ಇಡಿ ವಿಚಾರಣೆಯಿಂದ ಹೊರಬರುತ್ತಿದ್ದಂತೆ ಮೋದಿ ವಿರುದ್ಧ ರಾಹುಲ್ ಟ್ವೀಟ್; ಇದು ಮಹಾ ಜುಮ್ಲಾಗಳ ಸರ್ಕಾರ ಎಂದು ತೀವ್ರ ವಾಗ್ದಾಳಿ
8 ವರ್ಷಗಳ ಹಿಂದೆ ಯುವಕರಿಗೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಎಂಬ 'ಮಹಾ ಜುಮ್ಲಾ' ನೀಡಿದ್ದ ಮೋದಿ ಜೀ ಮತ್ತೊಮ್ಮೆ ಯುವಕರಿಗೆ ಮುಂದಿನ 1.5 ವರ್ಷಗಳಲ್ಲಿ 10 ಲಕ್ಷ ಸರ್ಕಾರಿ ಉದ್ಯೋಗಗಳ ಭರವಸೆ ನೀಡಿದ್ದಾರೆ - ರಾಹುಲ್ ಗಾಂಧಿ ಟ್ವೀಟ್
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಎರಡನೆಯ ದಿನವಾದ ಇಂದು ವಿಚಾರಣೆ ಮುಗಿಸಿಕೊಂಡು ಹೊರಬಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ವಿರುದ್ಧ ಹಿಂದಿಯಲ್ಲಿ ಟ್ವೀಟ್ ಮಾಡಿ (Rahul Gandhi Tweet), ತೀವ್ರ ವಾಗ್ದಾಳಿ ನಡೆಸಿದ್ದಾರೆ. ಉದ್ಯೋಗ ನೀಡುವ ಭರವಸೆ ನೀಡಿದ್ದ ಮೋದಿ ವಿರುದ್ಧ ಮುಗಿಬಿದ್ದಿದ್ದಾರೆ. 8 ವರ್ಷಗಳ ಹಿಂದೆ ಯುವಕರಿಗೆ ಪ್ರತಿ ವರ್ಷ 2 ಕೋಟಿ ಉದ್ಯೋಗಗಳ ಭರವಸೆ ನೀಡಲಾಗಿತ್ತು. ಆದರೆ ಈಗ 10 ಲಕ್ಷ ಸರ್ಕಾರಿ ಉದ್ಯೋಗ ನೀಡುವ ಸರದಿ ಬಂದಿದೆ. ಇದು ‘ಜುಮ್ಲಾ’ಗಳ ಸರ್ಕಾರವಲ್ಲ, ‘ಮಹಾ ಜುಮ್ಲಾ’ಗಳ ಸರ್ಕಾರ. ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿಸುವುದರಲ್ಲಿ ಪರಿಣತರಲ್ಲ, ಉದ್ಯೋಗಗಳ ಕುರಿತು ‘ಸುದ್ದಿ’ ಮಾಡುವುದರಲ್ಲಿ ನಿಪುಣರು ಎಂದು ಜರಿದಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಸಾರಾಂಶ ಹೀಗಿದೆ:
8 ವರ್ಷಗಳ ಹಿಂದೆ ಯುವಕರಿಗೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಎಂಬ ‘ಮಹಾ ಜುಮ್ಲಾ’ ನೀಡಿದ್ದ ಮೋದಿ ಜೀ ಮತ್ತೊಮ್ಮೆ ಯುವಕರಿಗೆ ಮುಂದಿನ 1.5 ವರ್ಷಗಳಲ್ಲಿ 10 ಲಕ್ಷ ಸರ್ಕಾರಿ ಉದ್ಯೋಗಗಳ ಭರವಸೆ ನೀಡಿದ್ದಾರೆ.
60 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇರುವಾಗ 10 ಲಕ್ಷ ಉದ್ಯೋಗಗಳ ಬಗ್ಗೆ ಮಾತನಾಡುತ್ತಾ ಯಾರನ್ನು ಗೊಂದಲಗೊಳಿಸುತ್ತೀರಿ ಮೋದಿ ಜೀ? ಪ್ರಧಾನ ಮಂತ್ರಿಯವರು ಉದ್ಯೋಗ ಸೃಷ್ಟಿಸುವುದರಲ್ಲಿ ಪರಿಣತರಲ್ಲ, ಉದ್ಯೋಗಗಳ ಕುರಿತು ‘ಸುದ್ದಿ’ ಮಾಡುವುದರಲ್ಲಿ ನಿಪುಣರಲ್ಲ.
