AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramdev Controversy: ಮಹಿಳೆಯರ ಬಗ್ಗೆ ಬಾಬಾ ರಾಮದೇವ್ ವಿವಾದಾತ್ಮಕ ಹೇಳಿಕೆ; ಈ ರೀತಿ ನಾಲಿಗೆ ಹರಿಬಿಟ್ಟಿದ್ದು ಇದೇ ಮೊದಲನೇನಲ್ಲ!

ಬಾಬಾ ರಾಮದೇವ್ ವಿವಾದಾತ್ಮಕ ಕಾಮೆಂಟ್‌ಗಳನ್ನು ಮಾಡಿದ್ದು ಇದೇ ಮೊದಲ ಬಾರಿಯೇನಲ್ಲ. 2014ರಲ್ಲಿ ಯೋಗ ಗುರು ರಾಮದೇವ್ ದಲಿತರನ್ನು ಅವಮಾನಿಸಿ ತೀವ್ರ ವಿವಾದಕ್ಕೆ ಒಳಗಾಗಿದ್ದರು.

Ramdev Controversy: ಮಹಿಳೆಯರ ಬಗ್ಗೆ ಬಾಬಾ ರಾಮದೇವ್ ವಿವಾದಾತ್ಮಕ ಹೇಳಿಕೆ; ಈ ರೀತಿ ನಾಲಿಗೆ ಹರಿಬಿಟ್ಟಿದ್ದು ಇದೇ ಮೊದಲನೇನಲ್ಲ!
TV9 Web
| Updated By: ಸುಷ್ಮಾ ಚಕ್ರೆ|

Updated on: Nov 28, 2022 | 12:41 PM

Share

ಮುಂಬೈ: ಮಹಿಳೆಯರು ಸೀರೆ ಧರಿಸಿದಾಗ ಸುಂದರವಾಗಿ ಕಾಣುತ್ತಾರೆ, ಸಲ್ವಾರ್ ಹಾಕಿದರೂ ಚೆನ್ನಾಗಿ ಕಾಣುತ್ತಾರೆ. ನನ್ನ ದೃಷ್ಟಿಯಲ್ಲಿ ಮಹಿಳೆಯರು ಏನನ್ನೂ ಧರಿಸದಿದ್ದರೂ ಸುಂದರವಾಗಿಯೇ ಕಾಣುತ್ತಾರೆ ಎಂದು ಸಾರ್ವಜನಿಕ ಸಮಾರಂಭದ ವೇದಿಕೆಯಲ್ಲಿ ಹೇಳುವ ಮೂಲಕ ಯೋಗ ಗುರು ಬಾಬಾ ರಾಮದೇವ್ (Baba Ramdev) ವಿವಾದಕ್ಕೀಡಾಗಿದ್ದರು. ಅವರ ಈ ಹೇಳಿಕೆಗೆ ದೇಶಾದ್ಯಂತ ಭಾರೀ ಟೀಕೆ ವ್ಯಕ್ತವಾಗಿತ್ತು. ತಮ್ಮ ಹೇಳಿಕೆಯ ಬಗ್ಗೆ ಬಾಬಾ ರಾಮದೇವ್ ಇದುವರೆಗೂ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿಲ್ಲ, ಕ್ಷಮೆಯನ್ನೂ ಕೋರಿಲ್ಲ. ಅಂದಹಾಗೆ, ಸ್ತ್ರೀಯರ ಬಗ್ಗೆ, ಜಾತೀಯತೆ, ಧರ್ಮದ ಬಗ್ಗೆ ರಾಮದೇವ್ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲೇನಲ್ಲ. ಒಂದುವೇಳೆ ವಿವಾದವನ್ನು ಹುಟ್ಟುಹಾಕುವ ಸ್ಪರ್ಧೆಯೇನಾದರೂ ಇದ್ದರೆ ಅದರಲ್ಲಿ ಬಾಬಾ ರಾಮದೇವ್ ಅವರಿಗೆ ಗೆಲುವು ಖಂಡಿತ!

