AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೌಚಾಲಯದ ಬಗ್ಗೆ ಮಾತನಾಡಿದ್ದಕ್ಕೆ ಗೇಲಿ ಮಾಡಿದ್ದರು, 12 ವರ್ಷಗಳಲ್ಲಿ 50 ಕೋಟಿ ಜನ ಬಡತನದಿಂದ ಹೊರಬಂದಿದ್ದಾರೆ: ಪ್ರಧಾನಿ ಮೋದಿ

ಬಡವರಿಗಾಗಿ ಶೌಚಾಲಯ ನಿರ್ಮಿಸುವುದಾಗಿ ಘೋಷಿಸಿದಾಗ ಸಂಸತ್ತಿನಲ್ಲಿ ತಮ್ಮನ್ನು ಗೇಲಿ ಮಾಡಲಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ. ಕಳೆದ 12ರಿಂದ 13 ವರ್ಷಗಳಲ್ಲಿ ಭಾರತದಲ್ಲಿ 50 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ವಿಶ್ವಬ್ಯಾಂಕ್ ವರದಿ ತಿಳಿಸಿರುವುದನ್ನು ಅವರು ಐಐಟಿ ಖರಗ್‌ಪುರದ ಪ್ಲಾಟಿನಂ ಜುಬಿಲಿ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ್ದಾರೆ.

ಶೌಚಾಲಯದ ಬಗ್ಗೆ ಮಾತನಾಡಿದ್ದಕ್ಕೆ ಗೇಲಿ ಮಾಡಿದ್ದರು, 12 ವರ್ಷಗಳಲ್ಲಿ 50 ಕೋಟಿ ಜನ ಬಡತನದಿಂದ ಹೊರಬಂದಿದ್ದಾರೆ: ಪ್ರಧಾನಿ ಮೋದಿ
ಐಐಟಿ ಖರಗ್‌ಪುರದ ಪ್ಲಾಟಿನಂ ಜುಬಿಲಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ
ಗಣಪತಿ ಶರ್ಮಾ
|

Updated on: Nov 21, 2026 | 1:07 PM

Share

ಮುಖ್ಯಾಂಶಗಳು

  • ಶೌಚಾಲಯ ಘೋಷಣೆ ಮಾಡಿದ್ದಕ್ಕೆ ಸಂಸತ್ತಿನಲ್ಲಿ ಗೇಲಿ: ಮೋದಿ ಮೆಲುಕು
  • 12ರಿಂದ 13 ವರ್ಷಗಳಲ್ಲಿ 50 ಕೋಟಿ ಜನ ಬಡತನದಿಂದ ಹೊರಕ್ಕೆ: ಪ್ರಧಾನಿ
  • ಐಐಟಿ ಖರಗ್‌ಪುರದ 75ನೇ ವರ್ಷದ ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡಿದ ಪಿಎಂ

