
ನವದೆಹಲಿ, ಅಕ್ಟೋಬರ್ 16: ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವಿರುದ್ಧ ವಿರೋಧ ಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಗಳ ವಿರುದ್ಧ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಾಂಗ್ಲಾದೇಶದಲ್ಲಿ 2024ರಲ್ಲಿ ನಡೆದ ಹಿಂಸಾತ್ಮಕ ವಿದ್ಯಾರ್ಥಿ ದಂಗೆಯ ಮಾದರಿಯಲ್ಲೇ ಭಾರತದಲ್ಲೂ ಹಿಂಸಾಚಾರ ಮತ್ತು ಅರಾಜಕತೆ ಸೃಷ್ಟಿಸಿ ಕೇಂದ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಇಂಡಿ ಒಕ್ಕೂಟ ಯತ್ನಿಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಲಕ್ನೋದಲ್ಲಿ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಯುವ ಸಮುದಾಯವನ್ನು ಪ್ರಚೋದಿಸಿ ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲು ವಿಪಕ್ಷಗಳು ಹವಣಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚೆಗೆ ಐಸಾ (AISA) ಅಧ್ಯಕ್ಷೆ ನೇಹಾ ಬೋರಾ ಅವರು “ಭಾರತದ ಜೆನ್-ಝಿ ಚಳವಳಿಗೆ ಬಾಂಗ್ಲಾದೇಶದ ವಿದ್ಯಾರ್ಥಿ ದಂಗೆಯೇ ಸ್ಫೂರ್ತಿ” ಎಂದು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿದ ರಾಜನಾಥ್, “ವಿಪಕ್ಷಗಳ ಉದ್ದೇಶ ಸ್ಪಷ್ಟವಾಗಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ಕೆಡವಿ, ದೇಶಕ್ಕೆ ಬೆಂಕಿ ಹಚ್ಚುವ ಮೂಲಕ ಹಿಂಬಾಗಿಲಿನಿಂದ ಅಧಿಕಾರ ಹಿಡಿಯಲು ಅವರು ಹವಣಿಸುತ್ತಿದ್ದಾರೆ” ಎಂದರು.
ಮತ್ತಷ್ಟು ಓದಿ: ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ; ಕೇಂದ್ರ ಗೃಹ ಸಚಿವಾಲಯ, ದೆಹಲಿ ಪೊಲೀಸ್ ಆಯುಕ್ತರ ವಿರುದ್ಧ ಭಾನುವಾರವೂ ವಿಶೇಷ ವಿಚಾರಣೆ
“ಕೈಯಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದುಕೊಂಡು ಓಡಾಡಿದ ತಕ್ಷಣ ಸಾಂವಿಧಾನಿಕ ಮೌಲ್ಯಗಳು ಉಳಿಯುವುದಿಲ್ಲ. ಪ್ರಜಾಪ್ರಭುತ್ವವೆಂದರೆ ಸಾರ್ವಜನಿಕ ಶಾಂತಿ ಕದಡಲು, ಚುನಾವಣಾ ಆಯೋಗ ಅಥವಾ ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ಹಾಳುಮಾಡಲು ಕೊಟ್ಟಿರುವ ಪರವಾನಗಿ ಅಲ್ಲ ಎಂಬುದನ್ನು ರಾಹುಲ್ ಗಾಂಧಿ ಅರ್ಥಮಾಡಿಕೊಳ್ಳಬೇಕು” ಎಂದು ಗುಡುಗಿದರು.
ಸುಪ್ರೀಂ ಕೋರ್ಟ್ ಆವರಣಕ್ಕೆ ಮೆರವಣಿಗೆ ಕರೆದೊಯ್ದಿದ್ದಕ್ಕಾಗಿ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ವಿಪಕ್ಷಗಳಿಗೆ ‘ನ್ಯಾಯಾಂಗವನ್ನು ಯಾರೂ ಬಗ್ಗಿಸಲು ಸಾಧ್ಯವಿಲ್ಲ’ ಎಂದು ಎಚ್ಚರಿಸಿದ್ದನ್ನು ಸ್ಮರಿಸಿದ ರಾಜನಾಥ್, “ನ್ಯಾಯಾಲಯದ ಮಾತುಗಳು ವಿಪಕ್ಷಗಳ ಈ ದುರ್ಬಲ ಮತ್ತು ಬೇಜವಾಬ್ದಾರಿ ತಂತ್ರಗಳಿಗೆ ನೀಡಿದ ಕಪಾಳಮೋಕ್ಷ” ಎಂದು ಬಣ್ಣಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಸಾಂವಿಧಾನಿಕ ಸಂಸ್ಥೆಗಳ ಬಗ್ಗೆ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಆರೋಪಿಸಿದ ರಕ್ಷಣಾ ಸಚಿವರು, ಇತಿಹಾಸದ ಹಲವು ಕರಾಳ ಘಟನೆಗಳನ್ನು ನೆನಪಿಸಿದರು:
1975 ರ ತುರ್ತುಪರಿಸ್ಥಿತಿ: ಇಂದಿರಾ ಗಾಂಧಿಯವರು ನ್ಯಾಯಾಂಗ ಮತ್ತು ಪ್ರಜಾಪ್ರಭುತ್ವವನ್ನು ಹತ್ತಿಕ್ಕಿ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದ್ದು ಅಕ್ಷಮ್ಯ ಅಪರಾಧ.
