PM Modi Mysuru Visit: ಇಂದು ಮೈಸೂರಿಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ; ಕಾರ್ಯಕ್ರಮದ ವೇಳಾಪಟ್ಟಿ ಇಲ್ಲಿದೆ
ಪ್ರಧಾನಿ ಮೋದಿ ಮೈಸೂರು ಭೇಟಿ: ಸಾಂಸ್ಕೃತಿಕ ನಗರಿ ಮೈಸೂರಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದು, ರಾಮಕೃಷ್ಣ ಆಶ್ರಮದ ಐತಿಹಾಸಿಕ ವಿವೇಕ ಸ್ಮಾರಕ ಹಾಗೂ ಸಾಂಸ್ಕೃತಿಕ ಯುವಜನ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್ ಪ್ರಧಾನಿಯವರನ್ನು ಸ್ವಾಗತಿಸಿ ಭಾಗಿಯಾಗಲಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ನಗರದ 12 ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ.

ಮುಖ್ಯಾಂಶಗಳು
- ಮೈಸೂರಿನಲ್ಲಿ ರಾಮಕೃಷ್ಣ ಆಶ್ರಮದ ವಿವೇಕ ಸ್ಮಾರಕ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮನ.
- ಪ್ರಧಾನಿ ನರೇಂದ್ರ ಮೋದಿ ಅವರನ್ನು ಓವಲ್ ಮೈದಾನದಲ್ಲಿ ಸ್ವಾಗತಿಸಲಿರುವ ಡಿ.ಕೆ. ಶಿವಕುಮಾರ್.
- ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಮೈಸೂರಿನ 12 ಪ್ರಮುಖ ರಸ್ತೆಗಳಲ್ಲಿ ಸಂಚಾರ ಬಂದ್.
ಮೈಸೂರು, ಆಗಸ್ಟ್ 01: ಸಾಂಸ್ಕೃತಿಕ ನಗರಿ ಮೈಸೂರಿಗೆ ಇಂದು (ಆ. 1) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದು, ನಗರದಲ್ಲಿ ಸಂಭ್ರಮ ಹಾಗೂ ಬಿಗಿ ಭದ್ರತೆಯ ವಾತಾವರಣ ನಿರ್ಮಾಣವಾಗಿದೆ. 1892 ರಲ್ಲಿ ಸ್ವಾಮಿ ವಿವೇಕಾನಂದರು ಮೈಸೂರಿಗೆ ಭೇಟಿ ನೀಡಿದ್ದ ಐತಿಹಾಸಿಕ ನೆನಪಿನಲ್ಲಿ ನಿರ್ಮಿಸಲಾಗಿರುವ ‘ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವಜನ ಕೇಂದ್ರ’ (ವಿವೇಕ ಸ್ಮಾರಕ) ವನ್ನು ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ಪ್ರಧಾನಿಯವರ ಈ ಪ್ರಮುಖ ಭೇಟಿಯ ನೇತೃತ್ವಕ್ಕೆ ಮೈಸೂರು ಸಜ್ಜಾಗಿದೆ.
ಪ್ರಧಾನಿ ಮೋದಿ ಕಾರ್ಯಕ್ರಮದ ವೇಳಾಪಟ್ಟಿ
ಪ್ರಧಾನಿ ನರೇಂದ್ರ ಮೋದಿ ಅವರು ರಾಮಕೃಷ್ಣ ಆಶ್ರಮದ ವಿವೇಕ ಸ್ಮಾರಕ ಉದ್ಘಾಟನೆಗೆ ಆಗಮಿಸುತ್ತಿದ್ದು, ಅವರ ಪ್ರವಾಸದ ವೇಳಾಪಟ್ಟಿ ಹೀಗಿದೆ:
- ಮಧ್ಯಾಹ್ನ 2:55: ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಪ್ರಧಾನಿ ಆಗಮಿಸಲಿದ್ದಾರೆ.
- ಮಧ್ಯಾಹ್ನ 3:15: ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಓವಲ್ ಮೈದಾನಕ್ಕೆ ತಲುಪಲಿದ್ದಾರೆ.
- ಮಧ್ಯಾಹ್ನ 3:25: ಓವಲ್ ಮೈದಾನದಿಂದ ರಸ್ತೆ ಮಾರ್ಗವಾಗಿ ವಿವೇಕ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ.
- ಮಧ್ಯಾಹ್ನ 3:30 – ಸಂಜೆ 5:15: ರಾಮಕೃಷ್ಣ ಆಶ್ರಮದಲ್ಲಿ ನಡೆಯಲಿರುವ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವಜನ ಕೇಂದ್ರ ಹಾಗೂ ವಿವೇಕ ಸ್ಮಾರಕ ಉದ್ಘಾಟನೆಯ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
- ಸಂಜೆ 5:20: ರಾಮಕೃಷ್ಣ ಆಶ್ರಮದ ಶಾಲೆಗೆ ಭೇಟಿ ನೀಡಲಿದ್ದಾರೆ.
- ಸಂಜೆ 5:55: ಮೈಸೂರು ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ವಾಪಸಾಗಲಿದ್ದಾರೆ.
ಮೈಸೂರಿಗೆ ಸಿಎಂ ಆಗಮನ
ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಡಿ.ಕೆ. ಶಿವಕುಮಾರ್ ಅವರು ಇಂದು ಮೈಸೂರಿಗೆ ಭೇಟಿ ನೀಡುತ್ತಿದ್ದಾರೆ. ಈ ಪ್ರವಾಸದಲ್ಲಿ ಅವರು ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯುವುದರ ಜೊತೆಗೆ, ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಅಧಿಕೃತವಾಗಿ ಸ್ವಾಗತಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
ಡಿ.ಕೆ. ಶಿವಕುಮಾರ್ ಅವರ ಇಂದಿನ ಮೈಸೂರು ಪ್ರವಾಸದ ಪೂರ್ಣ ವೇಳಾಪಟ್ಟಿ
- ಬೆಳಿಗ್ಗೆ 10:45: ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮನ.
