ಗುರ್ಗಾಂವ್ ನಮಾಜ್ ಸ್ಥಳ ಆಕ್ರಮಿಸಿಕೊಂಡ ಸ್ಥಳೀಯರು; 26/11 ದಾಳಿಯ 13ನೇ ವಾರ್ಷಿಕ ನಿಮಿತ್ತ ಹವನ
ಮೈದಾನದಲ್ಲಿ ನಮಾಜ್ ಮಾಡುವುದನ್ನು ವಿರೋಧಿಸಿ ಕೆಲ ಸ್ಥಳೀಯರು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮಧ್ಯಾಹ್, 100 ಕ್ಕೂ ಹೆಚ್ಚು ಪುರುಷರು ತೆರೆದ ಮೈದಾನದಲ್ಲಿ ಕುಳಿತು ಹವನ ನಡೆಸಿದರು.
ಗುರ್ಗಾಂವ್: ಮೊಹಮ್ಮದ್‌ಪುರ ಝಾರ್ಸಾ, ಖಂಡ್ಸಾ, ನರಸಿಂಗ್‌ಪುರ್ ಮತ್ತು ಖತೋಲಾ ಗ್ರಾಮಗಳ ಸ್ಥಳೀಯರು ಸೆಕ್ಟರ್ 37 ಪೊಲೀಸ್ ಠಾಣೆಯ ಬಳಿ ಗೊತ್ತುಪಡಿಸಿದ ನಮಾಜ್ ಜಾಗವನ್ನು ಸ್ಥಳೀಯರು ಆಕ್ರಮಿಸಿ ಅಲ್ಲಿ ಹವನ ನಡೆಸಿದ್ದು ಗುರ್ಗಾಂವ್ನಲ್ಲಿನ (Gurgaon ) ನಮಾಜ್ (namaz) ವಿವಾದ ಶುಕ್ರವಾರ ಹೊಸ ತಿರುವು ಪಡೆದುಕೊಂಡಿತು. 26/11 ಮುಂಬೈ ಉಗ್ರ ದಾಳಿಯ(26/11 attacks) 13 ನೇ ವಾರ್ಷಿಕೋತ್ಸವದಂದು ಹುತಾತ್ಮರನ್ನು ಸ್ಮರಿಸಲು ಈ ಕಾರ್ಯಕ್ರಮ ನಡೆಸಲಾಗಿದೆ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ. ಮೈದಾನದಲ್ಲಿ ನಮಾಜ್ ಮಾಡುವುದನ್ನು ವಿರೋಧಿಸಿ ಕೆಲ ಸ್ಥಳೀಯರು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಮೈದಾನದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮಧ್ಯಾಹ್ನ 100 ಕ್ಕೂ ಹೆಚ್ಚು ಪುರುಷರು ತೆರೆದ ಮೈದಾನದಲ್ಲಿ ಕುಳಿತು ಹವನ ನಡೆಸಿದರು. ಕಳೆದ ವಾರವೂ ನಮಾಜ್‌ಗೆ ಅಡ್ಡಿಪಡಿಸಲಾಗಿತ್ತು. ಹವನದ ಸಂಘಟಕರಲ್ಲಿ ಒಬ್ಬರಾದ ಖಂಡ್ಸಾ ಗ್ರಾಮದ ಉದ್ಯಮಿ ಅವನೀಶ್ ರಾಘವ್ ಅವರು, ನಾವು ಆಡಳಿತದ ಯಾರೊಂದಿಗೂ ನೇರವಾಗಿ ಮಾತನಾಡಿಲ್ಲ. ನಮ್ಮ ಗ್ರಾಮದ ಕೆಲವರು ಡಿಸಿಗೆ ಮನವಿ ಪತ್ರ ನೀಡಿದ್ದರು. ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲು ಇಲ್ಲಿ ಪೂಜೆ ಸಲ್ಲಿಸಲು ನಿರ್ಧರಿಸಿದ್ದೇವೆ. ನಾವು ಅದನ್ನು ಪ್ರತಿ ವರ್ಷ ಮಾಡುತ್ತೇವೆ. ಮೊಹಮ್ಮದ್‌ಪುರ ಮತ್ತು ನರಸಿಂಗ್‌ಪುರದಲ್ಲಿ – ಮೊದಲು ನಾವು ಇತರ ಹಳ್ಳಿಗಳಲ್ಲಿ ಪ್ರಾರ್ಥನೆಯನ್ನು ಮಾಡಿದ್ದೇವೆ. ಈಗ, ನಾವು ಇಲ್ಲಿ ಖಂಡ್ಸಾದಲ್ಲಿ ಮಾಡುತ್ತಿದ್ದೇವೆ. ಈ ಗ್ರಾಮದಲ್ಲಿ ಬೇರೆಡೆ ಸಾಕಷ್ಟು ಸ್ಥಳಾವಕಾಶವಿಲ್ಲದ ಕಾರಣ ನಾವು ಈ ನಿರ್ದಿಷ್ಟ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಅದಕ್ಕೂ ನಮಾಜ್ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
“ಈ ಪ್ರದೇಶವು ಕೈಗಾರಿಕಾ ಕೇಂದ್ರವಾಗಿದೆ. ಜನರು ಇಲ್ಲಿ ರಸ್ತೆಗಳಲ್ಲಿ ನಮಾಜ್ ಮಾಡಬಾರದು. ಇಲ್ಲಿ ಹಲವಾರು ಅಪರಾಧ ಘಟನೆಗಳು ನಡೆದಿವೆ. ಇಲ್ಲಿಗೆ ಬರುವವರೆಲ್ಲ ಸಮಾಜ ವಿರೋಧಿಗಳು ಎಂದು ನಾನು ಹೇಳುತ್ತಿಲ್ಲ, ಆದರೆ ಇದನ್ನು ಪರಿಶೀಲಿಸಬೇಕು ಎಂದ ಅವನೀಶ್ ಹೇಳಿದ್ದಾರೆ.
