ಒಡಿಶಾದಲ್ಲಿ ಸರಣಿ ಅಪಘಾತ; ಮೂವರು ಸಾವು, 13 ಜನರಿಗೆ ಗಾಯ
ಒಡಿಶಾದ ಕೊರಾಪುಟ್ ಬಳಿ 2 ಬೈಕ್, 3 ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು ಮೂವರು ಮೃತಪಟ್ಟಿದ್ದಾರೆ. ಹಾಗೂ 13 ಜನರಿಗೆ ಗಾಯಗಳಾಗಿವೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಮೂವರ ಕುಟುಂಬಕ್ಕೆ ತಲಾ ₹ 3 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಭುವನೇಶ್ವರ್, ಜ.27: ಒಡಿಶಾದಲ್ಲಿ ಸರಣಿ ಅಪಘಾತ (Accident) ಸಂಭವಿಸಿದ್ದು ಮೂವರು ಸಾವನ್ನಪ್ಪಿದ್ದಾರೆ (Death). ಒಡಿಶಾದ ಕೊರಾಪುಟ್ ಜಿಲ್ಲೆಯ ಬೊರಿಗುಮ್ಮ ಪ್ರದೇಶದಲ್ಲಿ 2 ಬೈಕ್, ಒಂದು ಆಟೋರಿಕ್ಷಾ, ಒಂದು ಟ್ರ್ಯಾಕ್ಟರ್ ಮತ್ತು ಎಸ್‌ಯುವಿ ನಡುವೆ ಡಿಕ್ಕಿ ಸಂಭವಿಸಿದ್ದು ಅಪಘಾತದಲ್ಲಿ ಇಬ್ಬರು ಮಹಿಳೆಯರು (Woman) ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಮತ್ತು 13 ಮಂದಿ ಗಾಯಗೊಂಡಿದ್ದಾರೆ (Injury) ಎಂದು ಪೊಲೀಸರು ತಿಳಿಸಿದ್ದಾರೆ.
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಮೂವರ ಕುಟುಂಬಕ್ಕೆ ತಲಾ ₹ 3 ಲಕ್ಷ ಪರಿಹಾರ ಘೋಷಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿರುವ ಸಿಎಂ ಪಟ್ನಾಯಕ್ ಅವರು ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳುವಂತೆ ಹಾರೈಸಿದ್ದಾರೆ.
ಗಾಯಗೊಂಡ 13 ಜನರಲ್ಲಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಕೋರಾಪುಟ್‌ನಲ್ಲಿರುವ ಸಹೀದ್ ಲಕ್ಷ್ಮಣ್ ನಾಯಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತರ ಗಾಯಾಳುಗಳನ್ನು ಬೋರಿಗುಮ್ಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ (ಸಿಎಚ್‌ಸಿ) ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತದ ವಿವರಗಳನ್ನು ನೀಡಿದ ಪೊಲೀಸರು, ಎರಡು ಬೈಕ್‌ಗಳು, ಒಂದು ಆಟೋರಿಕ್ಷಾ, ಒಂದು ಟ್ರ್ಯಾಕ್ಟರ್ ಮತ್ತು ಒಂದು ಎಸ್‌ಯುವಿ ನಡುವೆ ಸರಣಿ ಅಪಘಾತ ಸಂಭವಿಸಿ ದುರಂತ ಸಂಭವಿಸಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪಂಜಾಬ್ನಲ್ಲಿ ಭೀಕರ ಅಪಘಾತ; ಕಾರು-ಟ್ರಕ್ ಡಿಕ್ಕಿ, ನಾಲ್ವರ ದುರ್ಮರಣ
ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎಸ್‌ಯುವಿ ಮತ್ತು ಆಟೋ ರಿಕ್ಷಾ ಒಂದೇ ಕಡೆಯಿಂದ ಬರುತ್ತಿದ್ದದ್ದು ಕಂಡು ಬಂದಿದೆ. ವಿರುದ್ಧ ದಿಕ್ಕಿನಿಂದ ಟ್ರ್ಯಾಕ್ಟರ್ ಬಂದಿದೆ. ಎಸ್‌ಯುವಿ ಅತಿವೇಗದಲ್ಲಿ ಚಲಿಸುತ್ತಿದ್ದು, ಆಟೋ ರಿಕ್ಷಾವನ್ನು ಹಿಂದಿಕ್ಕಲು ಪ್ರಯತ್ನಿಸುತ್ತಿತ್ತು. ಅದೇ ಸಮಯದಲ್ಲಿ, ಟ್ರ್ಯಾಕ್ಟರ್ ಅನ್ನು ಹಿಂದಿಕ್ಕಲು ಪ್ರಯತ್ನಿಸುವಾಗ ವಿರುದ್ಧ ದಿಕ್ಕಿನಿಂದ ವೇಗವಾಗಿ ಬಂದ ಬೈಕ್ ಎಸ್‌ಯುವಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್‌ಯುವಿ ಚಾಲಕನ ನಿಯಂತ್ರಣ ತಪ್ಪಿ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋ-ರಿಕ್ಷಾ ಮಗುಚಿ ಬಿದ್ದಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ 15 ಮಂದಿ ಪ್ರಯಾಣಿಕರು ರಸ್ತೆಗೆ ಬಿದ್ದಿದ್ದಾರೆ. ಅವರಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಎಸ್‌ಯುವಿ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದ್ದರಿಂದ ಎದುರುಗಡೆಯಿಂದ ಬಂದ ಇನ್ನೊಂದು ಬೈಕ್ ಎಸ್‌ಯುವಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟೀಯ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