ಪಾರದರ್ಶಕತೆಯತ್ತ ಮತ್ತೊಂದು ಹೆಜ್ಜೆ ಇಟ್ಟ ಕೇಂದ್ರ : ಪಡಿತರ ವ್ಯವಸ್ಥೆಗೆ ಡಿಜಿಟಲ್ ಕರೆನ್ಸಿಯ ಸ್ಪರ್ಶ

ಕೇಂದ್ರ ಸರ್ಕಾರ ಪಡಿತರ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು CBDC ಆಧಾರಿತ 'ಡಿಜಿಟಲ್ ಆಹಾರ ಕೂಪನ್' ಜಾರಿಗೊಳಿಸಿದೆ. ಪ್ರಧಾನಿ ಮೋದಿ ಮಾರ್ಗದರ್ಶನದಲ್ಲಿ, ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಈ ಹೊಸ ವ್ಯವಸ್ಥೆ ಗುಜರಾತ್‌ನಲ್ಲಿ ಆರಂಭಗೊಂಡಿದೆ. ಇದು ಡಿಜಿಟಲ್ ಕರೆನ್ಸಿ ಮೂಲಕ ನ್ಯಾಯಬೆಲೆ ಅಂಗಡಿಗಳಲ್ಲಿ ಸುಲಭ ಪಡಿತರ ವಿತರಣೆ, ನೈಜ-ಸಮಯದ ಮೇಲ್ವಿಚಾರಣೆ ಹಾಗೂ ವಹಿವಾಟುಗಳನ್ನು ಖಾತರಿಪಡಿಸಿ, ಭ್ರಷ್ಟಾಚಾರ ತಡೆಯುವ ಗುರಿ ಹೊಂದಿದೆ. ಇದು ಪಡಿತರ ವಿತರಣೆಯಲ್ಲಿ ಹೊಸ ಮೈಲಿಗಲ್ಲು.

ಪಾರದರ್ಶಕತೆಯತ್ತ ಮತ್ತೊಂದು  ಹೆಜ್ಜೆ ಇಟ್ಟ ಕೇಂದ್ರ : ಪಡಿತರ ವ್ಯವಸ್ಥೆಗೆ ಡಿಜಿಟಲ್ ಕರೆನ್ಸಿಯ ಸ್ಪರ್ಶ
ಅಮಿತ್ ಶಾ

Updated on: Feb 16, 2026 | 9:26 AM

ನವದೆಹಲಿ, ಫೆಬ್ರವರಿ 16: ದೇಶದ ಪಡಿತರ( Ration)ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಡಿಜಟಲೀಕರಣಕ್ಕೆ ಒತ್ತು ನೀಡಿರುವ ಸರ್ಕಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಡಿಜಿಟಲ್ ಕರೆನ್ಸಿಯನ್ನು ಜಾರಿಗೆ ತರಲಿದೆ. ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನ ಹಾಗೂ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಅವರ ದೂರದೃಷ್ಠಿಯಂತೆ ಈಗಾಗಲೇ ಒನ್ ನೇಷನ್ ಒನ್ ರೇಷನ್ ಕಾರ್ಡ್, ಅನುಷ್ಠಾನಕ್ಕಿಳಿದಿರುವ ಕೇಂದ್ರ ಸರ್ಕಾರ, ಇದೀಗ ಇದೇ ಮೊದಲ ಬಾರಿ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಆಧಾರಿತವಾಗಿ ಡಿಜಿಟಲ್ ಆಹಾರ ಕೂಪನ್ ವ್ಯವಸ್ಥೆ ರೂಪದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ.

ಕಳೆದ ಕೆಲ ವರ್ಷಗಳಲ್ಲಿ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ, ದೇಶದಲ್ಲಿ ಪಡಿತರ ವ್ಯವಸ್ಥೆಯ ಸಮಗ್ರ ಡಿಜಿಟಲ್ ರೂಪಾಂತರ ಕೈಗೊಂಡಿದ್ದು, ಪಾರದರ್ಶಕತೆ, ಪೋರ್ಟಬಿಲಿಟಿ ವ್ಯವಸ್ಥೆ ಪಡಿತರ ವಿತರಣೆಯನ್ನು ಅತ್ಯಂತ ಪಾರದರ್ಶಕಗೊಳಿಸಿದೆ.

