
ನವದೆಹಲಿ, ಸೆಪ್ಟೆಂಬರ್ 5: ಭಾರತದ ಯುವಜನತೆಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಯುವಪೀಳಿಗೆಗೆ ಅನುಕೂಲಕರವಾದ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ, ಸರ್ಕಾರಿ ದತ್ತಾಂಶದ ಪ್ರಕಾರ ಭಾರತದಲ್ಲಿ ಹಿರಿಯ ನಾಗರಿಕರ (Senior Citizens) ಸಂಖ್ಯೆ ವೇಗವಾಗಿ ಹೆಚ್ಚಾಗುತ್ತಿದೆ ಎಂಬ ಸಂಗತಿಯನ್ನು ಬಯಲು ಮಾಡಿದೆ. ಕಳೆದ 2-3 ದಶಕಗಳಿಂದ ಒಂದು ಅಥವಾ 2 ಮಕ್ಕಳನ್ನು ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದ್ದು, ಈಗಿನ ಪೀಳಿಗೆಯಲ್ಲಿ ಮಕ್ಕಳ ಜವಾಬ್ದಾರಿಯೇ ಬೇಡವೆಂದು ನಿರ್ಧರಿಸುವವರ ಸಂಖ್ಯೆ ಹೆಚ್ಚಾಗಿದೆ. ಇದೆಲ್ಲವೂ ಭಾರತದ ಜನಸಂಖ್ಯೆಯ ಮೇಲೆ ಪರಿಣಾಮ ಬೀರುತ್ತಿದೆ ಎನ್ನಬಹುದು.
2023ರ ಮಾದರಿ ನೋಂದಣಿ ವ್ಯವಸ್ಥೆಯ ಅಂಕಿ-ಅಂಶಗಳ ವರದಿ ಭಾರತದ ಹಿರಿಯ ನಾಗರಿಕರ ಜನಸಂಖ್ಯೆ ವೇಗವಾಗಿ ಬೆಳೆಯುತ್ತಿದೆ ಎಂದು ತೋರಿಸುತ್ತದೆ. ಇದು ಆರೋಗ್ಯ ರಕ್ಷಣೆ, ಪಿಂಚಣಿ ಮತ್ತು ಸಾಮಾಜಿಕ ಭದ್ರತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ಸರ್ಕಾರಿ ದತ್ತಾಂಶದ ಪ್ರಕಾರ, ಪ್ರತಿ 10 ಭಾರತೀಯರಲ್ಲಿ ಒಬ್ಬರು ಈಗ 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ.
ಮಾದರಿ ನೋಂದಣಿ ವ್ಯವಸ್ಥೆ (SRS) ಅಂಕಿಅಂಶಗಳ ವರದಿ-2023 ಬಹಿರಂಗಪಡಿಸುವಂತೆ ಹಿರಿಯ ನಾಗರಿಕರು ಜನಸಂಖ್ಯೆಯ ಶೇ. 9.7ರಷ್ಟಿದ್ದಾರೆ. ಇದು 2011ರಲ್ಲಿ ಶೇ. 8.6ರಷ್ಟಿತ್ತು. ಆದರೆ 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಶೇ. 6.4ರಷ್ಟಿದ್ದರು. ಫಲವತ್ತತೆ ಕುಸಿಯುವುದು ಮತ್ತು ಜೀವಿತಾವಧಿ ಹೆಚ್ಚುತ್ತಿರುವ ಕಾರಣದಿಂದ ಭಾರತವು ವೃದ್ಧ ಸಮಾಜವಾಗುವ ಹಾದಿಯಲ್ಲಿದೆ ಎಂದು ತಜ್ಞರು ಹೇಳುತ್ತಾರೆ.