ಈ ಗುಂಪಿನಲ್ಲಿ ಭಾರತ್ ಮಾತಾ ವಾಹಿನಿಯ ಅಧ್ಯಕ್ಷ ದಿನೇಶ್ ಭಾರ್ತಿ ಕೂಡ ಇದ್ದರು, ಅವರು ಈ ಹಿಂದೆ ಸೆಕ್ಟರ್ 47 ರಲ್ಲಿ ಶುಕ್ರವಾರದ ಪ್ರಾರ್ಥನೆಯ ವಿರುದ್ಧ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಏಪ್ರಿಲ್‌ನಲ್ಲಿ ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಆರೋಪದ ಮೇಲೆ ಅವರ ಮೇಲೆ ಪ್ರಕರಣ ದಾಖಲಿಸಲಾಗಿತ್ತು.
ಆರಂಭದಲ್ಲಿ ಮೈದಾನದ ಬಳಿ ಪ್ರಾರ್ಥನೆಗಾಗಿ ನೆರೆದಿದ್ದ ಮುಸ್ಲಿಮರ ಗುಂಪು ನಮಾಜ್ ಮಾಡದೆ ಹೊರಡಲು ಪ್ರಾರಂಭಿಸಿತು. ಆದಾಗ್ಯೂ, ಮುಸ್ಲಿಂ ಏಕತಾ ಮಂಚ್ ಅಧ್ಯಕ್ಷ ಶೆಹಜಾದ್ ಖಾನ್ ನೇತೃತ್ವದ ಸುಮಾರು 25 ಪುರುಷರ ಗುಂಪು ಕೊನೆಗೆ ಹವನ ನಡೆಸಿದ ಸ್ಥಳದಿಂದ ಕೆಲವು ಮೀಟರ್ ದೂರದಲ್ಲಿ ಪ್ರಾರ್ಥನೆ ಸಲ್ಲಿಸಿತು. ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾತನಾಡಿದ ಖಾನ್, “ಕೆಲವರು ನಗರದಲ್ಲಿ ಸಮುದಾಯಗಳ ನಡುವೆ ಸಾಮರಸ್ಯವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಆಡಳಿತ ಮತ್ತು ಇತ್ತೀಚೆಗೆ ರಚಿಸಲಾದ ಸಮಿತಿಯು ಶುಕ್ರವಾರ ನಮಾಜ್ ಮಾಡಲು ಅನುಮತಿ ನೀಡಿದ ಪಟ್ಟಿಯಲ್ಲಿ ಈ ಸೈಟ್ ಸೇರಿದೆ. ಆದರೂ ಕೆಲವು ಗುಂಪುಗಳು ನಮಾಜ್‌ಗೆ ಅಡ್ಡಿಪಡಿಸಲು ಇಂತಹ ತಂತ್ರಗಳನ್ನು ಅನುಸರಿಸುತ್ತಿವೆ ಎಂದಿದ್ದಾರೆ.
ಇದನ್ನೂ ಓದಿ: ದ್ವಂದ್ವ ನಿಲುವು ಬಿಟ್ಟುಬಿಡಿ: 26/11 ವಿಚಾರಣೆಯನ್ನು ತ್ವರಿತಗೊಳಿಸುವಂತೆ ಪಾಕಿಸ್ತಾನಕ್ಕೆ ಹೇಳಿದ ಭಾರತ