ಇದೀಗ ಸಚಿವ ಪ್ರಲ್ಹಾದ್ ಜೋಶಿ ಅವರ ನೇತೃತ್ವದಲ್ಲಿ ಸಾಮಾಜಿಕ-ಸಾರ್ವತ್ರಿಕ ವಲಯದ ಯೋಜನೆಯಲ್ಲಿ ಇದೇ ಮೊದಲ ಬಾರಿ ಡಿಜಿಟಲ್ ಕರೆನ್ಸಿ ಬಳಸುವ ಮತ್ತೊಂದು ಹೊಸ ಪರಿವರ್ತನಾ ಕ್ರಮವನ್ನು ಅನುಷ್ಠಾನಗೊಳಿಸುತ್ತಿದೆ. ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಆಧಾರಿತವಾಗಿ ‘ಡಿಜಿಟಲ್ ಆಹಾರ ಕರೆನ್ಸಿ’ ವಿನೂತನ ವ್ಯವಸ್ಥೆ ಜಾರಿಗೊಳಿಸಿದೆ.

ಇದರಿಂದ ನ್ಯಾಯ ಬೆಲೆ ಅಂಗಡಿಯವರಿಗೆ ತತ್ ಕ್ಷಣವೇ ಕಮಿಷನ್ ಹಂಚಿಕೆ, ಫಲಾನುಭವಿಗಳಿಗೆ ಕ್ಷಣಾರ್ಧದಲ್ಲೇ ರೇಷನ್ ವಿತರಣೆ, ಹೀಗೆ ಪಡಿತರದ ಸಂಪೂರ್ಣ ವ್ಯವಸ್ಥೆ ಡಿಜಿಟಲ್ ಕರೆನ್ಸಿಗೆ ರೂಪಾಂತರವಾಗಿ ಪಾರದರ್ಶಕತೆಯತ್ತ ಇಟ್ಟ ದಿಟ್ಟ ಹೆಜ್ಜೆಯಾಗಿ ಗುರುತಿಸಿಕೊಳ್ಳುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪಾತ್ರವೂ ಇದರಲ್ಲಿ ಅಡಕವಾಗಿದೆ ಎಂಬುದು ಮತ್ತೊಂದು ವಿಶೇಷ.

ಗುಜರಾತ್ ನಲ್ಲಿ ಶುರು: ಕೇಂದ್ರ ಸರ್ಕಾರ, ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಆಧಾರಿತ ‘ಡಿಜಿಟಲ್ ಆಹಾರ ಕರೆನ್ಸಿ’ ವಿನೂತನ ವ್ಯವಸ್ಥೆಯನ್ನು ಪ್ರಥಮವಾಗಿ ಗುಜರಾತ್ ಅಲ್ಲಿ ಆರಂಭಿಸಿದೆ. ಅಹಮದಾಬಾದ್ ಅಲ್ಲಿ ಭಾನುವಾರ ಗೋಲ್ CBDC-ಆಧಾರಿತ ಡಿಜಿಟಲ್ ಆಹಾರ ಕೂಪನ್ ವ್ಯವಸ್ಥೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಅವರ ಸಮ್ಮುಖದಲ್ಲಿ ಚಾಲನೆ ನೀಡಿದೆ.