ಖರಾಗ್​ಪುರ (ಪಶ್ಚಿಮ ಬಂಗಾಳ), ನವೆಂಬರ್ 21: ಬಡವರಿಗಾಗಿ ಶೌಚಾಲಯ ನಿರ್ಮಿಸುವುದಾಗಿ ಘೋಷಿಸಿದಾಗ ಸಂಸತ್ತಿನಲ್ಲಿ ಗೇಲಿ ಮಾಡಲಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ. ದೇಶದ ಜನಸಂಖ್ಯೆ ಹೆಚ್ಚಿರುವ ಕಾರಣ ಬಡತನ ನಿರ್ಮೂಲನೆ ಸಾಧ್ಯವಿಲ್ಲ ಎಂಬ ಮನಸ್ಥಿತಿಯನ್ನು ತಮ್ಮ ಸರ್ಕಾರ ಕಳೆದ 12 ವರ್ಷಗಳಲ್ಲಿ ಬದಲಾಯಿಸಿದೆ ಎಂದು ಅವರು ಹೇಳಿದ್ದಾರೆ. ಪಶ್ಚಿಮ ಬಂಗಾಳದ ಖರಗ್‌ಪುರದಲ್ಲಿರುವ ಐಐಟಿ ಖರಗ್‌ಪುರದ ಪ್ಲಾಟಿನಂ ಜುಬಿಲಿ (75ನೇ ವರ್ಷದ) ಸಂಭ್ರಮಾಚರಣೆಯಲ್ಲಿ ಮಾತನಾಡಿದ ಅವರು, ವಿಶ್ವಬ್ಯಾಂಕ್‌ನ ಇತ್ತೀಚಿನ ವರದಿಯನ್ನು ಉಲ್ಲೇಖಿಸಿ, ಕಳೆದ 12ರಿಂದ 13 ವರ್ಷಗಳಲ್ಲಿ ಭಾರತದಲ್ಲಿ 50 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಹಲವು ದಶಕಗಳಿಂದ ಬಡತನವನ್ನು ಶಾಶ್ವತ ಸಮಸ್ಯೆ ಎಂದೇ ಪರಿಗಣಿಸಲಾಗಿತ್ತು. ಬಡತನ ನಿರ್ಮೂಲನೆಗೆ ಘೋಷಣೆಗಳು ಕೇಳಿಬರುತ್ತಿದ್ದರೂ, ನೀತಿ ನಿರ್ಧಾರಗಳನ್ನು ಕಾರ್ಯರೂಪಕ್ಕೆ ತರುವ ಹಂತದಲ್ಲಿ ವ್ಯವಸ್ಥೆಯು ಕಡತಗಳಲ್ಲೇ ವಿಷಯವನ್ನು ಮುಚ್ಚಿಡುತ್ತಿತ್ತು. ಜನಸಂಖ್ಯೆ ಹೆಚ್ಚಿರುವುದರಿಂದ ಬಡತನವನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಿಲ್ಲ ಎಂಬ ಮನಸ್ಥಿತಿ ಇದಕ್ಕೆ ಕಾರಣವಾಗಿತ್ತು ಎಂದು ಮೋದಿ ಹೇಳಿದರು.

ಇವರೆಂಥಾ ಪ್ರಧಾನಿ ಎಂದು ಹಾಸ್ಯ ಮಾಡಿದ್ದರು: ಮೋದಿ ಮೆಲುಕು

ಎನ್​ಡಿಎ ಸರ್ಕಾರ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ಕೆಂಪುಕೋಟೆಯಿಂದ ಬಡವರಿಗಾಗಿ ಶೌಚಾಲಯ ನಿರ್ಮಿಸುವುದಾಗಿ ಘೋಷಿಸಿದ್ದನ್ನು ನೆನಪಿಸಿಕೊಂಡ ಪ್ರಧಾನಿ, ಈ ವಿಚಾರವಾಗಿ ಸಂಸತ್ತಿನಲ್ಲಿ ಟೀಕೆ ಮತ್ತು ಅಪಹಾಸ್ಯ ಎದುರಿಸಬೇಕಾಯಿತು ಎಂದರು. ‘ಎಂಥ ಪ್ರಧಾನಮಂತ್ರಿ ಇವರು, ಶೌಚಾಲಯ ನಿರ್ಮಿಸುವ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಕೆಲವರು ವ್ಯಂಗ್ಯವಾಡಿದ್ದರು. ಆದರೆ, ಬಡವರಿಗೆ, ಅದರಲ್ಲೂ ಮಹಿಳೆಯರು ಮತ್ತು ತಾಯಂದಿರಿಗೆ ಶೌಚಾಲಯ ಎಷ್ಟು ಅಗತ್ಯ ಎಂಬುದನ್ನು ಟೀಕಿಸಿದವರು ಅರ್ಥಮಾಡಿಕೊಳ್ಳಲಿಲ್ಲ ಎಂದು ಹೇಳಿದರು.

‘ಪವರ್ ಟು ಎಂಪವರ್’ ತತ್ವದಡಿ ಕೆಲಸ ಮಾಡಿದ್ದೇವೆ: ಮೋದಿ

ಕಳೆದ 12 ವರ್ಷಗಳಲ್ಲಿ ಈ ರೀತಿಯ ಸೀಮಿತ ಮನಸ್ಥಿತಿಯನ್ನು ಬದಲಾಯಿಸಲು ತಮ್ಮ ಸರ್ಕಾರ ಪ್ರಯತ್ನಿಸಿದೆ. ‘ಪವರ್ ಟು ಎಂಪವರ್ (ಸಬಲೀಕರಣಕ್ಕೆ ಶಕ್ತಿ)’ ಎಂಬ ತತ್ವದಡಿ ಕೆಲಸ ಮಾಡಲಾಗಿದೆ ಎಂದು ಮೋದಿ ತಿಳಿಸಿದರು.