ಭಾರತದ ಹಿರಿಯ ನಾಗರಿಕರ ಸಂಖ್ಯೆ ಎಷ್ಟು?:
ಭಾರತದ ಶೇ. 9.7 ಜನರು ಈಗ 60 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿದ್ದಾರೆ. ಇದು ಕಳೆದ ಒಂದು ದಶಕದಲ್ಲಿ ತೀವ್ರ ಹೆಚ್ಚಳವಾಗಿದೆ ಎಂದು ವರದಿ ತೋರಿಸುತ್ತದೆ. 65 ವರ್ಷಕ್ಕಿಂತ ಮೇಲ್ಪಟ್ಟವರ ಪ್ರಮಾಣವು ಶೇ. 6.4ಕ್ಕೆ ಏರಿಕೆಯಾಗಿದೆ. ಸರಳವಾಗಿ ಹೇಳುವುದಾದರೆ, ಫಲವತ್ತತೆ ಕಡಿಮೆಯಾಗಿ ಜೀವಿತಾವಧಿ ಹೆಚ್ಚಾದಂತೆ ಭಾರತದಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗುತ್ತಿದೆ.
ಇದನ್ನೂ ಓದಿ: China Population: ಮಕ್ಕಳನ್ನು ಹೆತ್ತರೆ ಹಣ ಕೊಡುತ್ತೆ ಚೀನಾ ಸರ್ಕಾರ, ಜನಸಂಖ್ಯೆ ಹೆಚ್ಚಿಸಲು ಹೊಸ ಪ್ಲ್ಯಾನ್
ಯಾವ ರಾಜ್ಯಗಳಲ್ಲಿ ವೃದ್ಧರ ಪಾಲು ಅತ್ಯಧಿಕ?:
ವೃದ್ಧರು ಹೆಚ್ಚಿರುವ ರಾಜ್ಯಗಳಲ್ಲಿ ಕೇರಳ ರಾಜ್ಯ ಮುಂಚೂಣಿಯಲ್ಲಿದೆ. ಅದರ ಜನಸಂಖ್ಯೆಯ ಸುಮಾರು ಶೇ. 15ರಷ್ಟು ಜನರು 60 ವರ್ಷಕ್ಕಿಂತ ಮೇಲ್ಪಟ್ಟವರು. ಇದರ ಜೊತೆಗೆ ತಮಿಳುನಾಡು, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಮಹಾರಾಷ್ಟ್ರದಲ್ಲಿ ಕೂಡ ವೃದ್ಧರ ಸಂಖ್ಯೆ ಹೆಚ್ಚಾಗಿದೆ. ಈ ರಾಜ್ಯಗಳಲ್ಲಿ ವೃದ್ಧರ ಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನದಾಗಿದೆ. ಈ ರಾಜ್ಯಗಳು ಈಗಾಗಲೇ ವೃದ್ಧರ ಆರೋಗ್ಯ ರಕ್ಷಣೆಗೆ ಹೆಚ್ಚಿನ ಬೇಡಿಕೆಯಿಂದ ಪಿಂಚಣಿ ಮತ್ತು ಸಾಮಾಜಿಕ ಕಲ್ಯಾಣ ಅಗತ್ಯಗಳವರೆಗೆ ವಯಸ್ಸಾದ ಜನಸಂಖ್ಯೆಯ ಒತ್ತಡವನ್ನು ಎದುರಿಸುತ್ತಿವೆ.
ಯಾವ ರಾಜ್ಯಗಳಲ್ಲಿ ಯುವಕರ ಸಂಖ್ಯೆ ಹೆಚ್ಚು?:
ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಜಾರ್ಖಂಡ್‌ನಂತಹ ರಾಜ್ಯಗಳಲ್ಲಿ ಕಡಿಮೆ ವೃದ್ಧರ ಸಂಖ್ಯೆ ಇದೆ. ಇಲ್ಲಿನ ವೃದ್ಧರ ಸಂಖ್ಯೆ ಸುಮಾರು ಶೇ. 7ರಿಂದ 8ರಷ್ಟಿದೆ. ಇದರರ್ಥ ಜನಸಂಖ್ಯಾ ಬೆಳವಣಿಗೆಯು ಈಗ ಈ ಕಿರಿಯ ರಾಜ್ಯಗಳಲ್ಲಿ ಕೇಂದ್ರೀಕೃತವಾಗಿದೆ. ಆದರೆ ದಕ್ಷಿಣ ಮತ್ತು ಪಶ್ಚಿಮ ಭಾರತದ ಹೆಚ್ಚಿನ ಭಾಗವು ಸ್ಥಿರೀಕರಣ ಅಥವಾ ಕುಸಿತದತ್ತ ಸಾಗುತ್ತಿದೆ.
ಭಾರತದಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿರಲು ಕಾರಣ:
ಭಾರತದಲ್ಲಿ ಜನಸಂಖ್ಯಾ ಬದಲಾವಣೆಗೆ ಎರಡು ಪ್ರಮುಖ ಅಂಶಗಳು ಕಾರಣವಾಗಿವೆ. ಅವುಗಳೆಂದರೆ,
ಕುಸಿಯುತ್ತಿರುವ ಫಲವತ್ತತೆ: ಭಾರತದ ಒಟ್ಟು ಫಲವತ್ತತೆ ದರ (TFR) 2.1ರ ಬದಲಿ ಮಟ್ಟಕ್ಕಿಂತ ಕಡಿಮೆಯಾಗಿದೆ. ಅಂದರೆ ಪ್ರತಿ ವರ್ಷ ಕಡಿಮೆ ಮಕ್ಕಳು ಜನಿಸುತ್ತಿದ್ದಾರೆ.
ಇದನ್ನೂ ಓದಿ: 30 ವರ್ಷಗಳಲ್ಲಿ ಮುಸ್ಲಿಮರ ಜನಸಂಖ್ಯೆ ಶೇ 90ರಷ್ಟು ಏರಿಕೆ: ಜಾತಿ ಗಣತಿ ವರದಿಯ ಮತ್ತಷ್ಟು ಮಾಹಿತಿ ಬಹಿರಂಗ
ಹೆಚ್ಚುತ್ತಿರುವ ಜೀವಿತಾವಧಿ: ಭಾರತೀಯರು ಈಗ ಸರಾಸರಿ 68.5 ವರ್ಷಗಳು (ಪುರುಷರು) ಮತ್ತು 72.5 ವರ್ಷಗಳು (ಮಹಿಳೆಯರು) ಬದುಕುತ್ತಿದ್ದಾರೆ. ಕೇರಳ ಮತ್ತು ದೆಹಲಿಯಂತಹ ರಾಜ್ಯಗಳು ಕ್ರಮವಾಗಿ 78 ಮತ್ತು 74 ವರ್ಷಗಳನ್ನು ದಾಟಿವೆ.
ಜಗತ್ತು ಭಾರತವನ್ನು ಇನ್ನೂ “ಯುವ ರಾಷ್ಟ್ರ” ಎಂದು ನೋಡುತ್ತಿದೆ. ಆದರೆ ಜನಸಂಖ್ಯಾ ಗಡಿಯಾರವು ವರ್ಷದಿಂದ ವರ್ಷಕ್ಕೆ ಬದಲಾಗುತ್ತಲೇ ಇದೆ. ಇದೇ ಪರಿಸ್ಥಿತಿ ಮುಂದುವರಿದರೆ ನಮ್ಮ ದೇಶವು ಶೀಘ್ರದಲ್ಲೇ ಚೀನಾ, ಜಪಾನ್ ಮತ್ತು ಯುರೋಪ್‌ನಂತಹ ಸವಾಲುಗಳನ್ನು ಎದುರಿಸಬಹುದು. ಅಲ್ಲಿ ವಯಸ್ಸಾದ ಜನಸಂಖ್ಯೆಯು ಆರೋಗ್ಯ ವ್ಯವಸ್ಥೆಗಳು ಮತ್ತು ಆರ್ಥಿಕತೆಗಳನ್ನು ಸಂಕಷ್ಟಕ್ಕೆ ದೂಡುತ್ತಿದೆ. ಭಾರತದಲ್ಲೂ ಅದೇ ಸಮಸ್ಯೆ ಹೆಚ್ಚಾಗಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