ಯೋಗ ಗುರು ಬಾಬಾ ರಾಮದೇವ್ ಶುಕ್ರವಾರ ಮಹಿಳೆಯರ ಉಡುಪುಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಟ್ರೋಲ್ ಆಗಿದ್ದರು. ಪತಂಜಲಿ ಯೋಗಪೀಠ ಮತ್ತು ಮುಂಬೈ ಮಹಿಳಾ ಪತಂಜಲಿ ಯೋಗ ಸಮಿತಿ ಥಾಣೆಯಲ್ಲಿ ಆಯೋಜಿಸಿದ್ದ ಯೋಗ ವಿಜ್ಞಾನ ಶಿಬಿರ ಮತ್ತು ಮಹಿಳಾ ಸಭೆಯಲ್ಲಿ ಪಾಲ್ಗೊಂಡಿದ್ದ ಬಾಬಾ ರಾಮ್‌ದೇವ್, ಮಹಿಳೆಯರು ಸೀರೆಯಲ್ಲಿ ಚೆನ್ನಾಗಿ ಕಾಣುತ್ತಾರೆ, ಮಹಿಳೆಯರು ಸಲ್ವಾರ್​ನಲ್ಲಿಯೂ ಚೆನ್ನಾಗಿ ಕಾಣುತ್ತಾರೆ. ನನ್ನ ದೃಷ್ಟಿಯಲ್ಲಿ ಅವರು ಏನನ್ನೂ ಧರಿಸದಿದ್ದರೂ ಚೆನ್ನಾಗಿಯೇ ಕಾಣುತ್ತಾರೆ ಎಂದು ಹೇಳಿದ್ದಾರೆ. ಈ ವೇಳೆ ಅವರ ಪಕ್ಕದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಕೂಡ ಇದ್ದರು. ಈ ಹೇಳಿಕೆ ನೀಡಿದ ನಂತರ ಬಾಬಾ ರಾಮದೇವ್ ಜೋರಾಗಿ ನಕ್ಕಿದ್ದರು. ಈ ಮಾತು ಕೇಳಿದ ಮಹಿಳೆಯರು ಒಬ್ಬರ ಮುಖವನ್ನು ಒಬ್ಬರು ನೋಡುತ್ತಾ ಸುಮ್ಮನೆ ಕುಳಿತಿದ್ದರು.

ಸಾಮಾಜಿಕ ಕಟ್ಟುಪಾಡುಗಳಿಗೆ ಕಟ್ಟುಬಿದ್ದು 10 ವರ್ಷದ ಮಕ್ಕಳು ಮೊದಲೆಲ್ಲ ಏನನ್ನೂ ತೊಡುತ್ತಿರಲಿಲ್ಲ. ಆದರೆ, ಈಗ ಬಟ್ಟೆ ಹಾಕುವುದೇ ಒಂದು ಫ್ಯಾಷನ್ ಆಗಿಬಿಟ್ಟಿದೆ. ಮಕ್ಕಳು 5 ಪದರದ ಬಟ್ಟೆಗಳನ್ನು ಹಾಕುತ್ತಾರೆ. ಮಹಿಳೆಯರಿಗೂ ಬಟ್ಟೆ ಒಂದು ಫ್ಯಾಷನ್ ಆಗಿಬಿಟ್ಟಿದೆ. ಎಷ್ಟೋ ಮಹಿಳೆಯರು ತುಂಡುಡುಗೆ ತೊಟ್ಟು ರ್ಯಾಂಪ್ ಮೇಲೆ ನಡೆಯುತ್ತಾರೆ ಎಂದು ರಾಮದೇವ್ ಹೇಳಿದ್ದರು.