12 ವರ್ಷಗಳಲ್ಲಿ 50 ಕೋಟಿ ಜನರು ಬಡತನದಿಂದ ಮುಕ್ತ: ವಿಶ್ಬ್ಯಾಂಕ್ ವರದಿ ಉಲ್ಲೇಖಿಸಿದ ಪ್ರಧಾನಿ

ತಮ್ಮ ಭಾಷಣದಲ್ಲಿ ವಿಶ್ವಬ್ಯಾಂಕ್‌ನ ಇತ್ತೀಚಿನ ವರದಿಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಕಳೆದ 12ರಿಂದ 13 ವರ್ಷಗಳ ಅವಧಿಯಲ್ಲಿ ಭಾರತದಲ್ಲಿ 50 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ವರದಿ ತಿಳಿಸಿದೆ ಎಂದರು. ಇದು ಸಣ್ಣ ಬದಲಾವಣೆಯಲ್ಲ, ಸವಾಲುಗಳನ್ನು ಮೀರಿ ಸಾಧ್ಯತೆಗಳನ್ನು ತೆರೆದಿಡುವ ಮನಸ್ಥಿತಿಯ ಫಲಿತಾಂಶ ಎಂದು ಅಭಿಪ್ರಾಯಪಟ್ಟರು.

ಐಐಟಿ ಖರಗ್‌ಪುರದ ವಿದ್ಯಾರ್ಥಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ‘ರಾಷ್ಟ್ರ ಮೊದಲು’ ಎಂಬ ಸಂಕಲ್ಪದೊಂದಿಗೆ ಮುನ್ನಡೆಯಬೇಕು ಎಂದು ಕರೆ ನೀಡಿದ ಅವರು, ವೈಯಕ್ತಿಕ ಸಾಧನೆಯ ಜತೆಗೆ ದೇಶದ ಪ್ರಗತಿಗೂ ಕೊಡುಗೆ ನೀಡುವಂತೆ ಸಲಹೆ ನೀಡಿದರು. ಐಐಟಿ ಖರಗ್‌ಪುರ ತನ್ನ 100ನೇ ವಾರ್ಷಿಕೋತ್ಸವ ಆಚರಿಸುವ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿರಬೇಕು ಎಂಬ ಗುರಿಯೊಂದಿಗೆ ಕೆಲಸ ಮಾಡುವಂತೆ ಹೇಳಿದರು.

ಬಾಹ್ಯಾಕಾಶ, ಸೆಮಿಕಂಡಕ್ಟರ್ ಕ್ಷೇತ್ರಗಳ ಪ್ರಗತಿ ಉಲ್ಲೇಖ

ಭಾರತದ ಬಾಹ್ಯಾಕಾಶ ಕ್ಷೇತ್ರವನ್ನು ಯುವಜನರಿಗೆ ಮುಕ್ತಗೊಳಿಸಿರುವುದರಿಂದ ಸ್ಟಾರ್ಟ್‌ಅಪ್‌ಗಳು ದೇಶದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಕೊಡುಗೆ ನೀಡಲು ಸಾಧ್ಯವಾಗಿದೆ ಎಂದು ಪ್ರಧಾನಿ ಹೇಳಿದರು. ಐಐಟಿ ಖರಗ್‌ಪುರದ ಹಳೆಯ ವಿದ್ಯಾರ್ಥಿ ಹಾಗೂ ಸ್ಕೈರೂಟ್ ಏರೋಸ್ಪೇಸ್ ಸಹ-ಸಂಸ್ಥಾಪಕ ಪವನ್ ಕುಮಾರ್ ಚಂದನಾ ಅವರ ಸಾಧನೆಯನ್ನು ಉಲ್ಲೇಖಿಸಿದರು. ಭಾರತದ ಮೊದಲ ಖಾಸಗಿ ರಾಕೆಟ್ ಅಭಿವೃದ್ಧಿಪಡಿಸುವಲ್ಲಿ ಸ್ಕೈರೂಟ್ ಏರೋಸ್ಪೇಸ್ ಪ್ರಮುಖ ಪಾತ್ರ ವಹಿಸಿದೆ ಎಂದು ತಿಳಿಸಿದರು.

