
ಭಾರತದ ಜೀವವೈವಿಧ್ಯ ಮತ್ತು ಪರಿಸರ ಸಂರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ಮುಂದಿನ ಪೀಳಿಗೆಯ ಪರಿಸರ ನಾಯಕರನ್ನು ಬೆಳೆಸಲು ‘ರೋಹಿಣಿ ನಿಲೇಕಣಿ ಫಿಲಾಂತ್ರಪೀಸ್’ (RNP) ಮತ್ತು ‘ದಸ್ರಾ’ ಸಂಸ್ಥೆಗಳು ಕೈಜೋಡಿಸಿವೆ. ದೇಶಾದ್ಯಂತ ಇರುವ ಯುವ ಪರಿಸರ ಸಂರಕ್ಷಕರು ಹಾಗೂ ಸಂಶೋಧಕರಿಗಾಗಿ ವಿಶಿಷ್ಟವಾದ ‘ಸಂವರ್ಧನ್ ಬಯೋಡೈವರ್ಸಿಟಿ ಮತ್ತು ಕನ್ಸರ್ವೇಶನ್ ಫೆಲೋಶಿಪ್’ ಅನ್ನು ಘೋಷಿಸಲಾಗಿದ್ದು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.
ಇದು ಯುವ ಮತ್ತು ಉದಯೋನ್ಮುಖ ಪರಿಸರ ಸಂರಕ್ಷಕರಿಗೆ ಸಮಗ್ರ ಬೆಂಬಲ ನೀಡಲು ರೂಪಿಸಲಾದ 12 ತಿಂಗಳ (ಒಂದು ವರ್ಷ) ವಿಶೇಷ ಫೆಲೋಶಿಪ್ ಕಾರ್ಯಕ್ರಮವಾಗಿದೆ. ವಿಶೇಷವಾಗಿ ಸೌಲಭ್ಯ ವಂಚಿತ ಹಿನ್ನೆಲೆಯ, ಗ್ರಾಮೀಣ ಭಾಗದ ಮತ್ತು ಪ್ರಮುಖ ನಗರಗಳಿಂದ ದೂರವಿರುವ ಯುವ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಆರ್ಥಿಕ ನೆರವು, ಸೂಕ್ತ ಮಾರ್ಗದರ್ಶನ (Mentorship) ಹಾಗೂ ವೃತ್ತಿಪರ ನೆಟ್‌ವರ್ಕ್ ಒದಗಿಸುವುದು ಈ ಫೆಲೋಶಿಪ್‌ನ ಮುಖ್ಯ ಉದ್ದೇಶವಾಗಿದೆ.
ರೋಹಿಣಿ ನಿಲೇಕಣಿ ಫಿಲಾಂತ್ರಪೀಸ್ ನ ಅಧ್ಯಕ್ಷರಾದ ರೋಹಿಣಿ ನಿಲೇಕಣಿ ಹೇಳುವಂತೆ, “ಭಾರತದಲ್ಲಿ ಅತ್ಯಂತ ಪ್ರಮುಖವಾದ ಪರಿಸರ ಸಂರಕ್ಷಣಾ ಕೆಲಸಗಳು ಯಾವುದೇ ಪ್ರಚಾರವಿಲ್ಲದೆ, ತಳಮಟ್ಟದಲ್ಲಿ ಶಾಂತಿಯುತವಾಗಿ ನಡೆಯುತ್ತಿವೆ. ಸಮುದಾಯಗಳು ಮತ್ತು ಪರಿಸರ ವ್ಯವಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುವ ಯುವಕರಿಗೆ ಆಳವಾದ ಜ್ಞಾನ ಮತ್ತು ಬದ್ಧತೆ ಇರುತ್ತದೆ, ಆದರೆ ಪ್ರೋತ್ಸಾಹ ಇರುವುದಿಲ್ಲ. ಅಂತಹ ಯುವಕರಿಗೆ ನಂಬಿಕೆ, ಸಮಯ ಮತ್ತು ಮುಕ್ತವಾಗಿ ಕಲಿಯುವ ಸ್ವಾತಂತ್ರ್ಯವನ್ನು ನೀಡಲು ‘ಸಂವರ್ಧನ್ ಫೆಲೋಶಿಪ್’ ಅನ್ನು ಆರಂಭಿಸಲಾಗಿದೆ.”
ಪರಿಸರ ಸಂರಕ್ಷಣೆ ಮತ್ತು ಜೀವವೈವಿಧ್ಯ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಆರಂಭಿಕ ಹಂತದ ವೃತ್ತಿಪರರು ಅರ್ಜಿ ಸಲ್ಲಿಸಬಹುದು. ಅರ್ಜಿದಾರರ ವಯಸ್ಸು 35 ವರ್ಷದೊಳಗಿರಬೇಕು. ಸಾರ್ವಜನಿಕ ಹಿತಾಸಕ್ತಿ ಹೊಂದಿರುವ ಪರಿಸರ ಸಂಶೋಧನೆ, ಸಮುದಾಯ ಆಧಾರಿತ ಕೆಲಸ ಅಥವಾ ಸಂಬಂಧಿತ ಕ್ಷೇತ್ರಗಳಲ್ಲಿ ಸಕ್ರಿಯರಾಗಿರಬೇಕು. ಯಾವುದೇ ನಿರ್ದಿಷ್ಟ ಉನ್ನತ ಶಿಕ್ಷಣದ ಹಿನ್ನೆಲೆ ಕಡ್ಡಾಯವಿಲ್ಲ. ತಳಮಟ್ಟದ ಸಮುದಾಯಗಳು ಮತ್ತು ದೇಶದ ವಿವಿಧ ಭಾಗಗಳ ಅರ್ಹ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.
ಪರಿಸರ ಸಂರಕ್ಷಣೆಯ ಕ್ಷೇತ್ರದಲ್ಲಿ ಕೆಲಸ ಮಾಡಬೇಕೆಂಬ ಕನಸು ಹೊತ್ತಿರುವ ಯುವಜನತೆಗೆ ತಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ಇದು ಅತ್ಯುತ್ತಮ ವೇದಿಕೆಯಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