
ಸಾಗರ್, ಸೆಪ್ಟೆಂಬರ್ 06: ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬಂಡಾ ತಹಸಿಲ್ ವ್ಯಾಪ್ತಿಯಲ್ಲಿ ವಿಷಕಾರಿ ಮದ್ಯ ಸೇವಿಸಿ ಕನಿಷ್ಠ ಒಂಬತ್ತು ಮಂದಿ ಮೃತಪಟ್ಟಿದ್ದು, ಹಲವರು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಶನಿವಾರ ಮಧ್ಯರಾತ್ರಿ ಈ ಘಟನೆ ಸಂಭವಿಸಿದ್ದು, ಮದ್ಯ ಸೇವಿಸಿದ ಬೆನ್ನಲ್ಲೇ ಜನರಲ್ಲಿ ತೀವ್ರ ವಾಂತಿ ಮತ್ತು ಎದೆನೋವು ಕಾಣಿಸಿಕೊಂಡಿದೆ. ಸ್ಥಳೀಯ ಪೊಲೀಸರು ಹಾಗೂ ಜಿಲ್ಲಾಡಳಿತ ಸ್ಥಳಕ್ಕೆ ಧಾವಿಸಿದ್ದು, ತನಿಖೆ ತೀವ್ರಗೊಳಿಸಿವೆ.
ಬರಜ್ ಗ್ರಾಮದಲ್ಲಿ ದುರಂತ: ಜಿಲ್ಲಾ ಕೇಂದ್ರದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಬರಜ್ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಶನಿವಾರ ರಾತ್ರಿ ಜನರು ಈ ಮದ್ಯ ಸೇವಿಸಿದ್ದರು. ಕೆಲವೇ ಗಂಟೆಗಳಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದು, ಹಲವರನ್ನು ಬಂಡಾದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲಾಧಿಕಾರಿ ಪ್ರತಿಭಾ ಪಾಲ್ ಮಾತನಾಡಿ, ಕಳೆದ 24 ರಿಂದ 48 ಗಂಟೆಗಳಲ್ಲಿ ಮದ್ಯ ಸೇವಿಸಿದವರು ಅಥವಾ ಸಣ್ಣ ಪ್ರಮಾಣದ ರೋಗಲಕ್ಷಣಗಳಿದ್ದರೂ ತಕ್ಷಣವೇ ಸಮೀಪದ ಸಿವಿಲ್ ಆಸ್ಪತ್ರೆಗೆ ಬಂದು ಪರೀಕ್ಷಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಆರೋಗ್ಯ ಇಲಾಖೆಯ ವಿಶೇಷ ವೈದ್ಯರ ತಂಡಗಳು ಹಳ್ಳಿಗಳಲ್ಲಿ ಮನೆ-ಮನೆಗೆ ತೆರಳಿ ತಪಾಸಣೆ ನಡೆಸುತ್ತಿವೆ.
ಪೊಲೀಸ್ ತನಿಖೆ ಚುರುಕು: ಪೊಲೀಸ್ ವರಿಷ್ಠಾಧಿಕಾರಿ (SP) ಅನುರಾಗ್ ಸುಜಾನಿಯಾ ನೇತೃತ್ವದ ಪೊಲೀಸ್ ಪಡೆ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಮತ್ತಷ್ಟು ಓದಿ: Alcohal Consumption: ಜೋಪಾನ ಮದ್ಯಪಾನದಿಂದ ನಿಮ್ಮ ಈ ಅಂಗಕ್ಕೆ ಹಾನಿ, ಯಶ್ ಬಿರ್ಲಾ ಹೇಳಿದ್ದೇನು?
ಮೆಥನಾಲ್ ವಿಷಕಾರಿ ಅಂಶದ ಶಂಕೆ: ಪ್ರಾಥಮಿಕ ವರದಿಗಳ ಪ್ರಕಾರ, ಸ್ಥಳೀಯವಾಗಿ ತಯಾರಿಸುವ ಕಳ್ಳುಬಟ್ಟಿಯಲ್ಲಿ ನಶೆ ಹೆಚ್ಚಿಸಲು ಕೈಗಾರಿಕಾ ಬಳಕೆಯ ವಿಷಕಾರಿ ರಾಸಾಯನಿಕ ‘ಮೀಥೈಲ್ ಆಲ್ಕೋಹಾಲ್’ ಬಳಸಲಾಗಿರುವ ಶಂಕೆ ವ್ಯಕ್ತವಾಗಿದೆ. ಇದು ನೇರವಾಗಿ ಮನುಷ್ಯನ ನರಮಂಡಲ ಮತ್ತು ಆಂತರಿಕ ಅಂಗಾಂಗಗಳನ್ನು ಕ್ಷಣಾರ್ಧದಲ್ಲಿ ನಿಷ್ಕ್ರಿಯಗೊಳಿಸುತ್ತದೆ.
ಅಕ್ರಮ ಮದ್ಯ ಜಾಲದ ವಿರುದ್ಧ ಕಾರ್ಯಾಚರಣೆ: ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟದ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಬಕಾರಿ ಇಲಾಖೆಯ ಸಿಬ್ಬಂದಿಯ ವೈಫಲ್ಯದ ಬಗ್ಗೆಯೂ ತನಿಖೆಗೆ ಆದೇಶಿಸಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ (FSL) ತಜ್ಞರು ಮದ್ಯದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:31 am, Sun, 6 September 26