ಚಲಿಸುತ್ತಿದ್ದ ರೈಲಿನಲ್ಲಿ ನಾಲ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರ್‌ಪಿಎಫ್ ಕಾನ್ಸ್‌ಟೇಬಲ್‌ ವಿರುದ್ಧ ಮತೀಯ ದ್ವೇಷ ಹರಡಿದ ಆರೋಪ

ಆರೋಪಿಯ ಬಂಧನದ ವೇಳೆ ಪೊಲೀಸರು ಇಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದು, ನ್ಯಾಯಾಲಯ ಆರೋಪಿಗೆ ಆಗಸ್ಟ್ 11ರವರೆಗೆ ಪೊಲೀಸ್ ಕಸ್ಟಡಿ ನೀಡಿದೆ. ಎಫ್‌ಐಆರ್‌ನಲ್ಲಿ ಐಪಿಸಿ ಸೆಕ್ಷನ್ 302 (ಕೊಲೆ), ಶಸ್ತ್ರಾಸ್ತ್ರ ಕಾಯಿದೆ 3, 25, 27 ಮತ್ತು ರೈಲ್ವೇಸ್ ಆಕ್ಟ್ ಕೂಡ ಸೇರಿದೆ.

ಚಲಿಸುತ್ತಿದ್ದ ರೈಲಿನಲ್ಲಿ ನಾಲ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಆರ್‌ಪಿಎಫ್ ಕಾನ್ಸ್‌ಟೇಬಲ್‌ ವಿರುದ್ಧ ಮತೀಯ ದ್ವೇಷ ಹರಡಿದ ಆರೋಪ
ಚೇತನ್ ಸಿಂಗ್
Follow us
|

Updated on:Aug 07, 2023 | 7:33 PM

ದೆಹಲಿ ಆಗಸ್ಟ್ 07: ಜೈಪುರ-ಮುಂಬೈ ರೈಲಿನಲ್ಲಿ (Jaipur-Mumbai train) ನಾಲ್ಕು ಜನರನ್ನು ಗುಂಡಿಕ್ಕಿ ಹತ್ಯೆ ಮಾಡಿದ ರೈಲ್ವೇ ಸಂರಕ್ಷಣಾ ಪಡೆ (Railway Protection Force -RPF) ಕಾನ್ಸ್‌ಟೇಬಲ್‌ ಕೃತ್ಯದಲ್ಲಿ ಯಾವುದೇ ಕೋಮು ದ್ವೇಷ ಇಲ್ಲ ಎಂದು ಹೇಳಿದ್ದ ರೈಲ್ವೇ ಪೊಲೀಸರು ಇದೀಗ ಧರ್ಮದ ಆಧಾರದಲ್ಲಿ ವಿವಿಧ ವರ್ಗದ ಜನರ ನಡುವೆ ದ್ವೇಷ ಹರಡಿರುವ ಬಗ್ಗೆ ಸೆಕ್ಷನ್‌ 153ಎ ಅಡಿಯಲ್ಲಿ ಆರೋಪವನ್ನು ಎಫ್‌ಐಆರ್‌ನಲ್ಲಿ ಸೇರಿಸಿದ್ದಾರೆ. ಸರ್ಕಾರಿ ರೈಲ್ವೇ ಪೊಲೀಸರು (GRP), ಆರೋಪಿ RPF ಕಾನ್‌ಸ್ಟೆಬಲ್ ಚೇತನ್ ಸಿಂಗ್ (Chetan Singh) ವಿರುದ್ಧದ ಪ್ರಥಮ ಮಾಹಿತಿ ವರದಿಯಲ್ಲಿ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 153A ಅನ್ನು ಸೇರಿಸಿದ್ದಾರೆ. ಇದು ಧರ್ಮ, ಹುಟ್ಟಿದ ಸ್ಥಳ, ನಿವಾಸ, ಭಾಷೆ,ಜನಾಂಗ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸವುದಕ್ಕೆ ಸಂಬಂಧಿಸಿದೆ.

