RRB Recruitment 2026: ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ; 6,565 ಟೆಕ್ನೀಷಿಯನ್ ಹುದ್ದೆಗೆ ಅರ್ಜಿ ಆಹ್ವಾನ

ಭಾರತೀಯ ರೈಲ್ವೆ ಟೆಕ್ನೀಷಿಯನ್ ಹುದ್ದೆಗಳಿಗೆ 6,565 ಖಾಲಿ ಹುದ್ದೆಗಳ ಅಧಿಸೂಚನೆ ಹೊರಬಿದ್ದಿದೆ. ಜೂನ್ 30 ರಿಂದ ಜುಲೈ 29 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. 10ನೇ ತರಗತಿ, ITI, ಡಿಪ್ಲೋಮಾ ಅಥವಾ BSc ವಿದ್ಯಾರ್ಹತೆ ಹೊಂದಿರುವ 18-33 ವರ್ಷದವರು ಅರ್ಜಿ ಸಲ್ಲಿಸಬಹುದು. ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ನಡೆಯುತ್ತದೆ. ನಿರುದ್ಯೋಗಿ ಯುವಕ-ಯುವತಿಯರಿಗೆ ಇದು ಉತ್ತಮ ಅವಕಾಶ.

RRB Recruitment 2026: ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ; 6,565 ಟೆಕ್ನೀಷಿಯನ್ ಹುದ್ದೆಗೆ ಅರ್ಜಿ ಆಹ್ವಾನ
ರೈಲ್ವೆ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ
Image Credit source: Pinterest

Updated on: Jun 09, 2026 | 12:28 PM

ಸರ್ಕಾರಿ ಕೆಲಸದ ಹುಡುಕಾಟದಲ್ಲಿರುವ ದೇಶದ ನಿರುದ್ಯೋಗಿ ಯುವಕ-ಯುವತಿಯರಿಗೆ ಭಾರತೀಯ ರೈಲ್ವೆ ಇಲಾಖೆಯು ಭರ್ಜರಿ ಸಿಹಿ ಸುದ್ದಿ ನೀಡಿದೆ. ಕೇಂದ್ರ ರೈಲ್ವೆ ಸಚಿವಾಲಯದ ಅಧೀನದಲ್ಲಿರುವ ರೈಲ್ವೆ ನೇಮಕಾತಿ ಮಂಡಳಿಯು (RRB) ದೇಶಾದ್ಯಂತ ಖಾಲಿ ಇರುವ ಒಟ್ಟು 6,565 ಟೆಕ್ನೀಷಿಯನ್ ಹುದ್ದೆಗಳ ಭರ್ತಿಗಾಗಿ ಶಾರ್ಟ್ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜೂನ್ 30 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಜುಲೈ 29 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಕರ್ನಾಟಕದ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ರೈಲ್ವೆ ವಲಯಗಳಲ್ಲಿ ಈ ನೇಮಕಾತಿ ನಡೆಯಲಿದೆ.

ಉದ್ಯೋಗಗಳ ವಿವರ ಮತ್ತು ಮಾಸಿಕ ವೇತನ ಶ್ರೇಣಿ:

ರೈಲ್ವೆ ಮಂಡಳಿಯು ಈ ಬಾರಿ ಎರಡು ಪ್ರಮುಖ ವಿಭಾಗಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಮೊದಲನೆಯದಾಗಿ ಒಟ್ಟು 323 ಟೆಕ್ನೀಷಿಯನ್ ಗ್ರೇಡ್-1 (ಸಿಗ್ನಲ್) ಹುದ್ದೆಗಳಿದ್ದು, ಇವುಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಆರಂಭಿಕ ಮಾಸಿಕ ವೇತನವಾಗಿ ರೂ. 29,200 ಸಿಗಲಿದೆ. ಇನ್ನುಳಿದಂತೆ ಅತಿ ಹೆಚ್ಚು ಅಂದರೆ ಒಟ್ಟು 6,242 ಟೆಕ್ನೀಷಿಯನ್ ಗ್ರೇಡ್-3 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಈ ಹುದ್ದೆಗಳಿಗೆ ಮಾಸಿಕ ವೇತನವಾಗಿ ರೂ. 19,900 ನಿಗದಿಪಡಿಸಲಾಗಿದೆ.

ಅಭ್ಯರ್ಥಿಗಳ ವಯೋಮಿತಿ:

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯನ್ನು ಹುದ್ದೆಗಳಿಗೆ ಅನುಗುಣವಾಗಿ ಪ್ರತ್ಯೇಕಿಸಲಾಗಿದೆ. ಟೆಕ್ನೀಷಿಯನ್ ಗ್ರೇಡ್-1 ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 18 ರಿಂದ 33 ವರ್ಷದ ಒಳಗಿರಬೇಕು. ಹಾಗೆಯೇ, ಟೆಕ್ನೀಷಿಯನ್ ಗ್ರೇಡ್-3 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 30 ವರ್ಷದ ವಯೋಮಿತಿ ನಿಗದಿಪಡಿಸಲಾಗಿದೆ. ನಿಯಮಾವಳಿಗಳ ಪ್ರಕಾರ ಮೀಸಲಾತಿ ಅಡಿಯಲ್ಲಿ ಬರುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ.

