ಶಬರಿಮಲೆ ದೇವಾಲಯದಲ್ಲಿ (Sabarimala Temple) ಜನಸಂದಣಿ ನಿಯಂತ್ರಣ ಮತ್ತು ವ್ಯವಸ್ಥೆ ಬಗ್ಗೆ ಚರ್ಚಿಸುವುದಕ್ಕಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್ (Pinarayi Vijayan)ಅವರು ಸೋಮವಾರ ಮಧ್ಯಾಹ್ನ ಸಭೆ ಕರೆದಿದ್ದಾರೆ. ಏತನ್ಮಧ್ಯೆ, ಸೋಮವಾರ ಶಬರಿಮಲೆ ಅಯ್ಯಪ್ಪ ದರ್ಶನಕ್ಕಾಗಿ ದಾಖಲೆಯ ಬುಕಿಂಗ್ ನಡಿದಿದೆ. ಸೋಮವಾರ ದೇವರ ದರ್ಶನಕ್ಕಾಗಿ (darshan)ಸರಿ ಸುಮಾರು 1,07,260 ಮಂದಿ ಬುಕ್ ಮಾಡಿದ್ದು, ಜನಸಂದಣಿ ನಿಯಂತ್ರಣಕ್ಕಾಗಿ ಹೆಚ್ಚುವರಿ ವ್ಯವಸ್ಥೆ ಮಾಡಲಾಗಿದೆ. ಇದೇ ಮೊದಲ ಬಾರಿ ಇಷ್ಟೊಂದು ಬುಕ್ಕಿಂಗ್ ಆಗಿರುವುದು. ಒಂದು ಲಕ್ಷಕ್ಕಿಂತ ಹೆಚ್ಚು ಬುಕ್ಕಿಂಗ್ ಆಗಿರುವುದು ಇದು ಎರಡನೇ ಬಾರಿ. ಶಬರಿಮಲೆಗೆ ಭೇಟಿ ನೀಡುವ ಭಕ್ತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಪೊಲೀಸರು ವಿಶೇಷ ವ್ಯವಸ್ಥೆ ಮಾಡಿದ್ದಾರೆ. ಪಂಪಾದಿಂದ ಸನ್ನಿಧಾನದ ವರೆಗೆ ವಿವಿಧ ತಂಡಗಳಾಗಿ ಭಕ್ತರನ್ನು ಕಳುಹಿಸುತ್ತಿದ್ದು, ಈ ತಂಡಗಳಿಗೆ ಪೊಲೀಸರು ಭದ್ರತೆ ನೀಡುತ್ತಿದ್ದಾರೆ.
ದರ್ಶನ ಸಮಯ ವಿಸ್ತರಿಸುವಂತೆ ಸಲಹೆ ನೀಡಿದ ಹೈಕೋರ್ಟ್
ಏತನ್ಮಧ್ಯೆ, ಡಿಸೆಂಬರ್ 11ರಂದು (ಭಾನುವಾರ) ವಿಶೇಷ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್, ಬ್ಯುಸಿ ದಿನಗಳಲ್ಲಿ ದರ್ಶನದ ಸಮಯವನ್ನು ವಿಸ್ತರಿಸುವಂತೆ ಸಲಹೆ ನೀಡಿದೆ. ಜನಸಂದಣಿಯನ್ನು ನಿಯಂತ್ರಿಸಲು ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಾಲಯ ಪೊಲೀಸ್ ಮತ್ತು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಟ್ರಾವೆಂಕೂರ್ ದೇವಸ್ವಂ ಬೋರ್ಡ್ (TDB) ಶಬರಿಮಲೆಯ ತಂತ್ರಿಗಳ ಸಲಹೆ ಕೇಳಿ ಗರ್ಭಗುಡಿಯ ಬಾಗಿಲನ್ನು ದರ್ಶನಕ್ಕಾಗಿ 30 ನಿಮಿಷ ಅಥವಾ 1 ಗಂಟೆ ಹೆಚ್ಚು ಕಾಲ ತೆರೆಯಲು ಹೇಳಬೇಕು ಎಂದು ಹೈಕೋರ್ಟ್ ಹೇಳಿದೆ.
ದೇವಾಲಯಕ್ಕೆ ಭೇಟಿ ನೀಡಿವ ಭಕ್ತರ ಸಂಖ್ಯೆಯಲ್ಲಿನ ಹೆಚ್ಚಳವು ಜನಸಂದಣಿ ನಿರ್ವಹಣೆ ಮತ್ತು ಸಂಚಾರ ನಿಯಂತ್ರಣ ಸಮಸ್ಯೆಗಳಿಗೆ ಕಾರಣವಾಗಿದೆ. ಶನಿವಾರದಂದು ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ಸುಮಾರು ಒಂದು ಲಕ್ಷ ಬುಕ್ಕಿಂಗ್‌ಗಳನ್ನು ಮಾಡಲಾಗಿದೆ. ಸರಿಸುಮಾರು 90,000 ಭಕ್ತರು ಬಂದಿದ್ದಾರೆ ಎಂದು ಹೈಕೋರ್ಟ್ ಗಮನಿಸಿದೆ. ಜನಸಂದಣಿ ನಿರ್ವಹಣೆಯಲ್ಲಿನ ಎಡವಟ್ಟಿನಿಂದಾಗಿ ಕರ್ತವ್ಯದಲ್ಲಿದ್ದ ಕೆಲವು ಪೊಲೀಸರಿಗೂ ಗಾಯಗಳಾಗಿವೆ ಎಂದು ಹೈಕೋರ್ಟ್ ಹೇಳಿದೆ.
