ನವೀಕರಿಸಬಹುದಾದ ಇಂಧನ: 300 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಅಗತ್ಯ; ಪ್ರಲ್ಹಾದ್​ ಜೋಶಿ

ಯುಎಇಯ ಅಬುಧಾಬಿಯಲ್ಲಿ ನಡೆದ 16ನೇ ಐಆರ್​ಇಎನ್​ಎ ಅಸೆಂಬ್ಲಿಯ ಪೂರ್ಣ ಅಧಿವೇಶನದಲ್ಲಿ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಭಾಗವಹಿಸಿದ್ದರು. ಭಾರತ ನವೀಕರಿಸಬಹುದಾದ ಇಂಧನದಲ್ಲಿ ಜಾಗತಿಕ ನಾಯಕನಾಗಿ ಹೊರಹೊಮ್ಮಿದ್ದು, 266 GW ಸಾಮರ್ಥ್ಯವನ್ನು ಮೀರಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ನವೀಕರಿಸಬಹುದಾದ ಇಂಧನ: 300 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಅಗತ್ಯ; ಪ್ರಲ್ಹಾದ್​ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ
Edited By:

Updated on: Jan 11, 2026 | 10:24 PM

ಬೆಂಗಳೂರು, ಜನವರಿ 11: ಭಾರತ (India) ನವೀಕರಿಸಬಹುದಾದ ಇಂಧನ ಸಾಮರ್ಥ್ಯ 266 ಗಿಗಾವ್ಯಾಟ್ ದಾಟಿದ್ದಲ್ಲದೆ, ದೇಶವನ್ನು ಜಾಗತಿಕ ನಾಯಕ ಸ್ಥಾನದಲ್ಲಿರಿಸಿದೆ. ಜಾಗತಿಕ ಇಂಧನ ಪರಿವರ್ತನೆಗೆ ಅಭೂತಪೂರ್ವ ಹೂಡಿಕೆ ಮತ್ತು ಸಹಕಾರದ ಅಗತ್ಯವಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದರು.

ಯುಎಇಯ ಅಬುಧಾಬಿಯಲ್ಲಿ ನಡೆದ 16ನೇ ಐಆರ್​ಇಎನ್​ಎ ಅಸೆಂಬ್ಲಿಯ ಪೂರ್ಣ ಅಧಿವೇಶನ ಉದ್ದೇಶಿಸಿ ಮಾತನಾಡಿದ ಸಚಿವರು, ಭಾರತಕ್ಕೆ 2030ರ ವೇಳೆಗೆ ಸುಮಾರು 300 ಬಿಲಿಯನ್ ಯುಎಸ್ ಡಾಲರ್ ಹೂಡಿಕೆಯ ಅಗತ್ಯವಿದೆ. ಇದು ನವೀಕರಿಸಬಹುದಾದ ಇಂಧನ ಉತ್ಪಾದನೆ, ಸಂಗ್ರಹಣೆ, ಹಸಿರು ಹೈಡ್ರೋಜನ್, ಗ್ರಿಡ್‌ಗಳು ಮತ್ತು ಉತ್ಪಾದನಾ ವಲಯಗಳಲ್ಲಿ ಬೃಹತ್ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಹೇಳಿದ್ದಾರೆ.