ಶೈಕ್ಷಣಿಕ ಅರ್ಹತೆ ಏನಿರಬೇಕು?

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಹುದ್ದೆಗೆ ತಕ್ಕಂತೆ ಅಗತ್ಯ ವಿದ್ಯಾರ್ಹತೆ ಹೊಂದಿರಬೇಕು. ಟೆಕ್ನೀಷಿಯನ್ ಗ್ರೇಡ್-3 ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕನಿಷ್ಠ 10ನೇ ತರಗತಿ (SSLC) ಪಾಸಾಗಿರಬೇಕು ಮತ್ತು ಸಂಬಂಧಪಟ್ಟ ಟ್ರೇಡ್‌ನಲ್ಲಿ ಐಟಿಐ (ITI) ಸರ್ಟಿಫಿಕೇಟ್ ಹೊಂದಿರಬೇಕು ಅಥವಾ ಡಿಪ್ಲೊಮಾ ಮುಗಿಸಿರಬೇಕು. ಇನ್ನು ಟೆಕ್ನೀಷಿಯನ್ ಗ್ರೇಡ್-1 (ಸಿಗ್ನಲ್) ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎಸ್ಸಿ (B.Sc) ಅಥವಾ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಅಥವಾ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ: 16 ಸರ್ಕಾರಿ ಉದ್ಯೋಗ ತಿರಸ್ಕರಿಸಿ IPS ಆದ ಯುವತಿ; ಮೊದಲ ಪ್ರಯತ್ನದಲ್ಲೇ UPSC ಪಾಸ್ ಮಾಡಿದ ತೃಪ್ತಿ ಭಟ್ ಯಶೋಗಾಥೆ

ಆಯ್ಕೆ ವಿಧಾನ ಮತ್ತು ಪರೀಕ್ಷಾ ಪ್ರಕ್ರಿಯೆ:

ಅರ್ಹ ಅಭ್ಯರ್ಥಿಗಳನ್ನು ಒಟ್ಟು ಮೂರು ಹಂತಗಳ ಕಠಿಣ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆಯನ್ನು (CBT) ನಡೆಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರನ್ನು ಮುಂದಿನ ಹಂತವಾದ ಮೂಲ ದಾಖಲೆಗಳ ಪರಿಶೀಲನೆಗೆ (Document Verification) ಕರೆಯಲಾಗುತ್ತದೆ. ಕೊನೆಯದಾಗಿ, ದೈಹಿಕ ಮತ್ತು ವೈದ್ಯಕೀಯ ಸಾಮರ್ಥ್ಯವನ್ನು ಪರೀಕ್ಷಿಸಲು ವೈದ್ಯಕೀಯ ತಪಾಸಣೆಯನ್ನು (Medical Examination) ನಡೆಸಿ ಅರ್ಹರನ್ನು ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

ಜೂನ್ 30ಕ್ಕೆ ಸಂಪೂರ್ಣ ನೋಟಿಫಿಕೇಶನ್ ಬಿಡುಗಡೆ:

ಪ್ರಸ್ತುತ ರೈಲ್ವೆ ಮಂಡಳಿಯು ಕೇವಲ ಸಂಕ್ಷಿಪ್ತ ಅಧಿಸೂಚನೆಯನ್ನು ಮಾತ್ರ ಹೊರಡಿಸಿದೆ. ಪರೀಕ್ಷಾ ಪಠ್ಯಕ್ರಮ (Syllabus), ಅರ್ಜಿ ಶುಲ್ಕ, ವಲಯವಾರು ಖಾಲಿ ಇರುವ ಹುದ್ದೆಗಳ ಸಂಪೂರ್ಣ ವಿವರಗಳನ್ನೊಳಗೊಂಡ ಅಧಿಕೃತ ಸುದೀರ್ಘ ಅಧಿಸೂಚನೆಯು ಜೂನ್ 30, 2026 ರಂದು ಬಿಡುಗಡೆಯಾಗಲಿದೆ. ಆಸಕ್ತ ಅಭ್ಯರ್ಥಿಗಳು ರೈಲ್ವೆ ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಜೂನ್ 30 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ- ಹುಟ್ಟೂರು ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರೆ. ಕಳೆದ ಮೂರು ವರ್ಷಗಳಿಂದ ‘ಉತ್ತಮ ಸಮಾಜಕ್ಕಾಗಿ’ ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ. ವೈರಲ್ ಸುದ್ದಿಗಳು, ಆಧ್ಯಾತ್ಮ, ಉದ್ಯೋಗವಕಾಶ, ಶಿಕ್ಷಣ, ಆರೋಗ್ಯ ಮತ್ತು ಪ್ರಯಾಣದ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us