ಇಂದಿನಿಂದ ಗುಜರಾತ್​ನಲ್ಲಿ ಎಬಿಪಿ ಸಭೆ ಪ್ರಾರಂಭ; ಆರ್​ಎಸ್​ಎಸ್​ ಶಾಖೆ ವಿಸ್ತರಣೆ, ಇನ್ನಿತರ ವಿಚಾರಗಳ ಸಮಗ್ರ ಚರ್ಚೆ

| Updated By: Lakshmi Hegde

Updated on: Mar 11, 2022 | 1:53 PM

ದೇಶದಲ್ಲಿ ಸುಮಾರು 59 ಸಾವಿರ ಮಂಡಲಗಳಿವೆ. ಪ್ರತಿ ಮಂಡಲದಲ್ಲೂ 10-12 ಹಳ್ಳಿಗಳು ಇವೆ. ಎಲ್ಲ ಮಂಡಲಗಳಲ್ಲೂ ಶಾಖೆಯನ್ನು ವಿಸ್ತರಿಸುವ ಪ್ರಯತ್ನದಲ್ಲಿ ಆರ್​ಎಸ್​ಎಸ್​ ತೊಡಗಿದೆ ಎಂದು ಮನಮೋಹನ್​ ವೈದ್ಯ ಇಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಇಂದಿನಿಂದ ಗುಜರಾತ್​ನಲ್ಲಿ ಎಬಿಪಿ ಸಭೆ ಪ್ರಾರಂಭ; ಆರ್​ಎಸ್​ಎಸ್​ ಶಾಖೆ ವಿಸ್ತರಣೆ, ಇನ್ನಿತರ ವಿಚಾರಗಳ ಸಮಗ್ರ ಚರ್ಚೆ
ಆರ್​ಎಸ್​ಎಸ್​ ಮುಖಂಡರ ಸುದ್ದಿಗೋಷ್ಠಿ
Follow us on

ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS)ದ ಉನ್ನತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಸ್ಥೆ ಅಖಿಲ ಭಾರತೀಯ ಪ್ರತಿನಿಧಿ ಸಭಾ (ABP) ಇಂದಿನಿಂದ ಮೂರು ದಿನಗಳ ಸಭೆ ನಡೆಸಲಿದ್ದು, ಈ ಸಭೆ ಗುಜರಾತ್​​ನ ಅಹ್ಮದಾಬಾದ್​ನ ಪಿರಾನಾ ಗ್ರಾಮದಲ್ಲಿ ನಡೆಯಲಿದೆ. ಸಂಘಟನೆಯ ವಿಸ್ತರಣೆ ಸೇರಿ ಇನ್ನೂ ಅನೇಕ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​, ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಸೇರಿ ಸುಮಾರು 1200 ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ (ಇದು ಸಾರ್ವಜನಿಕ ಸಭೆಯಲ್ಲ, ಕೇವಲ ಆರ್​ಎಸ್​ಎಸ್​ ಪದಾಧಿಕಾರಿಗಳು, ಮುಖಂಡರಿಗಷ್ಟೇ ಅವಕಾಶ ಇರಲಿದೆ.)

ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿದ ಆರ್​ಎಸ್​ಎಸ್​ನ ಸಹ ಸರಕಾರ್ಯವಾಹ (ಜಂಟಿ ಪ್ರಧಾನ ಕಾರ್ಯದರ್ಶಿ) ಮನಮೋಹನ್​ ವೈದ್ಯ, ಆರ್​ಎಸ್​ಎಸ್​ ಸದ್ಯ ದೇಶಾದ್ಯಂತ ದಿನವೂ 60 ಸಾವಿರ ಶಾಖೆಗಳನ್ನು ನಡೆಸುತ್ತಿದೆ. ಕೊವಿಡ್​ ಕಾರಣದಿಂದ ಕೆಲ ಕಾಲ ಶಾಖೆಗಳು ಸ್ಥಗಿತಗೊಂಡಿದ್ದರೂ, ಇದೀಗ ಶೇ.97.5ರಷ್ಟು ಶಾಖೆಗಳು ಮತ್ತೆ ಪ್ರಾರಂಭಗೊಂಡಿವೆ.  ಈ ಶಾಖೆಗಲ್ಲಿ ಶೇ.61ರಷ್ಟು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೇ ಇದ್ದಾರೆ. ಆರ್​ಎಸ್​ಎಸ್​ ಬಗ್ಗೆ ಯುವಕರು ತೋರಿಸುತ್ತಿರುವ ಆಸಕ್ತಿಯನ್ನು ಇದು ತೋರಿಸುತ್ತದೆ. ದೇಶದ ಒಟ್ಟಾರೆ ನಗರಗಳ ಸಂಖ್ಯೆಯಲ್ಲಿ ಶೇ.94ರಷ್ಟು ನಗರಗಳಲ್ಲಿ ಆರ್​ಎಸ್​ಎಸ್​ ಶಾಖೆ ಇದೆ.  ಇದು ನಮ್ಮ ಸಂಘದ ವಿಸ್ತರಣಾ ಬಲವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ದೇಶದಲ್ಲಿ ಸುಮಾರು 59 ಸಾವಿರ ಮಂಡಲಗಳಿವೆ. ಪ್ರತಿ ಮಂಡಲದಲ್ಲೂ 10-12 ಹಳ್ಳಿಗಳು ಇವೆ. ಎಲ್ಲ ಮಂಡಲಗಳಲ್ಲೂ ಶಾಖೆಯನ್ನು ವಿಸ್ತರಿಸುವ ಪ್ರಯತ್ನದಲ್ಲಿ ಆರ್​ಎಸ್​ಎಸ್​ ತೊಡಗಿದೆ. ಕೊರೊನಾ ವೈರಸ್ ಕಾರಣದಿಂದ ನಮ್ಮ ಸಂಘಟನೆ ವಿಸ್ತರಣೆಗೆ ತಡೆಯಾಗಿತ್ತು. ಆದರೆ ಈಗ ಮತ್ತೆ ಕಾರ್ಯಗತಗೊಳಿಸುತ್ತಿದ್ದು, ಇನ್ನೆರಡು ವರ್ಷಗಳಲ್ಲಿ ಬಹುತೇಕ ಮಂಡಲಗಳಲ್ಲಿ ಆರ್​ಎಸ್​ಎಸ್ ಶಾಖೆ ವಿಸ್ತರಣೆ ಮಾಡುವುದು ನಮ್ಮ ಮಹದುದ್ದೇಶ ಎಂದೂ ಮನಮೋಹನ್​ ವೈದ್ಯ ಮಾಹಿತಿ ನೀಡಿದ್ದಾರೆ.

