೆ ವಿಸ್ತರಿಸಿದೆ. ಮತದಾರರ ಪಟ್ಟಿ ಪ್ರಕಟಣೆಯ ದಿನಾಂಕವನ್ನು ಫೆಬ್ರವರಿ 7ರಿಂದ ಮುಂದಿನ ವರ್ಷ ಫೆಬ್ರವರಿ 14ಕ್ಕೆ ಮುಂದೂಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:31 pm, Mon, 1 December 25