1984 ರ ಸಿಖ್ ವಿರೋಧಿ ಗಲಭೆ ಮತ್ತು 1990 ರ ಕರಸೇವಕರ ಹತ್ಯಾಕಾಂಡ: ಅಧಿಕಾರಕ್ಕಾಗಿ ನೂರಾರು ಮುಗ್ಧರ ರಕ್ತಪಾತಕ್ಕೆ ಕಾರಣರಾದವರ ಜೊತೆ ಕಾಂಗ್ರೆಸ್ ರಾಜಕೀಯ ಮೈತ್ರಿ ಮಾಡಿಕೊಂಡಿತ್ತು.
1993 ರಲ್ಲಿ ಆಯೋಗದ ಪುನರ್ರಚನೆ: ಟಿ.ಎನ್. ಶೇಷನ್ ಅವರ ಸ್ವತಂತ್ರ ಕಾರ್ಯವೈಖರಿಯನ್ನು ಹತ್ತಿಕ್ಕಲು ಕಾಂಗ್ರೆಸ್ ಸರ್ಕಾರ ರಾತ್ರೋರಾತ್ರಿ ಇಬ್ಬರು ಹೆಚ್ಚುವರಿ ಚುನಾವಣಾ ಆಯುಕ್ತರನ್ನು ನೇಮಿಸಿ ಆಯೋಗವನ್ನು ದುರ್ಬಲಗೊಳಿಸಿತು.
ನವೀನ್ ಚಾವ್ಲಾ ವಿವಾದ: ಕಾಂಗ್ರೆಸ್ ನಾಯಕರಿಗೆ ಆಯೋಗದ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡುತ್ತಿದ್ದ ಆರೋಪದ ಮೇಲೆ ಅಂದಿನ ಸಿಇಸಿ ಎನ್. ಗೋಪಾಲಸ್ವಾಮಿ ಅವರು ನವೀನ್ ಚಾವ್ಲಾ ಅವರನ್ನು ವಜಾಗೊಳಿಸಲು ರಾಷ್ಟ್ರಪತಿಗೆ ಶಿಫಾರಸು ಮಾಡಿದ್ದರು. ಆದರೂ ನೆಹರು-ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದ ಕಾರಣಕ್ಕಾಗಿ ಕಾಂಗ್ರೆಸ್ ಅವರನ್ನು ಮುಂದಿನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ಮಾಡಿತು ಎಂದು ರಾಜನಾಥ್ ದಾಖಲೆಗಳನ್ನು ಮುಂದಿಟ್ಟರು
ನೇಹಾ ಬೋರಾ ಹೇಳಿಕೆ ತಂದಿಟ್ಟ ರಾಜಕೀಯ ಬಿರುಗಾಳಿ: ದೆಹಲಿ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಐಸಾ ನಾಯಕಿ ನೇಹಾ ಬೋರಾ ಬಾಂಗ್ಲಾದೇಶದ ಸಮಾಜವಾದಿ ಸಮ್ಮೇಳನಕ್ಕೆ ಕಳುಹಿಸಿದ ವಿಡಿಯೋ ಸಂದೇಶವು ಆಡಳಿತಾರೂಢ ಬಿಜೆಪಿಗೆ ವಿಪಕ್ಷಗಳ ವಿರುದ್ಧ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆಯ ನೆಲೆಯಲ್ಲಿ ಪ್ರತಿ-ದಾಳಿ ನಡೆಸಲು ಪ್ರಬಲ ಅಸ್ತ್ರವಾಗಿದೆ.
ಕಾನೂನು ಮತ್ತು ಬೀದಿ ಹೋರಾಟದ ಸಮರ: ಒಂದೆಡೆ ಸುಪ್ರೀಂ ಕೋರ್ಟ್ನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ (SIR) ಕುರಿತು ಅರ್ಜಿಗಳ ವಿಚಾರಣೆ ಮುಂದುವರೆದಿದ್ದರೆ, ಮತ್ತೊಂದೆಡೆ ಬಿಜೆಪಿ ಹಾಗೂ ಇಂಡಿ ಮೈತ್ರಿಕೂಟದ ನಡುವೆ ಈ ವಿವಾದ ತೀವ್ರ ಸ್ವರೂಪದ ರಾಜಕೀಯ ಮತ್ತು ಸೈದ್ಧಾಂತಿಕ ವಾಕ್ಸಮರವಾಗಿ ಮಾರ್ಪಟ್ಟಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