ಈ ಶಾಖೆಗಳ ಮೂಲಕವಷ್ಟೇ ಅಲ್ಲ, ಅನೇಕ ಜನರು ನಮ್ಮ ಆರ್​ಎಸ್​ಎಸ್ ಸೇರಿ (Join RSS) ಎಂಬ ಅಭಿಯಾನದ ಮೂಲಕವೇ ಸಂಘಕ್ಕೆ ಸೇರ್ಪಡೆಗೊಳ್ಳಲು ಆಸಕ್ತಿ ತೋರುತ್ತಿದ್ದಾರೆ. ಈ ಅಭಿಯಾನವನ್ನು ನಮ್ಮ ಸಂಘದ ವೆಬ್​ಸೈಟ್​​ನಲ್ಲಿ ನಡೆಸಲಾಗುತ್ತಿದೆ. ಆರ್​ಎಸ್​ಎಸ್​ನ್ನು ತಳದಿಂದಲೇ ವಿಸ್ತರಿಸುವ ಬಗ್ಗೆ, ಶಾಖೆ ವಿಸ್ತರಣೆ ಕುರಿತಾಗಿ ಈ ಮೂರು ದಿನಗಳ ಸಮಾವೇಶದಲ್ಲಿ ಸಮಗ್ರವಾಗಿ ಚರ್ಚಿಸಲಾಗುತ್ತದೆ. ಈ ಮೂಲಕ ಯೋಜನೆ ರೂಪಿಸಲಾಗುತ್ತದೆ. ಇದರೊಂದಿಗೆ ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಮತ್ತು ನೈಸರ್ಗಿಕ ಕೃಷಿ ಉತ್ತೇಜನ ವಿಚಾರಗಳೂ ಚರ್ಚೆಯಾಗಲಿವೆ ಎಂದು ಹೇಳಿದ್ದಾರೆ.   2017ರಿಂದ 2021ರವರೆಗೆ ಸುಮಾರು 1ರಿಂದ 1.25 ಲಕ್ಷ ಜನರು ಆರ್​ಎಸ್​ಎಸ್ ಸೇರಲು ಆಸಕ್ತಿ ತೋರಿಸಿದ್ದಾರೆ.  ದೇಶದ ಕೇಂದ್ರ ಭಾಗದಿಂದ ಮತ್ತು ಪಶ್ಚಿಮ ಬಂಗಾಳದಿಂದ ಅನೇಕ ಮನವಿಗಳು ಬಂದಿದ್ದವೂ ಎಂದೂ ಮನಮೋಹನ್​ ವೈದ್ಯ ತಿಳಿಸಿದ್ದಾರೆ.

ಇದನ್ನೂ ಓದಿ: ಇನ್ನಾದರೂ ಪುಸ್ತಕ ತೆರೆದು ಓದಲಿ; ಅನಗತ್ಯವಾಗಿ ಆರ್​ಎಸ್​ಎಸ್​ ಬಗ್ಗೆ ಮಾತಾಡುವುದು ಸರಿಯಲ್ಲ: ಡಿಕೆ ಸುರೇಶ್ ಟ್ವೀಟ್​ಗೆ ಬಿಸಿ ನಾಗೇಶ್ ಪ್ರತಿಕ್ರಿಯೆ

Published On - 1:52 pm, Fri, 11 March 22