ಆರೋಪಿಯ ಬಂಧನದ ವೇಳೆ ಪೊಲೀಸರು ಇಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದು, ನ್ಯಾಯಾಲಯ ಆರೋಪಿಯನ್ನು ಆಗಸ್ಟ್ 11ರವರೆಗೆ ಪೊಲೀಸ್ ಕಸ್ಟಡಿ ನೀಡಿದೆ. ಎಫ್‌ಐಆರ್‌ನಲ್ಲಿ ಐಪಿಸಿ ಸೆಕ್ಷನ್ 302 (ಕೊಲೆ), ಶಸ್ತ್ರಾಸ್ತ್ರ ಕಾಯಿದೆ 3, 25, 27 ಮತ್ತು ರೈಲ್ವೇಸ್ ಆಕ್ಟ್ ಕೂಡ ಸೇರಿದೆ.

ರೈಲಿನಲ್ಲಿ ಚೇತನ್ ಸಿಂಗ್ ಗುಂಡು ಹಾರಿಸಿ ವ್ಯಕ್ತಿಯ ರಕ್ತಸಿಕ್ತ ದೇಹವನ್ನು ಕೆಳಗೆ ಬಿದ್ದಿರುವಾಗ ಪಾಕಿಸ್ತಾನ ಮತ್ತು ದೇಶೀಯ ರಾಜಕೀಯ ವಿಷಯಗಳನ್ನು ಪ್ರಸ್ತಾಪಿಸಿ ಕೋಮು ದ್ವೇಷದ ಭಾಷಣ ಮಾಡುತ್ತಿರುವುದನ್ನು ಪ್ರಯಾಣಿಕರು ರೆಕಾರ್ಡ್ ಮಾಡಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಈ ವಿಡಿಯೊದಲ್ಲಿ ಆರೋಪಿ ಪಾಕಿಸ್ತಾನ, ಭಾರತೀಯ ಮಾಧ್ಯಮಗಳನ್ನು ಉಲ್ಲೇಖಿಸಿ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು “ಠಾಕ್ರೆ” ಹೆಸರನ್ನು ಉಲ್ಲೇಖಿಸಿದ್ದಾನೆ. ಈ ವಿಡಿಯೊದ ಸತ್ಯಾಸತ್ಯತೆಯನ್ನು ಅಧಿಕಾರಿಗಳು ಇದುವರೆಗೆ ನಿರಾಕರಿಸಿಲ್ಲ.

“…ಅಗರ್ ವೋಟ್ ದೇನಾ ಹೈ, ಅಗರ್ ಹಿಂದೂಸ್ತಾನ್ ಮೆ ರೆಹನಾ ಹೈ, ತೋ ಮೈ ಕೆಹತಾ ಹೂ, ಮೋದಿ ಔರ್ ಯೋಗಿ, ಯೇ ದೋ ಹೈ, ಔರ್ ಆಪ್ಕೆ ಠಾಕ್ರೆ” (ನೀವು ಮತ ಚಲಾಯಿಸಲು ಬಯಸಿದರೆ, ನೀವು ಭಾರತದಲ್ಲಿ ವಾಸಿಸಲು ಬಯಸಿದರೆ, ನಾನು ಹೇಳುತ್ತಿದ್ದೇನೆ ಮೋದಿ ಮತ್ತು ಯೋಗಿ, ಇವರಿಬ್ಬರು ಮತ್ತು ನಿಮ್ಮ ಠಾಕ್ರೆ’) ಎಂದು ಅವರು ವಿಡಿಯೊದಲ್ಲಿ ಹೇಳುವುದನ್ನು ಕೇಳಬಹುದು.

ಚೇತನ್ ಸಿಂಗ್ ಗುಂಡಿಕ್ಕಿ ಕೊಂದವರಲ್ಲಿ ಮೂವರು ಮುಸ್ಲಿಮರು. ಆರೋಪಿಯು ಮೊದಲು ತನ್ನ ಮೇಲಧಿಕಾರಿಯಾದ ಸಬ್ ಇನ್ಸ್‌ಪೆಕ್ಟರ್ ಟಿಕಾ ರಾಮ್ ಮೀನಾಗೆ ಗುಂಡು ಹಾರಿಸಿದ್ದು, ನಂತರ ಕೋಚ್‌ನಿಂದ ಕೋಚ್‌ಗೆ ಹೋಗಿ ಮೂವರು ಪ್ರಯಾಣಿಕರನ್ನು ಕೊಂದಿದ್ದಾನೆ. ಸಂತ್ರಸ್ತರನ್ನು ಅಬ್ದುಲ್ ಖಾದಿರ್‌ಭಾಯ್ ಮೊಹಮ್ಮದ್ ಹುಸೇನ್ ಭಾನ್‌ಪುರವಾಲಾ, ಅಖ್ತರ್ ಅಬ್ಬಾಸ್ ಅಲಿ ಮತ್ತು ಸದರ್ ಮೊಹಮ್ಮದ್ ಹುಸೇನ್ ಎಂದು ಗುರುತಿಸಲಾಗಿದೆ.