ಸದ್ಯಕ್ಕೆ ಎಲ್ಲೆಲ್ಲಿ ಯೋಜನೆ?: ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಗುಜರಾತ್ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಸದ್ಯಕ್ಕೆ ಮೊದಲನೇ ಹಂತದಲ್ಲಿ ಅಹಮದಾಬಾದ್, ಆನಂದ್, ದಾಹೋದ್ ಮತ್ತು ಸಬರಮತಿ ಜಿಲ್ಲೆಗಳಲ್ಲಿ ಈ ‘ಡಿಜಿಟಲ್ ಆಹಾರ ಕರೆನ್ಸಿ’ ಪ್ರಾರಂಭವಾಗಿದೆ. ಮುಂದಿನ ಹಂತದಲ್ಲಿ ಪುದುಚೇರಿ, ಚಂಡೀಗಢ, ದಾದ್ರಾ ಮತ್ತು ನಗರ ಹವೇಲಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಸಚಿವ ಪ್ರಲ್ಹಾದ್ ಜೋಶಿ ಇದೆ ವೇಳೆ ಘೋಷಿಸಿದರು.

ಮತ್ತಷ್ಟು ಓದಿ: ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡುತ್ತಿರುವುದ್ಯಾಕೆ? ಅಸಲಿ ಕಾರಣ ಬಿಚ್ಚಿಟ್ಟ ಅಧಿಕಾರಿ

ಡಿಜಿಟಲ್ ಕರೆನ್ಸಿ ಬಳಸಿ ಪಡಿತರ ವಿತರಣೆ ಇದೇ ಮೊದಲು: ಸಿಬಿಡಿಸಿ ಆಧಾರಿತ ವ್ಯವಸ್ಥೆಯಲ್ಲಿ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ ಬಳಸಿ ಪಡಿತರ ವಿತರಣೆ ದೇಶದ ಇತಿಹಾಸದಲ್ಲಿ ಇದೇ ಮೊದಲು. ಫಲಾನುಭವಿಗಳ ಡಿಜಿಟಲ್ ವ್ಯಾಲೆಟ್‌ಗಳಿಗೆ ಪ್ರೋಗ್ರಾಮೆಬಲ್ ಡಿಜಿಟಲ್ ಕರೆನ್ಸಿಯಾಗಿ ನೇರವಾಗಿ ಜಮಾ ಮಾಡಲಾಗುತ್ತದೆ. ಇದನ್ನು ಪಿಡಿಎಸ್ ಅಡಿಯಲ್ಲಿ ಆಹಾರ ಧಾನ್ಯ ಖರೀದಿಸಲು ಸಹ ಬಳಸಬಹುದು. ಇದು ನೈಜ-ಸಮಯದ ಮೇಲ್ವಿಚಾರಣೆ ಮತ್ತು ಸುರಕ್ಷಿತ ವಹಿವಾಟುಗಳನ್ನು ಸಕ್ರಿಯಗೊಳಿಸುತ್ತದೆ. ಅಲ್ಲದೆ, ಯಾವುದೇ ಅವ್ಯವಹಾರಕ್ಕೂ ಅಸ್ಪದವಾಗುವುದಿಲ್ಲ ಎಂದು ಜೋಶಿ ವಿವರಿಸಿದರು.

QR-ಕೂಪನ್ ಕೋಡ್: ಪಡಿತರ ಫಲಾನುಭವಿಗಳ ಡಿಜಿಟಲ್ ವ್ಯಾಲೆಟ್‌ಗಳು ಪ್ರೋಗ್ರಾಮೆಬಲ್ ಡಿಜಿಟಲ್ ರೂಪಾಯಿ ಹೊಂದಿರುತ್ತವೆ. ಫಲಾನುಭವಿಗಳ ಅನುಕೂಲಕ್ಕಾಗಿ ಪಿಡಿಎಸ್ ಅಡಿ ಆಹಾರ ಧಾನ್ಯ ಖರೀದಿಸಲು ನ್ಯಾಯಬೆಲೆ ಅಂಗಡಿಗಳಲ್ಲಿ ತಡೆರಹಿತ QR ಕೋಡ್, ಕೂಪನ್ ಕೋಡ್ ಆಧಾರಿತ ವಹಿವಾಟನ್ನು ಸಕ್ರಿಯಗೊಳಿಸುತ್ತದೆ ಎಂದರು.

