ಭಾರತೀಯರು ಬೇರೆಯವರಿಗೆ ಸೇವೆ ಸಲ್ಲಿಸಿದ್ದೇ ಆಯ್ತು, ಸ್ವಂತದ್ದೇನೂ ಸಾಧಿಸಲಿಲ್ಲ: ಸ್ಯಾಮ್ ಪಿತ್ರೋಡಾ

Sam Pitroda says Indian talent is used for serving others: ಭಾರತ ಸಾಕಷ್ಟು ಕಚ್ಚಾ ಪ್ರತಿಭೆಗಳನ್ನು ಸೃಷ್ಟಿಸಿದೆ. ಈ ಪ್ರತಿಭೆಗಳು ದೊಡ್ಡ ಕಂಪನಿಗಳಿಗೆ ಸೇವೆ ಸಲ್ಲಿಸುವುದಕ್ಕೆ ಬಳಕೆ ಆಗುತ್ತಿದೆ ಅಷ್ಟೇ ಎಂದು ಕಾಂಗ್ರೆಸ್ ಅಂತಾರಾಷ್ಟ್ರೀಯ ವಿಭಾಗದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ. 150 ಕೋಟಿ ಜನಸಂಖ್ಯೆಯ ದೇಶದಲ್ಲಿ ಮೊಬೈಲ್​ಗಳಿಗೂ ಒಂದು ಸ್ವಂತ ಆಪರೇಟಿಂಗ್ ಸಿಸ್ಟಂ ತಯಾರಿಸಲು ಆಗಿಲ್ಲ. ಮೈಕ್ರೋಸಾಫ್ಟ್​ನಂತಹ ಕಂಪನಿ ಸೃಷ್ಟಿಸಲು ಆಗಿಲ್ಲ ಎಂದು ಅವರು ಹೇಳಿದ್ದಾರೆ.

ಭಾರತೀಯರು ಬೇರೆಯವರಿಗೆ ಸೇವೆ ಸಲ್ಲಿಸಿದ್ದೇ ಆಯ್ತು, ಸ್ವಂತದ್ದೇನೂ ಸಾಧಿಸಲಿಲ್ಲ: ಸ್ಯಾಮ್ ಪಿತ್ರೋಡಾ
ಸ್ಯಾಮ್ ಪಿತ್ರೋಡಾ

Updated on: Feb 22, 2026 | 6:52 PM

ನವದೆಹಲಿ, ಫೆಬ್ರುವರಿ 22: ಭಾರತ ಸಾಕಷ್ಟು ಯುವ ಪ್ರತಿಭೆಗಳನ್ನು ಸೃಷ್ಟಿಸಿದೆ. ಆದರೆ, ಅವರು ಇತರರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಒಂದೇ ಒಂದು ಜಾಗತಿಕ ಮಟ್ಟದ ತಂತ್ರಜ್ಞಾನ ಉತ್ಪನ್ನಗಳನ್ನು ಭಾರತೀಯರು ಸೃಷ್ಟಿಸಲಿಲ್ಲ. 150 ಕೋಟಿ ಜನಸಂಖ್ಯೆ ಇರುವ ದೇಶಕ್ಕೆ ಇದು ನಾಚಿಕೆಗೇಡಿತನದ ಸಂಗತಿ. ಹೀಗಂದವರು ಕಾಂಗ್ರೆಸ್​ನ ವಿದೇಶೀ ವಿಭಾಗದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ (Sam Pitroda). ಯೂಟ್ಯೂಬ್ ವಾಹಿನಿಯೊಂದರಲ್ಲಿ ಸಂದರ್ಶನದಲ್ಲಿ ಪಾಲ್ಗೊಂಡು ಅವರು ಈ ಮಾತುಗಳನ್ನಾಡಿದ್ದಾರೆ.