- ಬೆಳಿಗ್ಗೆ 11:30: ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ತಾಯಿ ಶ್ರೀ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆಯಲಿದ್ದಾರೆ.
- ಮಧ್ಯಾಹ್ನ 3:15: ನಗರದ ಓವಲ್ ಗ್ರೌಂಡ್ ಹೆಲಿಪ್ಯಾಡ್‌ನಲ್ಲಿ ಮೈಸೂರಿಗೆ ಆಗಮಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಿದ್ದಾರೆ.
- ಮಧ್ಯಾಹ್ನ 3:30: ರಾಮಕೃಷ್ಣ ಆಶ್ರಮದಲ್ಲಿ ನಡೆಯಲಿರುವ ಐತಿಹಾಸಿಕ ‘ವಿವೇಕ ಸ್ಮಾರಕ’ ಹಾಗೂ ‘ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವಜನ ಕೇಂದ್ರ’ದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಭಾಗಿ.
- ಸಂಜೆ 4:25: ರಾಮಕೃಷ್ಣ ವಿದ್ಯಾಶಾಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಭಾಗಿ.
- ಸಂಜೆ 6:00: ಪ್ರಧಾನಿಯವರ ಕಾರ್ಯಕ್ರಮಗಳ ಮುಕ್ತಾಯದ ನಂತರ ಮೈಸೂರಿನಿಂದ ಬೆಂಗಳೂರಿಗೆ ವಾಪಸ್ ಪ್ರಯಾಣ.
ನಗರದಲ್ಲಿ ರಸ್ತೆ ಸಂಚಾರ ಬಂದ್; ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ
ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ನಗರದ 12 ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ:
ಬಂದ್ ಆಗುವ ರಸ್ತೆಗಳು: ಕೆ.ಆರ್.ಬಿ ರಸ್ತೆ (ಡಿಸಿ ಆಫೀಸ್‌ನಿಂದ ಏಕಲವ್ಯ ಸರ್ಕಲ್), ಬೋಗಾದಿ ರಸ್ತೆ (ಮುಡಾ ಜಂಕ್ಷನ್‌ನಿಂದ ಡಾ.ಪದ್ಮ ವೃತ್ತ), ಪಡುವಾರಹಳ್ಳಿ ಜಂಕ್ಷನ್‌ನಿಂದ ಮೆಟ್ರೋಪೋಲ್ ಸರ್ಕಲ್, ಜೆ.ಎಲ್.ಬಿ ರಸ್ತೆ, ರಮಾವಿಲಾಸ ರಸ್ತೆ, ಕೃಷ್ಣವಿಲಾಸ ರಸ್ತೆ ಹಾಗೂ ದಿವಾನ್ಸ್ ರಸ್ತೆಗಳು. ಪರ್ಯಾಯ ಮಾರ್ಗಗಳು: ಹುಣಸೂರು ರಸ್ತೆ ಹಾಗೂ ವಿಜಯನಗರ ಕಡೆಯಿಂದ ಬರುವವರು ಗೋಕುಲಂ ರಸ್ತೆ, ಪಂಚವಟಿ, ಜಾವಾ ರಸ್ತೆ ಹಾಗೂ ಆಯುರ್ವೇದಿಕ್ ವೃತ್ತದ ಮೂಲಕ ನಗರ ಪ್ರವೇಶಿಸಬೇಕು. ಅಗ್ರಹಾರ, ಜೆ.ಪಿ.ನಗರ ಕಡೆಯಿಂದ ಬಸ್ ನಿಲ್ದಾಣಕ್ಕೆ ತೆರಳುವವರು ಸಿದ್ದಪ್ಪ ಸ್ಕ್ವೇರ್, ಎಂ.ಜಿ.ರಸ್ತೆ ಅಂಡರ್ ಬ್ರಿಡ್ಜ್ ಹಾಗೂ ಜಿ.ಎನ್.ರಸ್ತೆ ಮಾರ್ಗವಾಗಿ ತೆರಳಲು ಸೂಚಿಸಲಾಗಿದೆ.
ಸಾಮಾನ್ಯವಾಗಿ ಕೇಳುವ ಪ್ರಶ್ನೆ ಮತ್ತು ಉತ್ತರ (FAQ)
ಪ್ರಧಾನಿ ಮೋದಿ ಯಾವ ಸಮಯಕ್ಕೆ ಮೈಸೂರಿಗೆ ಭೇಟಿ ಕೊಡುತ್ತಿದ್ದಾರೆ? ಉತ್ತರ: ಪ್ರಧಾನಿ ಮೋದಿ ಆಗಸ್ಟ್ 1ರ ಬೆಳಗ್ಗೆ 10.45ಕ್ಕೆ ಮೈಸೂರಿಗೆ ಭೇಟಿ ಕೊಡುತ್ತಿದ್ದಾರೆ?
ಪ್ರಶ್ನೆ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ (ವಿವೇಕ ಸ್ಮಾರಕ) ಎಲ್ಲಿದೆ? ಉತ್ತರ: ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ (ವಿವೇಕ ಸ್ಮಾರಕ) ಮೈಸೂರಿನಲ್ಲಿದೆ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:39 am, Sat, 1 August 26