ಡಿಜಿಟಲ್ ಆಹಾರ ಕರೆನ್ಸಿ ಪ್ರಯೋಜನ: ಇದು ವಲಸೆ ಬಂದ ಜನರಿಗೆ ಅನುವು ಮಾಡಿಕೊಡುತ್ತದೆ. ಸ್ಮಾರ್ಟ್ ಫೋನ್ ಮೂಲಕ QR CODE ಬಳಸಿ ಹಾಗೂ ನಾರ್ಮಲ್ ಫೋನ್ ಗಳಲ್ಲಿ 10 digit code ಬಳಸಿ ಸಹ ಪಡಿತರ ವಿತರಣೆ ಸಾಧ್ಯವಾಗುತ್ತದೆ.

ಆಧಾರ್-ಸಕ್ರಿಯಗೊಳಿಸಿದ ದೃಢೀಕರಣ ಮತ್ತು ನೈಜ-ಸಮಯದ ವಹಿವಾಟು, ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಪಿಒಎಸ್ ಸಾಧನಗಳ ನಿಯೋಜನೆ, ಪಡಿತರ ವಿತರಣೆಯಲ್ಲಿ ಪಾರದರ್ಶಕತೆ. ಸಾರಿಗೆ ವೆಚ್ಚ ಕಡಿಮೆತಾಗುತ್ತದೆ ಮತ್ತು ಕುಂದುಕೊರತೆ ಪರಿಹಾರ, ತ್ವರಿತ ಸ್ಪಂದನೆ, ಹೊಣೆಗಾರಿಕೆ ಮತ್ತು ನಾಗರಿಕ-ಕೇಂದ್ರಿತ ಸೇವಾ ವಿತರಣೆಯನ್ನು ಮತ್ತಷ್ಟು ಬಲಪಡಿಸುತ್ತದೆ.

ಪ್ರಲ್ಹಾದ ಜೋಶಿ ಕಾರ್ಯಕ್ಕೆ ಅಮಿತ್ ಶಾ ಶ್ಲಾಘನೆ: ಈ ನೂತನ CBDC ಆಧಾರಿತ ಡಿಜಿಟಲ್ ಆಹಾರ ಕೂಪನ್ ವ್ಯವಸ್ಥೆಗೆ ಚಾಲನೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರ ಕಾರ್ಯ ವೈಖರಿಯನ್ನು ಶ್ಲಾಘಿಸಿದರು. ದೇಶದ ಕೋಟ್ಯಂತರ ಕಡುಬಡವರಿಗೆ ತ್ವರಿತವಾಗಿ ಪಡಿತರ ತಲುಪಿಸುವ ಜತೆಗೆ ದೇಶಾದ್ಯಂತ ಪಡಿತರ ವ್ಯವಸ್ಥೆಯನ್ನು ಅತ್ಯಂತ ಪರಾದರ್ಶಕೊಳಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿರಿಸಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗುಜರಾತ್‌ ಸಿಎಂ ಭೂಪೇಂದ್ರ ಪಟೇಲ್, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವೆ ನಿಮುಬೆನ್ ಜಯಂತಿಭಾಯಿ, ಗುಜರಾತ್‌ ಡಿಸಿಎಂ ಹರ್ಷ ಸಂಘವಿ; ಗುಜರಾತ್‌ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಮಣಭಾಯಿ ಭಿಕಾಬಾಯಿ ಸೋಲಂಕಿ, ರಾಜ್ಯ ಸಚಿವ ಪೂನಮಚಂದ್ ಛಾನಾಭಾಯಿ, ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಕಾರ್ಯದರ್ಶಿ ಸಂಜೀವ್ ಚೋಪ್ರಾ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೋನಾ ಖಂಡರ್; ಆರ್‌ಬಿಐ ಕಾರ್ಯನಿರ್ವಾಹಕ ನಿರ್ದೇಶಕಿ ಪಿ.ವಾಸುದೇವನ್, ಗಾಂಧಿನಗರದ ಮೇಯರ್ ಮೀರಬೆನ್ ಪಟೇಲ್ ಇತರ ಗಣ್ಯರಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