ಸೆಮಿಕಂಡಕ್ಟರ್ ಕ್ಷೇತ್ರದ ಕುರಿತು ಮಾತನಾಡಿದ ಮೋದಿ, ಸುಮಾರು 50 ವರ್ಷಗಳ ಹಿಂದೆ ಭಾರತದಲ್ಲಿ ಸೆಮಿಕಂಡಕ್ಟರ್ ತಯಾರಿಸಲು ಬಂದಿದ್ದ ಕಂಪನಿಯೊಂದಕ್ಕೆ ಅನುಮತಿ ನೀಡದೆ ವಾಪಸ್ ಕಳುಹಿಸಲಾಗಿತ್ತು ಎಂದು ಹೇಳಿದರು. ತಾವು ಸೆಮಿಕಂಡಕ್ಟರ್ ಮಿಷನ್ ಆರಂಭಿಸುವುದಾಗಿ ಘೋಷಿಸಿದಾಗ ತಡವಾಗಿದೆ ಎಂದು ಕೆಲವರು ಟೀಕಿಸಿದ್ದರು. ಆದರೆ, ಸರ್ಕಾರ ಮಿಷನ್ ಆರಂಭಿಸಿದ್ದು, ಇದೀಗ ಭಾರತ ಚಿಪ್‌ಗಳನ್ನು ರಫ್ತು ಮಾಡಲು ಪ್ರಾರಂಭಿಸಿದೆ ಎಂದು ತಿಳಿಸಿದರು.

ಕನಸು, ಸಾಮರ್ಥ್ಯಕ್ಕೆ ಮಿತಿ ಹಾಕಬಾರದು: ಮೋದಿ ಕಿವಿಮಾತು

ವ್ಯಕ್ತಿಗಳು ಮತ್ತು ದೇಶಗಳು ತಮ್ಮ ಕನಸು, ಪ್ರತಿಭೆ ಹಾಗೂ ಸಾಮರ್ಥ್ಯಕ್ಕೆ ತಾವೇ ಮಿತಿ ಹಾಕಿಕೊಳ್ಳಬಾರದು. ಇಂತಹ ಸೀಮಿತ ನಂಬಿಕೆಗಳನ್ನು ಮೀರಿ ಮುನ್ನಡೆಯಬೇಕು ಎಂದು ಪ್ರಧಾನಿ ಕರೆ ನೀಡಿದರು. ಕಳೆದ ಕೆಲವು ವರ್ಷಗಳಲ್ಲಿ ಭಾರತ ತನ್ನ ಆಲೋಚನೆಗಳ ಮಿತಿಯನ್ನು ದಾಟಿ ಸಾಮರ್ಥ್ಯವನ್ನು ಸಾಬೀತುಪಡಿಸಿದೆ ಎಂದರು.

ಇದನ್ನೂ ಓದಿ: ‘ಜಾಗತಿಕ ಶಾಂತಿಗೆ ಸಾಂಸ್ಕೃತಿಕ ಸಂಪರ್ಕವೇ ಬಲವಾದ ಗ್ಯಾರಂಟಿ’; ಮೊದಲ ಎಸ್‌ಸಿಒ ಸಂವಾದ ವೇದಿಕೆಯಲ್ಲಿ ಪ್ರಧಾನಿ ಮೋದಿ

