ಮನೆಯ ಬಾವಿಯಲ್ಲಿ ನೀರಿನ ಬದಲು ಪೆಟ್ರೋಲ್; ಕೊನೆಗೂ ಅಸಲಿ ಸತ್ಯ ಬಯಲು

|

Updated on: Nov 15, 2024 | 8:56 PM

ಛತ್ತೀಸ್​ಗಢದ ದಾಂತೇವಾಡ ಜಿಲ್ಲೆಯ ಮನೆಯ ಬಾವಿಯೊಂದರಲ್ಲಿ ಪೆಟ್ರೋಲ್ ಹೊರಬರುತ್ತಿತ್ತು. ಈ ಘಟನೆ ರಾಜ್ಯಾದ್ಯಂತ ಆತಂಕ ಮತ್ತು ಕುತೂಹಲವೆರಡನ್ನೂ ಮೂಡಿಸಿತ್ತು. ಇದೀಗ ಬಾವಿಯಲ್ಲಿ ಪೆಟ್ರೋಲ್ ಹೊರ ಬರುತ್ತಿರುವುದಕ್ಕೆ ಶಾಕಿಂಗ್ ಕಾರಣ ಬಯಲಾಗಿದೆ. ಅಸಲಿ ಸತ್ಯ ಏನೆಂಬುದನ್ನು ಪೊಲೀಸರು ಬಿಚ್ಚಿಟ್ಟಿದ್ದಾರೆ.

ಮನೆಯ ಬಾವಿಯಲ್ಲಿ ನೀರಿನ ಬದಲು ಪೆಟ್ರೋಲ್; ಕೊನೆಗೂ ಅಸಲಿ ಸತ್ಯ ಬಯಲು
ಛತ್ತೀಸ್‌ಗಢದ ಬಾವಿಯಿಂದ ಉಕ್ಕಿದ ಪೆಟ್ರೋಲ್
Follow us on

ದಾಂತೇವಾಡ: ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ವಿಲಕ್ಷಣ ಘಟನೆಯೊಂದರಲ್ಲಿ ಮನೆಯ ಬಾವಿಯಿಂದ ನೀರಿನ ಬದಲು ಪೆಟ್ರೋಲ್ ಹರಿಯಲು ಪ್ರಾರಂಭಿಸಿತ್ತು. ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತು ಮತ್ತು ಜನರು ಪೆಟ್ರೋಲ್ ಸಂಗ್ರಹಿಸಲು ಬಕೆಟ್‌ಗಳೊಂದಿಗೆ ಬಾವಿಯ ಬಳಿಗೆ ಧಾವಿಸಿದರು.

ಆದರೆ, ಈ ವಿಷಯ ತಿಳಿದ ಪೊಲೀಸರು ಈ ಬಗ್ಗೆ ತನಿಖೆ ಮಾಡಿದಾಗ, ಅವರು ಆಶ್ಚರ್ಯಕರ ಮತ್ತು ಅನಿರೀಕ್ಷಿತ ಕಾರಣವನ್ನು ಕಂಡುಕೊಂಡರು. ಭೋಲೆ ಜೈನ್ ಅವರ ಕುಟುಂಬ ವಾಸಿಸುವ ಗೀದಮ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಒಂದು ದಿನ ಬೆಳಿಗ್ಗೆ, ಅವರು ನೀರನ್ನು ಸೇದಲು ಬಾವಿಗೆ ಬಕೆಟ್ ಅನ್ನು ಇಳಿಸಿದಾಗ ಅವರಿಗೆ ನೀರಿನಲ್ಲಿ ವಿಚಿತ್ರವಾದ ವಾಸನೆ ಬಂದಿತು. ತಮ್ಮ ಬಕೆಟ್​ನಲ್ಲಿ ಬಂದಿದ್ದು ನೀರಲ್ಲ, ಪೆಟ್ರೋಲ್ ಎಂದು ಅವರಿಗೆ ಗೊತ್ತಾಯಿತು.

