ಚೆನ್ನೈನಲ್ಲಿ 100 ಕಾರುಗಳನ್ನು ಕದ್ದು ಐಷಾರಾಮಿ ಜೀವನ ನಡೆಸುತ್ತಿದ್ದ ಎಂಬಿಎ ಪದವೀಧರನ ಬಂಧನ!
ಕಳೆದ 20 ವರ್ಷಗಳಲ್ಲಿ 100ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಕದ್ದು, ರಾಜಸ್ಥಾನ ಮತ್ತು ನೇಪಾಳದಲ್ಲಿ ಕೋಟಿ-ಕೋಟಿಗೆ ಮಾರಾಟ ಮಾಡಿದ್ದ ಎಂಬಿಎ ಪದವೀಧರ ಕಳ್ಳನ ಕಥೆಯಿದು. ಚೆನ್ನೈನಲ್ಲಿ ಆಧುನಿಕ ಉಪಕರಣಗಳನ್ನು ಬಳಸಿ ಹಲವು ರಾಜ್ಯಗಳಲ್ಲಿ ಕಾರುಗಳನ್ನು ಕದ್ದು ಈತ ಹಣ ಸಂಪಾದಿಸಿದ್ದಾನೆ. ಚೆನ್ನೈನ ಪೊಲೀಸರು ಈತನನ್ನು ಪುದುಚೇರಿಯಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಚೆನ್ನೈ, ಜುಲೈ 21: ಕಳೆದ 20 ವರ್ಷಗಳಿಂದ ಕಳ್ಳತನ ಮಾಡುತ್ತಿದ್ದ ರಾಜಸ್ಥಾನದ (Rajasthan) ಕಳ್ಳನನ್ನು ತಮಿಳುನಾಡಿನ ಚೆನ್ನೈ (Chennai) ಪೊಲೀಸರು ಬಂಧಿಸಿದ್ದಾರೆ. ಈ 20 ವರ್ಷಗಳಲ್ಲಿ 100 ಕ್ಕೂ ಹೆಚ್ಚು ಕಾರುಗಳನ್ನು ಕದ್ದು ಮಾರಾಟ ಮಾಡುವ ಮೂಲಕ ಐಷಾರಾಮಿ ಜೀವನ ನಡೆಸುತ್ತಿದ್ದ. ಆತ ವಿವಿಧ ರಾಜ್ಯಗಳಿಂದ ಕಾರುಗಳನ್ನು ಕದಿಯುತ್ತಿದ್ದ. ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಪುದುಚೇರಿ ಮುಂತಾದ ಹಲವು ರಾಜ್ಯಗಳಿಂದ ಐಷಾರಾಮಿ ಕಾರುಗಳನ್ನು ಕದ್ದಿದ್ದ ಈ ಕಾರುಗಳನ್ನು ಕದ್ದ ನಂತರ ರಾಜಸ್ಥಾನ ಮತ್ತು ನೇಪಾಳದಲ್ಲಿ ಮಾರಾಟ ಮಾಡುತ್ತಿದ್ದ.
ಇತ್ತೀಚೆಗೆ ತಮಿಳುನಾಡಿನ ಚೆನ್ನೈನ ಅಣ್ಣಾ ನಗರದಲ್ಲಿ ನಡೆದ ಕಳ್ಳತನದಲ್ಲಿ ಈತ ಸಿಕ್ಕಿಬಿದ್ದಿದ್ದ. ಕಾರನ್ನು ಕದ್ದಿದ್ದ ವ್ಯಕ್ತಿ ಪುದುಚೇರಿಯಲ್ಲಿ ಅಡಗಿಕೊಂಡಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತು. ನಂತರ ಪೊಲೀಸರು ಅಲ್ಲಿಗೆ ಹೋಗಿ ಹುಡುಕಿದಾಗ ಅಲ್ಲಿ ಅಡಗಿಕೊಂಡಿದ್ದ ಸತೇಂದ್ರ ಶೇಖಾವತ್ ನನ್ನು ಪೊಲೀಸರು ಹಿಡಿದು ವಿಚಾರಣೆಗಾಗಿ ಚೆನ್ನೈಗೆ ಕರೆದೊಯ್ದರು. ಇದಾದ ನಂತರ, ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಿದರು. ಈಗ ಆತ ಜೈಲಿನಲ್ಲಿದ್ದಾನೆ.
