ರೈಲ್ವೆ ನೇಮಕಾತಿ: ಕೇಂದ್ರ ರೈಲ್ವೆಯ 2,861 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಪರೀಕ್ಷೆ ಇಲ್ಲದೆ ನೇರ ಆಯ್ಕೆ

RRC ಮುಂಬೈ ಕೇಂದ್ರ ರೈಲ್ವೆಯಲ್ಲಿ 2861 ಆಕ್ಟ್ ಅಪ್ರೆಂಟಿಸ್ ಹುದ್ದೆಗಳಿಗೆ ಅಧಿಸೂಚನೆ ಪ್ರಕಟವಾಗಿದೆ. ITI ಉತ್ತೀರ್ಣರಾದ ಅಭ್ಯರ್ಥಿಗಳು ವಿವಿಧ ಟ್ರೇಡ್‌ಗಳಲ್ಲಿ ಅರ್ಜಿ ಸಲ್ಲಿಸಬಹುದು. 10ನೇ ತರಗತಿ ಮತ್ತು ITI ಅಂಕಗಳ ಆಧಾರದ ಮೇಲೆ ಆಯ್ಕೆ ನಡೆಯಲಿದ್ದು, ಆನ್‌ಲೈನ್ ಅರ್ಜಿ ಸಲ್ಲಿಸಲು ಡಿಸೆಂಬರ್ 2 ಕೊನೆಯ ದಿನಾಂಕ. ಮಾಸಿಕ 9,600 ರೂ. ಸ್ಟೈಫಂಡ್ ಲಭ್ಯ. ಆಸಕ್ತರು ತಡಮಾಡದೇ ಕೂಡಲೇ ಅರ್ಜಿ ಸಲ್ಲಿಸಿ.

ರೈಲ್ವೆ ನೇಮಕಾತಿ: ಕೇಂದ್ರ ರೈಲ್ವೆಯ 2,861 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಪರೀಕ್ಷೆ ಇಲ್ಲದೆ ನೇರ ಆಯ್ಕೆ
ರೈಲ್ವೆ ನೇಮಕಾತಿ
Image Credit source: India Today

Updated on: Nov 21, 2026 | 2:28 PM

ರೈಲ್ವೆ ನೇಮಕಾತಿ ಕೋಶ (RRC), ಮುಂಬೈ, ಕೇಂದ್ರ ರೈಲ್ವೆಯ ಅಡಿಯಲ್ಲಿ ಬರುವ ವಿವಿಧ ಕಾರ್ಯಾಗಾರಗಳು ಮತ್ತು ಘಟಕಗಳಲ್ಲಿ ಆಕ್ಟ್ ಅಪ್ರೆಂಟಿಸ್ (Act Apprentice) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಒಟ್ಟು 2,861 ಖಾಲಿ ಹುದ್ದೆಗಳನ್ನು ಫಿಟ್ಟರ್, ಎಲೆಕ್ಟ್ರಿಷಿಯನ್, ವೆಲ್ಡರ್, ಮೆಷಿನಿಸ್ಟ್ ಸೇರಿದಂತೆ ವಿವಿಧ ಐಟಿಐ (ITI) ಟ್ರೇಡ್‌ಗಳಲ್ಲಿ ಭರ್ತಿ ಮಾಡಲಾಗುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಡಿಸೆಂಬರ್ 2 ಕೊನೆಯ ದಿನಾಂಕವಾಗಿದೆ.

