ಮಣಿಪುರ ಹಿಂಸಾಚಾರ: ಪೊಲೀಸ್ ತನಿಖೆಯ ಮೇಲ್ವಿಚಾರಣೆಗೆ ಮಹಾರಾಷ್ಟ್ರದ ಮಾಜಿ ಡಿಜಿಪಿಯನ್ನು ನೇಮಕ ಮಾಡಿದ ಸುಪ್ರೀಂಕೋರ್ಟ್
ಕಳೆದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ನಿಂದ ಸಮನ್ಸ್ ಪಡೆದಿದ್ದ ರಾಜ್ಯ ಡಿಜಿಪಿ ರಾಜೀವ್ ಸಿಂಗ್, ಜನಾಂಗೀಯ ಹಿಂಸಾಚಾರದ ಬಗ್ಗೆ ಆಡಳಿತವು ಇಲ್ಲಿಯವರೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸಲು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಏತನ್ಮಧ್ಯೆ ಪರಿಣಾಮಕಾರಿ ತನಿಖೆಯ ಉದ್ದೇಶಗಳಿಂದ ಪ್ರಕರಣಗಳನ್ನು ಪ್ರತ್ಯೇಕಿಸಲಾಗಿದೆ.
ದೆಹಲಿ ಆಗಸ್ಟ್ 07: ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರಕ್ಕೆ (Manipur Violence) ಸಂಬಂಧಿಸಿದ ಪ್ರಕರಣಗಳ ಪೊಲೀಸ್ ತನಿಖೆಯ ಮೇಲ್ವಿಚಾರಣೆಗೆ ಮಹಾರಾಷ್ಟ್ರದ ಮಾಜಿ ಡಿಜಿಪಿ ದತ್ತಾತ್ರೇ ಪಡಸಾಲ್ಗಿಕರ್ (Dattatrey Padsalgikar) ಅವರನ್ನು ಸುಪ್ರೀಂಕೋರ್ಟ್ (Supreme Court) ಸೋಮವಾರ ನೇಮಕ ಮಾಡಿದೆ. ಕಾನೂನಿನಲ್ಲಿ ವಿಶ್ವಾಸ ಮತ್ತು ನಂಬಿಕೆಯನ್ನು ಪುನಃಸ್ಥಾಪಿಸುವುದು ನಮ್ಮ ಪ್ರಯತ್ನವಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಪರೇಡ್ ಮಾಡುವುದು ಸೇರಿದಂತೆ 11 ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆಗಾಗಿ ಸಿಬಿಐ ತನಿಖಾ ತಂಡಕ್ಕೆ ವಿವಿಧ ರಾಜ್ಯಗಳ ಐದು ಅಥವಾ ಆರು ಡೆಪ್ಯುಟಿ ಎಸ್ಪಿ ಶ್ರೇಣಿಯ ಅಧಿಕಾರಿಗಳನ್ನು ಸೇರಿಸಲು ಕರಡು ಸಿದ್ಧಪಡಿಸಲು ನ್ಯಾಯಾಲಯ ಹೇಳಿದೆ.
ಸಿಜೆಐ ಡಿ ವೈ ಚಂದ್ರಚೂಡ್ ನೇತೃತ್ವದ ಸುಪ್ರೀಂಕೋರ್ಟ್ ನ್ಯಾಯಪೀಠವು ಪರಿಹಾರ, ಪುನರ್ವಸತಿ, ಮನೆ ಮತ್ತು ಪೂಜಾ ಸ್ಥಳಗಳ ಮರುನಿರ್ಮಾಣಕ್ಕಾಗಿ ಕ್ರಮಗಳನ್ನು ಮೇಲ್ವಿಚಾರಣೆ ಮಾಡಲು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರ ಸಮಿತಿಯನ್ನು ರಚಿಸುವುದಾಗಿ ಹೇಳಿದೆ. ಪ್ರಸ್ತಾವಿತ ತ್ರಿಸದಸ್ಯ ಸಮಿತಿಯು ಜಮ್ಮು ಮತ್ತು ಕಾಶ್ಮೀರದ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಅವರ ನೇತೃತ್ವದಲ್ಲಿರುತ್ತದೆ. ಮಾಜಿ ನ್ಯಾಯಾಧೀಶರಾದ ಶಾಲಿನಿ ಪಿ ಜೋಶಿ ಮತ್ತು ಆಶಾ ಮೆನನ್ ಈ ಸಮಿತಿಯಲ್ಲಿರಲಿದ್ದಾರೆ.
ಕಳೆದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್‌ನಿಂದ ಸಮನ್ಸ್ ಪಡೆದಿದ್ದ ರಾಜ್ಯ ಡಿಜಿಪಿ ರಾಜೀವ್ ಸಿಂಗ್, ಜನಾಂಗೀಯ ಹಿಂಸಾಚಾರದ ಬಗ್ಗೆ ಆಡಳಿತವು ಇಲ್ಲಿಯವರೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸಲು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಏತನ್ಮಧ್ಯೆ ಪರಿಣಾಮಕಾರಿ ತನಿಖೆಯ ಉದ್ದೇಶಗಳಿಂದ ಪ್ರಕರಣಗಳನ್ನು ಪ್ರತ್ಯೇಕಿಸಲಾಗಿದೆ.
ಈ ಹಿಂದೆ ಮಣಿಪುರ ಸರ್ಕಾರವು ಹಿಂಸಾಚಾರ ಪ್ರಕರಣಗಳ ತನಿಖೆಗಾಗಿ 6 ಜಿಲ್ಲೆಗಳಿಗೆ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ 6 ಪ್ರತ್ಯೇಕ ಎಸ್‌ಐಟಿಗಳನ್ನು ರಚಿಸುವುದಾಗಿಯೂ ಮಹಿಳೆಯರ ಮೇಲಿನ ಅಪರಾಧಗಳಿಗಾಗಿ ಮಹಿಳಾ ಪೊಲೀಸ್ ಅಧಿಕಾರಿಗಳ ಎಸ್‌ಐಟಿಯನ್ನು ರಚಿಸುವುದಾಗಿ ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು.
ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಎಸ್ಪಿ ನೇತೃತ್ವದ ಎಸ್‌ಐಟಿಗಳು ಜನಾಂಗೀಯ ಘರ್ಷಣೆಗಳು,ಅಪರಾಧಗಳ ಬಗ್ಗೆ ಪರಿಶೀಲಿಸುತ್ತಾರೆ. ಈ ಬಗ್ಗೆ ರಾಜ್ಯ ಡಿಜಿಪಿ ಮತ್ತು ಡಿಐಜಿ ಈ ತನಿಖೆಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿದ್ದಾರೆ. ಸರ್ಕಾರ ತೆಗೆದುಕೊಳ್ಳಬೇಕಾದ ಕ್ರಮಗಳ ವಿವರಗಳನ್ನು ನೀಡಿದ ಅವರು ರಾಜ್ಯದಲ್ಲಿ ಪರಿಸ್ಥಿತಿ ತುಂಬಾ ಉದ್ವಿಗ್ನವಾಗಿದೆ. ಯಾವುದೇ ಬಾಹ್ಯ ನಿರ್ದೇಶನದ ತನಿಖೆಯು ಆತ್ಮವಿಶ್ವಾಸವನ್ನು ಉಂಟುಮಾಡುವುದಿಲ್ಲ ಎಂದು ಹೇಳಿದ್ದಾರೆ.
ಆಗಸ್ಟ್ 1 ರಂದು ಸುಪ್ರೀಂಕೋರ್ಟ್ ಮಣಿಪುರ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು. ಮಣಿಪುರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಮತ್ತು ಸಾಂವಿಧಾನಿಕ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಜನಾಂಗೀಯ ಹಿಂಸಾಚಾರದ ಘಟನೆಗಳ, ವಿಶೇಷವಾಗಿ ಮಹಿಳೆಯರನ್ನು ಗುರಿಯಾಗಿಸುವ ಘಟನೆಗಳ ಬಗ್ಗೆ ತಡವಾದ ತನಿಖೆಗಾಗಿ ರಾಜ್ಯ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಆಗಸ್ಟ್ 7 ರಂದು ತನ್ನ ಪ್ರಶ್ನೆಗಳಿಗೆ ಉತ್ತರಿಸಲು ಡಿಜಿಪಿಗೆ ಸಮನ್ಸ್ ನೀಡಿತ್ತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:39 pm, Mon, 7 August 23