ಇದನ್ನೂ ಓದಿ: Baba Ramdev: ಮಹಿಳೆಯರು ಬಟ್ಟೆ ಧರಿಸದಿದ್ದರೂ ಚೆನ್ನಾಗೇ ಕಾಣುತ್ತಾರೆ; ಮತ್ತೆ ಟ್ರೋಲ್ ಆದ ಬಾಬಾ ರಾಮದೇವ್

ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಮಹಾರಾಷ್ಟ್ರದ ಉಪಮುಖ್ಯಮಂತ್ರಿಯವರ ಪತ್ನಿಯ ಮುಂದೆ ಬಾಬಾ ರಾಮ್‌ದೇವ್ ಅವರು ಮಹಿಳೆಯರ ಬಗ್ಗೆ ಮಾಡಿದ ಟೀಕೆಗಳು ಅಸಭ್ಯ ಮತ್ತು ಖಂಡನೀಯ. ಈ ಹೇಳಿಕೆಯಿಂದ ಎಲ್ಲಾ ಮಹಿಳೆಯರಿಗೆ ನೋವಾಗಿದೆ. ಬಾಬಾ ರಾಮ್‌ದೇವ್ ಅವರು ಈ ಹೇಳಿಕೆಗಾಗಿ ದೇಶದ ಕ್ಷಮೆ ಯಾಚಿಸಬೇಕು ಎಂದು ಒತ್ತಾಯ ಕೇಳಿಬಂದಿತ್ತು.

ರಾಮದೇವ್ ವಿವಾದ ಇದೇ ಮೊದಲೇನಲ್ಲ:

ಬಾಬಾ ರಾಮದೇವ್ ವಿವಾದಾತ್ಮಕ ಕಾಮೆಂಟ್‌ಗಳನ್ನು ಮಾಡಿದ್ದು ಇದೇ ಮೊದಲ ಬಾರಿಯೇನಲ್ಲ. 2014ರಲ್ಲಿ ಯೋಗ ಗುರು ರಾಮದೇವ್ ದಲಿತರನ್ನು ಅವಮಾನಿಸಿ ತೀವ್ರ ವಿವಾದಕ್ಕೆ ಒಳಗಾಗಿದ್ದರು. ರಾಹುಲ್ ಗಾಂಧಿ ದಲಿತರ ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಾಬಾ ರಾಮದೇವ್, ರಾಹುಲ್ ಗಾಂಧಿ ಹನಿಮೂನ್ ಮತ್ತು ಪಿಕ್ನಿಕ್‌ಗಾಗಿ ದಲಿತರ ಮನೆಗೆ ಹೋಗುತ್ತಾರೆ. ದಲಿತ ಹುಡುಗಿಯನ್ನು ಮದುವೆಯಾಗಿದ್ದರೆ ಅವರ ಅದೃಷ್ಟ ಒಲಿದು ಪ್ರಧಾನಿಯಾಗಬಹುದಿತ್ತು ಎಂದು ಹೇಳುವ ಮೂಲಕ ಭಾರೀ ಟೀಕೆಗೆ ಗುರಿಯಾಗಿದ್ದರು.

ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿಯುವುದಕ್ಕೆ ಹೆಸರುವಾಸಿಯಾದ ಬಾಬಾ ರಾಮದೇವ್ ಒಮ್ಮೆ ಜೀನ್ಸ್ ಕುರಿತು ತೀವ್ರವಾಗಿ ಟೀಕಿಸಿದ್ದರು. ಭಾರತದಲ್ಲಿ ತುಂಬಾ ಬಿಸಿಯಾಗಿರುತ್ತದೆ, ಜನರು ಜೀನ್ಸ್ ಏಕೆ ಧರಿಸಬೇಕು? ಜೀನ್ಸ್​ ಧರಿಸಿದರೆ ನಿಮಗೆ ನಡೆಯಲು ಕಷ್ಟವಾಗುತ್ತದೆ. ಹೀಗಾಗಿ, ನೀವು ಮಲಗುವುದಾದರೆ ಜೀನ್ಸ್​ ಧರಿಸಿಕೊಂಡು ಮಲಗಬಹುದು ಎಂದು ಹೇಳಿದ್ದರು. ಆದರೆ, ದೊಡ್ಡ ವಿಪರ್ಯಾಸವೆಂದರೆ 2018ರಲ್ಲಿ ಬಾಬಾ ರಾಮದೇವ್ ಅವರ ಕಂಪನಿ ಪತಂಜಲಿಯ ಉಡುಪಿನ ವಿಭಾಗವು ರಿಪ್ಡ್ ಜೀನ್ಸ್ ಅನ್ನು ಬಿಡುಗಡೆ ಮಾಡಿತ್ತು. ಇದಕ್ಕೆ ಸಾಮಾಜಿಕ ಜಾಲತಾಣದ ಬಳಕೆದಾರರು ಸಂಸ್ಕೃತಿಯ ಜೀನ್ಸ್​ ಎಂದು ಲೇವಡಿ ಮಾಡಿದ್ದರು.

ಇದನ್ನೂ ಓದಿ: Patanjali: ಬಾಬಾ ರಾಮದೇವ್​​ ಗೆ ಮತ್ತೊಮ್ಮೆ ಶಾಕ್! ಪತಂಜಲಿಯ ಪಂಚ ಔಷಧಗಳು ನಿಷೇಧ, ಮೆಡಿಕಲ್ ಮಾಫಿಯಾ ಅಂದರು ಬಾಬಾ

ಈ ಜೀನ್ಸ್​ನ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ್ದ ರಾಮ್‌ದೇವ್, ಇತ್ತೀಚಿನ ದಿನಗಳಲ್ಲಿ ಜನರು ಹರಿದ ಜೀನ್ಸ್ ಧರಿಸುತ್ತಿದ್ದಾರೆ. ಆದ್ದರಿಂದ, ನಮ್ಮ ಕೆಲವು ಜೀನ್ಸ್‌ಗಳು ಕಿತ್ತುಹೋಗಿವೆ. ಆದರೆ ನಾವು ನಮ್ಮ ಭಾರತೀಯತೆ ಮತ್ತು ನಮ್ಮ ಮೌಲ್ಯಗಳನ್ನು ಕಳೆದುಕೊಳ್ಳುವಷ್ಟು ನಮ್ಮ ಬ್ರ್ಯಾಂಡ್​ನ ಜೀನ್ಸ್​ಗಳನ್ನು ಹರಿದುಹಾಕಿಲ್ಲ ಎಂದು ಹೇಳಿದ್ದರು.

2016ರಲ್ಲಿ ರಾಮದೇವ್ “ನಾವು ಈ ದೇಶದ ಕಾನೂನು ಮತ್ತು ಸಂವಿಧಾನವನ್ನು ಗೌರವಿಸುತ್ತೇವೆ. ಇಲ್ಲದಿದ್ದರೆ ನಮ್ಮ ಭಾರತ ಮಾತೆಯನ್ನು ಅಗೌರವಿಸಿದ ಲಕ್ಷಾಂತರ ಜನರ ತಲೆ ಕತ್ತರಿಸಿ ಹಾಕುತ್ತಿದ್ದೆವು. ಆ ಸಾಮರ್ಥ್ಯ ನಮಗಿದೆ” ಎಂದು ಹೇಳುವ ಮೂಲಕ ಜನರ ಆಕ್ರೋಶಕ್ಕೆ ಕಾರಣವಾಗಿದ್ದರು. ಬಿಜೆಪಿಯ ಕಟ್ಟಾ ಬೆಂಬಲಿಗರಾಗಿರುವ ರಾಮದೇವ್ ಹಿಂದುತ್ವ, ಸಂಸ್ಕೃತಿಯ ಹೆಸರಿನಲ್ಲಿ ಅನೇಕ ಬಾರಿ ಈ ರೀತಿಯ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