ಈ ಘಟನೆಗಳು ಮತ್ತು ಭಾರೀ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು, ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್ ಮತ್ತು ಪಿಜಿ ಅಜಿತ್‌ಕುಮಾರ್ ಅವರ ಪೀಠವು ನಿರೀಕ್ಷಿತ ಜನಸಂದಣಿ ದಿನಕ್ಕೆ 75,000 ಕ್ಕಿಂತ ಹೆಚ್ಚಿರುವಾಗ ಜನಸಂದಣಿ ನಿರ್ವಹಣಾ ಯೋಜನೆಯನ್ನು ರೂಪಿಸುವಂತೆ ಜಿಲ್ಲಾಧಿಕಾರಿ ಮತ್ತು ಪತ್ತನಂತಿಟ್ಟ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿತು.
ವಾಹನ ಸಂಚಾರ ನಿರ್ವಹಣೆ
ವಾಹನ ದಟ್ಟಣೆ ನಿರ್ವಹಣೆಗೆ ಸಂಬಂಧಿಸಿದಂತೆ, ದೀರ್ಘಕಾಲದವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಿದಾಗ ಮೋಟಾರ್‌ಸೈಕಲ್‌ಗಳಲ್ಲಿ ಗಸ್ತು ವ್ಯವಸ್ಥೆ ಮಾಡುವಂತೆ ನ್ಯಾಯಾಲಯವು ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿದೆ. ಒಂದು ವೇಳೆ ಗಣನೀಯವಾಗಿ ದೀರ್ಘಾವಧಿಯವರೆಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಿದರೆ, ಅಂತಹ ವಾಹನಗಳಲ್ಲಿ ಯಾತ್ರಾರ್ಥಿಗಳಿಗೆ ಚುಕ್ಕುವೆಳ್ಳಂ (ಒಣಶುಂಠಿ ನೀರು) ಮತ್ತು ಬಿಸ್ಕತ್ತುಗಳನ್ನು ಒದಗಿಸಲು ತಿರುವಾಂಕೂರು ದೇವಸ್ವಂ ಮಂಡಳಿಯು ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತದೆ ಎಂದು ಅದು ಹೇಳಿದೆ.
ಪತ್ತನಂತಿಟ್ಟದ ನಿಲಕ್ಕಲ್ ನಲ್ಲಿ ಪಾರ್ಕಿಂಗ್ ಜಾಗ ಭರ್ತಿಯಾದರೆ ಪೊಲೀಸರು ಪ್ರತಿಯೊಂದು ವಾಹನಗಳನ್ನು ನಿಯಂತ್ರಿಸಬೇಕು ಎಂದು ಹೈಕೋರ್ಟ್ ಹೇಳಿದೆ. ನಿಲಕ್ಕಲ್ ಪಾರ್ಕಿಂಗ್ ಮೈದಾನದಲ್ಲಿ ವಾಹನಗಳ ನಿಲುಗಡೆಗೆ ವಿಧಿಸಲಾಗಿರುವ ನಿರ್ಬಂಧಗಳನ್ನು ಎಡತಾವಲಮ್‌ನಲ್ಲಿರುವ ಸಾರ್ವಜನಿಕ ವಿಳಾಸ ವ್ಯವಸ್ಥೆ ಮೂಲಕ ಯಾತ್ರಾರ್ಥಿಗಳಿಗೆ ತಿಳಿಸಲಾಗುವುದು ಎಂದು ಪೀಠ ಹೇಳಿದೆ. ಎಡತಾವಲಂಗಳು ಯಾತ್ರಾರ್ಥಿಗಳಿಗೆ ನಿಲುಗಡೆ ಕೇಂದ್ರಗಳಾಗಿವೆ. ವಾಹನಗಳ ಸರಿಯಾದ ಪಾರ್ಕಿಂಗ್ ಅನ್ನು ಖಚಿತಪಡಿಸಿಕೊಳ್ಳಲು ಪಾರ್ಕಿಂಗ್ ಗುತ್ತಿಗೆದಾರರು ಸಾಕಷ್ಟು ಸಿಬ್ಬಂದಿಯನ್ನು ತೊಡಗಿಸಿಕೊಂಡಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಟಿಬಿಡಿಗೆ ನಿರ್ದೇಶನ ನೀಡಲಾಗಿದೆ.
41 ದಿನಗಳ ಮಂಡಲ ಪೂಜೆ ಉತ್ಸವವು ಡಿಸೆಂಬರ್ 27 ರಂದು ಮುಕ್ತಾಯಗೊಳ್ಳಲಿದೆ. ನಂತರ, ಮಕರವಿಳಕ್ಕು ಯಾತ್ರೆಗಾಗಿ ಡಿಸೆಂಬರ್ 30 ರಂದು ಮತ್ತೆ ದೇವಾಲಯವನ್ನು ತೆರೆಯಲಾಗುತ್ತದೆ. ಇದು ಜನವರಿ 14, 2023 ರಂದು ಕೊನೆಗೊಳ್ಳುತ್ತದೆ. ದೇಗುಲವನ್ನು ಜನವರಿ 20, 2023 ರಂದು ಮುಚ್ಚಲಾಗುತ್ತದೆ. ಇಲ್ಲಿಗೆ ತೀರ್ಥಯಾತ್ರೆಯ ಋತುವನ್ನು ಮುಕ್ತಾಯವಾಗಲಿದೆ.