ಸೂರ್ಯಘರ್‌, ಪಿಎಂ-ಕುಸುಮ್ ಯೋಜನೆ ಲಕ್ಷಾಂತರ ಜನಕ್ಕೆ ಪ್ರಯೋಜನ

ದೇಶದಲ್ಲಿ ಪಿಎಂ ಸೂರ್ಯಘರ್ ಮುಫ್ತ್ ಬಿಜ್ಲಿ ಯೋಜನೆಯಡಿ ಎರಡು ವರ್ಷದೊಳಗೆ ಸುಮಾರು 25 ಲಕ್ಷ ಮನೆಗಳು ರೂಫ್‌ಟಾಪ್ ಸೋಲಾರ್ ಅಳವಡಿಸಿಕೊಂಡಿವೆ ಮತ್ತು ಮಾರ್ಚ್ 2027ರ ವೇಳೆಗೆ 1 ಕೋಟಿ ಮನೆಗಳನ್ನು ತಲುಪುವ ಗುರಿ ಹೊಂದಲಾಗಿದೆ. ಅದರಂತೆ ಪಿಎಂ-ಕುಸುಮ್ ಯೋಜನೆಯಡಿ ಡೀಸೆಲ್ ಪಂಪ್‌ಗಳ ಬದಲಾವಣೆ ಮತ್ತು ಕೃಷಿ ಫೀಡರ್‌ಗಳ ಸೌರೀಕರಣ ಮೂಲಕ ಸುಮಾರು 21.7 ಲಕ್ಷ ರೈತರು ಪ್ರಯೋಜನ ಪಡೆದಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಸೋಮನಾಥಪುರದಲ್ಲಿ ಪ್ರಧಾನಿ ಮೋದಿ ಶೌರ್ಯಯಾತ್ರೆ; 13ನೇ ಶತಮಾನದ ಹುತಾತ್ಮಕರಿಗೆ ಗೌರವ; ಡೋಲು ಡಮರುಗ ಸದ್ದು

ಶುದ್ಧ ಇಂಧನ ಹೂಡಿಕೆಗೆ ಭಾರತ ಜಗತ್ತಿನ ಅತ್ಯಂತ ಆಕರ್ಷಕ ತಾಣಗಳಲ್ಲಿ ಒಂದಾಗಿ ಮುಂದುವರಿದಿದೆ. ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳು ಅಭಿವೃದ್ಧಿ ಆಕಾಂಕ್ಷೆಯೊಂದಿಗೆ ರಾಜಿ ಮಾಡಿಕೊಳ್ಳದೆ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ವಿಸ್ತರಿಸಲು ಬೆಂಬಲ ನೀಡುವ ನಿಟ್ಟಿನಲ್ಲಿ ತಂತ್ರಜ್ಞಾನ ವಿನಿಮಯ, ಹಣಕಾಸು ಸೌಲಭ್ಯ, ಸಾಮರ್ಥ್ಯ ವೃದ್ಧಿ ಮತ್ತು ಮಾನದಂಡಗಳ ಸಮನ್ವಯದ ಪ್ರಾಮುಖ್ಯತೆಯಿದೆ ಎಂದು ಅಭಿಪ್ರಾಯ ಪಟ್ಟರು.

ಪ್ರಲ್ಹಾದ್ ಜೋಶಿ ಟ್ವೀಟ್​​


ಭಾರತ ಇಂಧನ ಪರಿವರ್ತನೆಯಲ್ಲಿ ‘ವಸುಧೈವ ಕುಟುಂಬಕಂ’ ಎನ್ನುವಂತೆ ‘ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯ’ ತತ್ವದಿಂದ ಮಾರ್ಗದರ್ಶಿಸಲ್ಪಟ್ಟಿದೆ ಮತ್ತು ದೀರ್ಘಕಾಲಿಕ ದೃಷ್ಟಿಕೋನ ಹೊಂದಿದೆ. 2030ರ ವೇಳೆಗೆ 500 ಗಿಗಾವ್ಯಾಟ್ ಪಳೆಯುಳಿಕೆಯೇತರ ಇಂಧನ ಆಧಾರಿತ ವಿದ್ಯುತ್ ಸಾಮರ್ಥ್ಯ ಸ್ಥಾಪಿಸುವ ಮತ್ತು 2070ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆ ಸಾಧಿಸುವತ್ತ ಹೆಜ್ಜೆ ಹಾಕಿದೆ ಎಂದರು.

ಪ್ಯಾರಿಸ್ ಒಪ್ಪಂದದಂತೆ ‘ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆ’ ಗುರಿಗಿಂತ 5 ವರ್ಷಗಳ ಮೊದಲೇ ಅಂದರೆ 2025ರಲ್ಲೇ ಭಾರತ ಶೇ.50ರಷ್ಟನ್ನು ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ಸಾಧಿಸಿದೆ. ವಿಶ್ವದ ಪ್ರಮುಖ ಇಂಧನ ಮಾರುಕಟ್ಟೆಗಳಲ್ಲಿ ಒಂದಾಗಿರುವ ಭಾರತ, ಗ್ರಿಡ್ ಆಧುನೀಕರಣ, ಹಸಿರು ಇಂಧನ ಕಾರಿಡಾರ್‌ಗಳ ಅಭಿವೃದ್ಧಿ ಹಾಗೂ ದಿನದ 24 ಗಂಟೆಯೂ ಲಭ್ಯವಿರುವ ನವೀಕರಿಸಬಹುದಾದ ಇಂಧನ ಯೋಜನೆಗಳಂತಹ ಹೊಸ ಬಿಡ್ಡಿಂಗ್ ವಿಧಾನಗಳ ಮೂಲಕ ವಿಶ್ವಾಸಾರ್ಹ ಮತ್ತು ಸುಸ್ಥಿರ ವಿದ್ಯುತ್ ವ್ಯವಸ್ಥೆಗಳಿಗೆ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.