‘ನಾವು ಬಹಳ ಸಂಖ್ಯೆಯಲ್ಲಿ ಯುವ ಪ್ರತಿಭೆಗಳನ್ನು ಸೃಷ್ಟಿಸಿದ್ದೇವೆ. ಆದರೆ ಅವರೆಲ್ಲರೂ ಕಚ್ಚಾ ಪ್ರತಿಭೆಗಳು. ಬಹುರಾಷ್ಟ್ರೀಯ ಕಂಪನಿಗಳ ಪ್ರೋಗ್ರಾಮಿಂಗ್, ಬ್ಯಾಂಕಿಂಗ್, ಲೀಗಲ್ ಸಿಸ್ಟಂ, ಕೈಗಾರಿಕೆ, ಉತ್ಪಾದನೆ ಮತ್ತು ಲಾಜಿಸ್ಟಿಕ್ಸ್​ಗಳಗೆ ಈ ಪ್ರತಿಭೆಗಳಿಂದ ಸಹಾಯವಾಗಿದೆಯಷ್ಟೇ’ ಎಂದು ಹಿರಿಯ ಕಾಂಗ್ರೆಸ್ಸಿಗರಾದ ಸ್ಯಾಮ್ ಅಭಿಪ್ರಾಯಪಟ್ಟಿದ್ಧಾರೆ. ಹಾಗೆಯೇ, ಜಾಗತಿಕ ಮಟ್ಟದ ತಂತ್ರಜ್ಞಾನ ಉತ್ಪನ್ನಗಳನ್ನು ಸೃಷ್ಟಿಸಲು ಭಾರತೀಯರು ವಿಫಲರಾಗಿದ್ದಾರೆ ಎಂದೂ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ನೀವೀಗಾಗಲೇ ಬೆತ್ತಲಾಗಿದ್ದೀರಿ, ಬಟ್ಟೆ ಬಿಚ್ಚಿದ್ಯಾಕೆ?’ – ಕಾಂಗ್ರೆಸ್​ಗೆ ಪ್ರಧಾನಿ ಮೋದಿ ತರಾಟೆ

‘ನಮ್ಮದೇ ಸ್ವಂತ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್ ನಿರ್ಮಿಸಲಿಲ್ಲ. ಮೈಕ್ರೋಸಾಫ್ಟ್​ನಂತಹ ದೊಡ್ಡ ಕಂಪನಿಯನ್ನೂ ಹುಟ್ಟುಹಾಕಲಿಲ್ಲ. ನಮ್ಮದೇ ಸ್ವಂತ ಆಪರೇಟಿಂಗ್ ಸಿಸ್ಟಂ ಕಟ್ಟಲಿಲ್ಲ. 150 ಕೋಟಿ ಜನ ಸಂಖ್ಯೆ ಇರುವ ದೇಶಕ್ಕೆ ಅದರದ್ದೇ ಸ್ವಂತ ಆಪರೇಟಿಂಗ್ ಸಿಸ್ಟಂ ಇಲ್ಲ ಎನ್ನುವುದು ನಾಚಿಕೆಗೇಡಿತನದ ಸಂಗತಿ. ಮೊಬೈಲ್ ಫೋನ್​ಗಳಿಗೂ ಒಂದು ಆಪರೇಟಿಂಗ್ ಸಿಸ್ಟಂ ನಿರ್ಮಿಸಲು ನಮ್ಮಿಂದ ಆಗಿಲ್ಲ. ನಮ್ಮ ಪ್ರತಿಭೆಯನ್ನು ಬೇರೆಯವರಿಗೆ ಸೇವೆ ಸಲ್ಲಿಸಲು ಬಳಸುತ್ತಿದ್ದೇವೆ ಅಷ್ಟೇ’ ಎಂದು ಸ್ಯಾಮ್ ಪಿತ್ರೋಡಾ ಹೇಳಿದ್ದಾರೆ.

