ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ರಾಮ ಮಂದಿರ ದೇಣಿಗೆ ಹಗರಣ, ಸಿಬಿಐ ತನಿಖೆಗೆ ಕೋರಿ ಅರ್ಜಿ

ಅಯೋಧ್ಯೆ ರಾಮ ಮಂದಿರ ದೇಣಿಗೆ ಹಗರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಆರ್ಥಿಕ ಅಕ್ರಮಗಳು ಮತ್ತು ಕಾಣಿಕೆ ಹಣದ ದುರುಪಯೋಗದ ಬಗ್ಗೆ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಸಿಬಿಐ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಮತ್ತು ಉತ್ತರ ಪ್ರದೇಶ ಸರ್ಕಾರದ ಎಸ್‌ಐಟಿ ತನಿಖೆಯ ಲೋಪದೋಷಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಭಕ್ತರ ನಂಬಿಕೆ ಕಾಪಾಡಲು ಪಾರದರ್ಶಕ ತನಿಖೆ ಅನಿವಾರ್ಯ.

ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ರಾಮ ಮಂದಿರ ದೇಣಿಗೆ ಹಗರಣ, ಸಿಬಿಐ ತನಿಖೆಗೆ ಕೋರಿ ಅರ್ಜಿ
ಸುಪ್ರೀಂಕೋರ್ಟ್​
Image Credit source: PTI

Updated on: Jun 23, 2026 | 2:42 PM

ನವದೆಹಲಿ, ಜೂನ್ 23: ಅಯೋಧ್ಯೆ(Ayodhya)ಯ ಶ್ರೀ ರಾಮ  ಮಂದಿರದಲ್ಲಿ ನಡೆದ ಆರ್ಥಿಕ ಅಕ್ರಮಗಳು ಮತ್ತು ಕಣ್ಮರೆಯಾಗಿರುವ ಕಾಣಿಕೆ ಹಣದ ವಿವಾದ ಈಗ ಸುಪ್ರೀಂಕೋರ್ಟ್​ ಮೆಟ್ಟಿಲೇರಿದೆ. ರಾಮ ಮಂದಿರದ ದೇಣಿಗೆ ದುರುಪಯೋಗದ ಬಗ್ಗೆ ಸುಪ್ರೀಂ ಕೋರ್ಟ್ ನೇರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಮತ್ತು ಕೇಂದ್ರೀಯ ತನಿಖಾ ದಳದ (CBI) ಅಡಿಯಲ್ಲಿ ಹೊಸ ವಿಶೇಷ ತನಿಖಾ ತಂಡವನ್ನು (SIT) ರಚಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಹೊಸ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ವಕೀಲರಾದ ಅಜಯ್ ಕುಮಾರ್ ರೈ ಮತ್ತು ದಿನೇಶ್ ಕುಮಾರ್ ಯಾದವ್ ಅವರು ಈ ಜಂಟಿ ಅರ್ಜಿಯನ್ನು ಸಲ್ಲಿಸಿದ್ದಾರೆ. ದೇವಸ್ಥಾನದ ದೇಣಿಗೆ ರಿಜಿಸ್ಟರ್‌ಗಳು, ಆಡಿಟ್ ವರದಿಗಳು, ಸಿಸಿಟಿವಿ ದೃಶ್ಯಾವಳಿಗಳು ಮತ್ತು ಬ್ಯಾಂಕ್ ದಾಖಲೆಗಳು ಸೇರಿದಂತೆ ಎಲ್ಲಾ ಡಿಜಿಟಲ್ ಹಾಗೂ ಭೌತಿಕ ಸಾಕ್ಷ್ಯಗಳನ್ನು ರಾಮ ಮಂದಿರ ಟ್ರಸ್ಟ್ ಮತ್ತು ಉತ್ತರ ಪ್ರದೇಶ ಸರ್ಕಾರ ತಕ್ಷಣವೇ ಸುರಕ್ಷಿತವಾಗಿ ಸಂರಕ್ಷಿಸಿಡಬೇಕು.

ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಆಸ್ತಿ, ಹಣ ಅಥವಾ ಎಲೆಕ್ಟ್ರಾನಿಕ್ ಡೇಟಾವನ್ನು ಯಾರೂ ನಾಶಪಡಿಸದಂತೆ ಅಥವಾ ತಿರುಚದಂತೆ ಕೋರ್ಟ್ ಕಟ್ಟುನಿಟ್ಟಿನ ತಡೆಜ್ಞೆ ನೀಡಬೇಕು.

ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ದೇಶದ ಕೋಟ್ಯಂತರ ಭಕ್ತರು ತಮ್ಮ ಕಷ್ಟದ ಹಣವನ್ನು ದಾನ ಮಾಡಿದ್ದಾರೆ. ಇಂತಹ ಪವಿತ್ರ ನಿಧಿಯ ನಿರ್ವಹಣೆಯಲ್ಲಿ ಪಾರದರ್ಶಕತೆ ತೋರದಿದ್ದರೆ ಅದು ಸಾರ್ವಜನಿಕರ ನಂಬಿಕೆ ಮತ್ತು ಭಾವನೆಗಳಿಗೆ ಧಕ್ಕೆ ತರುತ್ತದೆ.

ಮತ್ತಷ್ಟು ಓದಿ:ರಾಮ ಮಂದಿರ ದೇಣಿಗೆ ಹಗರಣ: ಎಣಿಕೆ ಕಾರ್ಯದಿಂದ 40 ಸಿಬ್ಬಂದಿ ವಜಾ, ಸಿಎಂ ಯೋಗಿಗೆ ಇಂದು ಎಸ್‌ಐಟಿ ವರದಿ ಸಲ್ಲಿಕೆ

ಉತ್ತರ ಪ್ರದೇಶ ಸರ್ಕಾರದ ಎಸ್‌ಐಟಿ (SIT) ತನಿಖೆಯ ಮೇಲೆ ಯಾಕೆ ಅನುಮಾನ?
ಎಫ್‌ಐಆರ್ ಇಲ್ಲದೆ ತನಿಖೆ: ಪ್ರಸ್ತುತ ಉತ್ತರ ಪ್ರದೇಶ ಸರ್ಕಾರ ರಚಿಸಿರುವ ಎಸ್‌ಐಟಿ ತನಿಖೆಯ ಬಗ್ಗೆ ಅರ್ಜಿದಾರರು ತೀವ್ರ ಅನುಮಾನ ವ್ಯಕ್ತಪಡಿಸಿದ್ದಾರೆ. ಯುಪಿ ಸರ್ಕಾರದ ಎಸ್‌ಐಟಿ ತಂಡವು ಯಾವುದೇ ಪ್ರಥಮ ಮಾಹಿತಿ ವರದಿ (FIR) ಅಥವಾ ನಿಯಮಿತ ಕ್ರಿಮಿನಲ್ ಪ್ರಕರಣ ದಾಖಲಿಸದೆಯೇ ತನ್ನ ವಿಚಾರಣೆಯನ್ನು ಪ್ರಾರಂಭಿಸಿದೆ.

ಎಫ್‌ಐಆರ್ ಇಲ್ಲದೆ ಸಂಗ್ರಹಿಸುವ ಸಾಕ್ಷ್ಯಗಳಿಗೆ ಕೋರ್ಟ್‌ನಲ್ಲಿ ಕಾನೂನು ಮಾನ್ಯತೆ ಸಿಗುವುದಿಲ್ಲ, ಇದು ಭವಿಷ್ಯದಲ್ಲಿ ಆರೋಪಿಗಳು ಸುಲಭವಾಗಿ ಪಾರಾಗಲು ದಾರಿ ಮಾಡಿಕೊಡುತ್ತದೆ. ಅಲ್ಲದೆ, ರಾಜ್ಯ ಮಟ್ಟದ ಎಸ್‌ಐಟಿಯ ಅಧಿಕಾರ ಮತ್ತು ವ್ಯಾಪ್ತಿ ಸ್ಪಷ್ಟವಾಗಿಲ್ಲದ ಕಾರಣ ಈ ಹಗರಣದ ಸಂಕೀರ್ಣತೆಯನ್ನು ಭೇದಿಸಲು ಅದಕ್ಕೆ ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ವಿಳಂಬವಾದರೆ ಸಾಕ್ಷ್ಯ ನಾಶದ ಭೀತಿ
ದೇವಸ್ಥಾನದ ಆಡಳಿತದಲ್ಲಿ ಸಾರ್ವಜನಿಕ ವಿಶ್ವಾಸವನ್ನು ಮರಳಿ ಗಳಿಸಲು ಸುಪ್ರೀಂ ಕೋರ್ಟ್ ತಕ್ಷಣವೇ ಮಧ್ಯಪ್ರವೇಶಿಸುವುದು ಅನಿವಾರ್ಯವಾಗಿದೆ. ತನಿಖೆ ವಿಳಂಬವಾದರೆ ಹಣಕಾಸಿನ ಪ್ರಮುಖ ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇರುವುದರಿಂದ, ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆಯ ಅಗತ್ಯವಿದೆ ಎಂದು ಅರ್ಜಿದಾರರು ಕೋರಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:39 pm, Tue, 23 June 26

Follow Us