ಇಂಧನ ಪರಿವರ್ತನೆಗೊಳಿಸಲು ಭಾರತ ಸಿದ್ಧ

2025ರ ಒಂದೇ ವರ್ಷದಲ್ಲಿ ಭಾರತ ಸುಮಾರು 50 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸೇರ್ಪಡೆ ಮಾಡಿದೆ. ಇಂಧನ ಪರಿವರ್ತನೆ ಸಮಾನತೆ ಮತ್ತು ಒಳಗೊಳ್ಳುವಿಕೆಯಿಂದ ಪ್ರೇರಿತವಾದ ಜನ ಚಳವಳಿಯಾಗಬೇಕು. ಜಾಗತಿಕವಾಗಿ ನವೀಕರಿಸಬಹುದಾದ ಇಂಧನ ಪರಿವರ್ತನೆ ವೇಗಗೊಳಿಸಲು ಭಾರತ ತನ್ನ ಅನುಭವ, ಸಾಂಸ್ಥಿಕ ಬಲ ಮತ್ತು ತಾಂತ್ರಿಕ ಪರಿಣತಿಯನ್ನು ಹಂಚಿಕೊಳ್ಳಲು ಸಿದ್ಧವಿದೆ. ಎಲ್ಲಾ ಸದಸ್ಯ ರಾಷ್ಟ್ರಗಳೊಂದಿಗೆ ವಿಶೇಷವಾಗಿ ಅಲ್ಪ ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಜ್ಯಗಳ ಜತೆಗೆ ನಿಕಟವಾಗಿ ಕೆಲಸ ಮಾಡಲು ಸಿದ್ಧವಾಗಿದೆ ಎಂದರು.

ಪಾಲುದಾರಿಕೆ ಬಗ್ಗೆ ಪರಾಮರ್ಶೆ

ಇದಕ್ಕೂ ಮುನ್ನ ಸಚಿವ ಪ್ರಲ್ಹಾದ್​ ಜೋಶಿ, ಹವಾಮಾನ ಕ್ರಿಯೆ, ಶುದ್ಧ ಇಂಧನ ಮತ್ತು ಆಹಾರ ಭದ್ರತೆ ಕುರಿತು ಭಾರತ-ಯುಎಇ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಹವಾಮಾನ ಬದಲಾವಣೆ ಮತ್ತು ಪರಿಸರ ಸಚಿವ ಡಾ.ಅಮ್ನಾ ಬಿಂತ್ ಅಬ್ದುಲ್ಲಾ ಅಲ್ ದಹಕ್ ಅವರೊಂದಿಗೆ ಸಭೆ ಮಾಡಿದ್ದಾರೆ.

ಇದನ್ನೂ ಓದಿ: ಅಯೋಧ್ಯೆಯ ರಾಮನ ದರ್ಶನಕ್ಕೆ 450 ಕಿ.ಮೀ ಸ್ಕೇಟಿಂಗ್ ಮಾಡಿದ 9 ವರ್ಷದ ಬಾಲಕಿ

ಸಂವಾದದ ವೇಳೆ, 2014 ಮತ್ತು 2024ರ ನಡುವೆ ಸಹಿ ಮಾಡಲಾದ ಹಲವಾರು ಒಪ್ಪಂದಗಳ ಆಧಾರದ ಮೇಲೆ ಮತ್ತು ಯುಎಇಯ ‘ನೆಟ್ ಝೀರೋ 2050’ ಗುರಿಗೆ ಅನುಗುಣವಾಗಿ ನವೀಕರಿಸಬಹುದಾದ ಇಂಧನ, ಹೂಡಿಕೆ ಹಾಗೂ ನಾವೀನ್ಯತೆಗಳಲ್ಲಿ ಪಾಲುದಾರಿಕೆ ಬಗ್ಗೆ ಪರಾಮರ್ಶೆ ನಡೆಸಲಾಯಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:21 pm, Sun, 11 January 26