ರಾಮಚರಿತಮಾನಸ ದಲಿತರು, ಬುಡಕಟ್ಟು ಮತ್ತು ಹಿಂದುಳಿದ ವರ್ಗಗಳನ್ನು ನಿಂದನೆ ಮಾಡಿದೆ: ಎಸ್‌ಪಿ ನಾಯಕ ಸ್ವಾಮಿ ಪ್ರಸಾದ್ ಮೌರ್ಯ
ನಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ. ಆದರೆ ಧರ್ಮದ ಹೆಸರಿನಲ್ಲಿ ಒಂದು ಸಮುದಾಯ ಅಥವಾ ಜಾತಿಯನ್ನು ಅವಮಾನಿಸಿದರೆ ಅದು ಆಕ್ಷೇಪಾರ್ಹ ಎಂದಿದ್ದಾರೆ ಮೌರ್ಯ.
ಗೋಸ್ವಾಮಿ ತುಳಸೀದಾಸ್ ಬರೆದಿರುವ ರಾಮಚರಿತಮಾನಸ (Ramcharitmanas) ಮಹಾಕಾವ್ಯವು ದಲಿತರು, ಬುಡಕಟ್ಟು ಮತ್ತು ಹಿಂದುಳಿದ ವರ್ಗಗಳನ್ನು ನಿಂದನೆ ಮಾಡಿದೆ ಎಂದು ಮಾಜಿ ಸಚಿವ ಮತ್ತು ಸಮಾಜವಾದಿ ಪಕ್ಷದ (Samajwadi Party) ಎಂಎಲ್‌ಸಿ ಸ್ವಾಮಿ ಪ್ರಸಾದ್ ಮೌರ್ಯ (Swami Prasad Maurya) ಹೇಳಿರುವುದು ವಿವಾದವಾಗಿದೆ.ಆಜ್ ತಕ್ ಸುದ್ದಿವಾಹಿನಿ ಜತೆ ಮಾತನಾಡಿದ ಮೌರ್ಯ, ಇದನ್ನು ಕೋಟಿಗಟ್ಟಲೆ ಜನ ಓದುತ್ತಾರೆ ಎನ್ನುವುದು ಸುಳ್ಳು. ಇದನ್ನು ತುಳಸಿದಾಸರು ಆತ್ಮ ಪ್ರಶಂಸೆ ಮತ್ತು ತಮ್ಮ ಸಂತೋಷಕ್ಕಾಗಿ ಬರೆದಿದ್ದಾರೆ. ನಾವು ಧರ್ಮವನ್ನು ಸ್ವಾಗತಿಸುತ್ತೇವೆ. ಆದರೆ ಧರ್ಮದ ಹೆಸರಿನಲ್ಲಿ ದಲಿತರು, ಆದಿವಾಸಿಗಳು, ಹಿಂದುಳಿದವರ ಬಗ್ಗೆ ನಿಂದನೆ ಏಕೆ? ಶೂದ್ರ ಎಂದು ಕರೆಯುವ ಮೂಲಕ ಯಾಕೆ ನಿಂದಿಸುತ್ತೀರಿ. ನಿಂದನೆ ಮಾಡುವುದು ಧರ್ಮವೇ? ಎಂದು ಕೇಳಿದ್ದಾರೆ.
ಬಿಹಾರದ ಶಿಕ್ಷಣ ಸಚಿವ ಮತ್ತು ಆರ್‌ಜೆಡಿ ನಾಯಕ ಚಂದ್ರ ಶೇಖರ್ ಕೂಡಾ ಇದೇ ರೀತಿಯ ಟೀಕೆಗಳನ್ನು ಮಾಡಿದ್ದರು. ನಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ. ಆದರೆ ಧರ್ಮದ ಹೆಸರಿನಲ್ಲಿ ಒಂದು ಸಮುದಾಯ ಅಥವಾ ಜಾತಿಯನ್ನು ಅವಮಾನಿಸಿದರೆ ಅದು ಆಕ್ಷೇಪಾರ್ಹ ಎಂದಿದ್ದಾರೆ ಮೌರ್ಯ. ಕಳೆದ ವರ್ಷ ಉತ್ತರ ಪ್ರದೇಶ ಚುನಾವಣೆಗೆ ಮುನ್ನ ಬಿಜೆಪಿಯಿಂದ ಸಮಾಜವಾದಿ ಪಕ್ಷಕ್ಕೆ ಪಕ್ಷಾಂತರವಾಗಿದ್ದರು ಮೌರ್ಯ.
ಮೌರ್ಯ ಅವರ ಹೇಳಿಕೆಗೆ ಬಿಜೆಪಿ ತೀವ್ರವಾಗಿ ಪ್ರತಿಕ್ರಿಯಿಸಿದೆ. ಸ್ವಾಮಿ ಪ್ರಸಾದ್ ಮೌರ್ಯ ಅವರು ಬಿಜೆಪಿಯಲ್ಲಿದ್ದಾಗ, ನಾವು ಅವರಿಂದ ಅಂತಹ ಹೇಳಿಕೆಗಳನ್ನು ಕೇಳಿರಲಿಲ್ಲ. ಅವರು ಸಮಾಜವಾದಿ ಪಕ್ಷ ಸೇರಿದ ನಂತರ ಪ್ರಸ್ತುತ ಪಕ್ಷದ ಕಾರ್ಯಸೂಚಿಯ ಭಾಗವಾಗಿರುವ ಹಿಂದೂಗಳನ್ನು ಅಗೌರವಿಸಲು ಪ್ರಾರಂಭಿಸಿದ್ದಾರೆ. ಸಮಾಜವನ್ನು ವಿಭಜಿಸುವುದಕ್ಕಾಗಿ ಅವರು ರಾಮಚರಿತಮಾನಸವನ್ನು ಅವರು ವಿರೋಧಿಸುತ್ತಿದ್ದಾರೆ.ಇದರ ಪರಿಣಾಮಗಳನ್ನು ಎಸ್‌ಪಿ ಎದುರಿಸಬೇಕಾಗುತ್ತದೆ ಎಂದು ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