Sabarimala Temple: ಇಂದಿನಿಂದ ಶಬರಿಮಲೆ ದೇಗುಲ ಓಪನ್; ದಿನಕ್ಕೆ 5,000 ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ

| Updated By: ಸುಷ್ಮಾ ಚಕ್ರೆ

Updated on: Jul 17, 2021 | 11:12 AM

Sabarimala Temple Reopen | ಶಬರಿಮಲೆ ದೇವಸ್ಥಾನದಲ್ಲಿ ಒಂದು ದಿನಕ್ಕೆ ಕೇವಲ 5,000 ಮಂದಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಭಕ್ತರು ಆನ್​ಲೈನ್​ನಲ್ಲಿ ಹೆಸರು, ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿ ನೀಡುವುದು ಕಡ್ಡಾಯ.

Sabarimala Temple: ಇಂದಿನಿಂದ ಶಬರಿಮಲೆ ದೇಗುಲ ಓಪನ್; ದಿನಕ್ಕೆ 5,000 ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ
ಶಬರಿಮಲೆ ದೇಗುಲದಲ್ಲಿ ಭಕ್ತರು
Follow us on

ಶಬರಿಮಲೆ: ಕೇರಳದ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯದ (Sabarimala Ayyappa Swamy Temple) ಬಾಗಿಲು ಇಂದು ಮುಂಜಾನೆ ತೆರೆದಿದ್ದು, ಭಕ್ತರು ದೇವರ ದರ್ಶನ ಪಡೆಯಲು ಅವಕಾಶ ನೀಡಲಾಗಿದೆ. ಶಬರಿಮಲೆಯಲ್ಲಿ ಇಂದಿನಿಂದ ಮೊದಲ ಧಾರ್ಮಿಕ ಪೂಜಾಕಾರ್ಯಗಳು ನಡೆಯಲಿದೆ. ಇಂದಿನಿಂದ ಜುಲೈ 21ರವರೆಗೆ ಐದು ದಿನಗಳ ಪೂಜೆ ನೆರವೇರಿಸಲು ದೇವಾಲಯದ ಬಾಗಿಲು ತೆರೆಯಲಾಗಿದೆ. ಕೇರಳದ ಪಥನಾಂತಿಟ್ಟ ಜಿಲ್ಲೆಯಲ್ಲಿರುವ ಶಬರಿಮಲೆ ದೇವಸ್ಥಾನದಲ್ಲಿ ಪ್ರತಿವರ್ಷ ಕಾರ್ಕಡಕಂ (Karkadakam) ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಆ ಪೂಜೆಗಾಗಿ ಶಬರಿಮಲೆ ದೇವಾಲಯದ ಬಾಗಿಲನ್ನು ಇಂದು ಮುಂಜಾನೆಯಿಂದ ತೆರೆಯಲಾಗಿದೆ. ಆನ್‌ಲೈನ್ ಸರದಿ ಕಡ್ಡಾಯವಾಗಿದ್ದು, ಒಂದು ದಿನಕ್ಕೆ ಕೇವಲ 5,000 ಮಂದಿಗೆ ಮಾತ್ರ ದೇವರ ದರ್ಶನಕ್ಕೆ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಭಕ್ತರು ಆನ್​ಲೈನ್​ನಲ್ಲಿ ಹೆಸರು, ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ನೀಡಿದ ನಂತರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. 

ದೇಗುಲ ಆವರಣದಲ್ಲಿ ಕಡ್ಡಾಯ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಮತ್ತು ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಸೂಕ್ತ ಕೋವಿಡ್ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಆವರಣದಲ್ಲಿ ಭಕ್ತರ ಕೊರೋನಾ ನಿಯಮಗಳನ್ನು ಪಾಲನೆ ಮಾಡಬೇಕೆಂದು ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತ್ಯೇಕ ಮಾರ್ಗಸೂಚಿಗಳನ್ನು ನೀಡಿವೆ. ಅವುಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಭಕ್ತರಿಗೆ ದೇವಸ್ಥಾನದ ಆಡಳಿತ ಮಂಡಳಿ ಸೂಚಿಸಿದೆ.