ಅಪರಾಧದ ನಂತರ ಆರೋಪಿಯನ್ನು ಮಾನಸಿಕ ಆರೋಗ್ಯ ಪರಿಶೀಲಿಸಲು ಕಳುಹಿಸಲಾಗಿದೆ. ಆರ್‌ಪಿಎಫ್ ಸಿಬ್ಬಂದಿಯ “ಸಮಗ್ರ ಮಾನಸಿಕ ಮತ್ತು ಮಾನಸಿಕ ಆರೋಗ್ಯ ಮೌಲ್ಯಮಾಪನ” ನಡೆಸಲಾಗುತ್ತಿದೆ ಎಂದು ರೈಲ್ವೇ ಸಚಿವಾಲಯದ ಮೂಲಗಳು ತಿಳಿಸಿವೆ. ಈತ ಕೋಮು ದ್ವೇಷದಿಂದ ಈ ಕೃತ್ಯ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಾಗ,ಈತ ತನ್ನ ಹಿರಿಯ ಅಧಿಕಾರಿ ಮತ್ತು ಇತರ ಹಿಂದೂಗಳ ಮೇಲೆಯೂ ಗುಂಡುಹಾರಿಸಿದ್ದಾನೆ ಎಂಬುದನ್ನು ರೈಲ್ವೆ ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಮಣಿಪುರ ಹಿಂಸಾಚಾರ: ಪೊಲೀಸ್ ತನಿಖೆಯ ಮೇಲ್ವಿಚಾರಣೆಗೆ ಮಹಾರಾಷ್ಟ್ರದ ಮಾಜಿ ಡಿಜಿಪಿಯನ್ನು ನೇಮಕ ಮಾಡಿದ ಸುಪ್ರೀಂಕೋರ್ಟ್

ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಮತ್ತು ಹೈದರಾಬಾದ್‌ನ ಲೋಕಸಭಾ ಸಂಸದ ಅಸಾದುದ್ದೀನ್ ಓವೈಸಿ ಈ ವಿಡಿಯೊ ಶೇರ್ ಮಾಡಿ “ಇದು ನಿರ್ದಿಷ್ಟವಾಗಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡ ಭಯೋತ್ಪಾದಕ ದಾಳಿಯಾಗಿದೆ. ಇದು ನಿರಂತರ ಮುಸ್ಲಿಂ ವಿರೋಧಿ ದ್ವೇಷದ ಭಾಷಣದ ಉತ್ಪನ್ನವಾಗಿದೆ. ಅದನ್ನು ಕೊನೆಗೊಳಿಸಲು ನರೇಂದ್ರ ಮೋದಿ ಅವರಿಗೆ ಇಷ್ಟವಿಲ್ಲ. ಆರೋಪಿ RPF ಜವಾನ್ ಭವಿಷ್ಯದ ಬಿಜೆಪಿ ಅಭ್ಯರ್ಥಿಯಾಗುತ್ತಾರೆಯೇ? ಅವರ ಜಾಮೀನಿಗೆ ಸರ್ಕಾರವು ಬೆಂಬಲ ನೀಡುತ್ತದೆಯೇ? ಬಿಡುಗಡೆಯಾದಾಗ ಅವರಿಗೆ ಹಾರ ಹಾಕಲಾಗುತ್ತದೆಯೇ?”ಎಂದು ಕೇಳಿದ್ದರು, ಅಧಿಕಾರಿಗಳ ಕೋರಿಕೆಯ ಮೇರೆಗೆ ಭಾರತದಲ್ಲಿ ಅವರ ಟ್ವೀಟ್ ಅನ್ನು ನಿರ್ಬಂಧಿಸಲಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:31 pm, Mon, 7 August 23