ಇದನ್ನೂ ಓದಿ: ಇಂದೋರ್: ಕಳ್ಳತನ ಆರೋಪ, ಗುಂಪಿನಿಂದ ಹಲ್ಲೆ, 40 ಮೂಳೆಗಳು ಮುರಿತ, ವ್ಯಕ್ತಿ ಸಾವು
ಚೆನ್ನೈನ ಅಣ್ಣಾನಗರದ ಕಥಿರವನ್ ಕಾಲೋನಿಯ ನಿವಾಸಿ ಎಥಿರಾಜ್ ರಥಿನಂ ಕಳೆದ ತಿಂಗಳು ತಮ್ಮ ಮನೆಯ ಬಾಗಿಲಲ್ಲಿ ತಮ್ಮ ದುಬಾರಿ ಐಷಾರಾಮಿ ಕಾರನ್ನು ನಿಲ್ಲಿಸಿದ್ದರು. ಮರುದಿನ ಮುಂಜಾನೆ ಬಂದ ನಿಗೂಢ ವ್ಯಕ್ತಿಯೊಬ್ಬ ಆಧುನಿಕ ಉಪಕರಣಗಳನ್ನು ಬಳಸಿ ಆ ಕಾರನ್ನು ಸುಲಭವಾಗಿ ಕದ್ದಿದ್ದಾನೆ. ಇದರಿಂದ ಆಘಾತಕ್ಕೊಳಗಾದ ಎಥಿರಾಜ್, ಹತ್ತಿರದ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳ ಆಧಾರದ ಮೇಲೆ ತಿರುಮಂಗಲಂ ಪೊಲೀಸರಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಳ್ಳನಿಗಾಗಿ ಹುಡುಕಾಟ ನಡೆಸಿದರು. ಈ ವೇಳೆ ಆರೋಪಿ ಪುದುಚೇರಿಯಲ್ಲಿ ಅಡಗಿಕೊಂಡಿರುವುದು ಬೆಳಕಿಗೆ ಬಂದಿತು. ಇದರ ಬೆನ್ನಲ್ಲೇ ಪೊಲೀಸರು ಅಲ್ಲಿಗೆ ತೆರಳಿ ರಾಜಸ್ಥಾನದ ಸತೇಂದ್ರಸಿಂಗ್ ಶೇಖಾವತ್ (43) ಅವರನ್ನು ಬಂಧಿಸಿದರು.
ಇದನ್ನೂ ಓದಿ: ನಾಸಿಕ್: ಕಾರು, ಬೈಕ್ ನಡುವೆ ಭೀಕರ ಅಪಘಾತ, ಮಗು ಸೇರಿ 7 ಮಂದಿ ಸಾವು, ಇಬ್ಬರಿಗೆ ಗಾಯ
ರಾಜಸ್ಥಾನ ಮೂಲದ ಈ ಸತೇಂದ್ರ ಸಿಂಗ್ ಶೇಖಾವತ್ ಕಳೆದ 20 ವರ್ಷಗಳಲ್ಲಿ 100ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಕದ್ದಿದ್ದಾನೆ. ತನಿಖೆಯ ಸಮಯದಲ್ಲಿ ಸತೇಂದ್ರ ಸಿಂಗ್ ಎಂಬಿಎ ಪದವೀಧರನಾಗಿದ್ದು, ಅವರ ತಂದೆ ನಿವೃತ್ತ ಸೇನಾ ಅಧಿಕಾರಿ ಎಂದು ತಿಳಿದುಬಂದಿದೆ. ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ಪುದುಚೇರಿ ಮುಂತಾದ ರಾಜ್ಯಗಳಲ್ಲಿ ಆಧುನಿಕ ಉಪಕರಣಗಳನ್ನು ಬಳಸಿ ಕಾರುಗಳನ್ನು ಕದ್ದು ರಾಜಸ್ಥಾನ ಮತ್ತು ನೇಪಾಳದಲ್ಲಿ ರಸ್ತೆಯಲ್ಲಿ ಈತ ಮಾರಾಟ ಮಾಡಿದ್ದಾನೆ. ಈ ಕಳ್ಳತನದಿಂದ ಸಾಕಷ್ಟು ಹಣ ಸಂಪಾದಿಸಿರುವ ಈತ ಐಷಾರಾಮಿ ಜೀವನ ನಡೆಸುತ್ತಿದ್ದಾನೆ. ಈತನ ಬಂಧನದ ನಂತರ, 10ಕ್ಕೂ ಹೆಚ್ಚು ಕಾರುಗಳ ಮಾಲೀಕರು ತಮ್ಮ ಕದ್ದ ಕಾರನ್ನು ಹುಡುಕಲು ತಿರುಮಂಗಲಂ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದರು. ಇದರಿಂದ ಪೊಲೀಸ್ ಠಾಣೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:17 pm, Mon, 21 July 25