ಇಂದಿನಿಂದ ಜುಲೈ 21ರವರೆಗೆ ತಿಂಗಳ ಪೂಜಾಕಾರ್ಯಕ್ಕಾಗಿ ಶಬರಿಮಲೆ ದೇವಾಲಯದ ಬಾಗಿಲು ತೆರೆಯಲಾಗಿದೆ. ಈ ಮೊದಲೇ ಶಬರಿಮಲೆಯ ಬಾಗಿಲನ್ನು ಕೆಲವು ದಿನಗಳ ಕಾಲ ತೆರೆದಿದ್ದರೂ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶವಿರಲಿಲ್ಲ. ಕೊರೋನಾ 2ನೇ ಅಲೆ ಶುರುವಾದ ಮೇಲೆ ಇದೇ ಮೊದಲ ಬಾರಿಗೆ ಶಬರಿಮಲೆ ದೇವಸ್ಥಾನಕ್ಕೆ ಭಕ್ತರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ಈ ಬಾರಿಯ ಲಾಕ್‌ಡೌನ್ ಅವಧಿಯಲ್ಲಿ ತನ್ನ ಅಧೀನದಲ್ಲಿರುವ 1,200 ದೇವಾಲಯಗಳಿಗೆ ಭಕ್ತರು ಪ್ರವೇಶಿಸದಂತೆ ತಿರುವಾಂಕೂರು ದೇವಸ್ವಂ ಬೋರ್ಡ್ (ಟಿಡಿಬಿ) ನಿರ್ಬಂಧ ವಿಧಿಸಿತ್ತು. ಆದರೆ, ಆ ದೇವಸ್ಥಾನಗಳಲ್ಲಿ ಅರ್ಚಕರು ಪೂಜಾ ವಿಧಿವಿಧಾನಗಳನ್ನು ನಡೆಸಲು ಅವಕಾಶ ನೀಡಲಾಗಿತ್ತು. ಇಂದಿನಿಂದ 5 ದಿನ ನಡೆಯುವ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಕೇವಲ 5,000 ಮಂದಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗುವುದು. ಎಲ್ಲ ಭಕ್ತಾದಿಗಳು ಕಡ್ಡಾಯವಾಗಿ 48 ಗಂಟೆಗಳ ಹಿಂದೆ ನೀಡಿದ ಕೋವಿಡ್ ನೆಗೆಟಿವ್ ವರದಿಯನ್ನು ಸಲ್ಲಿಸಬೇಕು. ಮಾಸಿಕ ಧಾರ್ಮಿಕ ಆಚರಣೆಗಳ ಬಳಿಕ ಈ ತಿಂಗಳ 21ರಂದು ದೇವಾಲಯ ಮತ್ತೆ ಮುಚ್ಚಲಾಗುತ್ತದೆ ಎಂದು ಟಿಡಿಬಿ ತಿಳಿಸಿದೆ.

ಇದನ್ನೂ ಓದಿ: Sabarimala Temple: ಜು.17ರಿಂದ 5 ದಿನ ಬಾಗಿಲು ತೆರೆಯಲಿರುವ ಶಬರಿಮಲೆ ದೇಗುಲ; ಕೊರೊನಾ ನೆಗೆಟಿವ್​ ರಿಪೋರ್ಟ್ ಕಡ್ಡಾಯ

ಇದನ್ನೂ ಓದಿ: ಶಬರಿಮಲೆ ದೇವಾಲಯ ಪ್ರವೇಶಕ್ಕೆ ಭಕ್ತರಿಗೆ ಅವಕಾಶ; ದಿನಾಂಕ, ಷರತ್ತುಗಳ ವಿವರ ಇಲ್ಲಿದೆ

(Sabarimala Temple Reopens for Devotees till July 21 in Kerala Covid Negative Report Must)

 

Published On - 11:11 am, Sat, 17 July 21