ಐಐಟಿ ಖರಗ್‌ಪುರದ 75 ವರ್ಷಗಳ ಸಾಧನೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಸಂಸ್ಥೆಯ ಪ್ಲಾಟಿನಂ ಜುಬಿಲಿ ಆಚರಣೆಯ ಸಂದರ್ಭದಲ್ಲಿ 75ನೇ ವರ್ಷದ ನೆನಪಿನ ವಿಶೇಷ ಸ್ಮರಣಾರ್ಥ ನಾಣ್ಯವನ್ನೂ ಬಿಡುಗಡೆ ಮಾಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
ಬಿಗ್ ಬಾಸ್ ನಾಮಿನೇಷನ್ ಪಟ್ಟಿಯಲ್ಲಿ 6 ಜನ; ವಾರ ಹೊರಹೋಗುವ ಸ್ಪರ್ಧಿ ಯಾರು?
ಬಿಗ್ ಬಾಸ್ ನಾಮಿನೇಷನ್ ಪಟ್ಟಿಯಲ್ಲಿ 6 ಜನ; ವಾರ ಹೊರಹೋಗುವ ಸ್ಪರ್ಧಿ ಯಾರು?
ಪುಟ್ಟೇನಹಳ್ಳಿ ವಿನಾಯಕ ನಗರದಲ್ಲಿ ಮದುವೆ ವಿಚಾರಕ್ಕೆ ಗನ್ ತೋರಿಸಿ ಬೆದರಿಕೆ
ಪುಟ್ಟೇನಹಳ್ಳಿ ವಿನಾಯಕ ನಗರದಲ್ಲಿ ಮದುವೆ ವಿಚಾರಕ್ಕೆ ಗನ್ ತೋರಿಸಿ ಬೆದರಿಕೆ
ಸಾರ್ವಜನಿಕರ ದೂರುಗಳು ‘ಸಕಾಲ’ ವ್ಯಾಪ್ತಿಗೆ: ವಿಳಂಬಕ್ಕೆ ₹1,500 ದಂಡ
ಸಾರ್ವಜನಿಕರ ದೂರುಗಳು ‘ಸಕಾಲ’ ವ್ಯಾಪ್ತಿಗೆ: ವಿಳಂಬಕ್ಕೆ ₹1,500 ದಂಡ
ತುಳಸಿ ವಿವಾಹದ ಶುಭ ದಿನದಂದು ಯಾವ ರಾಶಿಯವರಿಗೆ ಒಲಿಯಲಿದೆ ಅದೃಷ್ಟ?
ತುಳಸಿ ವಿವಾಹದ ಶುಭ ದಿನದಂದು ಯಾವ ರಾಶಿಯವರಿಗೆ ಒಲಿಯಲಿದೆ ಅದೃಷ್ಟ?
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು; ಮನೆಯ ಮಹರಾಣಿ ಸೇರಿ ಮೂವರು ಕಳಪೆ
ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು; ಮನೆಯ ಮಹರಾಣಿ ಸೇರಿ ಮೂವರು ಕಳಪೆ
ಹಾಸನ: 32 ಕಾಡಾನೆಗಳ ಹಿಂಡು ಪತ್ತೆ, ಡ್ರೋನ್​​ ಕ್ಯಾಮರಾದಲ್ಲಿ ದೃಶ್ಯ ಸೆರೆ
ಹಾಸನ: 32 ಕಾಡಾನೆಗಳ ಹಿಂಡು ಪತ್ತೆ, ಡ್ರೋನ್​​ ಕ್ಯಾಮರಾದಲ್ಲಿ ದೃಶ್ಯ ಸೆರೆ
ದನದ ಶೆಡ್ ಬಿಲ್ ಬಾಕಿ:ಪಂಚಾಯ್ತಿ ಮುಂದೆ ಎಮ್ಮೆ ಕರು ಕಟ್ಟಿದ ಫಲಾನುಭವಿ
ದನದ ಶೆಡ್ ಬಿಲ್ ಬಾಕಿ:ಪಂಚಾಯ್ತಿ ಮುಂದೆ ಎಮ್ಮೆ ಕರು ಕಟ್ಟಿದ ಫಲಾನುಭವಿ
ಚಿಕ್ಕಣ್ಣನ ಡ್ಯಾನ್ಸ್ ನೋಡಿ ಪ್ರಭುದೇವಗೆ ಹೋಲಿಸಿದ ಶಿವಣ್ಣ
ಚಿಕ್ಕಣ್ಣನ ಡ್ಯಾನ್ಸ್ ನೋಡಿ ಪ್ರಭುದೇವಗೆ ಹೋಲಿಸಿದ ಶಿವಣ್ಣ
ಹೆಚ್​​​ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಹೆಚ್​​​ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಲಕ್ಷ್ಮೀಪುತ್ರ ಟ್ರೇಲರ್‌ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್
ಲಕ್ಷ್ಮೀಪುತ್ರ ಟ್ರೇಲರ್‌ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್