ಲಭ್ಯವಿರುವ ಟ್ರೇಡ್‌ಗಳು ಮತ್ತು ಕ್ಲಸ್ಟರ್‌ವಾರು ಹುದ್ದೆಗಳ ವಿವರ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಆಯಾ ಕ್ಲಸ್ಟರ್‌ಗಳ ಅಡಿಯಲ್ಲಿರುವ ಕಾರ್ಯಾಗಾರಗಳು, ಡಿಪೋಗಳು ಮತ್ತು ಇತರ ವಿಭಾಗಗಳಲ್ಲಿ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ತರಬೇತಿ ನೀಡಲಾಗುತ್ತದೆ. ಫಿಟ್ಟರ್, ಮೆಷಿನಿಸ್ಟ್, ಶೀಟ್ ಮೆಟಲ್ ವರ್ಕರ್, ವೆಲ್ಡರ್, ಎಲೆಕ್ಟ್ರಿಷಿಯನ್, ಕಾರ್ಪೆಂಟರ್, ಮೆಕ್ಯಾನಿಕ್ ಮೆಷಿನ್ ಟೂಲ್ಸ್ ನಿರ್ವಹಣೆ, ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಂ ಅಸಿಸ್ಟೆಂಟ್ (COPA), ಮೆಕ್ಯಾನಿಕ್ ಹಾಗೂ ಪೇಂಟರ್ ಟ್ರೇಡ್‌ಗಳಲ್ಲಿ ಹುದ್ದೆಗಳಿವೆ. ಸೆಂಟ್ರಲ್ ರೈಲ್ವೆಯ ಐದು ಕ್ಲಸ್ಟರ್‌ಗಳಲ್ಲಿ ಒಟ್ಟು 2,861 ಹುದ್ದೆಗಳನ್ನು ಹಂಚಿಕೆ ಮಾಡಲಾಗಿದ್ದು, ಮುಂಬೈ ಕ್ಲಸ್ಟರ್‌ನಲ್ಲಿ 1,712, ಭೂಸಾವಲ್ ಕ್ಲಸ್ಟರ್‌ನಲ್ಲಿ 500, ಪುಣೆ ಕ್ಲಸ್ಟರ್‌ನಲ್ಲಿ 271, ನಾಗ್ಪುರ ಕ್ಲಸ್ಟರ್‌ನಲ್ಲಿ 221 ಹಾಗೂ ಸೋಲಾಪುರ ಕ್ಲಸ್ಟರ್‌ನಲ್ಲಿ 157 ಹುದ್ದೆಗಳು ಖಾಲಿ ಇವೆ.

Loading...

ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ:

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ ಶೇ.50 ಅಂಕಗಳೊಂದಿಗೆ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಜೊತೆಗೆ ಸಂಬಂಧಿತ ಟ್ರೇಡ್‌ನಲ್ಲಿ ಐಟಿಐ (ITI) ಪೂರ್ಣಗೊಳಿಸಿ ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರ (NTC) ಹೊಂದಿರಬೇಕು. ಎಂಜಿನಿಯರಿಂಗ್ ಪದವಿ ಅಥವಾ ಡಿಪ್ಲೊಮಾ ಹೊಂದಿರುವವರು ಈ ಹುದ್ದೆಗಳಿಗೆ ಅರ್ಹರಲ್ಲ. ಇನ್ನು ಅಭ್ಯರ್ಥಿಗಳ ವಯಸ್ಸು ನವೆಂಬರ್ 3, 2026 ರಂತೆ ಕನಿಷ್ಠ 15 ವರ್ಷ ಮತ್ತು ಗರಿಷ್ಠ 24 ವರ್ಷಗಳ ನಡುವೆ ಇರಬೇಕು. ಸರ್ಕಾರಿ ನಿಯಮಾವಳಿಗಳ ಪ್ರಕಾರ, ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಇದನ್ನೂ ಓದಿ: ಮೊದಲ ಉದ್ಯೋಗ ಪಡೆಯುವುದು ಹೇಗೆ? ಫ್ರೆಶರ್‌ಗಳು ತಿಳಿದುಕೊಳ್ಳಬೇಕಾದ ಪ್ರಮುಖ ವಿಚಾರಗಳಿವು

ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ:

ಸಾಮಾನ್ಯ (General) ಮತ್ತು ಒಬಿಸಿ (OBC) ವರ್ಗದ ಅಭ್ಯರ್ಥಿಗಳಿಗೆ ತಲಾ ರೂ. 100 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಎಸ್‌ಸಿ (SC), ಎಸ್‌ಟಿ (ST), ದಿವ್ಯಾಂಗರು (PwBD) ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ನಿಗದಿತ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಡಿಸೆಂಬರ್ 2 ರವರೆಗೆ ಆನ್‌ಲೈನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.

ಆಯ್ಕೆ ಪ್ರಕ್ರಿಯೆ ಮತ್ತು ಸ್ಟೈಫಂಡ್ ವಿವರ:

ಈ ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ; ಬದಲಾಗಿ 10ನೇ ತರಗತಿ ಮತ್ತು ಐಟಿಐನಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಿ, ಮೀಸಲಾತಿ ನಿಯಮದಂತೆ ಆಯ್ಕೆ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು ರೂ. 9,600 ಸ್ಟೈಫಂಡ್ ನೀಡಲಾಗುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:28 pm, Sat, 21 November 26

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಸದ್ಯ ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ರಾಜಕೀಯ, ಕ್ರೈಂ ಸುದ್ದಿಗಳನ್ನು ಬರೆಯುತ್ತಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us