ಇದನ್ನೂ ಓದಿ: ತಾಜ್ ಮಹಲ್ ನಿರ್ಮಾಣವಾಗಿದ್ದು ಹೇಗೆ?; ಎಐ ವಿಡಿಯೋ ವೈರಲ್

ತಕ್ಷಣ ಈ ಸುದ್ದಿಯು ಸುತ್ತಮುತ್ತಲೂ ಹರಡಿತು. ಉಚಿತ ಪೆಟ್ರೋಲ್ ಅನ್ನು ಸಂಗ್ರಹಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರಲಾರಂಭಿಸಿದರು. ಈ ಕಥೆ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿತ್ತು.

ಈ ವಿಷಯ ತಿಳಿದ ತಕ್ಷಣ ಪೊಲೀಸರು ಮನೆ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸೀಲ್ ಮಾಡಿ ತನಿಖೆ ನಡೆಸಿದರು. ಆರಂಭದಲ್ಲಿ, ಇದು ಹಳೆಯ ಬಸ್ ನಿಲ್ದಾಣದಲ್ಲಿರುವ ಬಫ್ನಾ ಪೆಟ್ರೋಲ್ ಪಂಪ್‌ನ ಮಾಲೀಕರು ವರದಿ ಮಾಡಿದ ಪೆಟ್ರೋಲ್ ಕಳ್ಳತನದ ಇತ್ತೀಚಿನ ಪ್ರಕರಣಕ್ಕೆ ಸಂಬಂಧಿಸಿರಬಹುದು ಎಂದು ಅವರು ಶಂಕಿಸಿದ್ದರು. ದಿನವೂ ಪೆಟ್ರೋಲ್ ಕಳ್ಳತನ ಆಗುತ್ತಿದೆ ಎಂದು ಪಂಪ್ ಮಾಲೀಕರು ದೂರು ನೀಡಿದ್ದರು. ಪೊಲೀಸರು ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು, ಆದರೆ ಏನೂ ಗೊತ್ತಾಗಲಿಲ್ಲ.

ಇದನ್ನೂ ಓದಿ: Viral: ಪಿಜ್ಜಾ ಆರ್ಡರ್‌ ತೆಗೆದುಕೊಳ್ಳಲು ನಿರಾಕರಿಸಿದ ಕಾರಣಕ್ಕೆ ತಡರಾತ್ರಿ ಕೆಫೆಯಲ್ಲಿ ಗುಂಡು ಹಾರಿಸಿ ಯುವಕನ ಪುಂಡಾಟ; ವಿಡಿಯೋ ವೈರಲ್‌

ಬಾವಿಯಲ್ಲಿ ಪೆಟ್ರೋಲ್ ಬರುತ್ತಿದ್ದುದನ್ನು ಪತ್ತೆಹಚ್ಚಲು ಹೋದ ಪೊಲೀಸರಿಗೆ ನಿಜವಾದ ಕಾರಣ ಗೊತ್ತಾಯಿತು. ಆ ಮನೆಯಿಂದ ಕೇವಲ 100 ಮೀಟರ್ ದೂರದಲ್ಲಿರುವ ಪೆಟ್ರೋಲ್ ಪಂಪ್‌ನಲ್ಲಿ ಸೋರಿಕೆಯಾಗುವ ಪೆಟ್ರೋಲ್ ಟ್ಯಾಂಕ್ ಇತ್ತು ಎಂದು ಬಯಲಾಯಿತು. ಸೋರುತ್ತಿದ್ದ ಟ್ಯಾಂಕ್‌ನಿಂದ ಪೆಟ್ರೋಲ್ ನೆಲಕ್ಕೆ ಹರಿದು ಬಾವಿಗೆ ತಲುಪಿತ್ತು. ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಪ್ರದೇಶವನ್ನು ಸುತ್ತುವರೆದು, ಅಗ್ನಿಶಾಮಕ ದಳದ ತಂಡಗಳನ್ನು ನಿಯೋಜಿಸಿದರು. ಪಂಪ್‌ನಲ್ಲಿ ಸೋರಿಕೆಯಾಗುತ್ತಿರುವ ಪೆಟ್ರೋಲ್ ಟ್ಯಾಂಕ್ ಅನ್ನು ಸರಿಪಡಿಸುವ ಕೆಲಸ ಮಾಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