ಬೆಂಗಳೂರು: ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರ ‘ಸನಾತನ ಧರ್ಮ ನಿರ್ಮೂಲನೆ’ ಹೇಳಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಬೆಂಗಳೂರು ನ್ಯಾಯಾಲಯ (Bengaluru Court) ಇಂದು (ಮಂಗಳವಾರ) ಜಾಮೀನು ಮಂಜೂರು ಮಾಡಿದೆ. ಇಂದು ಮುಂಜಾನೆ 42ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ನೋಟಿಸ್ ಜಾರಿ ಮಾಡಿದ ನಂತರ ಉದಯನಿಧಿ ಸ್ಟಾಲಿನ್ ಹಾಜರಾಗಿದ್ದರು. ಸನಾತನ ಧರ್ಮದ (Sanatana Dharma) ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಪರಮೇಶ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಮುಂದಿನ ವಿಚಾರಣೆ ಆಗಸ್ಟ್ 8ರಂದು ನಡೆಯಲಿದೆ.
ತಮಿಳುನಾಡು ಮುಖ್ಯಮಂತ್ರಿ ಮತ್ತು ಆಡಳಿತಾರೂಢ ಡಿಎಂಕೆ ಮುಖ್ಯಸ್ಥರಾಗಿರುವ ಎಂ. ಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ 2023ರ ಸೆಪ್ಟೆಂಬರ್ ತಿಂಗಳಲ್ಲಿ ನೀಡಿದ್ದ ‘ಸನಾತನ ಧರ್ಮದ ನಿರ್ಮೂಲನೆ’ ಹೇಳಿಕೆ ಭಾರೀ ಆಕ್ರೋಶವನ್ನು ಉಂಟುಮಾಡಿತ್ತು. ಈ ವಿವಾದಾತ್ಮಕ ಹೇಳಿಕೆಗಳಿಗೆ ಬಿಜೆಪಿ ಮತ್ತು ಧಾರ್ಮಿಕ ಸಂಘಟನೆಗಳು ತೀವ್ರ ತರಾಟೆಗೆ ತೆಗೆದುಕೊಂಡಿದ್ದವು.
ಇದನ್ನೂ ಓದಿ: ಸನಾತನ ಧರ್ಮ ಬಗ್ಗೆ ಹೇಳಿಕೆ: ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ಗೆ ಕರ್ನಾಟಕ ಕೋರ್ಟ್ ಸಮನ್ಸ್
ತಮಿಳುನಾಡಿನ ಕ್ರೀಡಾ ಮತ್ತು ಯುವ ವ್ಯವಹಾರಗಳ ಖಾತೆ ಸಚಿವರಾಗಿರುವ ಉದಯನಿಧಿ ಸ್ಟಾಲಿನ್ ಅವರು 1 ಲಕ್ಷ ರೂ.ಗಳ ಶ್ಯೂರಿಟಿಯೊಂದಿಗೆ ಜಾಮೀನು ಪಡೆದಿದ್ದಾರೆ.
ಏನಿದು ಪ್ರಕರಣ?:
ಸೆಪ್ಟೆಂಬರ್ 2023ರಲ್ಲಿ ಚೆನ್ನೈನಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಮಲೇರಿಯಾ ಮತ್ತು ಡೆಂಗ್ಯೂ ರೀತಿಯಲ್ಲಿ ಸನಾತನ ಧರ್ಮವನ್ನು ಕೂಡ ‘ನಿರ್ಮೂಲನೆ’ ಮಾಡಬೇಕು ಎಂದು ಹೇಳಿದ್ದರು.
ಈ ಹೇಳಿಕೆಗೆ ಬಿಜೆಪಿ ಸೇರಿದಂತೆ ವಿವಿಧ ವಲಯಗಳಿಂದ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಭಾರತೀಯ ಜನತಾ ಪಕ್ಷ (ಬಿಜೆಪಿ) ಇದನ್ನು ಐಎನ್‌ಡಿಐಎ (ಇಂಡಿಯಾ) ಬ್ಲಾಕ್ ಘಟಕಗಳ ಮೇಲೆ ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್‌ನ ಮೇಲೆ ದಾಳಿ ಮಾಡಲು ಅಸ್ತ್ರವಾಗಿ ಬಳಸಿಕೊಂಡಿತು. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಹಲವು ಸಂದರ್ಭಗಳಲ್ಲಿ ಕಾಂಗ್ರೆಸ್ “ಸನಾತನ ವಿರೋಧಿ” ಎಂದು ಆರೋಪಿಸಿದ್ದರು.
ಇದನ್ನೂ ಓದಿ: Bhartruhari Mahtab: ಲೋಕಸಭೆ ಹಂಗಾಮಿ ಸ್ಪೀಕರ್ ಆಗಿ ಬಿಜೆಪಿಯ ಭರ್ತೃಹರಿ ಮಹತಾಬ್ ನೇಮಕ
ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಮತ್ತು ಎಚ್‌ಐವಿ ಎಂದು ಅವಹೇಳನ ಮಾಡಿರುವುದನ್ನು ಸ್ಮರಿಸಿದ ನಡ್ಡಾ, ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ಯಾವ ಕಾಂಗ್ರೆಸ್ ನಾಯಕರೂ ಖಂಡಿಸಲಿಲ್ಲ. ಇತರ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಂಡಿವೆ. ಆದರೆ ಬಿಜೆಪಿ ದೃಢವಾಗಿ ನಿಂತಿದ್ದು, ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರವನ್ನು ನಿರ್ಮಿಸಿತು, ‘ಪ್ರಾಣ ಪ್ರತಿಷ್ಠೆ’ ನಡೆಸಿತು, 370ನೇ ವಿಧಿಯನ್ನು ರದ್ದುಗೊಳಿಸಿತು ಮತ್ತು ಮುಸ್ಲಿಂ ಮಹಿಳೆಯರನ್ನು ತ್ರಿವಳಿ ತಲಾಖ್‌ನಿಂದ ಮುಕ್ತಗೊಳಿಸಿತು ಎಂದು ಬಿಜೆಪಿ ಅಧ್ಯಕ್ಷರಾಗಿದ್ದ ಜೆ.ಪಿ. ನಡ್ಡಾ ಹೇಳಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:36 pm, Tue, 25 June 24