ಗೋರಖ್ಪುರ: ಗೋರಖ್‌ಪುರದಿಂದ ಹೊರಡಲಿರುವ ರೈಲಿನಲ್ಲಿ ಆರ್‌ಪಿಎಫ್ ಸಿಬ್ಬಂದಿ ದಿನನಿತ್ಯದ ಗಸ್ತು ನಡೆಸುತ್ತಿದ್ದರು. ತಮ್ಮ ರಾತ್ರಿ ಕರ್ತವ್ಯದ ಭಾಗವಾಗಿ ಪ್ರತಿ ಕೋಚ್‌ಗಳನ್ನು ಪರಿಶೀಲಿಸುತ್ತಿದ್ದರು. ಈ ವೇಳೆ ಅವರು ರೈಲಿನ ಶೌಚಾಲಯದ ಮೂಲಕ ಹಾದುಹೋದಾಗ ಒಳಗಿನಿಂದ ವಿಚಿತ್ರವಾದ ಶಬ್ದ ಕೇಳಿತು. ಯಾರೋ ಟಾಯ್ಲೆಟ್ನಲ್ಲಿರಬೇಕೆಂದು ಭಾವಿಸಿದ ಅವರು ಮುಂದೆ ಹೋದಾಗ ಆ ಶಬ್ದ ಜೋರಾಯಿತು. ಮತ್ತೆ ವಾಪಾಸ್ ಬಂದು ನೋಡಿದಾಗ ಟಾಯ್ಲೆಟ್ ರೂಮಿನ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿರುವುದು ಕಂಡಿತು.
ಕುತೂಹಲಗೊಂಡ ಆರ್‌ಪಿಎಫ್ ಸಿಬ್ಬಂದಿ ಶೌಚಾಲಯದ ಬಾಗಿಲು ತೆರೆದಾಗ ಅದರೊಳಗೆ ಇಬ್ಬರು ಮಕ್ಕಳು ಇರುವುದನ್ನು ನೋಡಿ ಆಘಾತಕ್ಕೊಳಗಾದರು. ಬಾಗಿಲು ತೆರೆದು ನೋಡಿದಾಗ ಅದರೊಳಗೆ ಇಬ್ಬರು ಮಕ್ಕಳನ್ನು ಕೂಡಿಹಾಕಲಾಗಿತ್ತು. ಮಕ್ಕಳು ತಮ್ಮ ಕುಟುಂಬದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ. ಯಾರೋ ಅವರನ್ನು ಅಲ್ಲಿಗೆ ಕರೆತಂದು ಕೂಡಿ ಹಾಕಿದರು ಎಂದು ಮಾತ್ರ ಹೇಳಿದರು. ಅವರ ವಿವರಗಳನ್ನು ತಕ್ಷಣವೇ ಆರ್‌ಪಿಎಫ್ ಮತ್ತು ರೈಲ್ವೆ ಅಧಿಕಾರಿಗಳಿಗೆ ವರದಿ ಮಾಡಲಾಗಿದ್ದು, ಅವರು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.
ಇದನ್ನೂ ಓದಿ: Train Derails: ತೆಲಂಗಾಣದಲ್ಲಿ ಹಳಿ ತಪ್ಪಿದ 11 ರೈಲ್ವೆ ಬೋಗಿಗಳು, ದೆಹಲಿ-ಚೆನ್ನೈ ಮಾರ್ಗದಲ್ಲಿ ಸಂಚಾರ ಸ್ಥಗಿತ
ಭಾರತೀಯ ರೈಲ್ವೇಯು ಮಕ್ಕಳ ಸುರಕ್ಷತೆಗೆ ಹೆಚ್ಚು ಎಚ್ಚರ ವಹಿಸುತ್ತದೆ. ‘ಆಪರೇಷನ್ ನನ್ಹೆ ಫರಿಷ್ಟೆ’ ಎಂಬ ಮಕ್ಕಳ ರಕ್ಷಣಾ ಅಭಿಯಾನವನ್ನು ನಡೆಸುತ್ತಿದೆ. ಈ ಕಾರ್ಯಾಚರಣೆಯು RPF ಸಿಬ್ಬಂದಿ ನಿಲ್ದಾಣಗಳು ಮತ್ತು ರೈಲುಗಳನ್ನು ಪರಿಶೀಲಿಸುವ ಮೂಲಕ ಅಪಹರಣಕ್ಕೊಳಗಾದ ಮಕ್ಕಳನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಪತ್ತೆಯಾದ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಲಾಗುತ್ತದೆ.
ಈಶಾನ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಪಂಕಜ್ ಕುಮಾರ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, ಈ ವರ್ಷ ಏಪ್ರಿಲ್ ಮತ್ತು ಅಕ್ಟೋಬರ್ ನಡುವೆ ಈಶಾನ್ಯ ರೈಲ್ವೆ ನಿಲ್ದಾಣಗಳು ಮತ್ತು ರೈಲುಗಳಿಂದ 644 ತೊಂದರೆಗೊಳಗಾದ ಮಕ್ಕಳನ್ನು ಆರ್‌ಪಿಎಫ್ ಯಶಸ್ವಿಯಾಗಿ ರಕ್ಷಿಸಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Video: ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
2023-24ರಲ್ಲಿ ಈಶಾನ್ಯ ರೈಲ್ವೆಯಲ್ಲಿ 368 ಮಕ್ಕಳನ್ನು ರಕ್ಷಿಸಲಾಗಿದೆ. ಅಕ್ಟೋಬರ್ 2024ರ ಹೊತ್ತಿಗೆ, ಈ ಸಂಖ್ಯೆ 644ಕ್ಕೆ ಏರಿದೆ. 433 ಹುಡುಗರು ಮತ್ತು 211 ಹುಡುಗಿಯರನ್ನು ರಕ್ಷಿಸಲಾಗಿದೆ. ಈ ಮಕ್ಕಳಲ್ಲಿ ಓಡಿಹೋದ, ಕಾಣೆಯಾದ, ಬೇರ್ಪಟ್ಟ, ನಿರ್ಗತಿಕ, ಅಪಹರಣಕ್ಕೊಳಗಾದ, ಮಾನಸಿಕ ತೊಂದರೆಗೊಳಗಾದ ಮತ್ತು ಮನೆಯಿಲ್ಲದ ಮಕ್ಕಳು ಸೇರಿದ್ದಾರೆ. ಮಕ್ಕಳ ರಕ್ಷಣೆಯಲ್ಲಿ ಹೆಚ್ಚಿನ ಸಹಾಯಕ್ಕಾಗಿ, ಈಶಾನ್ಯ ರೈಲ್ವೆಯೊಳಗಿನ ಪ್ರಮುಖ ರೈಲು ನಿಲ್ದಾಣಗಳಲ್ಲಿ ಮಕ್ಕಳ ಸಹಾಯ ಕೇಂದ್ರಗಳು ಲಭ್ಯವಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