ಸ್ಯಾಮ್ ಪಿತ್ರೋಡಾ ಅವರ ಈ ಅಭಿಪ್ರಾಯಗಳು ವಿವಾದಕ್ಕೆ ಗ್ರಾಸವಾಗಿವೆ. ಬಿಜೆಪಿ ಪಕ್ಷ ಅವರ ಅನಿಸಿಕೆಯನ್ನು ಟೀಕಿಸಿದೆ. ಸ್ಯಾಮ್ ಪಿತ್ರೋಡಾ ಅವರನ್ನು ಲಷ್ಕರೆ ಕಾಂಗ್ರೆಸ್​ನ ಸಲಹೆಗಾರರೆಂದು ವ್ಯಂಗ್ಯ ಮಾಡಿದೆ. ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲ ಅವರು ಭಾರತೀಯರು ಅಭಿವೃದ್ಧಿಪಡಿಸಿದ ಆಪರೇಟಿಂಗ್ ಸಿಸ್ಟಂಗಳ ಪಟ್ಟಿಯನ್ನೇ ನೀಡಿ ಸ್ಯಾಮ್ ಪಿತ್ರೋಡಾ ಅವರಿಗೆ ಕೌಂಟರ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಭಾರತದ ಅತಿವೇಗದ ಮೆಟ್ರೋ ಮತ್ತು ನಮೋ ಭಾರತ್ ಕಾರಿಡಾರ್ ಉದ್ಘಾಟಿಸಿದ ಪಿಎಂ ಮೋದಿ

ಬಾಸ್ ಲಿನಕ್ಸ್, ಮಾಯಾ ಆಪರೇಟಿಂಗ್ ಸಿಸ್ಟಂ, ಪ್ರೈಮ್ ಒಎಸ್, ಭಾರತ್ ಒಎಸ್, ನೆಕ್ಸ್ಟ್​ ಕ್ವಾಂಟಂ ಒಎಸ್ ಇತ್ಯಾದಿ ಆಪರೇಟಿಂಗ್ ಸಿಸ್ಟಂಗಳು ಭಾರತೀಯರಿಂದ ಅಭಿವೃದ್ಧಿಗೊಂಡಿವೆ ಎಂದು ಪಟ್ಟಿ ಮಾಡಿದ ಬಿಜೆಪಿ ವಕ್ತಾರರು, ಯುಪಿಐ ಡಿಜಿಟಲ್ ಪೇಮೆಂಟ್ ಸಿಸ್ಟಂ, ವ್ಯಾಕ್ಸಿನ್ ತಯಾರಿಕೆ, ದೇಶದ ಆರ್ಥಿಕ ಅಭಿವೃದ್ಧಿ ಇತ್ಯಾದಿ ಸಾಧನೆಗಳನ್ನೂ ಉಲ್ಲೇಖಿಸಿದ್ದಾರೆ.

ಸ್ಯಾಮ್ ಪಿತ್ರೋಡಾ ಈ ಹಿಂದೆ ಹಲವು ಬಾರಿ ವಿವಾದಾಸ್ಪದ ಹೇಳಿಕೆಗಳನ್ನು ಮತ್ತು ಅಭಿಪ್ರಾಯಗಳನ್ನು ನೀಡಿರುವುದುಂಟು. ಪಾಕಿಸ್ತಾನ ಸೇರಿದಂತೆ ನೆರೆ ದೇಶಗಳೊಂದಿಗೆ ಸಂಬಂಧ ಗಟ್ಟಿಗೊಳಿಸುವ ವಿದೇಶ ನೀತಿ ಭಾರತದ್ದಾಗಿರಬೇಕು ಎಂದೊಮ್ಮೆ ಹೇಳಿದ್ದರು. ಪಾಕಿಸ್ತಾನಕ್ಕೆ ಹೋದಾಗ ಸ್ವಂತ ದೇಶದಲ್ಲಿದ್ದಂತೆ ಭಾಸವಾಗುತ್ತದೆ. ಬಾಂಗ್ಲಾದೇಶ, ನೇಪಾಳಕ್ಕೂ ಹೋಗಿದ್ದೇನೆ. ಬೇರೆ ದೇಶ ಎಂದನಿಸುವುದಿಲ್ಲ ಎಂದೂ ಅವರು ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