जैसे 8 साल पहले युवाओं को हर साल 2 करोड़ नौकरियों का झांसा दिया था, वैसे ही अब 10 लाख सरकारी नौकरियों की बारी है।
ये जुमलों की नहीं, 'महा जुमलों' की सरकार है।
प्रधानमंत्री जी नौकरियां बनाने में नहीं, नौकरियों पर 'News' बनाने में एक्सपर्ट हैं।
— Rahul Gandhi (@RahulGandhi) June 14, 2022
ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್; 10 ಲಕ್ಷ ಹುದ್ದೆಗಳ ಭರ್ತಿಗೆ ಕೇಂದ್ರ ಸರ್ಕಾರ ನಿರ್ಧಾರ
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿ ಬಾಕಿಯಿರುವ ಸುಮಾರು 10 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಧಾನ ಮಂತ್ರಿ ಕಚೇರಿಯು (Prime Minister’s Office – PMO) ಮಂಗಳವಾರ ತಿಳಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಕಾರ್ಯಾಲಯವು, ‘ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಇಲಾಖೆಗಳು ಸಚಿವಾಲಯಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಸೂಚನೆ ನೀಡಿದ್ದಾರೆ’ ಎಂದು ಹೇಳಿದೆ.
ವಿವಿಧ ಇಲಾಖೆಗಳ ಉದ್ಯೋಗಿಗಳ ಪರಿಸ್ಥಿತಿ, ಮಾನವ ಸಂಪನ್ಮೂಲದ ಸ್ಥಿತಿಗತಿ ಪರಿಶೀಲಿಸಿದ ಪ್ರಧಾನಿ, ಮುಂದಿನ ಒಂದೂವರೆ ವರ್ಷಗಳ ಅವಧಿಯಲ್ಲಿ 10 ಲಕ್ಷ ಮಂದಿಯನ್ನು ನೇಮಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ ಎಂದು ಟ್ವೀಟ್ನಲ್ಲಿ ಮಾಹಿತಿ ನೀಡಲಾಗಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದ ಪ್ರಧಾನಿ, ನೇಮಕಾತಿ ಪ್ರಕ್ರಿಯೆಗೆ ವೇಗ ಕೊಡಬೇಕು ಎಂದು ಸೂಚಿಸಿದ್ದರು. ರಾಜ್ಯಸಭೆಗೆ ಕಳೆದ ಫೆಬ್ರುವರಿ ತಿಂಗಳಲ್ಲಿ ಮಾಹಿತಿ ನೀಡಿದ್ದ ಸರ್ಕಾರವು ಮಾರ್ಚ್ 1, 2020ಕ್ಕೆ ದೇಶದಲ್ಲಿ ಪ್ರಸ್ತುತ 87 ಲಕ್ಷ ಖಾಲಿ ಹುದ್ದೆಗಳಿವೆ ಎಂದು ಹೇಳಿತ್ತು.
ನಿರುದ್ಯೋಗ ವಿಚಾರವಾಗಿ ಕೇಂದ್ರ ಸರ್ಕಾರವನ್ನು ವಿರೋಧ ಪಕ್ಷಗಳು ಸಾಕಷ್ಟು ಬಾರಿ ಟೀಕಿಸಿದ್ದವು. ಇದೀಗ ದೊಡ್ಡಮಟ್ಟದಲ್ಲಿ ಉದ್ಯೋಗ ನೇಮಕಾತಿಗೆ ಆದೇಶಿಸಿರುವ ಸರ್ಕಾರವು ಈ ಟೀಕೆಗಳಿಗೆ ಉತ್ತರ ಕೊಡಲು ಮುಂದಾಗಿದೆ. ವಿವಿಧ ಸರ್ಕಾರಿ ಇಲಾಖೆ ಮತ್ತು ಸಚಿವವಾಲಯಗಳಲ್ಲಿ ಬಾಕಿಯಿರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಇನ್ನು ಮುಂದೆ ಚುರುಕಾಗಲಿದೆ.
ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:33 pm, Tue, 14 June 22